ಗುರುದ್ವಾರದ ಬಳಿ ಪ್ರತಿಭಟನೆ: ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರ ವಿರುದ್ಧ ಎಫ್ಐಆರ್
ಘಟನೆಗೆ ಸಿಖ್ ಸಮುದಾಯದಲ್ಲಿ ತೀವ್ರ ಅಸಮಾಧಾನವಿದೆ. ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಸಮಿತಿಯು ಕ್ರಮ ಕೈಗೊಂಡಿದ್ದು, ಕೇಜ್ರಿವಾಲ್ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಡಿಎಸ್‌ಜಿಎಂಸಿ ತಿಳಿಸಿದೆ.


By ANI
Published : October 12, 2026 at 10:50 AM IST
ನವದೆಹಲಿ: ಇಲ್ಲಿನ ಬಾಂಗ್ಲಾ ಸಾಹೀಬ್ ಗುರುದ್ವಾರದಲ್ಲಿ ಅಡಚಣೆ ಉಂಟುಮಾಡಿದ ಆರೋಪ ಹಾಗೂ ಮುಖ್ಯ ಚುನಾವಣಾ ಆಯುಕ್ತರ (CEC) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ತಪ್ಪು ದಾರಿಗೆಳೆಯುವ ವಿಡಿಯೋಗಳನ್ನು ಹರಡಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪಕ್ಷದ ನಾಯಕರ ವಿರುದ್ಧ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯು ಭಾನುವಾರ ಎಫ್ಐಆರ್ ದಾಖಲಿಸಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜಂತರ್ ಮಂತರ್‌ನತ್ತ ತೆರಳಲು ಯತ್ನಿಸುತ್ತಿದ್ದಾಗ, ಶನಿವಾರ ಗುರುದ್ವಾರದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು. ಆದರೆ ಪೊಲೀಸರು, ಪ್ರತಿಭಟನಾಕಾರರ ಪ್ರಯತ್ನಗಳನ್ನು ತಡೆದು ವಶಕ್ಕೆ ಪಡೆದರು.
ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು, ದೂರಿನೊಂದಿಗೆ ಸಲ್ಲಿಸಲಾದ ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಡಿಎಸ್‌ಜಿಎಂಸಿ ಅಧ್ಯಕ್ಷ ಹರ್ಮೀತ್ ಸಿಂಗ್, ಘಟನೆಗೆ ಸಿಖ್ ಸಮುದಾಯದಲ್ಲಿ ತೀವ್ರ ಅಸಮಾಧಾನವಿದೆ. ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಸಮಿತಿಯು ಕ್ರಮ ಕೈಗೊಂಡಿದ್ದು, ಕೇಜ್ರಿವಾಲ್ ವಿರುದ್ಧ ದೂರು ದಾಖಲಿಸಿದೆ ಎಂದರು.
ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಗುರುದ್ವಾರದ ಆವರಣವನ್ನು ಪ್ರವೇಶಿಸಿ ಪ್ರತಿಭಟನೆ ನಡೆಸುವ ಮೂಲಕ ಗೊಂದಲ ಹಾಗೂ ಅಶಾಂತಿಯನ್ನು ಸೃಷ್ಟಿಸಿದರು. ಈ ಮೂಲಕ ಗುರು ಘರ್ನ ಪಾವಿತ್ರ್ಯತೆಯನ್ನು ರಾಜಕೀಯ ಚಟುವಟಿಕೆಗಾಗಿ ಬಳಸಿಕೊಳ್ಳಲು ಪ್ರಯತ್ನಿಸಿದರು. ಈ ಕೃತ್ಯಗಳು ಧಾರ್ಮಿಕ ಸ್ಥಳದ ಪಾವಿತ್ರ್ಯಕ್ಕೆ ವಿರುದ್ಧವಾಗಿವೆ. ಪೂಜಾ ಸ್ಥಳದೊಳಗೆ ಇಂತಹ ಉದ್ದೇಶಪೂರ್ವಕ ರಾಜಕೀಯ ಚಟುವಟಿಕೆಯು ಸಿಖ್ ಸಂಗತ್‌ನ ಧಾರ್ಮಿಕ ಭಾವನೆಗಳನ್ನು ತೀವ್ರವಾಗಿ ಘಾಸಿಗೊಳಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಉಪಸ್ಥಿತರಿರುವುದನ್ನು ಕೂಡ ಆಕ್ಷೇಪಿಸಿದ್ದು, ಸಮವಸ್ತ್ರ ಧರಿಸಿ ಗುರುದ್ವಾರದೊಳಗೆ ಪ್ರವೇಶಿಸದಂತೆ ಸಿಬ್ಬಂದಿಗೆ ಪೊಲೀಸ್ ಉಪ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದು ಸಾರ್ವಜನಿಕ ರಸ್ತೆಯಾಗಿದ್ದರೂ, ಪ್ರತಿಭಟನಾಕಾರರು ಗುರುದ್ವಾರದ ಆವರಣದೊಳಗೆ ಪ್ರವೇಶಿಸದಿದ್ದರೂ, ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಸಂಯಮದಿಂದ ವರ್ತಿಸಬೇಕು. ಈ ಎಲ್ಲಾ ಪ್ರತಿಭಟನಾಕಾರರನ್ನು ಅರವಿಂದ್ ಕೇಜ್ರಿವಾಲ್ ಅವರೇ ಕಳುಹಿಸಿದ್ದರು. ನಾವು ಗುರುತಿಸಿರುವ ಕಾರ್ಯಕರ್ತರೆಲ್ಲರೂ ಆಪ್ನೊಂದಿಗೆ ಗುರುತಿಸಿಕೊಂಡಿರುವುದರಿಂದ ಇದು ತನಿಖೆಗೆ ಒಳಪಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಪೊಲೀಸರು ಗುರುದ್ವಾರದೊಳಗೆ ಪ್ರವೇಶಿಸಿದ್ದಾರೆ ಎಂದು ಆಪ್ ನಾಯಕರು ಆರೋಪಿಸಿದ್ದರು.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಬಾಂಗ್ಲಾ ಸಾಹೀಬ್ ಗುರುದ್ವಾರಕ್ಕೆ ಪ್ರತಿಭಟನಾಕಾರರು ಪ್ರವೇಶಿಸಿದ್ದನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಸಿಇಸಿ ರಾಜೀನಾಮೆಗೆ ಒತ್ತಾಯ: ಇಂದು ಸುಪ್ರೀಂ ಕೋರ್ಟ್ವರೆಗೆ ಕಾಂಗ್ರೆಸ್ ಮೆರವಣಿಗೆ, ಆರು ಮೆಟ್ರೋ ನಿಲ್ದಾಣ ಬಂದ್

