ETV Bharat / bharat

ಸಿಇಸಿ ರಾಜೀನಾಮೆಗೆ ಒತ್ತಾಯ: ಇಂದು ಸುಪ್ರೀಂ ಕೋರ್ಟ್​​ವರೆಗೆ ಕಾಂಗ್ರೆಸ್​ ಮೆರವಣಿಗೆ, ಆರು ಮೆಟ್ರೋ ನಿಲ್ದಾಣ ಬಂದ್​

ಕಳೆದೆರಡು ದಿನಗಳಿಂದ ಸಿಇಸಿ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್​ ಜನತಾ ಪಕ್ಷ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ಮುಂದುವರೆಸಿದ್ದು, ಇದೀಗ ಇಂಡಿಯಾ ಒಕ್ಕೂಟ​ ಜಂತರ್​ ಮಂತರ್​ನಿಂದ ಸುಪ್ರೀಂ ಕೋರ್ಟ್​ವರೆಗೆ ಮೆರವಣಿಗೆ ನಡೆಸಲಿದೆ.

delhi-metro-shuts-entry-exit-at-six-stations-ahead-of-congress-protest
ದೆಹಲಿ ಪ್ರತಿಭಟನೆ ಚಿತ್ರ (ANI)
author img

By PTI

Published : October 12, 2026 at 10:14 AM IST

2 Min Read
Choose ETV Bharat

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್​ ರಾಜೀನಾಮೆ ಮತ್ತು ಎಸ್​ಐಆರ್ ಪ್ರಕ್ರಿಯೆ ರದ್ದು ಮಾಡುವಂತೆ ಆಗ್ರಹಿಸಿ ಇಂದು ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಸುಪ್ರೀಂ ಕೋರ್ಟ್​ವರೆಗೆ ಮೆರವಣಿಗೆ ನಡೆಸಲಿದೆ. ಈ ಮೆರವಣಿಗೆಯಲ್ಲಿ ಭಾಗಿಯಾಗುವಂತೆ ಲೋಕಸಭಾ ವಿಪಕ್ಷ ನಾಯಕ ರಾಹುಲ್​ ಗಾಂಧಿ ಅವರು ಯುವಜನರು, ಮೈತ್ರಿ ಪಕ್ಷಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳಿಗೆ ಕರೆ ನೀಡಿದ್ದಾರೆ.

ಇನ್ನು ಕಳೆದೆರಡು ದಿನಗಳಿಂದ ಸಿಇಸಿ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್​ ಜನತಾ ಪಕ್ಷ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ಮುಂದುವರೆಸಿದ್ದು, ರಾಜಧಾನಿಯಲ್ಲಿ ಸಾವಿರಾರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಇಂಡಿಯಾ ಒಕ್ಕೂಟ​ ಜಂತರ್​ ಮಂತರ್​ನಿಂದ ಸುಪ್ರೀಂ ಕೋರ್ಟ್​ವರೆಗೆ ಮೆರವಣಿಗೆ ನಡೆಸಲಿದ್ದು, ಮತ್ತಷ್ಟು ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಇಂದಿನ ಪ್ರತಿಭಟನಾ ಮೆರವಣಿ ಕುರಿತು ಭಾನುವಾರ ಪೋಸ್ಟ್​ ಮಾಡಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಪಕ್ಷ, ಲಿಂಗ, ಜಾತಿ, ಸಮುದಾಯ ಮತ್ತು ರಾಜ್ಯಗಳ ಭೇದ ಮರೆತು ಭಾರತೀಯರಾಗಿ ನಾವೆಲ್ಲರೂ ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ ನಡೆಸಲಿದ್ದೇವೆ. ಯುವಜನರು, ಎಲ್ಲಾ ವಿರೋಧ ಪಕ್ಷಗಳು, ನಾಗರಿಕ ಸಮಾಜದ ಸಂಘಟನೆಗಳು ಹಾಗೂ ಪ್ರಜಾಪ್ರಭುತ್ವ ಮತ್ತು ಭಾರತದ ಸಂವಿಧಾನದ ಮೇಲೆ ನಂಬಿಕೆಯಿಟ್ಟು ಅವುಗಳ ಪರವಾಗಿ ನಿಲ್ಲುವವರೆಲ್ಲರೂ ನಮ್ಮೊಂದಿಗೆ ಹೆಜ್ಜೆ ಹಾಕಲಿದ್ದಾರೆ ಎಂದಿದ್ದರು.

ನರೇಂದ್ರ ಮೋದಿ, ಅಮಿತ್ ಶಾ, ಅಜಿತ್ ದೋವಲ್ ಮತ್ತು ಮೋಹನ್ ಭಾಗವತ್ ಭಾರತದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಅವರು ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ. ಅವರು ಪಕ್ಕಕ್ಕೆ ಸರಿಯಬೇಕಾಗುತ್ತದೆ. ನಾವು ಪ್ರೀತಿ, ಸಹೋದರತ್ವ ಮತ್ತು ದೇಶಭಕ್ತಿಯೊಂದಿಗೆ ಒಟ್ಟಾಗಿ ಮೆರವಣಿಗೆ ಮಾಡುತ್ತೇವೆ ಎಂದರು

ಇಂದು ಮೆಟ್ರೋ ಬಂದ್​: ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಂದು ಸಾಯಂಕಾಲ 4 ಗಂಟೆಯವರೆಗೆ ಸೆಂಟ್ರಲ್ ಸೆಕ್ರೆಟರಿಯೇಟ್, ರಾಜೀವ್ ಚೌಕ್ ಮತ್ತು ಪಟೇಲ್ ಚೌಕ್ ಸೇರಿದಂತೆ ದೆಹಲಿ ಮೆಟ್ರೋದ ಆರು ನಿಲ್ದಾಣಗಳ ಬಂದ್​ ಆಗಿದ್ದು, ಇದರಿಂದ ಸಾರ್ವಜನಿಕರಿಗೆ ಅಡಚಣೆಯಾಗಲಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ದೆಹಲಿ ಮೆಟ್ರೋ ರೈಲು ನಿಗಮ, ಭದ್ರತಾ ಕಾರಣಗಳಿಂದಾಗಿ ಜನಪಥ್, ಮಂಡಿ ಹೌಸ್, ಬರಾಖಂಬಾ ರಸ್ತೆ, ಸೆಂಟ್ರಲ್ ಸೆಕ್ರೆಟರಿಯೇಟ್, ರಾಜೀವ್ ಚೌಕ್ ಮತ್ತು ಪಟೇಲ್ ಚೌಕ್ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನ ಮುಚ್ಚಲಾಗುವುದು. ಆದರೆ, ಈ ಸ್ಥಳಗಳಲ್ಲಿ ಬದಲಾಯಿಸುವ ಇಂಟರ್‌ಚೇಂಜ್ ಸೌಲಭ್ಯ ಲಭ್ಯವಿರುತ್ತದೆ.

ರಾಜಧಾನಿಯಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ಮತ್ತು ರೈಲು ಸೇವೆ ಬಂದ್​ ಮಾಡಿರುವುದು ನ್ಯಾಯಲಯದ ನಿರ್ದೇಶನದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಪೀಠ, ಶಾಂತಿಯುತವಾಗಿ ಸೇರುವವರನ್ನು ವಶಕ್ಕೆ ಪಡೆಯಬಾರದು. ಸಂಚಾರ ನಿಯಮಗಳಿಗೆ ಒಳಪಟ್ಟು ಜನರ ಮುಕ್ತ ಸಂಚಾರಕ್ಕೆ ಅಧಿಕಾರಿಗಳು ಅವಕಾಶ ಕಲ್ಪಿಸಬೇಕು ಎಂದು ಆದೇಶಿಸಿದೆ.

ಭಾನುವಾರ ಮೆರವಣಿಗೆ ನಡೆಸಲು ಯತ್ನಿಸಿದ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ ​​ಮತ್ತು ಕ್ರಾಂತಿಕಾರಿ ಯುವ ಸಂಘಟನ್ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಹಾಗೂ ಸಿಜೆಪಿ ಬೆಂಬಲಿಗರನ್ನು ವಶಕ್ಕೆ ಪಡೆಯಲಾಯಿತು.

ಇದನ್ನೂ ಓದಿ: 2ನೇ ದಿನದ ಸಿಜೆಪಿ ಪ್ರತಿಭಟನೆಯಲ್ಲಿ ಮತ್ತೆ 200ಕ್ಕೂ ಹೆಚ್ಚು ಮಂದಿ ವಶ: ಜ್ಞಾನೇಶ್​ ರಾಜೀನಾಮೆಗೆ ಒತ್ತಾಯ

ಇಂಡಿಯಾ ಮೈತ್ರಿಕೂಟದ ಭೇಟಿಗೆ ಸಿಜೆಐ ಸೂರ್ಯಕಾಂತ್ ನಿರಾಕರಣೆ