ಸಿಎಂ ಮಮತಾ ವಿರುದ್ಧ ಸಿಬಿಐ ತನಿಖೆಗೆ ED ಮನವಿ: ಸುಪ್ರೀಂಕೋರ್ಟ್ನಲ್ಲಿ ಕೇವಿಯಟ್ ಸಲ್ಲಿಸಿದ ಬಂಗಾಳ ಸರ್ಕಾರ
ಸಿಎಂ ಮಮತಾ ಬ್ಯಾನರ್ಜಿ ಅವರು ದಾಳಿ ನಡೆದ ಸ್ಥಳಕ್ಕೆ ಆಗಮಿಸಿ ಮಹತ್ವದ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡೊಯ್ದಿದ್ದಾರೆ ಎಂದು ಇ.ಡಿ. ಆರೋಪಿಸಿದೆ.

Published : January 10, 2026 at 5:43 PM IST
ನವದೆಹಲಿ: ಟಿಎಂಸಿ ಐಟಿ ಸೆಲ್ ಮುಖ್ಯಸ್ಥನ ಮಾಲೀಕತ್ವದ ಐ-ಪ್ಯಾಕ್ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ ಶೋಧದಲ್ಲಿ ತನ್ನ ವಾದವನ್ನು ಆಲಿಸದೆ ಯಾವುದೇ ಆದೇಶ ಹೊರಡಿಸಬಾರದು ಎಂದು ಕೋರಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದೆ.
ಬಹುಕೋಟಿ ರೂಪಾಯಿ ಕಲ್ಲಿದ್ದಲು ಕಳ್ಳತನ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆ ನಡೆದಿರುವ ಆರೋಪದ ಮೇಲೆ ಕೋಲ್ಕತ್ತಾ, ದೆಹಲಿಯಲ್ಲಿ ಇರುವ ಐ-ಪ್ಯಾಕ್ ಕಚೇರಿಗಳು ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ದಾಳಿ ನಡೆಸಿ ಶೋಧ ನಡೆಸಿದೆ.
ತನಿಖಾ ಏಜೆನ್ಸಿಯ ಶೋಧದ ವೇಳೆಯೇ ಐ ಪ್ಯಾಕ್ ಸಂಸ್ಥೆಯ ಕಚೇರಿಗೆ ಆಗಮಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಲ್ಲಿದ್ದ ಕೆಲ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದರು. ಇವು ಪ್ರಮುಖ ಪುರಾವೆಗಳಾಗಿದ್ದು, ಸಿಎಂ ತನಿಖೆಗೆ ಅಡ್ಡಿ ಉಂಟು ಮಾಡಿದ್ದಾರೆ ಎಂದು ಇ.ಡಿ. ಅಧಿಕಾರಿಗಳು ಆರೋಪಿಸಿದೆ. ಅಲ್ಲದೇ, ಸಿಎಂ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಕೋಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ತನ್ನ ನಡೆ ಸಮರ್ಥಿಸಿಕೊಂಡ ಸಿಎಂ ಮಮತಾ: ಇ.ಡಿ. ಶೋಧ ಕಾರ್ಯದ ವೇಳೆ ಆಗಮಿಸಿ ಕೆಲ ದಾಖಲೆಗಳನ್ನು ತೆಗೆದುಕೊಂಡು ಹೋದ ಸಿಎಂ ಮಮತಾ ಬ್ಯಾನರ್ಜಿ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ತನಿಖಾಧಿಕಾರಿಗಳು ಪಕ್ಷಕ್ಕೆ ಸಂಬಂಧಿಸಿದ ಚುನಾವಣಾ ದಾಖಲೆಗಳನ್ನು ಮತ್ತು ತಂತ್ರಗಳನ್ನು ಹೈಜಾಕ್ ಮಾಡಲು ಪ್ರಯತ್ನಿಸಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
"ನಾನು ಯಾವುದೇ ತಪ್ಪು ಮಾಡಿಲ್ಲ. ನೀವು ನನ್ನನ್ನು ಕೊಲ್ಲಲು ಬಂದಿದ್ದೀರಿ. ನನ್ನನ್ನು ಸಮರ್ಥಿಸಿಕೊಳ್ಳುವ ಹಕ್ಕು ನನಗಿದೆ. ನೀವು ಕಳ್ಳರಂತೆ ಏಕೆ ಪ್ರವೇಶಿಸಿದ್ದೀರಿ? ನೀವು ಎಲ್ಲಾ ಮತದಾರರ ಎಸ್‌ಐಆರ್ ಡೇಟಾವನ್ನು ಕದಿಯುತ್ತಿದ್ದೀರಿ. ನೀವು ಬಿಎಲ್‌ಎ-1 ಮತ್ತು ಬಿಎಲ್‌ಎ-2 ವಿಳಾಸಗಳು ಮತ್ತು ಐ-ಪ್ಯಾಕ್ ಕಚೇರಿಯಲ್ಲಿ ಸಾಮಾನ್ಯ ಜನರ ಮನವಿಗಳನ್ನು ಕದಿಯುತ್ತಿದ್ದೀರಿ" ಎಂದು ಇ.ಡಿ. ದಾಳಿಯನ್ನು ಟೀಕಿಸಿದ್ದಾರೆ.
ಇ.ಡಿ. ಬೆಳಿಗ್ಗೆ 6 ಗಂಟೆಗೆ ಐ ಪ್ಯಾಕ್ ಕಚೇರಿ ಮೇಲೆ ದಾಳಿ ಮಾಡಿದೆ. ನಾನು ಬೆಳಗ್ಗೆ 11.45 ಕ್ಕೆ ಅಲ್ಲಿಗೆ ಹೋಗಿದ್ದೇನೆ. 5.5 ತಾಸಿನಲ್ಲಿ ಅಧಿಕಾರಿಗಳು ಪಕ್ಷಕ್ಕೆ ಸೇರಿದ ಮಹತ್ವದ ಮಾಹಿತಿಯನ್ನು ಕದ್ದಿದ್ದಾರೆ. ನಾನು ಐ- ಪ್ಯಾಕ್ ನಿರ್ದೇಶಕ ಪ್ರತೀಕ್ ಜೈನ್ ಅವರಿಗೆ ಕರೆ ಮಾಡಿದೆ. ಆದರೆ, ಅವರು ಕರೆ ಸ್ವೀಕರಿಸಲಿಲ್ಲ. ಆಗ ನನಗೆ ಅನುಮಾನ ಬಂತು. ಅದೇ ಐ-ಪ್ಯಾಕ್ 2014 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಕೆಲಸ ಮಾಡಿದೆ. ನಮ್ಮ ಐಟಿ ಸೆಲ್ ಜವಾಬ್ದಾರಿಯನ್ನು ಐ-ಪ್ಯಾಕ್ಗೆ ನೀಡಿದ್ದೇನೆ. ಹೀಗಾಗಿಯೇ ಇಡಿ ದಾಳಿ ಮಾಡಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ದೂರಿದ್ದಾರೆ.
ಏನಿದು ಕೇವಿಯಟ್ ಅರ್ಜಿ: ಹೈಕೋರ್ಟ್ಗಳು ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದವರ ವಾದವನ್ನು ಆಲಿಸಿದ ಬಳಿಕ, ಪ್ರತಿ ದೂರುದಾರರ ವಿರುದ್ಧ ಯಾವುದೇ ಆದೇಶ ಹೊರಡಿಸುವ ಮೊದಲು ತಮ್ಮ ವಾದವನ್ನೂ ಆಲಿಸಿ ಎಂದು ಪ್ರತಿವಾದಿಗಳು ಮನವಿ ಮಾಡುವ ಅರ್ಜಿಯಾಗಿದೆ.
ಇವುಗಳನ್ನೂ ಓದಿ:

