ETV Bharat / bharat

ದೆಹಲಿ ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ಕಲ್ಲು ತೂರಾಟ; ಐವರು ಪೊಲೀಸ್​ ಸಿಬ್ಬಂದಿಗೆ ಗಾಯ

ನ್ಯಾಯಾಲಯದ ಆದೇಶದ ಮೇರೆಗೆ ದೆಹಲಿ ಎಂಸಿಡಿ ಕಳೆದ ರಾತ್ರಿ ತೆರವು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ನಡೆದ ಕಲ್ಲು ತೂರಾಟದಿಂದ ಐವರು ಪೊಲೀಸರು ಗಾಯಗೊಂಡಿದ್ದಾರೆ.

fir-filed-several-detained-as-police-probe-if-violence-during-delhi-demolition-drive-was-planned
ದೆಹಲಿಯ ಟರ್ಕ್‌ಮನ್ ಗೇಟ್‌ನ ಮಸೀದಿ ಸಮೀಪ ಅಕ್ರಮಣ ಕಟ್ಟಡಗಳ ತೆರವು ಕಾರ್ಯಾಚರಣೆ (PTI)
author img

By ETV Bharat Karnataka Team

Published : January 7, 2026 at 11:42 AM IST

1 Min Read
Choose ETV Bharat

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ರಾಮಲೀಲಾ ಮೈದಾನ ಪ್ರದೇಶದ ಟರ್ಕ್‌ಮನ್ ಗೇಟ್‌ ಸಮೀಪದ ಸೈಯದ್ ಫೈಜ್ ಇಲಾಹಿ ಮಸೀದಿ ಬಳಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಐವರು ಪೊಲೀಸರು ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬುಧವಾರ ಹಲವರನ್ನು ಬಂಧಿಸಿ, ಎಫ್‌ಐಆರ್ ದಾಖಲಿಸಿದ್ದಾರೆ.

ನ್ಯಾಯಾಲಯದ ಆದೇಶದ ಮೇರೆಗೆ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಮಸೀದಿ ಮತ್ತು ಹತ್ತಿರದ ಸ್ಮಶಾನಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾಗ, ಕೆಲವರು ಪೊಲೀಸರ ಮೇಲೆ ಕಲ್ಲು ಮತ್ತು ಗಾಜಿನ ಬಾಟಲಿಗಳನ್ನು ತೂರಿದ್ದು, ಕನಿಷ್ಠ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ವೇಳೆ ಜನರ ಗುಂಪನ್ನು ಚದುರಿಸಿ, ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಸಿಡಿಸಲಾಯಿತು ಎಂದು ಪೊಲೀಸರು ತಿಳಿಸಿದರು.

ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ತಡೆಯೊಡ್ಡುವ ಉದ್ದೇಶ ಯೋಜಿತವೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಕೃತ್ಯದಲ್ಲಿ ಭಾಗಿಯಾದವರ ಪತ್ತೆ ಕಾರ್ಯ ನಡೆಯುತ್ತಿದೆ.

ದುಷ್ಕರ್ಮಿಗಳ ಕೃತ್ಯದ ಸಿಸಿಟಿವಿ ದೃಶ್ಯಾವಳಿ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಮೂಲಕ ಆರೋಪಿಗಳ ಪತ್ತೆ ಕಾರ್ಯ ನಡೆಯಲಿದೆ. ತನಿಖೆಯ ಭಾಗವಾಗಿ ಪ್ರತ್ಯಕ್ಷದರ್ಶಿಗಳು ಮತ್ತು ವಶಕ್ಕೆ ಪಡೆದಿರುವವರ ಹೇಳಿಕೆಗಳನ್ನೂ ದಾಖಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

ತೆರವು ಕಾರ್ಯಾಚರಣೆ ವೇಳೆ ಸೈಯದ್​ ಫೈಜ್​ ಮಸೀದಿಗೆ ಯಾವುದೇ ಹಾನಿಯಾಗಿಲ್ಲ ಎಂದೂ ಕೂಡ ಎಂಸಿಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ದೆಹಲಿ ಹೈಕೋರ್ಟ್​ ಆದೇಶದಂತೆ ಎಂಸಿಡಿ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಕಾರ್ಯಾಚರಣೆಯ ಭಾಗವಾಗಿ 30 ಬುಲ್ಡೋಜರ್‌ ಮತ್ತು 50 ಡಂಪರ್‌ಗಳು ಸ್ಥಳದಲ್ಲಿನ ಅತಿಕ್ರಮಣ ತೆರವುಗೊಳಿಸಿದ್ದಾರೆ. ಈ ಸಂದರ್ಭದಲ್ಲಿ 300 ಎಂಸಿಡಿ ಸಿಬ್ಬಂದಿ ಮತ್ತು ಅಧಿಕಾರಿಗಳಿದ್ದು, ಮಂಗಳವಾರ ರಾತ್ರಿ ಪೂರ್ತಿ ತೆರವು ಕಾರ್ಯ ಸಾಗಿತು ಎಂದು ಎಂಸಿಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನ್ಯಾಯಾಲಯವು ಅಕ್ರಮವೆಂದು ಘೋಷಿಸಿದ ಕಟ್ಟಡಗಳು ಮತ್ತು ದೊಡ್ಡ ಅತಿಕ್ರಮಣ ಪ್ರದೇಶವನ್ನು ತೆರವುಗೊಳಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಜಾರಿಯಲ್ಲಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾಮಾನ್ಯ ಸ್ಥಿತಿಗೆ ಮರಳಿದೆ. ಹಿಂಸಾಚಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಸಾಗಿದೆ ಎಂದು ಅವರು ತಿಳಿಸಿದ್ದಾರೆ.

ಇವುಗಳನ್ನೂ ಓದಿ: