ETV Bharat / bharat

'ಟಿಎಂಸಿ ಆಂತರಿಕ ಕಾರ್ಯತಂತ್ರ ಕದಿಯಲು ಇ.ಡಿ ದಾಳಿ': ಕೋಲ್ಕತ್ತಾದಲ್ಲಿ ಟಿಎಂಸಿ ಬೃಹತ್ ರ‍್ಯಾಲಿ; ಕೇಂದ್ರದ ವಿರುದ್ಧ ಗಂಭೀರ ವಾಗ್ದಾಳಿ

ಜಾರಿ ನಿರ್ದೇಶನಾಲಯ(ಇ.ಡಿ)ದ ವಿರುದ್ಧ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿಂದು ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕೋಲ್ಕತ್ತಾದಲ್ಲಿಂದು ನಡೆದ ಬೃಹತ್ ರ‍್ಯಾಲಿ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕೋಲ್ಕತ್ತಾದಲ್ಲಿಂದು ನಡೆದ ಬೃಹತ್ ರ‍್ಯಾಲಿ (IANS)
author img

By ETV Bharat Karnataka Team

Published : January 9, 2026 at 7:53 PM IST

2 Min Read
Choose ETV Bharat

ಕೋಲ್ಕತ್ತಾ(ಪಶ್ಚಿಮ ಬಂಗಾಳ): 2026ರ ವಿಧಾನಸಭಾ ಚುನಾವಣೆಗೆ ಮುನ್ನ ಟಿಎಂಸಿಯ ಆಂತರಿಕ ಕಾರ್ಯತಂತ್ರವನ್ನು ಕದಿಯುವ ಗುರಿಯನ್ನು ಅವರು ಹೊಂದಿದ್ದಾರೆ. ಅಷ್ಟೇ ಅಲ್ಲದೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಕಲ್ಲಿದ್ದಲು ಹಗರಣದ ಆದಾಯದಿಂದ ಲಾಭ ಪಡೆದಿದ್ದಾರೆ. ಅಗತ್ಯವಿದ್ದರೆ ಸಾರ್ವಜನಿಕರಿಗೆ ಈ ಕುರಿತು ಪುರಾವೆ ನೀಡಲು ನಾನು ಸಿದ್ಧ ಎಂದು ಸಿಎಂ ಮಮತಾ ಬ್ಯಾನರ್ಜಿ ಘರ್ಜಿಸಿದರು.

ಕೋಲ್ಕತ್ತಾದ ಹೃದಯಭಾಗದಲ್ಲಿ ಇಂದು ಸುಮಾರು 10 ಕಿ.ಮೀ ಪ್ರತಿಭಟನಾ ಮೆರವಣಿಗೆ ನಡೆಸಿದ ನಂತರ ಬೃಹತ್ ರ್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.

ನಾನು ಕಾನೂನುಬಾಹಿರ ಕೆಲಸ ಮಾಡಿಲ್ಲ-ಮಮತಾ: ನಾನು ಮುಖ್ಯಮಂತ್ರಿಯಾಗಿ ಅಲ್ಲ, ಟಿಎಂಸಿ ಅಧ್ಯಕ್ಷೆಯಾಗಿ ನನ್ನ ಸಾಮರ್ಥ್ಯದಲ್ಲಿ ಇ.ಡಿ ಶೋಧ ಸ್ಥಳದಲ್ಲಿ ನಿನ್ನೆ ಮಧ್ಯಪ್ರವೇಶ ಮಾಡಿದ್ದೇನೆ. ನಾನು ಯಾವುದೇ ಕಾನೂನುಬಾಹಿರ ಕೆಲಸ ಮಾಡಿಲ್ಲ ಎಂದು ಅವರು ಸಮರ್ಥಿಸಿಕೊಂಡರು.

ತಮ್ಮ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿಗೆ ಸಂಬಂಧಿಸಿದ ಜಾರಿ ನಿರ್ದೇಶನಾಲಯ(ಇ.ಡಿ)ದ ತನಿಖೆಯನ್ನು ವಿರೋಧಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಮಮತಾ ನೇತೃತ್ವದ ಟಿಎಂಸಿ ತನ್ನ ಬಲ ಪ್ರದರ್ಶನವನ್ನೂ ಮಾಡಿದಂತಾಯಿತು. ಕೇಂದ್ರ ಸರ್ಕಾರದೊಂದಿಗಿನ ತಮ್ಮ ಸಂಘರ್ಷವನ್ನು ಹೆಚ್ಚಿಸುತ್ತಾ, ಕೋಲ್ಕತ್ತಾದ ಬೀದಿಗಳನ್ನು ತಮ್ಮ ರಾಜಕೀಯ ಸಮರಕ್ಕಾಗಿಯೂ ಮಮತಾ ಆಯ್ದುಕೊಂಡಂತಿತ್ತು.

ಇಲ್ಲಿನ 8 ಬಿ ಬಸ್ ನಿಲ್ದಾಣ ಪ್ರದೇಶದಿಂದ ಹಜ್ರಾ ಮೋರ್ ಕಡೆಗೆ ಸಿಎಂ ಕಾಲ್ನಡಿಗೆಯಲ್ಲೇ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾದರು. ಎಂದಿನಂತೆ ಬಿಳಿ ಹತ್ತಿ ಸೀರೆ, ಶಾಲು ಮತ್ತು ಚಪ್ಪಲಿ ಧರಿಸಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದ ಜನರೆಡೆ ಅವರು ಕೈ ಬೀಸುತ್ತಿದ್ದರು.

