ETV Bharat / bharat

ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ: ಮುಂಬೈ-ಗೋವಾ ಹೆದ್ದಾರಿ ಜಲಾವೃತ, ಸಂಚಾರ ಅಸ್ತವ್ಯಸ್ತ

ರಾಯಗಢ ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳವರೆಗೆ ಭಾರೀ ಮಳೆ ಮುಂದುವರಿಯುವ ನಿರೀಕ್ಷೆ ಹಿನ್ನೆಲೆಯಲ್ಲಿ ಭಾರತ ಹವಾಮಾನ ಇಲಾಖೆ 'ರೆಡ್' ಅಲರ್ಟ್ ಘೋಷಿಸಿದೆ.

Vehicles pass through a waterlogged road in Mumbai, Maharashtra
ಮುಂಬೈನಲ್ಲಿ ನೀರು ತುಂಬಿದ ರಸ್ತೆಯಲ್ಲಿ ವಾಹನಗಳ ಸಂಚಾರ (PTI)
author img

By PTI

Published : July 6, 2026 at 11:32 AM IST

2 Min Read
Choose ETV Bharat

ಮುಂಬೈ(ಮಹಾರಾಷ್ಟ್ರ): ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವ ಅಸ್ತವ್ಯಸ್ತವಾಗಿದೆ. ರಾಯಗಢ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜನನಿಬಿಡ ಮುಂಬೈ-ಗೋವಾ ಹೆದ್ದಾರಿಯಲ್ಲಿ ಕೆಲವು ಗಂಟೆಗಳ ಕಾಲ ನೀರು ನಿಂತು, ವಾಹನ ಸಂಚಾರ ಸ್ಥಗಿತಗೊಂಡು ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಾಗೋಥೇನ್ ಬಳಿಯ ಸುಕೇಲಿ ಘಾಟ್‌ನಲ್ಲಿ ಹೆದ್ದಾರಿಯಲ್ಲಿ ನೀರು ಸಂಗ್ರಹವಾಗಿದ್ದು, ಭಾನುವಾರ ಸುಮಾರು ಮೂರು ಅಡಿಗಳಿಗೆ ನೀರಿನ ಮಟ್ಟ ಏರಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ..

ಪ್ರವಾಹದಿಂದಾಗಿ ಭಾನುವಾರ ಹೆದ್ದಾರಿಯ ಎರಡೂ ಬದಿಗಳಲ್ಲಿ 8 ರಿಂದ 10 ಕಿ.ಮೀ. ವರೆಗೆ ವಾಹನಗಳ ಉದ್ದನೆಯ ಸಾಲು ವಿಸ್ತರಿಸಿತ್ತು. ಸೋಮವಾರ ಸಂಚಾರ ಪ್ರಾರಂಭವಾಯಿತಾದರೂ, ಶನಿವಾರ ರಾತ್ರಿಯಿಂದ ನಿರಂತರ ಮಳೆಯಿಂದಾಗಿ ನಾಗೋಥೇನ್-ವಾಕನ್ ಪ್ರದೇಶದಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದ್ದರಿಂದ ವಾಹನ ಸಂಚಾರ ನಿಧಾನವಾಗಿತ್ತು.

ರಾಯಗಢ ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳವರೆಗೆ ಭಾರೀ ಮಳೆ ಮುಂದುವರಿಯುವ ನಿರೀಕ್ಷೆಯಿರುವುದರಿಂದ ಭಾರತ ಹವಾಮಾನ ಇಲಾಖೆ 'ರೆಡ್' ಅಲರ್ಟ್ ಘೋಷಿಸಿದೆ.

ಸುಕೇಲಿ ಗ್ರಾಮದ ವ್ಯಾಪ್ತಿಯಲ್ಲಿ ಭಾನುವಾರ ಕೆಲವು ಗಂಟೆಗಳ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಂಚಾರ ಆರಂಭಿಸಲು ಕಾಯುತ್ತಿದ್ದ ಪ್ರಯಾಣಿಕರಿಗೆ ರಾತ್ರಿಯಾಗುತ್ತಿದ್ದಂತೆ ಮಳೆ ಕಡಿಮೆಯಾಗದೆ ಇರುವುದು ಆತಂಕ ಮೂಡಿಸಿತ್ತು.

