ಬಿಹಾರದಲ್ಲಿ ಮುಖ ಕಾಣದಂತೆ ಹಿಜಾಬ್ ಧರಿಸಿ, ಶಲ್ಯ ಸುತ್ತಿ ಚಿನ್ನ ಖರೀದಿಸುವುದು ನಿಷೇಧ
ಮುಖ ಮುಚ್ಚಿಕೊಂಡು ಬರುವ ಮಹಿಳೆ ಮತ್ತು ಪುರುಷರಿಗೆ ಚಿನ್ನದಂಗಡಿ ಪ್ರವೇಶ ಮತ್ತು ಖರೀದಿಯನ್ನು ನಿಷೇಧಿಸಿ ಬಿಹಾರದ ಚಿನ್ನದ ವ್ಯಾಪಾರಿಗಳ ಒಕ್ಕೂಟವು ಆದೇಶ ಹೊರಡಿಸಿದೆ.

Published : January 7, 2026 at 2:22 PM IST
ಪಾಟ್ನಾ(ಬಿಹಾರ): ಕಳ್ಳತನ, ದರೋಡೆಯನ್ನು ನಿಯಂತ್ರಿಸಲು ಬಿಹಾರದ ಆಭರಣ ವ್ಯಾಪಾರಿಗಳು ಮತ್ತು ಚಿನ್ನದ ವ್ಯಾಪಾರಿಗಳ ಒಕ್ಕೂಟ (ಎಐಜೆಜಿಎಫ್) ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಅದೇನೆಂದರೆ, ಹಿಜಾಬ್, ನಖಾಬ್, ಗಾಮ್ಚಾ, ಹೆಲ್ಮೆಟ್ ಅಥವಾ ಇತರ ವಸ್ತುಗಳಿಂದ ಮುಖ ಮುಚ್ಚಿಕೊಂಡ ಗ್ರಾಹಕರಿಗೆ ಆಭರಣದ ಅಂಗಡಿಗಳಿಗೆ ಪ್ರವೇಶ ಮತ್ತು ಮಾರಾಟ ನಿಷೇಧಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಒಕ್ಕೂಟದ ರಾಜ್ಯಾಧ್ಯಕ್ಷ ಅಶೋಕ್ ಕುಮಾರ್ ವರ್ಮಾ, "ಚಿನ್ನ ಮತ್ತು ಬೆಳ್ಳಿಯ ದರ ಗಗನಕ್ಕೇರಿದೆ. ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ, ಭದ್ರತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ತಿಳಿಸಿದರು.
Patna, Bihar: Bihar becomes the first state to ban hijab or niqab wearers from buying gold. Starting tomorrow, jewelry shops will deny entry and sales to customers whose faces are fully covered, as per the All India Jewelers and Gold Federation’s directive
— IANS (@ians_india) January 6, 2026
State President, All… pic.twitter.com/ycKHnbyFVY
ದುಬಾರಿ ಬೆಲೆಯಿಂದಾಗಿ ಕಳ್ಳತನ ಹೆಚ್ಚಳ: "10 ಗ್ರಾಂ ಚಿನ್ನದ ಬೆಲೆ 1.40 ಲಕ್ಷ ರೂಪಾಯಿ ಮತ್ತು ಒಂದು ಕೇಜಿ ಬೆಳ್ಳಿಯು 2.50 ಲಕ್ಷ ರೂಪಾಯಿ ಇದೆ. ಗ್ರಾಹಕರಂತೆ ಗುಂಪುಗಳಲ್ಲಿ ಬರುವ ಜನರು ತಮ್ಮ ಮುಖ ಮುಚ್ಚಿಕೊಂಡು ಅಂಗಡಿಗಳಿಗೆ ಪ್ರವೇಶಿಸಿ ದರೋಡೆ ಮಾಡುತ್ತಿರುವ ಪ್ರಕರಣಗಳು ನಡೆದಿವೆ. ಇದರಿಂದ ಆರೋಪಿಗಳು ಯಾರು ಎಂಬುದು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಯಾವುದೇ ವಸ್ತ್ರ, ಹೆಲ್ಮೆಟ್ ಅಥವಾ ಮುಸುಕುಗಳನ್ನು ಧರಿಸಿ ಅಂಗಡಿ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ" ಎಂದು ಹೇಳಿದರು.
"ಈಗಾಗಲೇ, ರಾಜ್ಯದ ಹಲವೆಡೆ ಬುರ್ಖಾ ಧರಿಸಿ ಬಂದ ದರೋಡೆಕೋರರು, ಅಂಗಡಿಯವರ ಮೇಲೆ ಗುಂಡು ಹಾರಿಸಿ ಕಳ್ಳತನ ಮಾಡಿದ ಪ್ರಕರಣಗಳು ನಡೆದಿವೆ. ನಮ್ಮ ಉದ್ದೇಶ ಮುಸುಕನ್ನು ತೆಗೆಸುವುದಲ್ಲ. ಬದಲಿಗೆ ಹಿಜಾಬ್ ಅಥವಾ ಬುರ್ಖಾ ಧರಿಸಿದ ಗ್ರಾಹಕರು ಖರೀದಿ ಮಾಡುವ ಮೊದಲು ತಮ್ಮ ಮುಖವನ್ನು ತೋರಿಸಬೇಕೆಂದು ವಿನಂತಿಸುವುದಾಗಿದೆ. ಇದು ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಅನ್ವಯಿಸುತ್ತದೆ. ಜನರು ಸಹಕರಿಸುತ್ತಾರೆ" ಎಂಬ ವಿಶ್ವಾಸವಿದೆ ಎಂದರು.
ಎಲ್ಲ ಸಮುದಾಯಕ್ಕೂ ಅನ್ವಯ: "ಹಿಜಾಬ್ ವಿವಾದ ಉಂಟಾಗುವ ಪ್ರಶ್ನೆಗೆ ಉತ್ತರಿಸಿದ ವರ್ಮಾ ಅವರು, ಮುಸ್ಲಿಮ್ ಮಹಿಳೆಯರು ಧರಿಸುವ ಹಿಜಾಬ್ ಅನ್ನು ನಾವು ವಿರೋಧಿಸುವುದಿಲ್ಲ. ಹಿಂದು ಮಹಿಳೆಯರು ಧರಿಸುವ ಗಾಮ್ಚಾಗೂ ನಿಷೇಧ ಇದೆ. ಯಾವುದೇ ನಿರ್ದಿಷ್ಟ ಸಮುದಾಯವನ್ನು ಮಾತ್ರ ನಾವು ನಿಷೇಧಿಸಿಲ್ಲ. ಈ ಬಗ್ಗೆ ಪೊಲೀಸ್ ಅಧಿಕಾರಿಳೊಂದಿಗೆ ಚರ್ಚಿಸಿ, ಅವರ ಒಪ್ಪಿಗೆ ಪಡೆದು ತೀರ್ಮಾನಿಸಿದ್ದೇವೆ. ಇತರ ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಈ ಕ್ರಮವಿದೆ" ಎಂದು ಅವರು ಹೇಳಿದರು.
#WATCH | Jhansi, Uttar Pradesh: To prevent theft incidents amidst rising gold and silver prices, jewellers in the Sipri Bazaar area have pasted notices stating that they will not allow people with covered faces in the shop.
— ANI (@ANI) January 5, 2026
Uday Soni, President, Sarafa Sipri Bazaar, Jhansi,… pic.twitter.com/ZKeCR2YFo4
ವಿವಾದ ಸೃಷ್ಟಿಸಿದ್ದ ಸಿಎಂ ನಡೆ: ಡಿಸೆಂಬರ್ 15 ರಂದು ಪಾಟ್ನಾದಲ್ಲಿ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸುವಾಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮುಸ್ಲಿಮ್ ಮಹಿಳಾ ವೈದ್ಯೆಯೊಬ್ಬರ ಹಿಜಾಬ್ ಅನ್ನು ತೆಗೆದಿದ್ದಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿತ್ತು. ಇದರ ವೀಡಿಯೊ ವೈರಲ್ ಆಗಿತ್ತು. ರಾಷ್ಟ್ರೀಯವಲ್ಲದೇ ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿ, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಉತ್ತರಪ್ರದೇಶದ ಈ ನಿಷೇಧವಿದೆ: ಉತ್ತರ ಪ್ರದೇಶದ ಝಾನ್ಸಿಯ ಸಿಪ್ರಿ ಬಜಾರ್ ಪ್ರದೇಶದ ಆಭರಣ ವ್ಯಾಪಾರಿಗಳು, ಕಳ್ಳತನ ಪ್ರಕರಣ ವಿರುದ್ಧದ ಕ್ರಮವಾಗಿ ಇದೇ ರೀತಿಯ ನಿಯಮವನ್ನು ಜಾರಿ ಮಾಡಿದ್ದಾರೆ. ಮುಖ ಮುಚ್ಚಿಕೊಂಡವರನ್ನು ಚಿನ್ನದಂಗಡಿ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಘೋಷಿಸುವ ಫಲಕಗಳನ್ನು ಅವರು ತಮ್ಮ ಅಂಗಡಿಗಳ ಮುಂದೆ ಅಳವಡಿಸಿದ್ದಾರೆ.
ಇವುಗಳನ್ನೂ ಓದಿ:

