ETV Bharat / bharat

ಮಾಜಿ ಸೈನಿಕನ ಕುತ್ತಿಗೆ ಸೀಳಿತು ಚೀನಾದ ಮಾಂಜಾ ದಾರ!

ಮಂಜಾ ದಾರ ನಿಷೇಧದ ಜಾರಿಯ ನಡುವೆ ವರದಿಯಾಗಿರುವ ಈ ದುರ್ಘಟನೆ ಸಾಕಷ್ಟು ಆತಂಕವನ್ನು ಹುಟ್ಟುಹಾಕಿದೆ.

Former Soldier Dies After Throat Slit By Chinese Kite String In Jammu
ಪ್ರಾತಿನಿಧಿಕ ಚಿತ್ರ (ANI)
author img

By ETV Bharat Karnataka Team

Published : August 31, 2026 at 12:58 PM IST

2 Min Read
Choose ETV Bharat

ಜಮ್ಮು: ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿದ ಪರಿಣಾಮ ಮಾಜಿ ಸೈನಿಕರೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ವರದಿಯಾಗಿದೆ.

ನೈಬ್ ಸುಬೇದಾರ್ (ನಿವೃತ್ತ) ಲಖ್ವಿಂದರ್ ಸಿಂಗ್ ಭಾನುವಾರ ತಡರಾತ್ರಿ ಜಮ್ಮುವಿನ ರಿಂಗ್ ರಸ್ತೆಯಲ್ಲಿ ಸಾಗುವಾಗ ಅವರ ಕುತ್ತಿಗೆಗೆ ಮಾಂಜಾ ದಾರ ಸಿಲುಕಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಲಖ್ವಿಂದರ್​ ಸಿಂಗ್​ ಸೇನೆಯಿಂದ ನಿವೃತ್ತರಾಗಿದ್ದು, ಬಾರಿ ಬ್ರಾಹ್ಮಣದ ಕೈಗಾರಿಕಾ ಘಟಕವೊಂದರಲ್ಲಿ ಖಾಸಗಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮುಗಿಸಿ, ಆರ್.ಎಸ್. ಪುರದಲ್ಲಿರುವ ತಮ್ಮ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವಿವರಣೆ ನೀಡಿದರು.

ಹಲವು ಸಾವಿಗೆ ಕಾರಣವಾಗಿರುವ ಮಾಂಜಾ ದಾರ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದ್ದರೂ, ಇತ್ತೀಚೆಗೆ ಜಮ್ಮುವಿನಾದ್ಯಂತ ಇದನ್ನು ಗುಪ್ತವಾಗಿ ಮಾರಾಟ ಮಾಡುತ್ತಿದ್ದ ಹಲವಾರು ಅಂಗಡಿ ವ್ಯಾಪಾರಿಗಳನ್ನು ಇತ್ತೀಚಿಗೆ ಬಂಧಿಸಲಾಗಿತ್ತು.

ಮಾಂಜಾ ದಾರ ನಿಷೇಧದ ಜಾರಿಯ ನಡುವೆ ವರದಿಯಾಗಿರುವ ಈ ದುರ್ಘಟನೆ ಸಾಕಷ್ಟು ಆತಂಕವನ್ನು ಹುಟ್ಟುಹಾಕಿದ್ದು, ನಿಷೇಧಿತ ದಾರವನ್ನು ಮಾರಾಟ ಮಾಡುವ ಹಾಗೂ ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿದ್ದು, ಅಪರಾಧಿಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಲಕ್ನೋದಲ್ಲಿ ನಡೆದ ಇದೇ ರೀತಿಯ ಘಟನೆಯೊಂದರಲ್ಲಿ ಮಾಜಿ ಸೈನಿಕರೊಬ್ಬರು ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಚೀನಿ ಗಾಳಿಪಟದ ದಾರವು ಅವರ ಮುಖಕ್ಕೆ ಸುತ್ತಿಕೊಂಡಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು.

ಪೆಟಾ ಇಂಡಿಯಾದ ಪ್ರಕಾರ, ಚೀನಾ ಮಾಂಜಾ ದಾರ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ ಕುತ್ತಿಗೆಗೆ ಗಂಭೀರ ಗಾಯ ಅಥವಾ ಅವರ ಸಾವಿಗೆ ಕಾರಣವಾಗುತ್ತಿರುವ ಹಲವು ಘಟನೆಗಳ ಬಗ್ಗೆ ವರದಿಯಾಗಿವೆ. ಪ್ರತಿ ವರ್ಷ ಸಾವಿರಾರು ಪಾರಿವಾಳಗಳು, ಕಾಗೆಗಳು, ಗೂಬೆಗಳು, ಅಳಿವಿನಂಚಿನಲ್ಲಿರುವ ರಣಹದ್ದುಗಳು ಮತ್ತು ಇತರೆ ಪಕ್ಷಿಗಳ ಅಂಗವೈಕಲ್ಯಕ್ಕೆ ಅಥವಾ ಸಾವಿಗೆ ಈ ದಾರ ಕಾರಣವಾಗುತ್ತಿದೆ. ಇದನ್ನು ಹರಿತವಾದ ವಸ್ತುಗಳಿಂದ ತಯಾರಿಸಲಾಗಿರುತ್ತದೆ ಅಥವಾ ನುಣ್ಣಗೆ ಪುಡಿಮಾಡಿದ ಗಾಜು, ಲೋಹ ಅಥವಾ ಇತರೆ ವಸ್ತುಗಳನ್ನು ಲೇಪಿಸಲಾಗಿರುತ್ತದೆ; ಇದರಿಂದಾಗಿ ಇದು ಅಪಾಯಕಾರಿಯಾಗಿದೆ.

ಇವುಗಳನ್ನೂ ಓದಿ:

ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್​ ಸವಾರ ಸಾವು: ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಚಿವ ಈಶ್ವರ ಖಂಡ್ರೆ

ಬೀದರ್​: ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್​ ಸವಾರ ಸಾವು