ಸಿಎಂ ಜೊತೆಗೆ ಹಿರಿಯ ಸಚಿವರು, ಸಂಸದರು, ಶಾಸಕರು ಮತ್ತು ಪಕ್ಷದ ಕಾರ್ಯಕರ್ತರಿದ್ದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಕೀಯ ಸೇಡಿಗಾಗಿ ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಘೋಷಣೆಗಳು ಮೊಳಗಿದವು. ರ್ಯಾಲಿಯಲ್ಲಿ ಪಕ್ಷದ ಕಾರ್ಯಕರ್ತರು 'ಅಮಿ ಬಂಗ್ಲೇ ಗಾನ್ ಗೈ' ಗೀತೆ ಹಾಡಿದರು. ಮಹಿಳೆಯರು ಶಂಖನಾದ ಮೊಳಗಿಸಿದರು. ರ್ಯಾಲಿಗೆ ಬಂಗಾಳದ ಕೆಲವು ಚಿತ್ರರಂಗದವರೂ ಜೊತೆಯಾದರು.

ಕೇಂದ್ರದ ವಿರುದ್ಧ ಟಿಎಂಸಿ ಆಯೋಜಿಸಿರುವ ರಾಜ್ಯಾದ್ಯಂತ ಆಂದೋಲನಗಳ ಪೈಕಿ ಈ ಮೆರವಣಿಗೆ ಮೊದಲನೆಯದು ಎಂದು ಟಿಎಂಸಿ ನಾಯಕರು ಹೇಳಿದ್ದಾರೆ.

ಐ-ಪಿಎಸಿ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಲೌಡನ್ ಸ್ಟ್ರೀಟ್ ನಿವಾಸದಲ್ಲಿ ನಿನ್ನೆ ಇ.ಡಿ ದಾಳಿ ನಡೆಸಿತ್ತು. ಈ ವೇಳೆ ಸಿಎಂ ಮಮತಾ ಬ್ಯಾನರ್ಜಿ ಅವರು ಮಧ್ಯ ಪ್ರವೇಶಿಸಿ, ನಾಟಕೀಯವಾಗಿ ಕಾಣಿಸಿಕೊಂಡಿದ್ದರು. ಈ ವಿದ್ಯಮಾನ ಇದೀಗ ಕೇಂದ್ರ-ರಾಜ್ಯದ ಪೂರ್ಣ ಪ್ರಮಾಣದ ಸಂಘರ್ಷವಾಗಿ ಮಾರ್ಪಟ್ಟಿದೆ.

ನನಗೆ ಆತ್ಮರಕ್ಷಣೆಯ ಹಕ್ಕಿಲ್ಲವೇ?- ಸಿಎಂ: ಯಾರಾದರೂ ನನ್ನನ್ನು ಕೊಲ್ಲಲು ಬಂದರೆ, ನನಗೆ ಆತ್ಮರಕ್ಷಣೆಯ ಹಕ್ಕಿಲ್ಲವೇ? ಎಂದು ಪ್ರಶ್ನಿಸಿರುವ ಮಮತಾ ಬ್ಯಾನರ್ಜಿ, ಕೋಲ್ಕತ್ತಾದ ಇ.ಡಿ ದಾಳಿ ಸ್ಥಳದಲ್ಲಿ ತಮ್ಮ ಉಪಸ್ಥಿತಿಯನ್ನು ಹೀಗೆ ಸಮರ್ಥಿಸಿಕೊಂಡಿದ್ದಾರೆ.

ಮಮತಾ ದೂರಿನನ್ವಯ ಇ.ಡಿ ವಿರುದ್ಧ FIR ದಾಖಲು: ಐ-ಪಿಎಸಿ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಇಂದು ಇ.ಡಿ ವಿರುದ್ಧ ಎರಡು ದೂರು ದಾಖಲಿಸಿದ್ದು, ಅದರಂತೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಕೋಲ್ಕತ್ತಾ ಮತ್ತು ಬಿಧಾನ್‌ನಗರ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸಿಎಂ ಮಮತಾ ಬ್ಯಾನರ್ಜಿ ಅವರು ಇ.ಡಿ ಶೋಧ ಕಾರ್ಯಾಚರಣೆಯ ಸ್ಥಳಗಳಿಗೆ ಧಾವಿಸಿ ಬಂದು ಪ್ರಮುಖ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಸ್ಥಳಗಳಿಂದ ಕೊಂಡೊಯ್ದ ಆರೋಪ ಎದುರಿಸುತ್ತಿದ್ದಾರೆ. ಈ ನಾಟಕೀಯ ಬೆಳವಣಿಗೆಗಳ ನಂತರ, ಇ.ಡಿ ವಿರುದ್ಧ ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ಟಿಎಂಸಿ ದೂರು ದಾಖಲಿಸಿತ್ತು.

ಇದನ್ನೂ ಓದಿ: ಐ ಪ್ಯಾಕ್​ ಮೇಲೆ ಇಡಿ ದಾಳಿ; ದಾಖಲೆಗಳ ದುರ್ಬಳಕೆಗೆ ನಿರ್ಬಂಧ ಹೇರುವಂತೆ ಕೋರಿ ಹೈಕೋರ್ಟ್​​ ಮೆಟ್ಟಿಲೇರಿದ ಟಿಎಂಸಿ