2027-28ರ ವಿಧಾನಸಭಾ ಚುನಾವಣೆಗೆ ಮುನ್ನ ಎಐಸಿಸಿ ಮತ್ತು ಪಿಸಿಸಿ ತಂಡಗಳ ಪುನಾರಚನೆಗೆ ಕಾಂಗ್ರೆಸ್ ಯೋಜನೆ
2027 ಮತ್ತು 2028ರ ಚುನಾವಣೆಗಳಿಗೆ ಸಿದ್ಧತೆಯನ್ನು ಹೆಚ್ಚಿಸಲು ಗೋವಾ, ಪಂಜಾಬ್ ಮತ್ತು ಕರ್ನಾಟಕದಂತಹ ಪ್ರಮುಖ ರಾಜ್ಯಗಳಲ್ಲಿ ನಾಯಕತ್ವ ಬದಲಾವಣೆ ಮತ್ತು ಹೊಸ ನೇಮಕಾತಿಗಳ ಕುರಿತು ಪಕ್ಷದ ನಾಯಕರು ಚಿಂತನೆ ನಡೆಸಿದ್ದಾರೆ.


Published : May 30, 2026 at 7:24 PM IST
ನವದೆಹಲಿ: ಕೇರಳ ಮತ್ತು ಕರ್ನಾಟಕದಲ್ಲಿ ಪಕ್ಷದ ಸಮಸ್ಯೆಗಳನ್ನು ಪರಿಹರಿಸಿದ ನಂತರ 2027 ಮತ್ತು 2028ರ ವಿಧಾನಸಭಾ ಚುನಾವಣೆಗಳಿಗೆ ಸಜ್ಜಾಗಲು ಕಾಂಗ್ರೆಸ್ ಹೈಕಮಾಂಡ್, ಎಐಸಿಸಿ ಮತ್ತು ಪಿಸಿಸಿಗಳನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ.
2027ರಲ್ಲಿ ಪಂಜಾಬ್, ಗೋವಾ, ಉತ್ತರಾಖಂಡ, ಉತ್ತರ ಪ್ರದೇಶ, ಗುಜರಾತ್ ಮತ್ತು ಮಣಿಪುರ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, 2028 ರಲ್ಲಿ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಎಲೆಕ್ಷನ್ಗಳು ನಡೆಯಲಿವೆ.
2027 ಮತ್ತು 2028ರ ರಾಜ್ಯ ಚುನಾವಣೆಗಳ ನಂತರ, ಪಕ್ಷವು 2029ರ ಸಾರ್ವತ್ರಿಕ ಚುನಾವಣೆಗಳಲ್ಲಿ ದೊಡ್ಡ ಹೋರಾಟ ಎದುರಿಸಲಿದೆ. ದೇಶಾದ್ಯಂತ ಸಂಘಟನೆಯನ್ನು ಬಲಪಡಿಸಲು ನಾಯಕತ್ವವು ಕೆಲಸ ಮಾಡುತ್ತಿದೆ ಮತ್ತು ಈ ಪ್ರಕ್ರಿಯೆಯು ಮುಂದುವರಿಯುತ್ತದೆ. ಆ ಉದ್ದೇಶಕ್ಕಾಗಿ ಅಗತ್ಯ ಇರುವ ಯಾವುದೇ ಬದಲಾವಣೆಗಳನ್ನು ನಾಯಕತ್ವವು ಮಾಡುತ್ತದೆ ಎಂದು ಎಐಸಿಸಿ ಪದಾಧಿಕಾರಿ ಬಿ.ಎಂ. ಸಂದೀಪ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನಡುವೆ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರಸ್ತಾವಿತ ಸಾಂಸ್ಥಿಕ ಬದಲಾವಣೆಗಳ ಕುರಿತು ಚರ್ಚಿಸಲಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.
ಗೋವಾದಲ್ಲಿ ಬದಲಾವಣೆ ಪ್ರಕ್ರಿಯೆ ಆರಂಭವಾಗಿದೆ. ಅಲ್ಲಿ 2027ರ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಲು ಹೊಸ ರಾಜ್ಯ ತಂಡವನ್ನು ಅನಾವರಣಗೊಳಿಸಲಾಗಿದೆ. ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಮೇ 29 ರಂದು ಎಐಸಿಸಿ ತಮಿಳುನಾಡು ಉಸ್ತುವಾರಿ ಗಿರೀಶ್ ಚೋಡಂಕರ್ ಅವರನ್ನು ಗೋವಾ ಘಟಕದ ಹೊಸ ಮುಖ್ಯಸ್ಥರನ್ನಾಗಿ ಪಕ್ಷವು ನೇಮಿಸಿದೆ ಮತ್ತು ಹೈಕಮಾಂಡ್ ಈಗ ದಕ್ಷಿಣ ರಾಜ್ಯಕ್ಕೆ ಹೊಸ ಎಐಸಿಸಿ ಉಸ್ತುವಾರಿಯನ್ನೂ ಕೂಡಾ ನೇಮಕ ಮಾಡಬೇಕಾಗುತ್ತದೆ.
ಹೈಕಮಾಂಡ್ ಈಗಾಗಲೇ ಮೂವರು ಕಾರ್ಯಕಾರಿ ಅಧ್ಯಕ್ಷರನ್ನು ಹೆಸರಿಸಿದೆ. ಎಂಕೆ ಶೇಖ್, ಆಲ್ಟೋನ್ ಡಿ'ಕೋಸ್ಟಾ ಮತ್ತು ಕಾರ್ಲೋಸ್ ಅಲ್ವಾರೆಸ್ ಫೆರೇರಾ ಅವರನ್ನು ಈ ಸ್ಥಾನಕ್ಕೆ ನೇಮಕ ಮಾಡಿದೆ. ಉಳಿದಂತೆ ಖಜಾಂಚಿ ದತ್ತಾ ಡಿ'ನಾಯಕ್; ಪ್ರಚಾರ ಸಮಿತಿ ಮುಖ್ಯಸ್ಥ ಯೂರಿ ಅಲೆಮಾವೊ; ಪ್ರಣಾಳಿಕೆ ಸಮಿತಿ ಮುಖ್ಯಸ್ಥ ಕ್ಯಾಪ್ಟನ್ ವಿರಿಯಾಟೊ ಫೆರ್ನಾಂಡಿಸ್ ಮತ್ತು ಗೋವಾ ತಂಡವನ್ನು ಪುನರುಜ್ಜೀವನಗೊಳಿಸಲು ಸಮನ್ವಯ ಸಮಿತಿ ಮುಖ್ಯಸ್ಥ ಫ್ರಾನ್ಸಿಸ್ಕೊ ಸರ್ದಿನ್ಹಾ ಅವರಿಗೆ ಜವಾಬ್ದಾರಿ ನೀಡಲಾಗಿದೆ.
ಚೋಡಂಕರ್ ಹೇಳುವುದೇನು?: ನಮ್ಮ ಧ್ಯೇಯ ಸ್ಪಷ್ಟವಾಗಿದೆ. ನಾವು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಬಹಿರಂಗಪಡಿಸುತ್ತೇವೆ. ಗೋವಾದ ಗುರುತು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುತ್ತೇವೆ ಮತ್ತು ವಿಶ್ವಾಸಾರ್ಹ, ಜನ-ಕೇಂದ್ರಿತ ಪರ್ಯಾಯ ಒದಗಿಸುತ್ತೇವೆ. 2027 ರಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಅವಿಶ್ರಾಂತವಾಗಿ ಕೆಲಸ ಮಾಡುತ್ತೇವೆ ಎಂದು ಚೋಡಂಕರ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.
ಗೋವಾಕ್ಕೂ ಮೊದಲು ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಉನ್ನತ ನಾಯಕತ್ವವನ್ನು ಬದಲಾವಣೆ ಮಾಡುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ. ಡಿಕೆ ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿಯಾಗಲಿದ್ದಾರೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿರುವುದರಿಂದ ಪಕ್ಷವು, ಆ ಸ್ಥಾನಕ್ಕೆ ಶೀಘ್ರವೇ ಬೇರೊಬ್ಬರನ್ನು ತರಬೇಕಾಗುತ್ತದೆ.
ಮೇ 29 ರಂದು ರಾಹುಲ್ ಗಾಂಧಿ ಮತ್ತು ಖರ್ಗೆ ಅವರು ಪಂಜಾಬ್‌ನ ಹಿರಿಯ ನಾಯಕರು ಮತ್ತು ಎಐಸಿಸಿ ಉಸ್ತುವಾರಿ ಭೂಪೇಶ್ ಬಘೇಲ್ ಅವರೊಂದಿಗೆ ಮೂರು ಗಂಟೆಗಳ ಕಾಲ ಸಮಾಲೋಚನೆ ನಡೆಸಿದ್ದಾರೆ. ಪಂಜಾಬ್ ನಲ್ಲಿನ ಪರಿಸ್ಥಿತಿ ಪರಿಶೀಲನೆ ನಡೆಸಿದ ಅವರು, ಆಡಳಿತಾರೂಢ ಆಮ್ ಆದ್ಮಿ ಪಕ್ಷದ ವಿರುದ್ಧದ ಹೋರಾಟವನ್ನು ಬಲಪಡಿಸಲು ನಿರ್ಧರಿಸಿದ್ದಾರೆ. ಪ್ರಸ್ತುತ ಅಮರಿಂದರ್ ರಾಜಾ ವಾರಿಂಗ್ ನೇತೃತ್ವದ ರಾಜ್ಯ ತಂಡವನ್ನು ಬದಲಾಯಿಸುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ಪಕ್ಷದ ಆಂತರಿಕ ಮೂಲಗಳಿಂದ ಮಾಹಿತಿ ಸಿಕ್ಕಿದೆ. ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷದ ಕಳಪೆ ಪ್ರದರ್ಶನದ ಬಳಿಕ ಈ ಮಹತ್ವದ ಸಭೆ ನಡೆದಿದೆ.
ಪಿಸಿಸಿ ತಂಡದ ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ ಎಂದು ನಾನು ಭಾವಿಸುವುದಿಲ್ಲ. ಸಭೆಯಲ್ಲಿ ಸಂಘಟನೆ ಮತ್ತು ಪಕ್ಷದ ಬಲವರ್ದನೆ ಸೇರಿದಂತೆ ಇತರ ಕಾರ್ಯಕ್ರಮಗಳ ಬಗ್ಗೆ ಸಮಾಲೋಚಿಸಲಾಯಿತು. 2027ರ ಚುನಾವಣೆಗೆ ನಾವು ನಮ್ಮನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೇವೆ. ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಗೆಲ್ಲಲು ಎಎಪಿ ಸ್ನಾಯು ಮತ್ತು ಹಣದ ಶಕ್ತಿಯನ್ನು ಬಳಸಿಕೊಂಡಿದೆ. ಮುಂಬರುವ ಎಸ್‌ಐಆರ್‌ಗೆ ನಾವು ಸಿದ್ಧರಾಗಬೇಕು ಎಂದು ಪಂಜಾಬ್‌ನ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ಹಿನಾ ಕವಾರೆ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ 2028ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಸಚಿನ್ ಪೈಲಟ್ ಅವರನ್ನು ಹೊಸ ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ಪಕ್ಷ ನಿಯೋಜಿಸಬಹುದು ಎಂದು ತಿಳಿದು ಬಂದಿದೆ. ಪ್ರಸ್ತುತ ಗೋವಿಂದ್ ಸಿಂಗ್ ದೋಟಸಾರ ರಾಜಸ್ಥಾನ ಘಟಕದ ನೇತೃತ್ವ ವಹಿಸಿದ್ದಾರೆ. ಪೈಲಟ್ ತವರು ರಾಜ್ಯವಾದ ರಾಜಸ್ಥಾನಕ್ಕೆ ಸ್ಥಳಾಂತರಗೊಂಡರೆ, ಹೈಕಮಾಂಡ್ ಛತ್ತೀಸ್‌ಗಢಕ್ಕೆ ಹೊಸ ಎಐಸಿಸಿ ಉಸ್ತುವಾರಿಯನ್ನು ನೇಮಿಸಬೇಕಾಗುತ್ತದೆ. 2023 ರಲ್ಲಿ ಕಾಂಗ್ರೆಸ್ ಬಿಜೆಪಿಗೆ ಅಧಿಕಾರ ಬಿಟ್ಟುಕೊಟ್ಟ ಮೇಲೆ ಪಕ್ಷವನ್ನು ಮರುಸಂಘಟಿಸಲು ಪ್ರಯತ್ನಿಸುತ್ತಿದ್ದಾರೆ.
ಗುಜರಾತ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲೂ ಇದೇ ರೀತಿಯ ಬದಲಾವಣೆಗಳನ್ನು ಮಾಡಬಹುದು ಎಂದು ತಿಳಿದು ಬಂದಿದೆ. ಅಲ್ಲಿ ಪಕ್ಷವು ಹಿರಿಯ ನಾಯಕರಾದ ಮುಕುಲ್ ವಾಸ್ನಿಕ್, ಅವಿನಾಶ್ ಪಾಂಡೆ ಮತ್ತು ಕುಮಾರಿ ಸೆಲ್ಜಾ ಅವರನ್ನು ಬದಲಿಸಲು ಹೊಸ ಉಸ್ತುವಾರಿಗಳನ್ನು ನೇಮಿಸಬಹುದು ಎಂದು ಪಕ್ಷದ ಆಂತರಿಕ ಮೂಲಗಳಿಂದ ಮಾಹಿತಿ ದೊರೆತಿದೆ.
ಇದಲ್ಲದೇ ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿಯೂ ಕಾಂಗ್ರೆಸ್ ಹೈಕಮಾಂಡ್ ಹೊಸ ಉಸ್ತುವಾರಿಗಳನ್ನು ನೇಮಿಸಬೇಕಾಗಿದೆ. ಎನ್‌ಡಿಎ ಸತತ ಮೂರನೇ ಅವಧಿಗೆ ಅಧಿಕಾರ ಹಿಡಿದ ಹಿನ್ನೆಲೆಯಲ್ಲಿ ಚುನಾವಣಾ ಸೋಲಿನ ಹೊಣೆ ಹೊತ್ತು ಅಸ್ಸಾಂನ ಮಾಜಿ ಉಸ್ತುವಾರಿ ಜಿತೇಂದ್ರ ಸಿಂಗ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಹಾರಾಷ್ಟ್ರದ ಎಐಸಿಸಿ ಉಸ್ತುವಾರಿಯಾಗಿಯಾಗಿದ್ದ ರಮೇಶ್ ಚೆನ್ನಿತ್ತಲ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೇರಳದಲ್ಲಿ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಎನ್‌ಡಿಎ ಆಳ್ವಿಕೆಯ ಪಶ್ಚಿಮ ರಾಜ್ಯದ ರಾಜಕೀಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಪಕ್ಷವು ಅವರ ಬದಲಿಗೆ ಬೇರೊಬ್ಬರ ಹೆಸರನ್ನು ಘೋಷಿಸಬೇಕಾಗುತ್ತದೆ.
ಇವುಗಳನ್ನೂ ಓದಿ:
ಕಾಂಗ್ರೆಸ್ನ ನೂತನ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದೊಂದಿಗೆ ಡಿ.ಕೆ.ಶಿವಕುಮಾರ್ ಆಯ್ಕೆ
SIR ಬಳಿಕ ವಿಶ್ವದಲ್ಲಿಯೇ ಅತಿ ಸ್ವಚ್ಛ, ನಿಖರ ಮತದಾರರ ಪಟ್ಟಿಯಾಗಲಿದೆ: ಚುನಾವಣಾ ಆಯುಕ್ತ

