ETV Bharat / bharat

ಇಂಡಿಯಾ ಮೈತ್ರಿಕೂಟದ ಭೇಟಿಗೆ ಸಿಜೆಐ ಸೂರ್ಯಕಾಂತ್ ನಿರಾಕರಣೆ: ಸುಪ್ರೀಂ ಕೋರ್ಟ್​ವರೆಗೆ ಕಾಂಗ್ರೆಸ್ ಮೆರವಣಿಗೆ

ಪ್ರಸ್ತಾಪಿಸಲಾದ ವಿಷಯಗಳು ಈಗಾಗಲೇ ನ್ಯಾಯಾಲಯದ ಪರಿಶೀಲನೆಯಲ್ಲಿವೆ ಎಂದು ಹೇಳಿ ಮುಖ್ಯನ್ಯಾಯಮೂರ್ತಿಗಳು ಭೇಟಿಯನ್ನು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

DELHI PROTEST  RAHUL GANDHI  OPPOSITION PROTEST  SIR
ಸಿಜೆಐ ಸೂರ್ಯಕಾಂತ್ (ANI)
author img

By ETV Bharat Karnataka Team

Published : October 12, 2026 at 8:13 AM IST

2 Min Read
Choose ETV Bharat

ನವದೆಹಲಿ: ಕಾಂಗ್ರೆಸ್ ನೇತೃತ್ವದ 'ಇಂಡಿಯಾ' (INDIA) ಮೈತ್ರಿಕೂಟವು ಕೋರಿದ್ದ ಭೇಟಿಯ ಮನವಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನಿರಾಕರಿಸಿ, ನ್ಯಾಯಾಲಯದ ಮೊರೆ ಹೋಗುವಂತೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಚುನಾವಣಾ ಅಕ್ರಮಗಳ ಆರೋಪ, ಎಸ್​ಐಆರ್ ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸೋಮವಾರ ಮನವಿ ಸಲ್ಲಿಸಲು ಮೆರವಣಿಗೆ ನಡೆಸುವುದಾಗಿ ವಿರೋಧ ಪಕ್ಷಗಳ ಮೈತ್ರಿಕೂಟ ಘೋಷಿಸಿದೆ.

ಪ್ರಸ್ತಾಪಿಸಲಾದ ವಿಷಯಗಳು ಈಗಾಗಲೇ ನ್ಯಾಯಾಲಯದ ಪರಿಶೀಲನೆಯಲ್ಲಿವೆ ಎಂದು ಹೇಳಿ ಮುಖ್ಯನ್ಯಾಯಮೂರ್ತಿಗಳು ಭೇಟಿಯನ್ನು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ಯಾವುದೇ ರಾಜಕೀಯ ಪಕ್ಷದ ನಿಯೋಗವನ್ನು ಆಡಳಿತಾತ್ಮಕ ಮಟ್ಟದಲ್ಲಿ ಈ ರೀತಿ ಭೇಟಿಯಾಗುವ ಅಧಿಕಾರ ನ್ಯಾಯಾಲಯಕ್ಕಿಲ್ಲ' ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ ಎಂದು ತಿಳಿದುಬಂದಿದೆ. 'ನ್ಯಾಯಾಲಯದ ಅಧಿಕಾರವು ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡುವುದಕ್ಕೆ ಸೀಮಿತವಾಗಿರುತ್ತದೆ. ಅಲ್ಲದೆ, ಅತ್ಯುನ್ನತ ನ್ಯಾಯಾಂಗ ಸಂಸ್ಥೆಯಾಗಿರುವ ಸುಪ್ರೀಂ ಕೋರ್ಟ್‌ನ ಬಾಗಿಲುಗಳು ಎಲ್ಲರಿಗೂ ದಿನದ 24 ಗಂಟೆಯೂ ತೆರೆದಿರುತ್ತವೆ ಮತ್ತು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಅದು ಬದ್ಧವಾಗಿದೆ' ಎಂದೂ ಅವರು ಸೂರ್ಯಕಾಂತ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.

"ಪಕ್ಷ, ಲಿಂಗ, ಜಾತಿ, ಸಮುದಾಯ ಮತ್ತು ರಾಜ್ಯಗಳ ಭೇದ ಮರೆತು ಒಗ್ಗೂಡಿದ ಭಾರತೀಯರು ಸುಪ್ರೀಂ ಕೋರ್ಟ್‌ಗೆ ಈ ಮೆರವಣಿಗೆ ನಡೆಸಲಿದ್ದಾರೆ. ದೆಹಲಿಯಲ್ಲಿ ದೇಶದ ಯುವಜನರು ಶಾಂತಿಯುತ ಪ್ರತಿಭಟನೆಗಾಗಿ ಹೊರಬಂದಿದ್ದಾರೆ. ಅವರು ತಮ್ಮ ಹೃದಯದಲ್ಲಿ ಪ್ರೀತಿಯನ್ನು ಹೊತ್ತು ಬಂದಿದ್ದರೇ ಹೊರತು ದ್ವೇಷವನ್ನಾಗಲಿ ಅಥವಾ ಕೋಪವನ್ನಾಗಲಿ ಅಲ್ಲ. ನಮಗೆ ಬೇಕಾದ ಭಾರತ ಇದಲ್ಲ. ನಾವು ಪಕ್ಷ, ಲಿಂಗ, ಜಾತಿ, ಸಮುದಾಯ ಮತ್ತು ರಾಜ್ಯ ಭೇದ ಮರೆತು ಭಾರತೀಯರಾಗಿ ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ ನಡೆಸಲಿದ್ದೇವೆ. ಯುವಜನರು, ಎಲ್ಲಾ ವಿರೋಧ ಪಕ್ಷಗಳು, ನಾಗರಿಕ ಸಮಾಜದ ಗುಂಪುಗಳು ಹಾಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ಭಾರತದ ಸಂವಿಧಾನದ ಪರವಾಗಿ ನಿಲ್ಲುವವರೆಲ್ಲರೂ ನಮ್ಮೊಂದಿಗೆ ಹೆಜ್ಜೆ ಹಾಕಲಿದ್ದಾರೆ," ಎಂದು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ತಿಳಿಸಿದ್ದಾರೆ.

ಮತ ಕಳ್ಳತನಕ್ಕೆ ಅಂತ್ಯ, SIR ರದ್ದು ಮತ್ತು ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೇಶದ ಪರವಾಗಿ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು. ನರೇಂದ್ರ ಮೋದಿ, ಅಮಿತ್ ಶಾ, ಅಜಿತ್ ದೋವಲ್ ಮತ್ತು ಮೋಹನ್ ಭಾಗವತ್ ಅವರಿಗೆ ಭಾರತದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಈ ಹೇಡಿಗಳಿಗೆ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ. ಅವರು ಅನಿವಾರ್ಯವಾಗಿ ಹಿಂದೆ ಸರಿಯಬೇಕಾಗುತ್ತದೆ. ನಾವು ಪ್ರೀತಿ, ಸಹೋದರತ್ವ ಮತ್ತು ದೇಶಭಕ್ತಿಯೊಂದಿಗೆ ಒಟ್ಟಾಗಿ ಮೆರವಣಿಗೆ ನಡೆಸುತ್ತೇವೆ. ಭಯಪಡಬೇಡಿ "ಇಡೀ ಭಾರತವೇ" ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ ನಡೆಸಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: 2ನೇ ದಿನದ ಸಿಜೆಪಿ ಪ್ರತಿಭಟನೆಯಲ್ಲಿ ಮತ್ತೆ 200ಕ್ಕೂ ಹೆಚ್ಚು ಮಂದಿ ವಶ: ಜ್ಞಾನೇಶ್​ ರಾಜೀನಾಮೆಗೆ ಒತ್ತಾಯ