NCERT 8ನೇ ತರಗತಿ ಪುಸ್ತಕದಲ್ಲಿ 'ನ್ಯಾಯಾಂಗದಲ್ಲಿ ಭ್ರಷ್ಟಾಚಾರ': ಸುಪ್ರೀಂಕೋರ್ಟ್ನಲ್ಲಿ ಸುಮೋಟೊ ಕೇಸ್; ಸಂಸ್ಥೆಯ ಮಾನಹಾನಿಗೆ ಅವಕಾಶ ನೀಡಲ್ಲ ಎಂದ CJI
ಹೊಸದಾಗಿ ಪರಿಚಯಿಸಲಾದ NCERT 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ "ನ್ಯಾಯಾಂಗದಲ್ಲಿನ ಭ್ರಷ್ಟಾಚಾರ"ದ ಉಲ್ಲೇಖಗಳ ಬಗ್ಗೆ ಸಿಜೆಐ ಸೂರ್ಯ ಕಾಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

By PTI
Published : February 25, 2026 at 1:21 PM IST
ನವದೆಹಲಿ: 8ನೇ ತರಗತಿಯ NCERT ಪರಿಷ್ಕೃತ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ 'ನ್ಯಾಯಾಂಗದಲ್ಲಿನ ಭ್ರಷ್ಟಾಚಾರ' ಎಂಬ ವಿಭಾಗ ಸೇರ್ಪಡೆ ವಿಚಾರದ ಕುರಿತಂತೆ ಸುಪ್ರೀಂ ಕೋರ್ಟ್ ಬುಧವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೆತ್ತಿಕೊಂಡಿದೆ. ಯಾವುದೇ ಸಂಸ್ಥೆಯನ್ನು ದೂಷಿಸಲು ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
ಬುಧವಾರ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರನ್ನೊಳಗೊಂಡ ಪೀಠದ ಮುಂದೆ ವಿಚಾರ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, 8ನೇ ತರಗತಿಯ ಮಕ್ಕಳಿಗೆ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಕಲಿಸಲಾಗುತ್ತದೆ. ಇದು ಗಂಭೀರ ಕಳವಳಕಾರಿ ವಿಷಯ ಎಂದು ಪ್ರಸ್ತಾಪಿಸಿದರು.
ಆಗ ಪರಿಷ್ಕೃತ ಪುಸ್ತಕದಲ್ಲಿನ ಕೆಲ ವಿಭಾಗಗಳ ಬಗ್ಗೆ ಸಿಜೆಐ ಗಂಭೀರ ಆಕ್ಷೇಪಣೆ ವ್ಯಕ್ತಪಡಿಸಿ, ಈ ವಿಷಯದ ಬಗ್ಗೆ ತಮಗೆ ತಿಳಿದಿದೆ. ಸಂಸ್ಥೆಯನ್ನು ದೂಷಿಸಲು ನಾನು ಯಾರಿಗೂ ಅವಕಾಶ ನೀಡುವುದಿಲ್ಲ. ಅದನ್ನು ಹೇಗೆ ಎದುರಿಸಬೇಕು ಎಂದು ನಮಗೆ ತಿಳಿದಿದೆ ಎಂದು ಹೇಳಿದರು.
ಬಳಿಕ ಈ ವಿಷಯದ ಬಗ್ಗೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸುವಂತೆ ಸಿಬಲ್ ಸಿಜೆಐಗೆ ವಿನಂತಿಸಿದರು. ಇದು ಉದ್ದೇಶಪೂರ್ವಕ ಮತ್ತು ಲೆಕ್ಕಾಚಾರದ ಕ್ರಮ ಎಂದು ತೋರುತ್ತದೆ ಎಂದು ಸಿಜೆಐ ಹೇಳಿದರು. ಅಲ್ಲದೇ, ನಾನು ಹೆಚ್ಚೇನು ಹೇಳಲು ಬಯಸುವುದಿಲ್ಲ ಎಂದ ಅವರು, ಈ ವಿಚಾರವನ್ನು ತಮ್ಮ ಗಮನಕ್ಕೆ ತಂದಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಇದೇ ವೇಳೆ, ಪುಸ್ತಕವು ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿದೆ ಎಂದು ನ್ಯಾಯಮೂರ್ತಿ ಬಾಗ್ಚಿ ಅವರು ಹೇಳಿದರು. 'ದಯವಿಟ್ಟು ಕೆಲ ದಿನಗಳ ಕಾಲ ಕಾಯಿರಿ. ಇದರಿಂದ ಎಲ್ಲ ಹೈಕೋರ್ಟ್ ನ್ಯಾಯಾಧೀಶರು, ಬಾರ್ ಮತ್ತು ಬೆಂಚ್ನವರೂ ಗೊಂದಲಕ್ಕೊಳಗಾಗಿದ್ದಾರೆ. ನಾನು ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳುತ್ತೇನೆ. ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಜೆಐ ಹೇಳಿದರು. ನಂತರ, ನ್ಯಾಯಮೂರ್ತಿ ಕಾಂತ್ ಅವರು, ಸುಪ್ರೀಂ ಕೋರ್ಟ್ ಈ ವಿಷಯವನ್ನು ಸ್ವಯಂ ಪ್ರೇರಿತವಾಗಿ ಪರಿಗಣಿಸಿದೆ ಎಂದು ತಿಳಿಸಿದರು.
ಮಂಗಳವಾರ 'ಈಟಿವಿ ಭಾರತ'ವು ಕೂಡ ಇದೇ ವಿಚಾರದ ಬಗ್ಗೆ ವರದಿ ಮಾಡಿತ್ತು. 8ನೇ ತರಗತಿಯ ಹೊಸ ಸಮಾಜ ವಿಜ್ಞಾನ NCERT ಪಠ್ಯಪುಸ್ತಕದಲ್ಲಿ 'ಎಕ್ಸ್‌ಪ್ಲೋರಿಂಗ್ ಸೊಸೈಟಿ: ಇಂಡಿಯಾ ಅಂಡ್ ಬಿಯಾಂಡ್' ಎಂಬ ಪರಿಷ್ಕೃತ ಪಠ್ಯಪುಸ್ತಕದಲ್ಲಿ 'ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ' ಎಂಬ ಪರಿಷ್ಕೃತ ಅಧ್ಯಾಯವಿದೆ. 'ನ್ಯಾಯ ವಿಳಂಬವಾದರೆ ನ್ಯಾಯ ನಿರಾಕರಿಸಿದಂತೆ' ಮತ್ತು 'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಎಂಬ ಶೀರ್ಷಿಕೆಯ ಅಧ್ಯಾಯದಲ್ಲಿನ ಎರಡು ವಿಭಾಗಗಳಲ್ಲಿ ನ್ಯಾಯಾಂಗ ವ್ಯವಸ್ಥೆ, ಭ್ರಷ್ಟಾಚಾರ, ನ್ಯಾಯಾಧೀಶರ ಕೊರತೆ ಮತ್ತು ಹೆಚ್ಚಿನ ಪ್ರಕರಣಗಳ ಬಾಕಿ ಸೇರಿದಂತೆ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳ ಬಗ್ಗೆ ವಿವರಿಸಲಾಗಿದೆ.
ಹೊಸ ಪುಸ್ತಕದಲ್ಲಿರುವ 'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಎಂಬ ವಿಭಾಗದಲ್ಲಿ ನ್ಯಾಯಾಧೀಶರು ನ್ಯಾಯಾಲಯದಲ್ಲಿ ತೋರುವ ನಡವಳಿಕೆ ಮಾತ್ರವಲ್ಲದೇ, ಹೊರಗಡೆಯೂ ಕೂಡ ಅವರು ನಿಯಂತ್ರಿತ ನೀತಿ ಸಂಹಿತೆಗೆ ಬದ್ಧರಾಗಿ ಹೇಗೆ ವರ್ತಿಸುತ್ತಾರೆ ಎಂಬುದರ ಕುರಿತು ಹೇಳಲಾಗಿದೆ.
ಇದನ್ನೂ ಓದಿ: ಇಸ್ರೇಲ್ ಸಂಸತ್ತಿನಲ್ಲಿ ಗಾಜಾ ನರಮೇಧದ ಬಗ್ಗೆ ಪ್ರಧಾನಿ ಮೋದಿ ಮಾತನಾಡಬೇಕು: ಪ್ರಿಯಾಂಕಾ ವಾದ್ರಾ

