ETV Bharat / bharat

ಯಾದವೀ ಕಲಹ: ರೋಹಿಣಿಯ “ಹರಿಯಾಣವಿ ಮಹಾಪುರುಷ” ಟೀಕೆ; ಇನ್ನಷ್ಟು ತೀವ್ರತೆ ಪಡೆದ “ಕಲುಷಿತ ಕಿಡ್ನಿ” ಹೇಳಿಕೆ ವಿವಾದ

ಮಗಳ ಕಿಡ್ನಿಯನ್ನು ‘ಕಲುಷಿತ’ ಎನ್ನುವವರು ಮೊದಲು ಅಗತ್ಯವಿರುವವರಿಗೆ ಕಿಡ್ನಿ ದಾನ ಮಾಡುವ ಮಹಾನ್ ಕಾರ್ಯ ಆರಂಭಿಸಲಿ ಎಂದು ರೋಹಿಣಿ ಆಚಾರ್ಯ ಸವಾಲು ಹಾಕಿದ್ದಾರೆ

Rohini Acharya
ರೋಹಿಣಿ ಆಚಾರ್ಯ (ETV Bharat)
author img

By ETV Bharat Karnataka Team

Published : November 19, 2025 at 9:42 AM IST

2 Min Read
Choose ETV Bharat

ಪಾಟ್ನಾ, ಬಿಹಾರ: ಬಿಹಾರದ ಚುನಾವಣೆಯಲ್ಲಿ ಆರ್‌ಜೆಡಿ ಹೀನಾಯ ಸೋಲಿನ ಬಳಿಕ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕುಟುಂಬದ ಒಳ ಜಗಳ ಭಾರಿ ಸದ್ದು ಮಾಡುತ್ತಿದ್ದು, ತೀವ್ರತೆ ಪಡೆದುಕೊಂಡಿದೆ. ಲಾಲು ಪುತ್ರಿ ರೋಹಿಣಿ ಆಚಾರ್ಯ, ಪಕ್ಷ ಮತ್ತು ಕುಟುಂಬದೊಂದಿಗಿನ ಸಂಬಂಧ ಕಡಿದುಕೊಂಡು ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ ಅವರು, ಸಹೋದರ ತೇಜಸ್ವಿ ಯಾದವ್ ವಿರುದ್ಧ ಆರೋಪಗಳನ್ನು ಹೊರಿಸಿದ್ದಾರೆ.

ನನ್ನ ತಂದೆಗೆ “ಕಲುಷಿತ ಕಿಡ್ನಿ” ಕೊಟ್ಟೆ ಎಂದು ಆರೋಪಿಸಿದವರ ವಿರುದ್ಧ ರೋಹಿಣಿ ಆಚಾರ್ಯ ಕೆಂಡಾ ಮಂಡಲವಾಗಿದ್ದಾರೆ. ಈ ಬಗ್ಗೆ ಮಂಗಳವಾರ ಖಾರವಾಗಿ ತಿರುಗೇಟು ನೀಡಿದ್ದು, ಈ ವಿಷಯದ ಬಗ್ಗೆ ತಮ್ಮೊಂದಿಗೆ ತೆರೆದ ವೇದಿಕೆ ಚರ್ಚೆಗೆ ಬರುವಂತೆ ನೇರ ಸವಾಲು ಹಾಕಿದ್ದಾರೆ.

Rohini Acharya
ರೋಹಿಣಿ ಆಚಾರ್ಯ ಎಕ್ಸ್​ ಪೋಸ್ಟ್​ (ರೋಹಿಣಿ ಆಚಾರ್ಯ ಎಕ್ಸ್​ ಪೋಸ್ಟ್​)

ನನ್ನ ತಂದೆಗೆ ಕೊಟ್ಟ ‘ಕಲುಷಿತ ಕಿಡ್ನಿ’ಗೆ ಬದಲಾಗಿ ಕೋಟ್ಯಂತರ ರೂಪಾಯಿ ಮತ್ತು ಪಕ್ಷದ ಟಿಕೆಟ್ ಪಡೆದಿದ್ದೇನೆ ಎಂದು ಆರೋಪಿಸಲಾಗಿದೆ ಎಂದು ಭಾನುವಾರ ರೋಹಿಣಿ ಅವರು ಹೇಳಿಕೊಂಡಿದ್ದರು. ಸಹೋದರ ತೇಜಸ್ವಿ ಯಾದವ್‌ನ ಸಹಚರರು ತಂದೆ - ತಾಯಿಯ ಮನೆಯಿಂದ ತಮ್ಮನ್ನು ಹೊರದೂಡಿದ್ದಾರೆ ಎಂದೂ ಆರೋಪಿಸಿದ್ದರು.

ನಾಟಕ ಬಿಟ್ಟು ಅಗತ್ಯ ಇರುವ ಬಡವರಿಗೆ ಕಿಡ್ನಿ ದಾನ ಮಾಡಲಿ: ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರೋಹಿಣಿ, “ಲಾಲುಜೀ ಹೆಸರಿನಲ್ಲಿ ಏನಾದರೂ ಮಾಡಬೇಕೆಂದಿರುವವರು ಸುಳ್ಳು ಸಹಾನುಭೂತಿ ತೋರಿಸುವ ನಾಟಕ ಬಿಟ್ಟುಬಿಡಲಿ. ಆಸ್ಪತ್ರೆಯಲ್ಲಿ ಕೊನೆಯ ಉಸಿರು ಎಣಿಸುತ್ತಿರುವ ಲಕ್ಷಾಂತರ ಬಡವರಿಗೆ ತಮ್ಮ ಕಿಡ್ನಿಯನ್ನು ದಾನ ಮಾಡಲು ಮುಂದೆ ಬರಲಿ. ಲಾಲುಜೀ ಹೆಸರಿನಲ್ಲಿ ಕಿಡ್ನಿ ದಾನ ಮಾಡಲಿ” ಎಂದು ಸಲಹೆ ನೀಡಿದ್ದಾರೆ.

ಟೀಕಾಕಾರರಿಗೆ ಸವಾಲು ಹಾಕಿದ ರೋಹಿಣಿ: ಸಿಂಗಾಪುರದಲ್ಲಿ ವಾಸಿಸುತ್ತಿರುವ 47 ವರ್ಷದ ರೋಹಿಣಿ, ತಂದೆಗೆ ಕಿಡ್ನಿ ದಾನ ಮಾಡಿದ ವಿವಾಹಿತ ಮಗಳನ್ನು ತಪ್ಪು ಎನ್ನುವ ಧೈರ್ಯ ಇದ್ದರೆ, ಆ ಮಗಳೊಂದಿಗೆ ತೆರೆದ ವೇದಿಕೆಯಲ್ಲಿ ಚರ್ಚಿಸುವ ಧೈರ್ಯವನ್ನೂ ತೋರಿಸಲಿ. ಮಗಳ ಕಿಡ್ನಿಯನ್ನು ‘ಕಲುಷಿತ’ ಎನ್ನುವವರು ಮೊದಲು ಅಗತ್ಯವಿರುವವರಿಗೆ ಕಿಡ್ನಿ ದಾನ ಮಾಡುವ ಮಹಾನ್ ಕಾರ್ಯ ಆರಂಭಿಸಲಿ ಎಂದು ಸವಾಲು ಹಾಕಿದ್ದಾರೆ.

ಹರಿಯಾಣವಿ ಮಹಾಪುರುಷ ಮಾಡಲಿ, ಹರಿಯಾಣವಿ ಭಕ್ತರು ನನ್ನನ್ನು ನಿರಂತರ ನಿಂದಿಸುವ ಟ್ರೋಲ್‌ಗಳನ್ನು ಮಾಡಲಿ ಎಂದು ರೋಹಿಣಿ ವ್ಯಂಗ್ಯವಾಡಿದ್ದಾರೆ. “ಹರಿಯಾಣವಿ” ಎಂಬ ಟೀಕೆ ಸ್ಪಷ್ಟವಾಗಿ ತೇಜಸ್ವಿ ಯಾದವ್‌ನ ಅತ್ಯಂತ ಹತ್ತಿರದ ಸಹಚರ, ರಾಜ್ಯಸಭಾ ಸದಸ್ಯ ಸಂಜಯ್ ಯಾದವ್ ಅವರತ್ತ ಬೊಟ್ಟು ಮಾಡಿ ತೋರಿಸುತ್ತಿದೆ.

ಒಂದು ಬಾಟಲಿ ರಕ್ತ ದಾನ ಮಾಡುವ ಕೆಲಸಕ್ಕೇ ರಕ್ತ ಒಣಗಿ ಹೋಗುವವರು ಕಿಡ್ನಿ ದಾನದ ಬಗ್ಗೆ ಉಪದೇಶ ಮಾಡುತ್ತಾರಾ? ಎಂದು ಅವರು ಪ್ರಶ್ನಿಸಿದ್ದಾರೆ. ರೋಹಿಣಿ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಒಂದು ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ಅದರಲ್ಲಿ (ಮುಖ ಕಾಣದಿದ್ದರೂ) ತನಗೆ ಇಷ್ಟವಾಗದ ಕಿಡ್ನಿ ವಿಷಯದ ಕಾಮೆಂಟ್ ಮಾಡಿದ ಪತ್ರಕರ್ತನ ಮೇಲೆ ಕೂಗಿ ಗಾಳಿ ಹಾಕುತ್ತಿರುವುದು ಕೇಳಿಸುತ್ತದೆ.

ಈ ಹಿಂದೆಯೂ ರೋಹಿಣಿ ತಮ್ಮ ಸಹೋದರನ ಮತ್ತೊಬ್ಬ ಹತ್ತಿರದ ಸಹಚರ ರಮೀಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಉತ್ತರ ಪ್ರದೇಶದ ಬಲರಾಂಪುರದ ಮಾಜಿ ಸಂಸದ, ಸಮಾಜವಾದಿ ಪಕ್ಷದ ನಾಯಕ ರಿಜವಾನ್ ಜಹೀರ್ ಅವರ ಅಳಿಯ ಎನ್ನಲಾದವರು ಈ ರಮೀಜ್.

ಕೆಲವು ವರ್ಷಗಳ ಹಿಂದೆ ಲಾಲು ಪ್ರಸಾದ್ ಅವರಿಗೆ ಕಿಡ್ನಿ ದಾನ ಮಾಡಿದ್ದ ರೋಹಿಣಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾರನ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. “ಗಂಡ ಮತ್ತು ಮಾವನಿಗೆ ಒಪ್ಪಿಗೆ ಇಲ್ಲದಿದ್ದರೂ, ಮೂರು ಮಕ್ಕಳ ಭವಿಷ್ಯ ಲೆಕ್ಕಿಸದೇ ತಂದೆಯ ಪ್ರಾಣ ಉಳಿಸಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.

ಲಾಲು ಕುಟುಂಬದಲ್ಲಿನ ಕಲಹ ಇದೇ ಮೊದಲಲ್ಲ. ಅವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಅವರನ್ನು ಕುಟುಂಬ ಮತ್ತು ಪಕ್ಷದಿಂದ ಹೊರದೂಡಲಾಗಿತ್ತು. ನಂತರ ತೇಜ್ ಪ್ರತಾಪ್ ಹೊಸ ಪಕ್ಷ ರಚಿಸಿ ಚುನಾವಣೆಗೆ ನಿಂತಿದ್ದರು. ಆದರೆ, ಮಹುವಾ ಕ್ಷೇತ್ರವನ್ನೂ ಉಳಿಸಿಕೊಳ್ಳಲು ಅವರು ವಿಫಲರಾಗಿದ್ದರು.

ಇದನ್ನು ಓದಿ:ಬಿಹಾರ ಸೋಲಿನ ಹೊಣೆ ನಾನೇ ಹೊರುವೆ, ಒಂದು ದಿನ ಮೌನ ವ್ರತ ಆಚರಣೆ: ಪ್ರಶಾಂತ್​ ಕಿಶೋರ್​

ಇದು 300 ವರ್ಷಗಳಷ್ಟು ಹಳೆಯ ಮಾರುಕಟ್ಟೆ ಯೋಜನೆ: ಇಂದಿಗೂ ಗಮನ ಸೆಳೆಯಲು ಕಾರಣವೇನು ಗೊತ್ತಾ?