ಚಾರ್‌ಧಾಮ್ ಯಾತ್ರೆಗೆ ಭಾರಿ ಸಂಖ್ಯೆಯಲ್ಲಿ ಹರಿದು ಬರುತ್ತಿರುವ ಯಾತ್ರಿಕರು; ಬದರಿನಾಥ, ಕೇದಾರ್ನಾಥದಲ್ಲಿ ದರ್ಶನಕ್ಕೆ ಸಾಲು
ಪ್ರತಿನಿತ್ಯ ಸಾವಿರಾರು ಭಕ್ತರು ಹರಿದು ಬರುತ್ತಿದ್ದು, ದೇವರ ದರ್ಶನಕ್ಕೆ ತಾಳ್ಮೆಯಿಂದ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯಗಳು ಕಂಡುಬಂದಿವೆ.


By ANI
Published : June 4, 2026 at 10:43 AM IST
ರುದ್ರ ಪ್ರಯಾಗ್ (ಉತ್ತರಾಖಂಡ): ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಬದರಿನಾಥ ಒಳಗೊಂಡಿರುವ ಚಾರ್‌ಧಾಮ್ ಯಾತ್ರೆಯಲ್ಲಿ ಭಕ್ತರ ಉತ್ಸಾಹ ಕಂಡು ಬಂದಿದೆ. ವರ್ಷದಿಂದ ವರ್ಷಕ್ಕೆ ಚಾರ್‌ಧಾಮ್ ಯಾತ್ರಿಕರ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿದ್ದು, ಈ ಬಾರಿ ಭದ್ರಿನಾಥ್ ಮತ್ತು ಕೇದಾರನಾಥ ಧಾಮದಲ್ಲಿ ದೇವರ ದರ್ಶನಕ್ಕೆ ಉದ್ದುದ್ದ ಸರತಿ ಸಾಲುಗಳು ಕಂಡಿದೆ.
ಉತ್ತರಾಖಂಡದಲ್ಲಿರುವ ವಿಶ್ವಪ್ರಸಿದ್ಧ ಬದರಿನಾಥ ಮತ್ತು ಕೇದಾರನಾಥ ಯಾತ್ರೆಗೆ ಯಾತ್ರಿಕರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಹರಿದು ಬರುತ್ತಿದ್ದು, ದೇವರ ದರ್ಶನಕ್ಕೆ ತಾಳ್ಮೆಯಿಂದ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯಗಳು ಕಂಡುಬಂದಿವೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಇದುವರೆಗೆ 1,050,670 ಭಕ್ತರು ಕೇದಾರನಾಥ ಧಾಮಕ್ಕೆ ಭೇಟಿ ನೀಡಿ ಬಾಬಾ ಕೇದಾರನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಅದೇ ರೀತಿ, 832,903 ಯಾತ್ರಿಕರು ಬದರಿನಾಥ ಧಾಮದಲ್ಲಿ ನಮನ ಸಲ್ಲಿಸಿದ್ದಾರೆ.
ಈ ನಡುವೆ ಮಳೆಗಾಲ ಸಮೀಪಿಸುತ್ತಿದ್ದು, ಯಾತ್ರೆಯನ್ನು ಕೈಗೊಳ್ಳುವ ಮೊದಲು ಯಾತ್ರಿಕರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮಂಡಳಿ ಒತ್ತಾಯಿಸಿದೆ. ಭಕ್ತರು ತಮ್ಮ ನೋಂದಣಿಯನ್ನು ಮುಂಚಿತವಾಗಿ ಸಾಕಷ್ಟು ಸಿದ್ಧತೆ ನಡೆಸಿ, ಬೆಚ್ಚಗಿನ ಬಟ್ಟೆಗಳನ್ನು ತೆಗೆದುಕೊಂಡು ಹೊರಡಿ. ಮುಂಚಿತವಾಗಿ ವಸತಿ ವ್ಯವಸ್ಥೆ ಮಾಡಿ ಮತ್ತು ಯಾತ್ರೆಯನ್ನು ಪ್ರಾರಂಭಿಸುವ ಮೊದಲು ಹವಾಮಾನ ಪರಿಸ್ಥಿತಿಗಳನ್ನು ಪರಿಶೀಲಿಸಲು ಸಮಿತಿ ಸಲಹೆ ನೀಡಿದೆ.
ಪ್ರಯಾಣ ಆರಂಭಿಸುವ ಮೊದಲು ತಮ್ಮ ನೋಂದಣಿಯನ್ನು ಪೂರ್ಣಗೊಳಿಸಲು ಬಿಕೆಟಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸೋಹನ್ ಸಿಂಗ್ ಸಂದರ್ಶಕರನ್ನು ಒತ್ತಾಯಿಸಿದರು. ಈ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಶೀತ ವಾತಾವರಣ ಇರುವ ಹಿನ್ನೆಲೆ ಭಕ್ತರು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಮಾನ್ಸೂನ್ ಋತು ಕ್ರಮೇಣ ಸಮೀಪಿಸುತ್ತಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಾಣಲಿದೆ. ಜೋಶಿಮಠದಲ್ಲಿ ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೆ ತಂದಿರುವುದರಿಂದ, ಪ್ರಯಾಣ ಕೈಗೊಳ್ಳುವ ಮೊದಲು ಭಕ್ತರು ತಮ್ಮ ನೋಂದಣಿಯನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸುತ್ತೇವೆ. ನೋಂದಣಿ ಮಾಡುವುದರಿಂದ ನಿಮ್ಮ ಭೇಟಿಯ ದಾಖಲೆ ನಮ್ಮಲ್ಲಿ ಇರಲಿದೆ. ಇದು ನಮ್ಮ ಕಾರ್ಯಾಚರಣೆಗಳಿಗೆ ಅತ್ಯಗತ್ಯ. ಇಲ್ಲಿ ಹವಾಮಾನವು ತಂಪಾಗಿರುವುದರಿಂದ, ದಯವಿಟ್ಟು ಸಾಕಷ್ಟು ಬೆಚ್ಚಗಿನ ಬಟ್ಟೆಗಳನ್ನು ತರಲು ಮರೆಯಬೇಡಿ ಎಂದು ಮನವಿ ಮಾಡಿದ್ದಾರೆ.
ವಸತಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮುಂಚಿತವಾಗಿ ಮಾಡಿಕೊಳ್ಳುವುದು ಮುಖ್ಯ. ಈ ಬಾರಿ ಯಾತ್ರಿಕರ ಸಂಖ್ಯೆ ಹೆಚ್ಚಿರುವುದರಿಂದ ದೊಡ್ಡ ಜನಸಂದಣಿ ಮತ್ತು ದೀರ್ಘ ಸರತಿ ಸಾಲುಗಳಂತಹ ಕೆಲವು ಸಣ್ಣ ಅನಾನುಕೂಲತೆಗಳಿಗೆ ಸಿದ್ಧರಾಗಿರುವಂತೆ ಕೂಡ ತಿಳಿಸಿದ್ದಾರೆ.
ಇವುಗಳನ್ನೂ ಓದಿ: ತಾಯಿಯನ್ನು ಹೆಗಲ ಮೇಲೆ ಹೊತ್ತು 1,800 ಕಿಮೀ ದೂರ ಕಾಲ್ನಡಿಗೆಯಲ್ಲೇ ಕೇದಾರನಾಥ ದೇವಸ್ಥಾನ ತಲುಪಿದ ಯುವಕ!
ಚಾರ್ ಧಾಮ್ ಯಾತ್ರೆ ಕೈಗೊಳ್ಳುತ್ತೀರಾ? ಇದರೊಂದಿಗೆ ಈ ಸುಂದರ ತಾಣಗಳನ್ನು ವೀಕ್ಷಿಸಲು ಮರೆಯಬೇಡಿ

