ಅಪ್ಪನ ಹೆಗಲೇ ಮಗಳ ಸಾಧನೆಗೆ ಮೆಟ್ಟಿಲು: 1ನೇ ತರಗತಿಯಿಂದ ಪದವಿವರೆಗೂ ಮಗಳ ಹೊತ್ತು ಓದಿಸಿದ ತಂದೆ
ಉತ್ತಮ ಶ್ರೇಣಿಯಲ್ಲಿ ಎಂಕಾಂ(M.Com) ಮುಗಿಸಿರುವ ಶಿವಾನಿ ಇದೀಗ ಉದ್ಯೋಗ ಹುಡುಕುತ್ತಿದ್ದಾರೆ. ತಮ್ಮ ಮಗಳು ಆರ್ಥಿಕವಾಗಿ ಸ್ವತಂತ್ರಳಾಗುವುದನ್ನು ನೋಡುವುದು ತಂದೆಯ ದೊಡ್ಡ ಕನಸು.

Published : June 22, 2026 at 1:22 PM IST
ಮಿರಿಯಾಲಗುಡ(ತೆಲಂಗಾಣ): ಧರಣಿಗೆ ಗಿರಿ ಭಾರವೇ, ಗಿರಿಗೆ ಮರ ಭಾರವೇ, ಬಳ್ಳಿಗೆ ಕಾಯಿ ಭಾರವೇ, ಹೆತ್ತ ತಾಯಿಗೆ ಮಗು ಭಾರವೇ... ತಾಯಿ ಮಕ್ಕಳನ್ನು ಒಂಭತ್ತು ತಿಂಗಳು ಗರ್ಭದಲ್ಲಿ ಹೊತ್ತರೆ, ತಂದೆ ಮಕ್ಕಳನ್ನು ಜೀವನಪೂರ್ತಿ ಹೆಗಲ ಮೇಲೆ ಹೊರುತ್ತಾನೆ ಎನ್ನುವುದು ಕವಿಮಾತು.
ಕೆಲವು ಕಥೆಗಳು ಅಪ್ಪ-ಅಮ್ಮನಿಗೆ ಮಕ್ಕಳ ಮೇಲಿರುವ ಪ್ರೀತಿಯ ಅರ್ಥವನ್ನು ಮತ್ತೆ ಮತ್ತೆ ಕೂಗಿ ಹೇಳುತ್ತವೆ. ಇಲ್ಲಿ ಅಂಥದ್ದೇ ವಾತ್ಸಲ್ಯದಾಯಕ ಕಥೆಯೊಂದು ಅಪ್ಪಂದಿರ ದಿನವನ್ನು ಇನ್ನಷ್ಟು ತೂಕವಾಗಿಸಿದೆ.
ನಾವಿಲ್ಲಿ ಹೇಳಹೊರಟಿರುವುದು ತಂದೆ ಸುಂಕೋಜು ವೆಂಕಟಾಚಾರಿ ಹಾಗೂ ಮಗಳು ಶಿವಾನಿ ಅವರ ಕರುಳಬಳ್ಳಿಯ ಕಥೆ. ಪ್ರೀತಿ, ತ್ಯಾಗ, ಅಚಲ ದೃಢಸಂಕಲ್ಪಕ್ಕೆ ಇದು ಮೇರು ಶಿಖರ.
ನಲ್ಗೊಂಡ ಜಿಲ್ಲೆಯ ಮಿರಿಯಾಲಗುಡದ ಬಂಗಾರುಗಡ್ಡ ಕಾಲೊನಿಯ 27 ವರ್ಷದ ಶಿವಾನಿ ಅಪರೂಪದ ಜೆನೆಟಿಕ್ ಮೂಳೆಚಿಕಿತ್ಸಾ ಲೊಕೊಮೊಟರ್ ಅಸ್ವಸ್ಥತೆಯೊಂದಿಗೆ ಜನಿಸಿದವರು. ಇದು ಅವರ ಬೆಳವಣಿಗೆಯ ಮೇಲೆ ತೀವ್ರ ಪರಿಣಾಮ ಬೀರಿತ್ತು. ಜತೆಗೆ ಮೂಳೆಗಳೂ ಸಹ ಅತ್ಯಂತ ದುರ್ಬಲವಾಗಿದ್ದವು.
ಬಾಲ್ಯದಲ್ಲಿ ಮೆಲ್ಲಗೆ ನಡೆದಾಡಿದರೂ, ನಿಧಾನವಾಗಿ ಆಕೆಯನ್ನು ಎತ್ತಿ ಆಡಿಸಿದರೂ ಮೂಳೆ ಮುರಿಯುವ ಸಾಧ್ಯತೆಗಳಿದ್ದವು. ಆಸ್ಪತ್ರೆಗೆ ಅಲೆದಾಟ, ದೀರ್ಘಕಾಲದ ಚಿಕಿತ್ಸೆ ಅವರ ಜೀವನದ ಒಂದು ಭಾಗವಾಗಿಯೇ ಹೋಗಿದೆ. ವಯಸ್ಸಾದಂತೆ ಪುನರಾವರ್ತಿತ ಮುರಿತಗಳು ಅಂತಿಮವಾಗಿ 15ನೇ ವಯಸ್ಸಿಗೆ ಅವರ ಕೈಕಾಲುಗಳಲ್ಲಿ ವಿರೂಪ ಸೃಷ್ಟಿಸಿದೆ.
ದೈಹಿಕ, ಭಾವನಾತ್ಮಕ ಮತ್ತು ಆರ್ಥಿಕ ಸವಾಲುಗಳ ಹೊರತಾಗಿಯೂ, ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿದ್ದ ಶಿವಾನಿ ಅವರ ತಂದೆ ಸುಂಕೋಜು ವೆಂಕಟಾಚಾರಿ ಅವರು, ತಮ್ಮ ಮಗಳ ಸ್ಥಿತಿ ಅವಳ ಭವಿಷ್ಯವನ್ನು ನಿರ್ಧರಿಸದಂತೆ ನೋಡಿಕೊಂಡರು. ಮಗಳ ಕಾಯಿಲೆಗೆ ಚಿಕಿತ್ಸೆ ಕಂಡುಕೊಳ್ಳುವ ಆಸೆಯೊಂದಿಗೆ, ಅದೆಷ್ಟೋ ವೈದ್ಯರು, ಆಸ್ಪತ್ರೆ ಅಂತೆಲ್ಲ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದರು. ಅಂತಿಮವಾಗಿ, ವೈದ್ಯರು ಈ ಸ್ಥಿತಿ ಆನುವಂಶಿಕವಾಗಿ ಬಂದಿದೆ. ಇದಕ್ಕೆ ಯಾವುದೇ ಶಾಶ್ವತ ಚಿಕಿತ್ಸೆ ಇಲ್ಲ ಎನ್ನುವುದನ್ನು ದೃಢಪಡಿಸಿದರು.
"ಆಗ ನನಗೆ ನಮ್ಮ ಕುಟುಂಬದಲ್ಲಿ ಒಂದು ಗಾಜಿನ ಗೊಂಬೆ ಹುಟ್ಟಿದೆ ಎನ್ನುವುದು ಅರಿವಾಯಿತು. ಅಂದಿನಿಂದ, ನಾನು ಅವಳನ್ನು ಅತ್ಯಂತ ಕಾಳಜಿಯಿಂದ ರಕ್ಷಿಸುತ್ತಾ ಬಂದಿದ್ದೇನೆ" ಎನ್ನುತ್ತಾರೆ ವೆಂಕಟಾಚಾರಿ.
ಪ್ರತಿದಿನ ಮಗಳನ್ನು ಶಾಲೆಗೆ ಎತ್ತಿಕೊಂಡೇ ಹೋಗುತ್ತಿದ್ದ ತಂದೆ: ಶಿವಾನಿಯನ್ನು ಮನೆಯಲ್ಲಿಯೇ ಇರಿಸುವ ಬದಲು ಉತ್ತಮ ಶಿಕ್ಷಣ ಕೊಡಿಸಲು ನಿರ್ಧರಿಸಿದರು. ಅಲ್ಲದೆ ಶಿವಾನಿಗೂ ಕಲಿಯುವ ಆಸಕ್ತಿ ಇತ್ತು. ಅದರಂತೆ, ಅವಳ ಶಿಕ್ಷಣಕ್ಕೆ ತಂದೆ ಪ್ರೋತ್ಸಾಹಿಸಿದರು. ಎಂಟು ವರ್ಷ ತುಂಬಿದಾಗ, ಆಕೆಯನ್ನು ಶಾಲೆಗೆ ಸೇರಿಸಿದರು. 1ನೇ ತರಗತಿಯಿಂದ ಸ್ನಾತಕೋತ್ತರ ಪದವಿ ಮುಗಿಸುವವರೆಗೆ, ವೆಂಕಟಾಚಾರಿ ಅವರು ತಮ್ಮ ಮಗಳನ್ನು ಪ್ರತಿದಿನ ಶಾಲೆಗೆ ಹೊತ್ತುಕೊಂಡು ಹೋಗುತ್ತಿದ್ದರು. ಸುಮಾರು ಎರಡು ದಶಕಗಳ ಕಾಲ ಈ ಪ್ರಯಾಣ ಮುಂದುವರಿದಿತ್ತು.
ತಂದೆಯ ಈ ಅವಿರತ ಪ್ರಯತ್ನಕ್ಕೆ ಮಗಳು ತಕ್ಕ ಫಸಲನ್ನೇ ಬೆಳೆದಳು. ಶಿವಾನಿ ಎಂ.ಕಾಂ ಪದವಿಯನ್ನು ಶೇಕಡಾ 90 ರಷ್ಟು ಅಂಕ ಪಡೆದು ಫಸ್ಟ್ಕ್ಲಾಸಲ್ಲಿ ಪೂರ್ಣಗೊಳಿಸಿದರು. ದೈಹಿಕ ಮಿತಿಗಳು ತನ್ನಲ್ಲಿನ ದೃಢನಿಶ್ಚಯ ಮತ್ತು ಶೈಕ್ಷಣಿಕ ಹಸಿವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿದರು.
ಪದವಿ ಪೂರ್ಣಗೊಳಿಸಿರುವ ಶಿವಾನಿ ಈಗ ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಮಗಳು ಸ್ವತಂತ್ರಳಾಗಿ ಬದುಕುವುದನ್ನು ನೋಡುವುದು ತಂದೆಯ ಕನಸೂ ಹೌದು.
"ಶಿವಾನಿಗೆ ಕೆಲಸ ಸಿಕ್ಕು, ಆಕೆ ತನ್ನ ಕಾಲ ಮೇಲೆ ತಾನು ನಿಲ್ಲುವುದನ್ನು ನೋಡುವುದೇ ನನ್ನ ಏಕೈಕ ಆಸೆ" ಎಂದಿರುವ ಅವರು, ಮಗಳ ಅಂಗವೈಕಲ್ಯವನ್ನು ಪರಿಗಣಿಸಿ ಅವಳಿಗೆ ಸೂಕ್ತ ಉದ್ಯೋಗಾವಕಾಶವನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅನಾರೋಗ್ಯ ಅಬ್ಬಬ್ಬಾ ಎಂದರೆ, ದೈಹಿಕ ಚಲನೆಯನ್ನು ಮಿತಿಗೊಳಿಸಬಹುದು. ಆದರೆ, ಪೋಷಕರ ಪ್ರೀತಿ, ಪರಿಶ್ರಮ ಮತ್ತು ನಂಬಿಕೆ ಎಂತಹ ಕಠಿಣ ಅಡೆತಡೆಗಳನ್ನೂ ಸಹ ಮೆಟ್ಟಿನಿಲ್ಲಬಹುದು ಎಂಬುದನ್ನು ಈ ಅಪರೂಪದ ಅಪ್ಪ-ಮಗಳ ಕಥೆ ಸಾರಿ ಹೇಳುತ್ತದೆ.
ಇದನ್ನೂ ಓದಿ: ಸವಾಲಿನ ನಡುವೆ ಸಾಧನೆ: 5,364 ಮೀ ಎತ್ತರದ ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ 21 ವಿಶೇಷಚೇತನ ವಿದ್ಯಾರ್ಥಿಗಳು!

