ದೆಹಲಿ ಗಲಭೆ: ಉಮರ್, ಶಾರ್ಜೀಲ್ಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್
ದೆಹಲಿ ಗಲಭೆ ಪ್ರಕರಣ ಸಂಬಂಧ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಮೇಲೆ ಗಂಭೀರ ಸ್ವರೂಪದ ಆರೋಪಗಳಿದ್ದು, ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

Published : January 5, 2026 at 1:32 PM IST
ನವದೆಹಲಿ: 2020ರ ದೆಹಲಿ ಗಲಭೆ ಪ್ರಕರಣದಲ್ಲಿ ಸಂಚು ರೂಪಿಸಿದ ಆರೋಪಿಗಳಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಜತೆಗೆ, ಉಳಿದ ಐದು ಆರೋಪಿಗಳಿಗೆ ಇದೇ ವೇಳೆ ಜಾಮೀನು ಮಂಜೂರು ಮಾಡಿದೆ.
ದೆಹಲಿ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಆರೋಪಿಗಳು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ಡಿಸೆಂಬರ್ 10ರಂದು ಆದೇಶ ಕಾಯ್ದಿರಿಸಿತ್ತು.
ಖಾಲಿದ್ ಮತ್ತು ಇಮಾಮ್ ಇತರ ಆರೋಪಿಗಳಿಗಿಂತ ಭಿನ್ನವಾದ ಆರೋಪ ಹೊಂದಿದ್ದಾರೆ. ಹೀಗಾಗಿ, ಜಾಮೀನು ನೀಡಲು ಸಾಧ್ಯವಿಲ್ಲ. ಇತರ ಆರೋಪಿಗಳಾದ ಗುಲ್ಫಿಶಾ ಫಾತಿಮಾ, ಮೀರಾ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಮ್ ಖಾನ್ ಮತ್ತು ಶಾದಾಬ್ ಅಹ್ಮದ್ ಮೇಲಿನ ಆರೋಪಗಳು ಕಡಿಮೆ ಪ್ರಮಾಣದಲ್ಲಿದ್ದ ಜಾಮೀನು ನೀಡಲಾಗುವುದು ಎಂದಿತು.
ಗಲಭೆ ಸಂಚಿನ ಪ್ರಮುಖ ಆರೋಪಿಗಳಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ವಿರುದ್ಧ ಪ್ರಾಸಿಕ್ಯೂಷನ್ ಸಲ್ಲಿಸಿದ ಆರೋಪಳು ಗಂಭೀರವಾಗಿವೆ. ಹೀಗಾಗಿ, ಅವರ ಜಾಮೀನು ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಪೀಠದ ಪರವಾಗಿ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹೇಳಿದರು.
ಪ್ರತಿಯೊಬ್ಬ ಮೇಲ್ಮನವಿದಾರರ ಮೇಲೆ ಇರುವ ಆರೋಪಗಳು ಭಿನ್ನವಾಗಿವೆ. ಜಾಮೀನು ಪಡೆಯಲು ಪ್ರಮುಖ ಸಂಚುಕೋರರು ಮಂಡಿಸಿದ ವಾದಗಳು ಸ್ವೀಕಾರಾರ್ಹವಾಗಿಲ್ಲ. ಪ್ರಾಸಿಕ್ಯೂಷನ್ ವಾದಗಳು ಬಲವಾಗಿವೆ ಎಂದು ಪೀಠವು ಹೇಳಿದೆ.
ಪ್ರಕರಣದ ವಿವರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್‌ಆರ್‌ಸಿ ವಿರುದ್ಧ 2020 ರಲ್ಲಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾರೀ ಹಿಂಸಾಚಾರದಿಂದಾಗಿ 53 ಜನರು ಸಾವನ್ನಪ್ಪಿ, 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರಕರಣ ಸಂಬಂಧ ಉಮರ್ ಖಾಲೀದ್ ಮತ್ತು ಇಮಾಮ್ ಸೇರಿದಂತೆ ಒಟ್ಟು 9 ಜನರ ವಿರುದ್ಧ ಯುಎಪಿಎ ಮತ್ತು ಐಪಿಸಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಚು ಪ್ರಕರಣದಲ್ಲಿ ಎರಡು ವರ್ಷದ ಹಿಂದೆ ಬಂಧಿತರಾದ ಮೂವರು ಶಂಕಿತ ಭಯೋತ್ಪಾದಕರಲ್ಲಿ ಒಬ್ಬನಾದ ಅರ್ಷದ್ ಎಂಬಾತ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದು, ಈತ ದೆಹಲಿ ಗಲಭೆ ಸಂಚಿನ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿತ್ತು.
ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಯ ವೇಳೆ ದೆಹಲಿಯಲ್ಲಿ ನಡೆದ ಗಲಭೆಗಳ ಸಂಚಿನಲ್ಲಿ ಈ ಶಂಕಿತ ಉಗ್ರನ ಪ್ರಮುಖ ಪಾತ್ರವಿದ್ದು, 'ತೇರಾ ಮೇರಾ ರಿಶ್ತಾ ಕ್ಯಾ ಹೈ..' ಎಂಬ ಘೋಷಣೆಯನ್ನು ಅರ್ಷದ್ ನೀಡಿದ್ದ ಎಂಬುದಾಗಿ ಮೂಲಗಳು ತಿಳಿಸಿವೆ. ಶಾಹೀನ್ ಬಾಗ್ನಲ್ಲಿ ಪ್ರತಿಭಟನೆ ನಡೆಸುವಲ್ಲೂ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ವರದಿಯಾಗಿತ್ತು.
ಇವುಗಳನ್ನೂ ಓದಿ:

