ETV Bharat / bharat

ಇಂದು ತಮಿಳುನಾಡು ವಿಧಾನಸಭಾ ಚುನಾವಣೆ: 5.73 ಕೋಟಿಗೂ ಹೆಚ್ಚು ಮತದಾರರ ಕೈಯಲ್ಲಿ 4,023 ಅಭ್ಯರ್ಥಿಗಳ ಭವಿಷ್ಯ

ಇಂದು ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, 4,023 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

TAMIL NADU ASSEMBLY ELECTION 2026
ಮತದಾನ ಕೇಂದ್ರದ ಬಳಿ ಪೊಲೀಸ್​ ಸರ್ಪಗಾವಲು (ETV Bharat)
author img

By PTI

Published : April 22, 2026 at 10:20 PM IST

2 Min Read
Choose ETV Bharat

ಚೆನ್ನೈ(ತಮಿಳುನಾಡು): ಇಂದು ತಮಿಳುನಾಡು ವಿಧಾನಸಭೆ ಚುನಾವನೆ ನಡೆಯಲಿದ್ದು, 5.73 ಕೋಟಿಗೂ ಹೆಚ್ಚು ಮತದಾರರು 4,023 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

ಡಿಎಂಕೆ ನೇತೃತ್ವದ ಎಸ್‌ಪಿಎ ಮತ್ತು ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಬಣಗಳ ಮಧ್ಯೆ ಪೈಪೋಟಿ ಉಂಟಾಗಿದೆ. ಐದು ವರ್ಷಗಳ ಕಾಲ ವಿರೋಧ ಪಕ್ಷದಲ್ಲಿದ್ದ ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನ ನಡೆಸುತ್ತಿದ್ದರೆ, ಡಿಎಂಕೆ ಅಧಿಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ.

ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ತಮಿಳುನಾಡನ್ನು ದಕ್ಷಿಣ ಏಷ್ಯಾದಲ್ಲೇ ಮಾದರಿ ರಾಜ್ಯವನ್ನಾಗಿ ಪರಿವರ್ತಿಸುವುದಾಗಿ ಭರವಸೆ ನೀಡಿದ್ದರೆ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಅರ್ಹವಲ್ಲದ ವ್ಯಕ್ತಿಯನ್ನು ಆಯ್ಕೆ ಮಾಡಬೇಡಿ ಎಂದು ಯುವ ಮತದಾರರಲ್ಲಿ ಮನವಿ ಮಾಡಿದ್ದರು. ಪ್ರಚಾರವು ಅಂತ್ಯಗೊಳ್ಳುತ್ತಿದ್ದಂತೆ ಅಭಿವೃದ್ಧಿ, ಶಾಂತಿ ಮತ್ತು ಸಮೃದ್ಧಿಯನ್ನು ತರಲು ಎಐಎಡಿಎಂಕೆಗೆ ಜನಾದೇಶ ನೀಡಬೇಕೆಂದು ಕೋರಿದರು.

ಪೆರಂಬೂರು ಮತ್ತು ತಿರುಚಿರಾಪಳ್ಳಿ ಪೂರ್ವ ಕ್ಷೇತ್ರಗಳಿಂದ ಕಣಕ್ಕಿಳಿದಿರುವ ಟಿವಿಕೆ ಸಂಸ್ಥಾಪಕ ನಟ ವಿಜಯ್, ಮಾಜಿ ಮುಖ್ಯಮಂತ್ರಿ ಪಳನಿಸ್ವಾಮಿ ತಮ್ಮ ತವರು ಜಿಲ್ಲೆ ಸೇಲಂನ ಹೊರಗಿನ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲಬಹುದೇ ಎಂದು ಟೀಕಿಸಿದರು.