ವಾಕನ್-ಪಾಲಿ ರಸ್ತೆಯೂ ಪ್ರವಾಹದಿಂದಾಗಿ ಸಂಪೂರ್ಣ ಮುಚ್ಚಿಹೋಗಿತ್ತು. ಅಧಿಕಾರಿಗಳು ಹೇಳುವಂತೆ, ತಮ್ಹಿನಿ ಘಾಟ್ ಮೂಲಕ ಮಂಗಾವ್ ಮತ್ತು ನಿಜಾಮ್‌ಪುರದ ಮೂಲಕ ಪುಣೆಗೆ ಹೋಗುವ ವಾಹನಗಳನ್ನು ಬೇರೆ ಮಾರ್ಗಗಳ ಮೂಲಕ ಹೋಗುವಂತೆ ವ್ಯವಸ್ಥೆ ಮಾಡಲಾಯಿತು. ಅಲ್ಲಿಂದ ವಾಹನಗಳನ್ನು ಮುಂಬೈ ಕಡೆಗೆ ತಿರುಗಿಸಲಾಯಿತು.

ಈಗಾಗಲೇ ದೀರ್ಘಕಾಲದಿಂದ ಮುಂಬೈ-ಗೋವಾ ಹೆದ್ದಾರಿ ಕಳಪೆ ರಸ್ತೆ ಪರಿಸ್ಥಿತಿ ಮತ್ತು ನಿರ್ಮಾಣ ಕಾಮಗಾರಿಯಿಂದಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದವರಿಗೆ ಈ ಭಾರೀ ಮಳೆ ಮತ್ತಷ್ಟು ಸಂಕಷ್ಟದಲ್ಲಿ ಸಿಲುಕಿಸಿದೆ.

ಮಾಂಗಾವ್ ಮತ್ತು ಕರ್ನಾಲಾ ಘಾಟ್ ಬಳಿಯ ಪ್ರದೇಶಗಳು ಸೇರಿದಂತೆ ಹೆದ್ದಾರಿಯ ಹಲವಾರು ಸ್ಥಳಗಳಲ್ಲಿ ನೀರು ನಿಂತಿದೆ ಎಂದು ವಾಹನ ಚಾಲಕರು ದೂರಿದ್ದಾರೆ. ಒಳಚರಂಡಿ ಮೂಲಸೌಕರ್ಯಗಳ ಅಸಮರ್ಪಕತೆಯೇ ಪುನರಾವರ್ತಿತ ಪ್ರವಾಹಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.

ಭೂಕುಸಿತದಿಂದಾಗಿ ಮುಂಬೈ- ಪುಣೆ ರೈಲು ಸೇವೆ ಸ್ಥಗಿತ: ಕರ್ಜತ್-ಲೋನಾವಾಲ ಭೋರ್ ಘಾಟ್ ವಿಭಾಗದಲ್ಲಿ ಸೋಮವಾರ ಮುಂಜಾನೆ ಮಳೆಯಿಂದ ಭೂಕುಸಿತ ಉಂಟಾಗಿದೆ. ಹಾಗಾಗಿ ಮುಂಬೈ-ಪುಣೆ ಮಾರ್ಗದಲ್ಲಿ 16ಕ್ಕೂ ಹೆಚ್ಚು ರೈಲುಗಳ ಸೇವೆ ಅಸ್ತವ್ಯಸ್ತಗೊಂಡಿವೆ.

ಜೊತೆಗೆ ಹಲವು ದೂರದ ಊರುಗಳಿಗೆ ಚಲಿಸುವ ರೈಲುಗಳ ಮಾರ್ಗ ಬದಲಾವಣೆ, ಅಲ್ಪಾವಧಿ ಮುಕ್ತಾಯ, ಅಲ್ಪಾವಧಿ ಆರಂಭ ಅಥವಾ ಮರು ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದು, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ರೈಲು ಸಂಚಾರ ಕುರಿತು ಅಪ್ಡೇಟೆಡ್​ ಮಾಹಿತಿ ಪರಿಶೀಲಿಸುವಂತೆ ಸೂಚಿಸಿದ್ದಾರೆ.

ಇವುಗಳನ್ನೂ ಓದಿ:

ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ; ಮೂಡಿಗೆರೆ, ಹೊಸನಗರದಲ್ಲಿ ಶಾಲೆಗಳಿಗೆ ರಜೆ ಘೋಷಣೆ

ಮುಂಬೈನಲ್ಲಿ ವರುಣಾರ್ಭಟ: ಕಟ್ಟಡ ಕುಸಿದು 6 ಜನ ಸಾವು; ಮಹಾರಾಷ್ಟ್ರದಲ್ಲಿ ಶಾಲೆಗೆ ರಜೆ ಘೋಷಣೆ