ETV Bharat / bharat

ಸ್ಥಳೀಯ ಹಾವುಗಳ ವಿಷದಿಂದ 'ವಿಷ ನಿರೋಧಕ ಔಷಧ' ತಯಾರಿಸಿದ ಗುಜರಾತ್; ಶೀಘ್ರ ಬಿಡುಗಡೆ, ಮಾನವ ಸಾವು ತಗ್ಗುವ ನಿರೀಕ್ಷೆ

ಸ್ಥಳೀಯ ಹಾವುಗಳ ವಿಷದಿಂದಲೇ ವಿಷ ನಿರೋಧಕ ಔಷಧ ತಯಾರಿಸುತ್ತಿರುವ ಗುಜರಾತ್, ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಇದರಿಂದ ಚಿಕಿತ್ಸೆಯ ಪರಿಣಾಮಕಾರಿತ್ವ ಸುಧಾರಿಸಿ, ಮಾನವ ಮರಣ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : February 22, 2026 at 10:06 PM IST

2 Min Read
Choose ETV Bharat

ಗಾಂಧಿನಗರ(ಗುಜರಾತ್): ಹಾವು ಕಡಿದು ಸಂಭವಿಸುವ ಮಾನವ ಸಾವುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಗುಜರಾತ್ ಸರ್ಕಾರ ರಾಜ್ಯದಲ್ಲಿ ಸ್ಥಳೀಯವಾಗಿ ಕಂಡುಬರುವ ಹಾವುಗಳ ವಿಷದಿಂದಲೇ ಪ್ರತ್ಯೇಕವಾಗಿ ಉತ್ಪಾದಿಸಲಾದ 'ವಿಷ ನಿರೋಧಕ ಔಷಧ' ತಯಾರಿಸಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

ಇದರಿಂದ ಚಿಕಿತ್ಸೆಯ ಪರಿಣಾಮಕಾರಿತ್ವ ಸುಧಾರಿಸಿ, ಮರಣ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಇದೆ ಎಂದು ಸರ್ಕಾರಿ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

ವಲ್ಸಾದ್ ಜಿಲ್ಲೆಯ ಧರ್ಮಪುರದಲ್ಲಿ ರಾಜ್ಯ ಸರ್ಕಾರ ಆರಂಭಿಸಿರುವ ಹಾವು ಸಂಶೋಧನಾ ಸಂಸ್ಥೆ (ಎಸ್‌ಆರ್‌ಐ)ಯಲ್ಲಿ ಔಷಧ ತಯಾರಿಕೆಯ ಕೆಲಸ ನಡೆಯುತ್ತಿದೆ. ಈ ಸಂಸ್ಥೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಸಂಗ್ರಹಿಸಿರುವ ಸುಮಾರು 460 ವಿಷಕಾರಿ ಹಾವುಗಳಿವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ)ಯ ಮಾರ್ಗಸೂಚಿಗಳನ್ನು ಅನುಸರಿಸಿ ಹಾವುಗಳಿಂದ ವಿಷ ಹೊರತೆಗೆಯಲಾಗುತ್ತಿದೆ. ಆಧುನಿಕ ತಂತ್ರಜ್ಞಾನದ ಮೂಲಕ ವಿಷವನ್ನು ಸಂಸ್ಕರಿಸಿ ಪುಡಿಯಾಗಿ ಮಾಡಲಾಗುತ್ತದೆ. ಹೀಗೆ ಪುಡಿ ಮಾಡಿದ ವಿಷವನ್ನು ಪರವಾನಗಿ ಪಡೆದ ವಿಷ ನಿರೋಧಕ ತಯಾರಕರಿಗೆ ಹರಾಜು ಮಾಡಲಾಗುತ್ತದೆ. ಅವರ ಉತ್ಪನ್ನಗಳನ್ನು ರಾಜ್ಯ ಸರ್ಕಾರ ಖರೀದಿಸಿ ಗುಜರಾತ್‌ನಾದ್ಯಂತ ಆಸ್ಪತ್ರೆಗಳಿಗೆ ಹಾವು ಕಡಿತ ಚಿಕಿತ್ಸೆಗಾಗಿ ಪೂರೈಕೆ ಮಾಡಲಿದೆ.

"ಇಲ್ಲಿರುವ ಹಾವುಗಳಿಂದ ಹೊರತೆಗೆಯಲಾದ ವಿಷದ ಗುಣಮಟ್ಟ ತುಂಬಾ ಹೆಚ್ಚಿದ್ದು, ಹರಾಜಿನಲ್ಲಿ ಅದಕ್ಕೆ ಮೂಲ ದರಕ್ಕಿಂತ ಹೆಚ್ಚು ಬೆಲೆ ಸಿಕ್ಕಿದೆ. ಭಾರತೀಯ ನಾಗರಹಾವಿನ ವಿಷಕ್ಕೆ ಪ್ರತಿ ಗ್ರಾಂಗೆ ಮೂಲ ಬೆಲೆ 40,000 ರೂಪಾಯಿ ಇದ್ದರೆ, 44,000 ರೂ.ದೊರೆತಿದೆ. ಸಾ-ಸ್ಕೇಲ್ಡ್ ವೈಪರ್ ವಿಷಕ್ಕೆ ಪ್ರತಿ ಗ್ರಾಂಗೆ 50,000 ರೂ.ಮೂಲ ಬೆಲೆ ಇದ್ದರೆ, 56,500 ರೂ. ಸಿಕ್ಕಿದೆ. ಇತರ ಪ್ರಭೇದಗಳಿಗೂ ಒಳ್ಳೆಯ ಪ್ರತಿಕ್ರಿಯೆ ಮತ್ತು ಹೆಚ್ಚು ಬೆಲೆ ದೊರೆಯಿತು" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಹಾವಿನಿಂದ ವಿಷ ಸಂಗ್ರಹ
ಹಾವಿನಿಂದ ವಿಷ ಸಂಗ್ರಹ (ಸಂಗ್ರಹ ಚಿತ್ರ ANI)

ಹಾವು ಸಂಶೋಧನಾ ಕೇಂದ್ರದ ಉಪಾಧ್ಯಕ್ಷ ಮತ್ತು ಶಸ್ತ್ರಚಿಕಿತ್ಸಕರಾದ ಡಿ.ಸಿ.ಪಟೇಲ್ ಅವರು ಪರಿಣಾಮಕಾರಿ ಚಿಕಿತ್ಸೆಗಾಗಿ ಪ್ರಾದೇಶಿಕ ವಿಷದ ಮಹತ್ವ ತಿಳಿಸುತ್ತಾ, "ವಿಷವು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಇದು ಹಾವು ಕಡಿತಕ್ಕೆ ಚಿಕಿತ್ಸೆ ನೀಡುವಲ್ಲಿ ಮುಖ್ಯ ಸವಾಲು. ದೂರದ ಪ್ರದೇಶಗಳಿಂದ ತಯಾರಿಸಿದ ವಿಷ ನಿರೋಧಕ ಸಾಮಾನ್ಯವಾಗಿ ಕಡಿಮೆ ಪರಿಣಾಮಕಾರಿ ಎಂದು ಸಾಬೀತಾಗಿದೆ. ಇದನ್ನು ಪರಿಹರಿಸಲು ಗುಜರಾತ್ ಸ್ಥಳೀಯವಾಗಿಯೇ ಕಂಡುಬರುವ ಜಾತಿಗಳಿಂದ ಹಾವುಗಳಿಂದ ವಿಷ ನಿರೋಧಕ ಔಷಧಿ ತಯಾರಿಸುವತ್ತ ಗಮನಹರಿಸುವ SRIಯನ್ನು ಸ್ಥಾಪಿಸಿದೆ. ಗುಜರಾತ್‌ನಲ್ಲಿ ಹಿಡಿಯಲಾದ ಹಾವುಗಳ ವಿಷದಿಂದ ಉತ್ಪಾದಿಸುವ ವಿಷ ನಿರೋಧಕ ಔಷಧವು ಹಾವು ಕಡಿತ ಬಾಧಿತರಿಗೆ ಚಿಕಿತ್ಸೆ ನೀಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗುವ ನಿರೀಕ್ಷೆ ಇದೆ" ಎಂದು ಅವರು ಹೇಳಿದರು.

"ಇಲ್ಲಿ ಹಾವುಗಳಿಂದ ಪಡೆದ ವಿಷ ಉತ್ತಮ ಗುಣಮಟ್ಟದ್ದಾಗಿದೆ. ಏಕೆಂದರೆ, ಸಂಸ್ಥೆ WHO ಮಾರ್ಗಸೂಚಿಗಳನ್ನು ಅನುಸರಿಸುತ್ತದೆ. ಈ ವಿಷದಿಂದ ತಯಾರಿಸಿದ ಔಷಧಿಯಿಂದ ರಾಜ್ಯದಲ್ಲಿ ಹಾವು ಕಡಿತದಿಂದ ಸಂಭವಿಸುವ ಸಾವುಗಳ ಪ್ರಮಾಣ ಇಳಿಕೆಯಾಗುವ ನಿರೀಕ್ಷೆ ಇದೆ" ಎಂದು ಇೇ ವೇಳೆ ತಿಳಿಸಿದರು.

ಎಸ್‌ಆರ್‌ಐ ಇತ್ತೀಚೆಗೆ ಗುಜರಾತ್‌ನಲ್ಲಿ ಕಂಡುಬರುವ ನಾಲ್ಕು ಪ್ರಮುಖ ವಿಷಕಾರಿ ಹಾವು ಪ್ರಭೇದಗಳಾದ ಇಂಡಿಯನ್ ಕೋಬ್ರಾ, ಕಾಮನ್ ಕ್ರೈಟ್, ರಸೆಲ್ಸ್ ವೈಪರ್ ಮತ್ತು ಸಾ ಸ್ಕೇಲ್ಡ್ ವೈಪರ್‌ಗಳಿಂದ ಲೈಯೋಫಿಲೈಸ್ಡ್ ವಿಷದ ಇ-ಹರಾಜು ನಡೆಸಿತ್ತು. ಪರವಾನಗಿ ಪಡೆದ ವಿಷ ನಿರೋಧಕ ಔಷಧ ತಯಾರಕರು ಹರಾಜಿನಲ್ಲಿ ಭಾಗವಹಿಸಿದ್ದರು.

ಈ ಸಂಸ್ಥೆ ರಾಜ್ಯದ ಅರಣ್ಯ ಮತ್ತು ಪರಿಸರ ಇಲಾಖೆಯಡಿಯಲ್ಲಿ ಸ್ವಾಯತ್ತ ಗುಜರಾತ್ ಅರಣ್ಯ ಸಂಶೋಧನಾ ಪ್ರತಿಷ್ಠಾನ (GFRF) ಅಡಿಯಲ್ಲಿ ಕೆಲಸ ಮಾಡುತ್ತದೆ.

ಇದನ್ನೂ ಓದಿ: ಹಾವು ಕಚ್ಚಿದ ತಕ್ಷಣ ಏನ್ ಮಾಡ್ಬೇಕು? 7,000ಕ್ಕೂ ಹೆಚ್ಚು ಹಾವುಗಳ ರಕ್ಷಕ ನೀಡಿದ ಅಮೂಲ್ಯ ಸಲಹೆಗಳು ಇಲ್ಲಿವೆ