ಮಲ್ಲಿಕಾರ್ಜುನ ಖರ್ಗೆಗೆ ಚುನಾವಣಾ ಆಯೋಗ ನೋಟಿಸ್; 24 ಗಂಟೆಯೊಳಗೆ ಪ್ರತಿಕ್ರಿಯಿಸಲು ಸೂಚನೆ
ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಭಯೋತ್ಪಾದಕ' ಎಂದು ಕರೆದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರ ಚುನಾವಣಾ ಆಯೋಗ ನೋಟಿಸ್ ನೀಡಿದೆ.

Published : April 22, 2026 at 7:41 PM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಭಯೋತ್ಪಾದಕ' ಎಂದು ಟೀಕಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭಾರತೀಯ ಚುನಾವಣಾ ಆಯೋಗ(ಇಸಿಐ) ಬುಧವಾರ ನೋಟಿಸ್ ಜಾರಿ ಮಾಡಿ, 24 ಗಂಟೆಗಳೊಳಗೆ ಪ್ರತಿಕ್ರಿಯಿಸುವಂತೆ ತಿಳಿಸಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರನ್ನೊಳಗೊಂಡ ಬಿಜೆಪಿ ನಿಯೋಗ ಕೇಂದ್ರ ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ, ಪ್ರಧಾನಿಯನ್ನು ಭಯೋತ್ಪಾದಕ ಎಂದು ಕರೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಕೆಲವೇ ಗಂಟೆಗಳಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.
"ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಭಯೋತ್ಪಾದಕ' ಎಂದು ಕರೆದಿರುವುದನ್ನು ಭಾರತೀಯ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ ಮತ್ತು ನೋಟಿಸ್ ನೀಡಿದೆ" ಎಂದು ಇಸಿಐ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.
ಇದಕ್ಕೂ ಮುನ್ನ ಚುನಾವಣಾ ಆಯೋಗವನ್ನು ಭೇಟಿಯಾದ ನಂತರ ಮಾತನಾಡಿದ್ದ ರಿಜಿಜು, "ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಭಯೋತ್ಪಾದಕ' ಎಂದು ಕರೆದಿರುವುದು ಕೇವಲ ಹೇಳಿಕೆಯಲ್ಲ, ಅದು ಇಡೀ ರಾಷ್ಟ್ರಕ್ಕೆ ಮಾಡಿದ ಅವಮಾನ. ಇಂತಹ ಅವಮಾನಕರ ನಡವಳಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಆಯೋಗ ತಕ್ಷಣ ಗಮನಹರಿಸಬೇಕೆಂದು ನಾವು ಒತ್ತಾಯಿಸಿದ್ದೇವೆ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಪಕ್ಷದ ನಾಯಕರು ತಮ್ಮನ್ನು ಪ್ರಜಾಪ್ರಭುತ್ವವಾದಿಗಳು ಎಂದು ಕರೆದುಕೊಳ್ಳುವ ನೈತಿಕ ಅಧಿಕಾರ ಕಳೆದುಕೊಂಡಿದ್ದಾರೆ. ಪ್ರಧಾನಿಯನ್ನು 'ಭಯೋತ್ಪಾದಕ' ಎಂದು ಕರೆಯುವ ಮೂಲಕ, ಕಾಂಗ್ರೆಸ್ ಪಕ್ಷ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಂಬಿಕೆ ಇಟ್ಟಿರುವ ಭಾರತದ ಜನರನ್ನು ಅವಮಾನಿಸಿದೆ. ಕಾಂಗ್ರೆಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ" ಎಂದರು.
ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಚೆನ್ನೈನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಭಯೋತ್ಪಾದಕ' ಎಂದು ಕರೆಯುವ ಮೂಲಕ ಖರ್ಗೆ ವಿವಾದದಲ್ಲಿ ಸಿಲುಕಿದ್ದರು. ಬಳಿಕ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ಅವರು, ಪ್ರಧಾನಿ ಜನರನ್ನು ಮತ್ತು ರಾಜಕೀಯ ಪಕ್ಷಗಳನ್ನು ಭಯಭೀತಿಗೊಳಿಸುತ್ತಿದ್ದಾರೆ ಎಂದು ಹೇಳಿದ್ದರು.
ಮತ್ತೊಂದೆಡೆ, ಖರ್ಗೆ ಅವರು ಭಯೋತ್ಪಾದಕರು ಮತ್ತು ಭಯೋತ್ಪಾದಕರಿಗೆ ಭಯ ಹುಟ್ಟಿಸುವವರ ನಡುವೆ ವ್ಯತ್ಯಾಸ ಗುರುತಿಸುತ್ತಿಲ್ಲ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಕುಟುಕಿದ್ದಾರೆ. ಬೀದರ್‌ನ ಶ್ರೀ ಚನ್ನಬಸವಾಶ್ರಮದಲ್ಲಿಂದು ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು ಮಹಾಸ್ವಾಮೀಜಿಯವರ ಅಮೃತ ಮಹೋತ್ಸವ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಖರ್ಗೆ ಅವರ ಉಪಸ್ಥಿತಿಯಲ್ಲೇ ಈ ಹೇಳಿಕೆ ನೀಡಿದ್ದಾರೆ.
ಇವುಗಳನ್ನೂ ಓದಿ:

