ETV Bharat / bharat

ಚಿದಂಬರಂ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ: ತ್ವರಿತ ವಿಚಾರಣೆಗೆ ಕೋರ್ಟ್​ ಮೊರೆಹೋದ ಇಡಿ

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಪಿ ಚಿದಂಬರಂ ವಿರುದ್ಧ ತ್ವರಿತ ವಿಚಾರಣೆಗೆ ಇಡಿ ಕೋರ್ಟ್​ ಮೊರೆ ಹೋಗಿದೆ.

ED FILES PROSECUTION SANCTION  PMLA CASES  AIRCEL MAXIS DEAL  ಪಿ ಚಿದಂಬರಂ  P CHIDAMBARAM
ಪಿ ಚಿದಂಬರಂ (ANI)
author img

By ETV Bharat Karnataka Team

Published : February 27, 2026 at 9:16 AM IST

2 Min Read
Choose ETV Bharat

ನವದೆಹಲಿ: ಏರ್‌ಸೆಲ್ - ಮ್ಯಾಕ್ಸಿಸ್ ಒಪ್ಪಂದ ಮತ್ತು ಐಎನ್‌ಎಕ್ಸ್ ಮೀಡಿಯಾಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ತ್ವರಿತ ವಿಚಾರಣೆಗೆ ಅನುಮತಿ ಕೋರಿ ಜಾರಿ ನಿರ್ದೇಶನಾಲಯವು ಕೋರ್ಟ್​ಗೆ ಮನವಿ ಸಲ್ಲಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ವಿರುದ್ಧ ಕಾನೂನು ಕ್ರಮ ಜರುಗಿಸಲು ತ್ವರಿತ ವಿಚಾರಣೆ ನಡೆಸಬೇಕಿದೆ ಎಂದು ಜಾರಿ ನಿರ್ದೇಶನಾಲಯ ಗುರುವಾರ ತಿಳಿಸಿದೆ.

ಏರ್‌ಸೆಲ್ - ಮ್ಯಾಕ್ಸಿಸ್ ಪ್ರಕರಣ ಸಂಬಂಧ 2018 ಮತ್ತು ಐಎನ್‌ಎಕ್ಸ್ ಮೀಡಿಯಾ ಪ್ರಕರಣ ಸಂಬಂಧ 2020 ರಲ್ಲಿ ತನಿಖಾ ಸಂಸ್ಥೆ ಇಡಿಯು ಚಿದಂಬರಂ ವಿರುದ್ಧ ದೆಹಲಿಯ (ರೌಸ್ ಅವೆನ್ಯೂ) ವಿಶೇಷ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು. 2021 ರಲ್ಲಿ ಈ ಬಗ್ಗೆ ಕೋರ್ಟ್ ಪ್ರತ್ಯೇಕ ವಿಚಾರಣೆ ಕೈಗೆತ್ತಿಕೊಂಡಿತ್ತು. ಆದರೆ, 2024ರ ನವೆಂಬರ್​ನಲ್ಲಿ, ಸುಪ್ರೀಂ ಕೋರ್ಟ್ (ಇಡಿ Vs ಬಿಭು ಪ್ರಸಾದ್ ಆಚಾರ್ಯ ಪ್ರಕರಣದಲ್ಲಿ) ಪಿಎಂಎಲ್‌ಎ ಆರೋಪಪಟ್ಟಿಯಲ್ಲಿ ವಿಚಾರಣೆಗೆ ಕೇಂದ್ರದ ಅನುಮತಿ ಕಡ್ಡಾಯವಾಗಿದೆ ಎಂದು ತೀರ್ಪು ನೀಡಿತ್ತು. ಸುಪ್ರೀಂ ಆದೇಶದ ಬಳಿಕ ಚಿದಂಬರಂ ಪ್ರಕರಣ ಸೇರಿದಂತೆ ಪಿಎಂಎಲ್ಎ ಅಡಿ ದಾಖಲಾದ ಹಲವು ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬವಾಗಿದೆ.

ಸುಪ್ರೀಂ ಕೋರ್ಟ್‌ನ ತೀರ್ಪನ್ನು ಅನುಸರಿಸಲು ಮತ್ತು ಪ್ರಕರಣಗಳ ವಿಚಾರಣೆ ವೇಗ ಹೆಚ್ಚಿಸಲು ಎಲ್ಲ ಪ್ರಾಸಿಕ್ಯೂಷನ್ ದೂರುಗಳಲ್ಲಿ ಅನುಮತಿ ಕೋರುವ ಮೂಲಕ ತ್ವರಿತ ಪರಿಹಾರ ಕ್ರಮಗಳನ್ನು ಪ್ರಾರಂಭಿಸಿದ್ದೇವೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.

ಎರಡು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಮಾಜಿ ಕೇಂದ್ರ ಸಚಿವ ಚಿದಂಬರಂ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿಆರ್‌ಪಿಸಿಯ ಸೆಕ್ಷನ್ 197 (ಭಾರತೀಯ ನಾಗರಿಕ್ ಸುರಕ್ಷಾ ಸಂಹಿತಾ ಸೆಕ್ಷನ್ 218) ಅಡಿ ಅಗತ್ಯವಿರುವ ಆದೇಶದೊಂದಿಗೆ ಫೆಬ್ರವರಿ 10 ರಂದು ಪಡೆದ ಸಕ್ಷಮ ಪ್ರಾಧಿಕಾರದಿಂದ ಪ್ರಾಸಿಕ್ಯೂಷನ್ ಅನುಮತಿಯನ್ನು ಕೋರಿರುವುದಾಗಿ ಇಡಿ ಸಂಸ್ಥೆ ತಿಳಿಸಿದೆ.

ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸಲು ವಿಶೇಷ ನ್ಯಾಯಾಲಯದ ಮುಂದೆ ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ಆದೇಶವನ್ನು ಸಲ್ಲಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ಆರೋಪವನ್ನು ಮೊದಲಿನಿಂದಲೂ ಪಿ ಚಿದಂಬರಂ ಮತ್ತು ಅವರ ಮಗ ಕಾರ್ತಿ ಚಿದಂಬರಂ ನಿರಾಕರಿಸುತ್ತಲೇ ಬಂದಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತಮ್ಮ ವಿರುದ್ಧ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಏರ್‌ಸೆಲ್ - ಮ್ಯಾಕ್ಸಿಸ್ ಪ್ರಕರಣದಲ್ಲಿ ಪಿ ಚಿದಂಬರಂ 6ನೇ ಆರೋಪಿ ಆಗಿದ್ದಾರೆ. ಐಎನ್‌ಎಕ್ಸ್ ಮೀಡಿಯಾ ಒಪ್ಪಂದ ಪ್ರಕರಣದ ಆರೋಪ ಪಟ್ಟಿಯಲ್ಲಿ ಅವರನ್ನು 1ನೇ ಆರೋಪಿಯಾಗಿ ಇಡಿ ದೂರಿದೆ.

2011 ರ ಅಕ್ಟೋಬರ್‌ನಲ್ಲಿ ಸಿಬಿಐ ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ 2012 ರಲ್ಲಿ ಏರ್‌ಸೆಲ್ - ಮ್ಯಾಕ್ಸಿಸ್ ಒಪ್ಪಂದದಲ್ಲಿ ಪಿಎಂಎಲ್‌ಎ ಪ್ರಕರಣವನ್ನು ದಾಖಲಿಸಿದೆ. ಪ್ರಕರಣ ಸಂಬಂಧ ಇಡಿ ಎರಡು ಆರೋಪಪಟ್ಟಿಗಳನ್ನು ಸಲ್ಲಿಸಿದೆ.

ವಿದೇಶಿ ಹೂಡಿಕೆದಾರರು (ಮ್ಯಾಕ್ಸಿಸ್) 800 ಮಿಲಿಯನ್ ಯುಎಸ್ ಡಾಲರ್ (ರೂ. 3,565.91 ಕೋಟಿ) ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಅನುಮೋದನೆಗೆ ಅರ್ಜಿ ಸಲ್ಲಿಸಿದ್ದರಿಂದ, ಮಾಜಿ ಕೇಂದ್ರ ಸಚಿವರು ಏರ್‌ಸೆಲ್-ಮ್ಯಾಕ್ಸಿಸ್‌ಗೆ ಕ್ವಿಡ್ ಪ್ರೊ ಕ್ವೋ ಬದಲಿಗೆ ಎಫ್‌ಐಪಿಬಿ ಅನುಮೋದನೆಯನ್ನು ನೀಡಿದ್ದಾರೆ ಎಂದು ಇಡಿ ಆರೋಪಿಸಿದೆ.

ಇದನ್ನೂ ಓದಿ: ಇಡಿ ಸಮನ್ಸ್​ಗೆ ಹಾಜರಾಗದ ಆರೋಪ: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್​ ವಿರುದ್ಧದ ಕ್ರಿಮಿನಲ್ ವಿಚಾರಣೆಗೆ ಸುಪ್ರೀಂ ತಡೆ