ETV Bharat / bharat

ಕಾಶ್ಮೀರದಲ್ಲಿ ಮೈ ಕೊರೆಯುವ ಚಳಿ: ರಾತ್ರಿ ತಾಪಮಾನ -5 ಡಿಗ್ರಿಗೆ ಕುಸಿತ

ಮೈ ಕೊರೆಯುವ ಚಳಿಯಿಂದಾಗಿ ಪ್ರಸಿದ್ಧ ದಾಲ್​ ಲೇಕ್​ ಸೇರಿದಂತೆ ಅನೇಕ ಕಡೆ ನೀರಿನ ಮೂಲಗಳು ಹಿಮಗಟ್ಟುತ್ತಿವೆ. ಶ್ರೀನಗರದಲ್ಲಿ ಬುಧವಾರ ರಾತ್ರಿ ಮೈನಸ್​ 5.1 ಡಿಗ್ರಿ ತಾಪಮಾನ​ ದಾಖಲಾಗಿತ್ತು.

cold-conditions-intensify-in-kashmir-fringes-of-several-water-bodies-freeze
ಕಾಶ್ಮೀರದಲ್ಲಿ ತಾಪಮಾನ ಕುಸಿದು ಸರೋವರಗಳು ಹಿಮಗಟ್ಟುತ್ತಿವೆ. (PTI)
author img

By ETV Bharat Karnataka Team

Published : January 8, 2026 at 12:48 PM IST

1 Min Read
Choose ETV Bharat

ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಶ್ರೀನಗರ ಸೇರಿದಂತೆ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಚಳಿ ತೀವ್ರವಾಗಿದೆ. ಕಳೆದ ರಾತ್ರಿ ಈ ಋತುಮಾನದಲ್ಲೇ ಅತಿ ಹೆಚ್ಚಿನ ಚಳಿ ದಾಖಲಾಗಿದೆ. ಕಣಿವೆ ನಾಡಿನ ಜನರು ಗಢಗಢ ನಡುಗುವಂತಾಗಿದೆ.

ಮೈ ಕೊರೆಯುವ ಚಳಿಯಿಂದಾಗಿ ಪ್ರಸಿದ್ಧ ದಾಲ್​ ಲೇಕ್​ ಸೇರಿದಂತೆ ಅನೇಕ ಕಡೆ ನೀರಿನ ಮೂಲಗಳು ಹಿಮಗಟ್ಟಿವೆ. ಶ್ರೀನಗರದಲ್ಲಿ ನಿನ್ನೆ ರಾತ್ರಿ ಮೈನಸ್​ 5.1 ಡಿಗ್ರಿ ಸೆಲ್ಸಿಯಸ್​ ದಾಖಲಾಗಿತ್ತು. ಇದು ಈ ಅವಧಿಯಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನವಾಗಿದೆ.

ಮಧ್ಯ ಕಾಶ್ಮೀರದ ಗಂದೇರ್‌ಬಲ್ ಜಿಲ್ಲೆಯ ಸೋನಾಮಾರ್ಗ್ ಪ್ರವಾಸಿ ತಾಣವು ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲಾದ ಅತ್ಯಂತ ಶೀತ ಸ್ಥಳವಾಗಿದೆ. ಇಲ್ಲಿ ಕನಿಷ್ಠ ತಾಪಮಾನ ಮೈನಸ್ 9.8 ಡಿಗ್ರಿ ಸೆಲ್ಸಿಯಸ್ ತಲುಪಿದೆ.

ಕಣಿವೆಯ ಇತರೆಡೆಗಳಲ್ಲೂ ಚಳಿಗಾಲ ತೀವ್ರವಾಗಿದೆ. ಖಾಜಿಗುಂಡ್‌ನಲ್ಲಿ ಮೈನಸ್ 5.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಕುಪ್ವಾರಾದಲ್ಲಿ ಮೈನಸ್ 5.1 ಡಿಗ್ರಿ ದಾಖಲಾಗಿದೆ. ಶ್ರೀನಗರ ವಿಮಾನ ನಿಲ್ದಾಣದಲ್ಲಿ ಮೈನಸ್ 6.8 ಡಿಗ್ರಿ, ಅನಂತ್‌ನಾಗ್‌ನಲ್ಲಿ ಮೈನಸ್ 6.3 ಮತ್ತು ಬಾರಾಮುಲ್ಲಾದಲ್ಲಿ ಮೈನಸ್ 5.3 ಡಿಗ್ರಿ ತಾಪಮಾನವಿದೆ. ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಕನಿಷ್ಠ ತಾಪಮಾನ ಮೈನಸ್ 8.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.

ಕಾಶ್ಮೀರ ಕಣಿವೆ ಪ್ರಸ್ತುತ ಚಿಲೈ ಕಲಾನ್ ಅಂದರೆ 40 ದಿನಗಳ ತೀವ್ರ ಶೀತ ತಾಪಮಾನದ ಸಮಯದಲ್ಲಿದೆ. ಇಲ್ಲಿ ರಾತ್ರಿಯ ತಾಪಮಾನ ಸಾಮಾನ್ಯವಾಗಿ ಮೈನಸ್​ಗಿಂತ ಹಲವು ಡಿಗ್ರಿಗಳಷ್ಟು ಇಳಿಯುವುದರಿಂದ, ಹಿಮಪಾತದ ಸಾಧ್ಯತೆಗಳು ಹೆಚ್ಚಿರುತ್ತವೆ.

ಚಿಲೈ ಕಲಾನ್​ ಡಿಸೆಂಬರ್​ 21ರಿಂದ ಆರಂಭವಾಗಿದ್ದು, ಜನವರಿ 30ರವರೆಗೆ ಮುಂದುವರೆಯಲಿದೆ. ಕಣಿವೆಯಲ್ಲಿ ಇದುವರೆಗೆ ಈ ಋತುಮಾನದ ಯಾವುದೇ ಹಿಮಪಾತವಾಗಿಲ್ಲ. ಜನವರಿ 20ರವರೆಗೆ ವಾತಾವರಣವು ಶುಷ್ಕವಾಗಿ ಮುಂದುವರೆಯಲಿದ್ದು, ಜ.10ರವರೆಗೆ ರಾತ್ರಿ ಸಮಯದಲ್ಲಿ ಅತಿ ಹೆಚ್ಚಿನ ಚಳಿ ದಾಖಲಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ತಿಳಿಸಿದೆ.

ಜನವರಿ 16ರಿಂದ 20 ರವರೆಗೆ ಮೋಡ ಕವಿದ ವಾತಾವರಣವಿದ್ದು, ರಾತ್ರಿ ತಾಪಮಾನದಲ್ಲಿನ ತೀವ್ರ ಕುಸಿತ ಕಾಣಲಿದ್ದು, ಜನವರಿ 10ರ ಬಳಿಕ ನಂತರ ಕ್ರಮೇಣ 1ರಿಂದ 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಇವುಗಳನ್ನೂ ಓದಿ: