ETV Bharat / bharat

ಚರ್ಮದ ಸೋಂಕಿನಿಂದ ಬಳಲುತ್ತಿದ್ದ ಶ್ವಾನಕ್ಕೆ ಮೀನಿನ ಚರ್ಮ ಕಸಿ ಯಶಸ್ವಿ: ಹೈದರಾಬಾದ್​ ವೈದ್ಯರ ವಿಶೇಷ ಸಾಧನೆ

ಮೀನಿನ ಚರ್ಮವನ್ನು ನಾಯಿಗೆ ಕಸಿ ಮಾಡುವ ಮೂಲಕ ಹೈದರಾಬಾದ್​ನ ಆಸ್ಪತ್ರೆಯೊಂದು ವಿಶೇಷ ಸಾಧನೆ ಮಾಡಿದೆ.

HYDERABAD HOSPITAL
ಮೀನಿನ ಚರ್ಮ ಕಸಿ ಮಾಡಿದ ವೈದ್ಯರು ಮತ್ತು ಸೋಂಕಿತ ನಾಯಿ (ETV Bharat)
author img

By ETV Bharat Karnataka Team

Published : January 11, 2026 at 6:00 PM IST

2 Min Read
Choose ETV Bharat

ಹೈದರಾಬಾದ್ (ತೆಲಂಗಾಣ): ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪದ ಚಿಕಿತ್ಸೆ ನಡೆಸಲಾಗಿದೆ. ತೀವ್ರ ಚರ್ಮ ಸೋಂಕಿನಿಂದ ಬಳಲುತ್ತಿದ್ದ ಸಾಕು ನಾಯಿಗೆ ಮೀನಿನ ಚರ್ಮ ಕಸಿ ಮಾಡಲಾಗಿದೆ. ಸದ್ಯ ಶ್ವಾನವು ಚೇತರಿಸಿಕೊಳ್ಳುತ್ತಿದ್ದು, ಸೋಂಕು ಗಮನಾರ್ಹವಾಗಿ ತಗ್ಗಿದೆ.

ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಪೆಟ್ಸ್ ಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ಸುಧಾರಿತ ಚಿಕಿತ್ಸೆ ನಡೆಸಲಾಗಿದೆ. ಆಸ್ಪತ್ರೆಯ ಸಂಸ್ಥಾಪಕ ಮತ್ತು ಮುಖ್ಯ ಪಶುವೈದ್ಯ ಡಾ. ವೆಂಕಟ್ ಯಾದವ್ ಶನಿವಾರ ಮಾಧ್ಯಮಗೋಷ್ಟಿಯಲ್ಲಿ ಈ ವಿವರಗಳನ್ನು ಹಂಚಿಕೊಂಡರು.

ಸಂಸ್ಕರಿಸಿದ ಮೀನಿನ ಚರ್ಮ ಬಳಕೆ: "ಚಿಕಿತ್ಸೆಗೆ ಒಳಗಾದ ಸಾಕು ನಾಯಿಯು ಬೋಡುಪ್ಪಲ್ ನಿವಾಸಿಯೊಬ್ಬರಿಗೆ ಸೇರಿದ್ದಾಗಿದೆ. ಶೇಕಡಾ 50 ಚರ್ಮ ಸೋಂಕಿನಿಂದ ಅದು ಬಳಲುತ್ತಿತ್ತು. ಮಾಲೀಕರು ಪೆಟ್ಸ್ ಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸಂಪರ್ಕಿಸಿದಾಗ, ವೈದ್ಯಕೀಯ ತಂಡವು ಸಾಂಪ್ರದಾಯಿಕ ಪಶುವೈದ್ಯಕೀಯ ವಿಧಾನಗಳ ಬದಲಿಗೆ ಸುಧಾರಿತ ಪುನರುತ್ಪಾದಕ ಚಿಕಿತ್ಸಾ ವಿಧಾನದ ಮೂಲಕ ಚಿಕಿತ್ಸೆ ನೀಡಲು ನಿರ್ಧರಿಸಿತು. ಸಂಸ್ಕರಿಸಿದ ಮೀನಿನ ಚರ್ಮವನ್ನು ನಾಯಿಯ ದೇಹದ ಪೀಡಿತ ಪ್ರದೇಶಗಳಿಗೆ ಕಸಿ ಮಾಡಲಾಯಿತು" ಎಂದರು.

"ಈ ನವೀನ ವಿಧಾನವು ನೋವನ್ನು ಕಡಿಮೆ ಮಾಡಲು ಮತ್ತು ಮತ್ತಷ್ಟು ಸೋಂಕನ್ನು ತಡೆಯಲು ಸಹಾಯ ಮಾಡಿದೆ. ಮೀನಿನ ಚರ್ಮವು ನಾಯಿಯ ಚರ್ಮದ ತಾತ್ಕಾಲಿಕ ಬದಲಿಯಾಗಿ ಕಾರ್ಯನಿರ್ವಹಿಸುತ್ತದೆ. ನೈಸರ್ಗಿಕವಾಗಿ ಚೇತರಿಸಿಕೊಳ್ಳುವಂತೆ ಅದು ಮಾಡುತ್ತದೆ. ವೇಗವಾಗಿ ಚರ್ಮ ಮತ್ತೆ ಬೆಳೆಯಲು ಉತ್ತೇಜಿಸುತ್ತದೆ. ಗಾಯದಿಂದಲೂ ರಕ್ಷಣೆ ನೀಡುತ್ತದೆ" ಎಂದು ಅವರು ವಿವರಿಸಿದರು.

ಚರ್ಮದ ಪುನರುತ್ಪಾದನೆಗೆ ನೆರವು: "ಮೀನಿನ ಚರ್ಮವು ಕಾಲಜನ್, ಒಮೆಗಾ ಕೊಬ್ಬಿನಾಮ್ಲಗಳು ಮತ್ತು ಜೈವಿಕ ಸಕ್ರಿಯ ಸಂಯುಕ್ತಗಳಿಂದ ಕೂಡಿದೆ. ಇದು ಚರ್ಮದ ದುರಸ್ತಿಗೆ ನೆರವು ನೀಡುತ್ತದೆ. ಇದರ ಕಸಿಯು ನೈಸರ್ಗಿಕವಾಗಿ ಗಾಯಕ್ಕೆ ಅಂಟಿಕೊಳ್ಳುತ್ತದೆ. ತೇವಾಂಶವನ್ನು ಉಳಿಸಿಕೊಳ್ಳುತ್ತದೆ. ತ್ವರಿತವಾಗಿ ಮೇಲ್ಮೈ ಚರ್ಮದ ಪುನರುತ್ಪಾದನೆಯನ್ನು ಮಾಡುತ್ತದೆ" ಎಂದು ತಿಳಿಸಿದರು.

"ಈ ವಿಧಾನವು ಪ್ರಾಣಿಗಳು ವೇಗವಾಗಿ ಚೇತರಿಸಿಕೊಳ್ಳುವಂತೆ ಮಾಡುತ್ತದೆ. ಸೋಂಕು, ಸುಟ್ಟಗಾಯಗಳು ಅಥವಾ ಇತರ ಗಾಯಗಳಿಂದ ಚರ್ಮ ನಷ್ಟವಾಗಿದ್ದರೆ ಅಂತಹ ಸಂದರ್ಭಗಳಲ್ಲಿ ಇದು ವಿಶೇಷವಾಗಿ ಉಪಯುಕ್ತವಾಗಿದೆ" ಎಂದು ಡಾ. ವೆಂಕಟ್ ಯಾದವ್ ಅವರು ಹೇಳಿದರು.

ಮೀನಿನ ಚರ್ಮ ನಾಯಿಗೆ ಯಶಸ್ವಿ ಕಸಿ ಮಾಡಿದ ವಿಧಾನವು ಮುಂದಿನ ದಿನಗಳಲ್ಲಿ ನಗರದ ಸಾಕುಪ್ರಾಣಿ ಮಾಲೀಕರು ಮತ್ತು ಪ್ರಾಣಿ ಪ್ರಿಯರಿಗೆ ಹೊಸ ಭರವಸೆಯನ್ನು ತಂದಿದೆ. ದೇಶಾದ್ಯಂತ ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ಇಂತಹ ನವೀನ ಚಿಕಿತ್ಸೆಗಳನ್ನು ವ್ಯಾಪಕವಾಗಿ ಬಳಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇವುಗಳನ್ನೂ ಓದಿ: