ETV Bharat / bharat

"ಶುದ್ಧೀಕರಣ ಮಾಡಿದವರ ವಿರುದ್ಧ ಕೇಸ್​ ದಾಖಲಿಸಿ": ಕೇಂದ್ರ ಸಚಿವ ನಡ್ಡಾಗೆ ಪತ್ರ ಬರೆದ ಮಲ್ಲಿಕಾರ್ಜುನ್​ ಖರ್ಗೆ

ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದು ಶುದ್ಧೀಕರಣ ಘಟನೆ ಕುರಿತು ನೆನಪಿಸಿದ್ದಾರೆ.

PURIFICATION INCIDENT
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ (ANI)
author img

By ETV Bharat Karnataka Team

Published : September 3, 2026 at 2:46 PM IST

2 Min Read
Choose ETV Bharat

ನವದೆಹಲಿ: ಕಳೆದ ತಿಂಗಳು ಹಲ್ದ್ವಾನಿಯಲ್ಲಿ ನಡೆದ ರ‍್ಯಾಲಿ ನಂತರ ನಡೆದ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿದ್ದರ ವಿರುದ್ಧ ಎಫ್​ಐಆರ್​ ದಾಖಿಲಿಸುವಂತೆ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿಗೆ ನಿರ್ದೇಶನ ನೀಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಕರಣದ ಕುರಿತು ತನಿಖೆ ನಡೆಸಿ, ಅದರಲ್ಲಿ ತಪ್ಪಿತಸ್ಥರೆಂದು ಕಂಡು ಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯಸಭೆಯಲ್ಲಿ ನಡ್ಡಾ ಅವರು ಹೇಳಿದ್ದರು. ಆದರೆ, ಈವರೆಗೆ ಯಾವುದೇ ಪ್ರಗತಿಯಾಗಿಲ್ಲ ಎಂದು ಹೇಳಿದ್ದಾರೆ.

ಪತ್ರದಲ್ಲಿ ಏನೇನಿದೆ?: "ಆಗಸ್ಟ್ 13 ರಂದು ರಾಜ್ಯಸಭೆಯಲ್ಲಿ ಚರ್ಚೆಯ ವೇಳೆ ಹಲ್ದ್ವಾನಿಯಲ್ಲಿ ನಡೆದ ಅಸ್ಪೃಶ್ಯತೆಗೆ ಸಂಬಂಧಿಸಿದ ಶುದ್ಧೀಕರಣದ ವಿಷಯವನ್ನು ಎತ್ತಿದ್ದೆ ಎಂದು ನಿಮಗೆ ನೆನಪಿರಬಹುದು. ಇದಕ್ಕೆ ಪ್ರತಿಕ್ರಿಯೆಯಾಗಿ ನೀವು ಸದನದಲ್ಲಿ ಎದ್ದು ನಿಂತು, ನಿಜಕ್ಕೂ ತುಂಬಾ ದುಃಖಕರ ವಿಷಯ. ಇದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ನಮಗೆಲ್ಲರಿಗೂ ಖೇದ ತಂದಿದೆ. ಅಲ್ಲಿ ಏನೇ ಆಗಿದ್ದರೂ ಖಂಡಿತವಾಗಿಯೂ ತನಿಖೆ ನಡೆಸಲಾಗುವುದು. ಭಾರತೀಯ ಜನತಾ ಪಕ್ಷವು ಅಂತಹ ಚಟುವಟಿಕೆಯನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಹೇಳಿದ್ದೀರಿ.

ಈ ಬಗ್ಗೆ ತನಿಖೆ ನಡೆಸಿದ ತಪ್ಪಿತಸ್ಥರೆಂದು ಕಂಡು ಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೂಡ ನೀಡಿದ್ದೀರಿ. ಘಟನೆ ನಡೆದು 24 ದಿನ ಕಳೆದರೂ, ಶುದ್ಧೀಕರಣದಲ್ಲಿ ಭಾಗಿಯಾದ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ಕನಿಷ್ಠ ಎಫ್‌ಐಆರ್ ದಾಖಲಿಸದಿರುವುದು ಆಶ್ಚರ್ಯ ತಂದಿದೆ ಎಂದು ಖರ್ಗೆ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

"ಈ ಘಟನೆಯ ಅತ್ಯಂತ ಆಕ್ಷೇಪಾರ್ಹ ಅಂಶವೆಂದರೆ ನಾನು, ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಮಲೀಲಾ ಮೈದಾನ ಸ್ಥಳದಲ್ಲಿ, ದೇಶದ ಸಂವಿಧಾನದ ಆಶಯ ಮತ್ತು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿ ಶುದ್ಧೀಕರಣ ನಡೆಸಲಾಯಿತು. ಈ ಪ್ರಕ್ರಿಯೆಯು ಅಸ್ಪೃಶ್ಯತೆಗೆ ನೇರವಾಗಿ ಸಂಬಂಧಿಸಿದೆ ಎಂದು ನಡ್ಡಾ ಅವರಿಗೆ ಬರೆದ ಪತ್ರದಲ್ಲಿ ಖರ್ಗೆ ಹೇಳಿದ್ದಾರೆ.

ಈ ಹಿಂದಿನ ಅಸ್ಪೃಶ್ಯತೆಯ ಆಚರಣೆಗಳನ್ನು ಉಲ್ಲೇಖಿಸಿರುವ ಖರ್ಗೆ ಅವರು, ಮಹದ್ ಚಳವಳಿಯ ಸಮಯದಲ್ಲಿ ಡಾ. ಭೀಮರಾವ್ ಅಂಬೇಡ್ಕರ್ ಅವರು ಕೊಳದಿಂದ ನೀರನ್ನು ತೆಗೆದುಕೊಂಡರು. ಆಗಲೂ, ಜಾತಿವಾದಿ ವ್ಯಕ್ತಿಗಳು 108 ಮಡಕೆ ಗೋಮೂತ್ರ ಮತ್ತು ಸಗಣಿ ಬಳಸಿ ಮಂತ್ರಗಳ ಪಠಣದೊಂದಿಗೆ ಶುದ್ಧೀಕರಣ ಮಾಡಿದ್ದರು. ಕೇವಲ ಮಂತ್ರ ಪಠಣ, ಹವನ ಮಾಡಿ 'ಶುದ್ಧೀಕರಣ' ಕ್ರಿಯೆ ನಡೆಸಿದರೆ, ಪಾವಿತ್ರ್ಯತೆ ಬರುವುದಿಲ್ಲ ಎಂದು ಹೇಳಿದ್ದಾರೆ.

ಈ ಘಟನೆಯು ನನ್ನ ವ್ಯಕ್ತಿತ್ವ ಹಾಗೂ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಗೆ ಮಾಡಿದ ಅವಮಾನ. ನಿತ್ಯ ಇಂತಹ ಘಟನೆಗಳನ್ನು ಎದುರಿಸುವ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತಂದಿದೆ. ಈ ರೀತಿ ತಪ್ಪು ಮಾಡುವವರಿಗೆ ಪಾಠ ಕಲಿಸುವುದು ಅತ್ಯಗತ್ಯ" ಎಂದು ಕಾಂಗ್ರೆಸ್ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.

"ನೀವು ರಾಜ್ಯಸಭೆಯಲ್ಲಿ ನೀಡಿದ ಭರವಸೆಯಂತೆ ಹಲ್ದ್ವಾನಿಯಲ್ಲಿ ನಡೆದ ಶುದ್ಧೀಕರಣ ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಉತ್ತರಾಖಂಡದ ಮುಖ್ಯಮಂತ್ರಿಗೆ ನಿರ್ದೇಶನ ನೀಡಬೇಕೆಂದು ನಾನು ಮತ್ತೊಮ್ಮೆ ನಿಮ್ಮನ್ನು ಒತ್ತಾಯಿಸುತ್ತೇನೆ" ಎಂದು ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇವುಗಳನ್ನೂ ಓದಿ: