ETV Bharat / bharat

ಹರಿಯಾಣ: ಗಂಡು ಮಗುವಿಗೆ ಜನ್ಮ ನೀಡಿದ 10 ಹೆಣ್ಣು ಮಕ್ಕಳ ತಾಯಿ

ಹರಿಯಾಣದಲ್ಲೊಬ್ಬ ತಾಯಿ 10 ಹೆಣ್ಣುಮಕ್ಕಳ ಬಳಿಕ ಇದೀಗ 11ನೇ ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗು ಬೇಕೆಂಬ ಈ ಆಸೆ ದಂಪತಿಯದ್ದಾಗಿದ್ದು, ಕೊನೆಗೂ ಈಡೇರಿದೆ. ಆದರೆ, ತಾಯಿಯ ಆರೋಗ್ಯ, ಗಂಡುಮಗುವಿನ ಹಳೆಯ ಬಯಕೆಗಳು ಕಳವಳಕಾರಿಯಾಗಿವೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : January 7, 2026 at 9:08 AM IST

2 Min Read
Choose ETV Bharat

ಚಂಡೀಗಢ: ಈ ದಂಪತಿಗೆ ಮದುವೆಯಾಗಿ 19 ವರ್ಷವಾಗಿದೆ. 10 ಮಂದಿ ಹೆಣ್ಣು ಮಕ್ಕಳಿದ್ದಾರೆ. ಆದರೆ, ಇವರಿಗೆ ಒಂದು ಗಂಡು ಮಗುವಿನ ಆಸೆ. ಕೊನೆಗೂ ಇದೀಗ ಗಂಡು ಮಗು ಜನಿಸಿದ್ದು, 11ನೇ ಮಗುವಿಗೆ ಪೋಷಕರಾದ ಖುಷಿಯಲ್ಲಿದ್ದಾರೆ. ಇದು ಚಂಡೀಗಢದ ಬಡ ದಂಪತಿಯ ಸ್ಟೋರಿ.

ಕೂಲಿ ಕೆಲಸ ಮಾಡುವ ಪತಿ ಮತ್ತು ಪತ್ನಿ (37 ವರ್ಷ) ಈಚೆಗೆ ಹರಿಯಾಣದ ಆಸ್ಪತ್ರೆಯಲ್ಲಿ ತಮ್ಮ ಹನ್ನೊಂದನೇ ಮಗುವನ್ನು ಬರಮಾಡಿಕೊಂಡರು. ತಾಯಿಯ ಆರೋಗ್ಯ ಮತ್ತು ಗಂಡು ಮಗುವಿನ ಹಪಹಪಿಕೆಗಳನ್ನು ಹೊಂದುವ ಕುಟುಂಬಗಳ ಹಳೆಯ ಬಯಕೆಗಳು ಇದೇ ಸಂದರ್ಭದಲ್ಲಿ ಕಳವಳ ಉಂಟುಮಾಡಿವೆ.

ಗಂಡು ಮಗುವಿನ ಆಸೆ: "ನಮಗೆ ಒಂದು ಗಂಡು ಮಗು ಬೇಕೆಂಬ ಆಸೆ ಇತ್ತು. ನನ್ನ ಕೆಲವು ಹಿರಿಯ ಹೆಣ್ಣುಮಕ್ಕಳೂ ಸಹ ನಮಗೊಬ್ಬ ಸಹೋದರ ಬೇಕೆನ್ನುತ್ತಿದ್ದರು. ಇದು ನನ್ನ ಹನ್ನೊಂದನೇ ಮಗು. ನನಗೆ ಈಗಾಗಲೇ ಹತ್ತು ಹೆಣ್ಣು ಮಕ್ಕಳಿದ್ದಾರೆ" ಎಂದು ಪತಿ ಸಂಜಯ್ ಕುಮಾರ್ ಹೇಳಿದರು.

"2007ರಲ್ಲಿ ನಮ್ಮ ವಿವಾಹವಾಯಿತು. ನಮ್ಮ ಬಹುತೇಕ ಹೆಣ್ಣುಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಹಿರಿಮಗಳು 12ನೇ ತರಗತಿಯಲ್ಲಿ ಓದುತ್ತಿದ್ದಾಳೆ. ನನಗೆ ಬರುವ ಕಡಿಮೆ ಸಂಬಳದಲ್ಲಿ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದೇನೆ. ಏನೇ ಆದರೂ ಅದು ದೇವರ ಇಚ್ಛೆ. ನಾನು ಖುಷಿಯಾಗಿದ್ದೇನೆ" ಎಂದರು.

ಸಮಾಜದಲ್ಲಿರುವ ಪಿತೃಪ್ರಧಾನ ಮನಸ್ಥಿತಿಯ ಬಗ್ಗೆ ಅವರನ್ನು ಪ್ರಶ್ನಿಸಿದಾಗ, "ಅದು ಹಾಗಲ್ಲ. ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಏನನ್ನಾದರೂ ಸಾಧಿಸಲು ಸಮರ್ಥರಾಗಿದ್ದಾರೆ. ಅವರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಇಂದು ಎಲ್ಲರಿಗೂ ಹೆಮ್ಮೆ ಇದೆ" ಎಂದು ತಿಳಿಸಿದರು.

ವೈರಲ್ ಆಗಿರುವ ವಿಡಿಯೊವೊಂದರಲ್ಲಿ, ಸಂಜಯ್ ಅವರನ್ನು ತಮ್ಮ 10 ಹೆಣ್ಣುಮಕ್ಕಳ ಹೆಸರು ಹೇಳುವಂತೆ ಕೇಳಲಾಯಿತು. ಆಗ ಅವರಿಗೆ ಸರಿಯಾಗಿ ಎಲ್ಲ ಹೆಣ್ಣು ಮಕ್ಕಳ ಹೆಸರನ್ನು ಸರಿಯಾಗಿ ಹೇಳಲಾಗದೆ ಒಂದೆರಡು ಬಾರಿ ತೊದಲಿರುವುದು ಕಂಡುಬಂದಿದೆ.

ಸುರಕ್ಷಿತ ಹೆರಿಗೆಯನ್ನು ಖಚಿತಪಡಿಸಿಕೊಂಡ ವೈದ್ಯರು ಮಾತನಾಡಿ, "ತಾಯಿಗೆ ಮೂರು ಯೂನಿಟ್ ರಕ್ತ ನೀಡಬೇಕಾಯಿತು. ಸಾಮಾನ್ಯ ಹೆರಿಗೆ ಮಾಡಿಸಿದ್ವಿ. ಎಲ್ಲವೂ ಸರಿಯಾಗಿ ನಡೆಯಿತು" ಎಂದು ತಿಳಿಸಿದ್ದಾರೆ.

"ಇದು ಅಪಾಯದ ಹೆರಿಗೆಯೂ ಆಗಿತ್ತು. ಆದರೆ, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ" ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಗರ್ಭಿಣಿಯನ್ನು ಜನವರಿ 3ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ.4ರಂದು ಅವರು ಮಗುವಿಗೆ ಜನ್ಮ ನೀಡಿದ್ದಾರೆ. ಇದಾದ ಮರುದಿನ ಪಕ್ಕದ ಫತೇಹಾಬಾದ್ ಜಿಲ್ಲೆಯ ತಮ್ಮ ಹಳ್ಳಿಗೆ ಮರಳಿರುವ ಕುರಿತು ಮಾಹಿತಿ ದೊರೆತಿದೆ.

ಹರಿಯಾಣದಲ್ಲಿ ಲಿಂಗಾನುಪಾತ ಹೇಗಿದೆ?: ಹರಿಯಾಣದ ಲಿಂಗಾನುಪಾತ ಬಹಳ ಹಿಂದಿನಿಂದಲೂ ಕಳವಳಕಾರಿಯಾಗಿದೆ. ಆದರೆ, 2025ರಲ್ಲಿ ಪ್ರತಿ 1,000 ಪುರುಷರಿಗೆ 923 ಮಹಿಳೆಯರಿದ್ದು ಗಮನಾರ್ಹ ಸುಧಾರಣೆ ಕಂಡಿದೆ. ಮುಖ್ಯವಾಗಿ, 2024ರಿಂದ ಜಿಗಿತ ಕಂಡಿದೆ. 1,000 ಪುರುಷರಿಗೆ 1,020 ಮಹಿಳೆಯರು ಇರಬೇಕು ಎನ್ನುವುದು ರಾಷ್ಟ್ರೀಯ ಸರಾಸರಿ. ಈ ನಿಟ್ಟಿನಲ್ಲಿ ಹರಿಯಾಣದ ಲಿಂಗಾನುಪಾತ ಕಡಿಮೆಯೇ ಇದೆ.

ಇದನ್ನೂ ಓದಿ: ಬಿಕ್ಕಟ್ಟಿದ್ದರೂ ಬಾಂಗ್ಲಾ ಮಹಿಳೆಗೆ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅವಕಾಶ ನೀಡಿದ ಭಾರತ