ರಾಜ್ಯದ 234 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 4,023 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 5,73,43,291 ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ. ಎಪ್ರಿಲ್ 21 ರಂದು ಪ್ರಚಾರ ಕೊನೆಗೊಂಡಿತು. ಇಂದು ಮತದಾನ ನಡೆಯಲಿದ್ದು, ಮೇ 4 ರಂದು ಮತ ಏಣಿಕೆ ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ.

ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನೂರು ಪ್ರತಿಶತ ಮತದಾನವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗ ಯೋಜಿಸಿದೆ ಮತ್ತು ಅದಕ್ಕೆ ಅನುಗುಣವಾಗಿ ಮತದಾರರ ಜಾಗೃತಿ ಅಭಿಯಾನಗಳನ್ನು ಕೈಗೊಂಡಿದೆ. ಚುನಾವಣೆಗೂ ಮುಂಚಿತವಾಗಿ, ತಮಿಳುನಾಡು ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ಅವರು, ಮತದಾನದ ಮೇಲ್ವಿಚಾರಣೆ ಪರಿಶೀಲಿಸಲು ಸ್ಥಾಪಿಸಲಾಗಿರುವ ನಿಯಂತ್ರಣ ಕೊಠಡಿಗೆ ಭೇಟಿ ನೀಡಿದರು.

ಇವಿಎಂಗಳನ್ನು ಮತಗಟ್ಟೆಗಳಿಗೆ ವರ್ಗಾಯಿಸುವ ಕೆಲಸ ಭರದಿಂದ ಸಾಗಿದೆ. ತಮಿಳುನಾಡಿನಾದ್ಯಂತ ಚುನಾವಣಾ ಕರ್ತವ್ಯಕ್ಕಾಗಿ 1.40 ಲಕ್ಷಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಮತ್ತು ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ತಮಿಳುನಾಡು ವಿಧಾನಸಭೆಗೆ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗಾಗಿ ಭಾರತ ಚುನಾವಣಾ ಆಯೋಗವು ಅಂತಾರಾಷ್ಟ್ರೀಯ ಚುನಾವಣಾ ಸಂದರ್ಶಕರ ಕಾರ್ಯಕ್ರಮ (IEVP), 2026ರ ಎರಡನೇ ಹಂತವನ್ನು ಪ್ರಾರಂಭಿಸಿದೆ. ಸಂದರ್ಶಕರು ಇವಿಎಂ ರವಾನೆ ಮತ್ತು ವಿತರಣಾ ಕೇಂದ್ರಗಳು ಮತ್ತು ಜಿಲ್ಲಾ ನಿಯಂತ್ರಣ ಕೊಠಡಿಗಳು ಮತ್ತು ಮಾಧ್ಯಮ ಮೇಲ್ವಿಚಾರಣಾ ಕೇಂದ್ರಗಳು ಸೇರಿದಂತೆ ಇತರ ಸೌಲಭ್ಯಗಳಿಗೆ ಭೇಟಿ ನೀಡುತ್ತಾರೆ. ಎಪ್ರಿಲ್ 23ರ ಬೆಳಗ್ಗೆ ಅವರು ಮತದಾನವನ್ನು ವೀಕ್ಷಿಸುತ್ತಾರೆ ಎಂದು ECI ತಿಳಿಸಿದೆ.

ಅಧಿಕಾರಿಯೊಬ್ಬರ ಪ್ರಕಾರ, ಇವಿಎಂಗಳಲ್ಲಿ ಅಭ್ಯರ್ಥಿ ಚಿಹ್ನೆ ಸ್ಪಷ್ಟವಾಗಿ ಗೋಚರಿಸಬೇಕು ಮತ್ತು ಯಾವುದೇ ಅಭ್ಯರ್ಥಿ ಚಿಹ್ನೆಯ ಮೇಲೆ ಟೇಪ್ ಅಥವಾ ಯಾವುದೇ ಇತರೆ ವಸ್ತುಗಳಿಂದ ಮುಚ್ಚಬಾರದು ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇವುಗಳನ್ನೂ ಓದಿ: