ETV Bharat / bharat

ಕಿಡ್ನಿ ಕಸಿ ನಂತರವೂ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಮಹಿಳೆ

ಪಶ್ಚಿಮ ಬಂಗಾಳದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಿಡ್ನಿ ಕಸಿ ಚಿಕಿತ್ಸೆಗೊಳಗಾದ ಮಹಿಳೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ.

ವೈದ್ಯರೊಂದಿಗೆ ಮಾಧವಿ ಲತಾ
ವೈದ್ಯರೊಂದಿಗೆ ಮಾಧವಿ ಲತಾ (ETV Bharat)
author img

By ETV Bharat Karnataka Team

Published : February 22, 2026 at 7:54 PM IST

3 Min Read
Choose ETV Bharat

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಮೂತ್ರಪಿಂಡ ಕಸಿ ಮಾಡಿದ ನಂತರ ಗರ್ಭ ಧರಿಸಿದ ಮಹಿಳೆಯೊಬ್ಬರು ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಇಂಥದ್ದೊಂದು ಅಪರೂಪದ, ಭರವಸೆಯ ಬೆಳವಣಿಗೆ ನಡೆದಿದೆ.

ಮೂತ್ರಪಿಂಡ ಕಸಿ ನಂತರ ಗರ್ಭಧಾರಣೆ ಬಹಳ ಅಪಾಯಕಾರಿಯಾಗಿತ್ತು. ಹೀಗಿದ್ದರೂ ಮಹಿಳೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾಳೆ. ಅತ್ಯಂತ ಸಂಕೀರ್ಣ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಆಸ್ಪತ್ರೆ ಮೂಲಗಳು ಹೇಳಿರುವ ಪ್ರಕಾರ, ರಾಜ್ಯದ ಬುರ್ದ್ವಾನ್ ಎಂಬಲ್ಲಿನ ನಿವಾಸಿ 30 ವರ್ಷದ ಮಾಧವಿ ಲತಾ ಕುಂದು ಅವರಿಗೆ 2020ರ ಡಿಸೆಂಬರ್‌ನಲ್ಲಿ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಮುಂದೆ, ಗರ್ಭಧಾರಣೆಯ 16 ವಾರಗಳಲ್ಲಿ ಅವರು ರೋಗನಿರೋಧಕ ಔಷಧಿಗಳನ್ನು ತೆಗೆದುಕೊಳ್ಳುವಾಗ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇದಕ್ಕೂ ಮೊದಲು ಅವರು ಸಿಸೇರಿಯನ್ ಮೂಲಕ ಮಗುವಿಗೆ ಜನ್ಮ ನೀಡಿದ್ದರು. ಒಮ್ಮೆ ಗರ್ಭಪಾತವೂ ಆಗಿತ್ತು. ಇದಲ್ಲದೆ, ದೀರ್ಘಕಾಲದವರೆಗೆ ಅಧಿಕ ರಕ್ತದೊತ್ತಡ ಮತ್ತು ಥೈರಾಯ್ಡ್ ಸಮಸ್ಯೆಗಳಿದ್ದವು. ಅದರ ಜೊತೆಗೆ, ಮೂತ್ರಪಿಂಡ ಕಸಿ ಮಾಡಿದ ನಂತರ ಗರ್ಭಧಾರಣೆ ಸ್ವಾಭಾವಿಕವಾಗಿ ತುಂಬಾ ಅಪಾಯಕಾರಿಯಾಗಿತ್ತು. ಹೀಗಾಗಿ, ವೈದ್ಯರಿಗೆ ಈ ಪ್ರಕರಣ ಸವಾಲಾಗಿತ್ತು.

ಮಹಿಳೆಯ ಕುಟುಂಬಕ್ಕೆ ಪರಿಸ್ಥಿತಿಯ ಬಗ್ಗೆ ವೈದ್ಯರು ವಿವರವಾಗಿ ತಿಳಿಸಿದ್ದರು. ಅದಾದ ನಂತರ, ಮೂತ್ರಪಿಂಡ ಶಾಸ್ತ್ರ, ಸ್ತ್ರೀರೋಗ ಶಾಸ್ತ್ರ, ಅರಿವಳಿಕೆ, ಕ್ರಿಟಿಕಲ್ ಕೇರ್ ಮತ್ತು ನವಜಾತ ಶಿಶು ವಿಭಾಗಗಳ ವೈದ್ಯರು ಗರ್ಭವತಿಯನ್ನು ಕಟ್ಟುನಿಟ್ಟಿನ ವೀಕ್ಷಣೆಯಲ್ಲಿ ಇಡಬೇಕಾಯಿತು. ಗರ್ಭಧಾರಣೆಯ 21 ವಾರಗಳಲ್ಲಿ ರೋಗಿಗೆ ಬಹಳ ಆರೋಗ್ಯ ತೊಂದರೆಗಳು ಕಾಣಿಸಿಕೊಂಡವು. ಕಸಿ ಮಾಡಿದ ಮೂತ್ರಪಿಂಡದ ಕೆಲಸ ಕಡಿಮೆಯಾಗುವುದು, ತೀವ್ರ ರಕ್ತಹೀನತೆ, ರಕ್ತದಲ್ಲಿ ತ್ಯಾಜ್ಯ ಉತ್ಪನ್ನಗಳ ಮಟ್ಟ ಹೆಚ್ಚಾಗುವುದು, ಅನಿಯಂತ್ರಿತ ಅಧಿಕ ರಕ್ತದೊತ್ತಡ ಮತ್ತು ಸೋಂಕು ಉಂಟಾಗುವ ಅಪಾಯ ಪತ್ತೆಯಾಗಿತ್ತು. ರಕ್ತ ವರ್ಗಾವಣೆ ಮಾಡಬೇಕಾಯಿತು. ಅಗತ್ಯಕ್ಕೆ ತಕ್ಕಂತೆ ಔಷಧ ಬದಲಾವಣೆಗಳು ನಡೆದವು. ಸೋಂಕಿಗೆ ಪರಿಣಾಮಕಾರಿ ಚಿಕಿತ್ಸೆ ಪ್ರಾರಂಭಿಸಲಾಯಿತು.

ನಿಯಮಿತ ಪರೀಕ್ಷೆಗಳ ಮೂಲಕ ಭ್ರೂಣದ ದೈಹಿಕ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಯಿತು. ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸ್ಥಿರವಾಗಿದ್ದರೂ 28 ವಾರಗಳ ನಂತರ ಮೂತ್ರಪಿಂಡ ಪರೀಕ್ಷೆಗಳ ಫಲಿತಾಂಶಗಳು ಮತ್ತೆ ಹದಗೆಡಲಾರಂಭಿಸಿದವು. ರಕ್ತದೊತ್ತಡ ಏರಿಳಿತಗೊಳ್ಳಲು ಶುರುವಾಯಿತು. ಭ್ರೂಣದ ಬೆಳವಣಿಗೆ ನಿಧಾನವಾಯಿತು. ಆಮ್ನಿಯೋಟಿಕ್ ದ್ರವವೂ ಕಡಿಮೆಯಾಯಿತು. ಇದು ಗರ್ಭಧಾರಣೆಯ ಬಗ್ಗೆ ಮತ್ತು ಆಕೆಯ ದೇಹದಲ್ಲಿ ಕಸಿ ಮಾಡಿದ ಮೂತ್ರಪಿಂಡದ ಸುರಕ್ಷತೆಯ ಬಗ್ಗೆ ಮತ್ತಷ್ಟು ಕಳವಳ ಸೃಷ್ಟಿಸಿತು. ಈ ಎಲ್ಲದರ ನಡುವೆ ತಾಯಿಯ ಸುರಕ್ಷತೆಗೆ ಅತೀ ಹೆಚ್ಚು ಆದ್ಯತೆ ನೀಡಿದ ವೈದ್ಯರು, ಗರ್ಭಧಾರಣೆಯ 30 ವಾರಗಳು ಮತ್ತು ಮೂರು ದಿನಗಳಲ್ಲಿ ಯೋಜಿತ ಸಿಸೇರಿಯನ್ ನಡೆಸಿದರು.

ಶಸ್ತ್ರಚಿಕಿತ್ಸೆಯ ಮೂಲಕ ಮಾಧವಿ ಲತಾ 1.6 ಕೆ.ಜಿ ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಜನನದ ತಕ್ಷಣ ಮಗುವನ್ನು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಇಡಲಾಯಿತು. 20 ದಿನಗಳವರೆಗೆ ವಿಶೇಷ ವೀಕ್ಷಣೆ ಮತ್ತು ಚಿಕಿತ್ಸೆ ನಡೆಯಿತು. ಹೆರಿಗೆಯ ನಂತರ ತಾಯಿಗೆ ಅಧಿಕ ರಕ್ತದೊತ್ತಡ ಮತ್ತು ಮೂತ್ರನಾಳದ ಸೋಂಕು ಕಾಣಿಸಿಕೊಂಡವು. ಆದ್ದರಿಂದ ಅವರನ್ನು ಮೂರು ದಿನಗಳವರೆಗೆ ತೀವ್ರ ನಿಗಾ ಘಟಕದಲ್ಲೇ ದಾಖಿಸಲಾಯಿತು. ಸಮಯೋಚಿತ ಚಿಕಿತ್ಸೆಯಿಂದ ಅವರ ದೈಹಿಕ ಸ್ಥಿತಿ ಸ್ಥಿರವಾಯಿತು. ಮೂತ್ರಪಿಂಡದ ಕಾರ್ಯವೂ ಸುಧಾರಿಸಿತು. ಇದೀಗ ತಾಯಿ ಮತ್ತು ಮಗು ಇಬ್ಬರೂ ಈಗ ಉತ್ತಮ ಆರೋಗ್ಯದಿಂದ ಮನೆಗೆ ಮರಳಿದ್ದಾರೆ.

ವೈದ್ಯರ ಪ್ರಕಾರ, ಸಕಾಲಿಕ ನಿರ್ಧಾರಗಳು, ನಿಯಮಿತ ಮೇಲ್ವಿಚಾರಣೆ, ಔಷಧಿಗಳ ಸರಿಯಾದ ಸಮನ್ವಯ ಮತ್ತು ಶಿಸ್ತಿನ ಚಿಕಿತ್ಸಾ ವ್ಯವಸ್ಥೆ ಈ ಸಂಕೀರ್ಣ ಗರ್ಭಧಾರಣೆಯನ್ನು ಯಶಸ್ವಿಗೊಳಿಸುವಲ್ಲಿ ಗುರುತರ ಪಾತ್ರ ವಹಿಸಿವೆ.

ವೈದ್ಯೆ ಶಿಲ್ಪಿತಾ ಬ್ಯಾನರ್ಜಿ ಪ್ರತಿಕ್ರಿಯಿಸಿ, "ಈ ಗರ್ಭಧಾರಣೆ ಆರಂಭದಿಂದಲೂ ತುಂಬಾ ಅಪಾಯಕಾರಿಯಾಗಿತ್ತು. ರೋಗಿಯ ದೇಹದಲ್ಲಿ ಹಲವು ಸಮಸ್ಯೆಗಳಿದ್ದವು. ಸಣ್ಣ ಬದಲಾವಣೆಗಳೂ ಸಹ ತಾಯಿ ಮತ್ತು ಮಗುವಿಗೆ ಅಪಾಯಕಾರಿಯಾಗಬಹುದಿತ್ತು. ತಾಯಿಯ ದೈಹಿಕ ಸ್ಥಿತಿಯನ್ನು ಸ್ಥಿರವಾಗಿರಿಸುವುದು ಮತ್ತು ಅದೇ ಸಮಯದಲ್ಲಿ ಮಗುವಿನ ಮೇಲೂ ನಿಯಮಿತವಾಗಿ ಕಣ್ಣಿಡುವುದು ನಮ್ಮ ಉದ್ದೇಶವಾಗಿತ್ತು. ನಮ್ಮೆಲ್ಲರ ಸಂಘಟಿತ ಪ್ರಯತ್ನಗಳು ಮತ್ತು ಎಚ್ಚರಿಕೆಯ ವೀಕ್ಷಣೆಯಿಂದ ನಾವು ಗರ್ಭಧಾರಣೆಯನ್ನು ಸುರಕ್ಷಿತವಾಗಿ ನಿರ್ವಹಿಸಲು ಸಾಧ್ಯವಾಯಿತು" ಎಂದು ಹೇಳಿದರು.

"ಮೂತ್ರಪಿಂಡ ಕಸಿ ನಂತರ ಗರ್ಭಧಾರಣೆ ಅಂತರ್ಗತವಾಗಿ ಅಪಾಯಕಾರಿ. ಏಕೆಂದರೆ ಇದು ಕಸಿ ಮಾಡಿದ ಮೂತ್ರಪಿಂಡದ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡುತ್ತದೆ. ಮೂತ್ರಪಿಂಡದ ಕಾರ್ಯವನ್ನು ಸಂರಕ್ಷಿಸುತ್ತಾ ಗರ್ಭಧಾರಣೆಯನ್ನು ಸುರಕ್ಷಿತವಾಗಿ ಪೂರ್ಣಗೊಳಿಸುವುದು ನಮ್ಮ ಮುಖ್ಯ ಗುರಿಯಾಗಿತ್ತು. ಇದಕ್ಕಾಗಿ ನಿಯಮಿತ ಮೌಲ್ಯಮಾಪನ, ಸರಿಯಾದ ಔಷಧಿ ಸಮನ್ವಯ ಮತ್ತು ಅನಗತ್ಯ ಅಪಾಯಗಳನ್ನು ತಪ್ಪಿಸುವುದು ಬಹಳ ಮುಖ್ಯವಾಗಿತ್ತು. ಇದು ಸಕಾಲಿಕ ನಿರ್ಧಾರಗಳು ಮತ್ತು ಶಿಸ್ತಿನ ಸಮನ್ವಯದ ಮಹತ್ವವನ್ನು ಎತ್ತಿ ತೋರಿಸುತ್ತದೆ" ಎಂದು ಡಾ.ಉಪಲ್ ಸೇನ್‌ಗುಪ್ತಾ ತಿಳಿಸಿದರು.

ಪವಾಡ ಅನಿಸುತ್ತಿದೆ- ತಾಯಿ: ಮಾಧವಿಲತಾ ಅವರು ತಮ್ಮ ಅನುಭವ ಹಂಚಿಕೊಳ್ಳುತ್ತಾ, "ನಾನು ಮಗು ಕಳೆದುಕೊಳ್ಳಬಹುದು ಅಥವಾ ಕಸಿ ಮಾಡಿದ ಮೂತ್ರಪಿಂಡ ಹಾನಿಗೊಳಗಾಗಬಹುದು ಎಂದು ಅನೇಕ ಬಾರಿ ಅನ್ನಿಸಿತು. ಆದರೆ ವೈದ್ಯರು ನನ್ನ ನೆರವಿಗೆ ಬಂದರು. ನನಗೆ ಎಲ್ಲವನ್ನೂ ವಿವರಿಸಿದರು. ಧೈರ್ಯ ತುಂಬಿದರು. ಇದೆಲ್ಲರ ಫಲವಾಗಿ ನನ್ನ ಮಗುವನ್ನು ಆರೋಗ್ಯವಾಗಿ ನೋಡುತ್ತಿದ್ದೇನೆ. ಇದೊಂದು ರೀತಿಯಲ್ಲಿ ಪವಾಡದಂತೆ ಭಾಸವಾಗುತ್ತಿದೆ" ಎಂದರು.

ಇದನ್ನೂ ಓದಿ: ಗರ್ಭಧಾರಣೆಗೆ ಸೂಕ್ತ ವಯಸ್ಸು ಯಾವುದು? ಯಾವ ವಯಸ್ಸಿನ ನಂತರ ಮಕ್ಕಳನ್ನು ಪಡೆಯೋದು ಕಷ್ಟ?: ತಜ್ಞರ ಮಾತು ಕೇಳಿ