ಪ್ರಧಾನಿ ನೇತೃತ್ವದಲ್ಲಿ ಮಹತ್ವದ ಸಭೆ; ಪ.ಏಷ್ಯಾದಲ್ಲಿ ಸಿಲುಕಿರುವ ಭಾರತೀಯರ ನೆರವಿಗೆ ಸೂಚನೆ
ಉದ್ಯೋಗ, ಶಿಕ್ಷಣ, ಪ್ರವಾಸಕ್ಕೆಂದು ಹೋಗಿರುವ ಸಾವಿರಾರು ಭಾರತೀಯರು ಇದೀಗ ಪಶ್ಚಿಮ ಏಷ್ಯಾ ಬಿಕ್ಕಟ್ಟು ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಭಾರತ ಸರ್ಕಾರದ ಸಹಾಯ ಕೋರಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದೆ.

Published : March 2, 2026 at 10:38 AM IST
|Updated : March 2, 2026 at 10:54 AM IST
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಆ ಪ್ರದೇಶದಲ್ಲಿ ನೆಲೆಸಿರುವ ಭಾರತೀಯ ವಲಸಿಗ ಸಮುದಾಯದ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಕಳವಳ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಭದ್ರತೆ ಕುರಿತ ಕೇಂದ್ರ ಸಂಪುಟ ಸಮಿತಿ (ಸಿಸಿಎಸ್) ಭಾನುವಾರ ಮಹತ್ವದ ಸಭೆ ನಡೆಸಿತು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಜೆ ನಡೆದ ಸಭೆಯಲ್ಲಿ ಸದ್ಯದ ಪರಿಸ್ಥಿತಿಯಿಂದ ತೊಂದರೆಗೊಳಗಾದ ಭಾರತೀಯರಿಗೆ ಸಹಾಯ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲಾ ಸಂಬಂಧಿತ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಯುದ್ಧವನ್ನು ತ್ವರಿತವಾಗಿ ಕೊನೆಗೊಳಿಸುವ ಮತ್ತು ಸಂವಾದ ಮತ್ತು ರಾಜತಾಂತ್ರಿಕತೆಗೆ ಮರಳುವ ಮಹತ್ವವನ್ನು ಇದೇ ಸಂದರ್ಭದಲ್ಲಿ ಸಭೆ ಒತ್ತಿ ಹೇಳಿತು.
ಸಿಸಿಎಸ್ ಸಭೆ ಕುರಿತು ಬಿಡುಗಡೆಯಾದ ಅಧಿಕೃತ ಹೇಳಿಕೆಯಲ್ಲಿ, ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿಯ ಪರಾಮರ್ಶೆ ನಡೆಸಲಾಗಿದೆ. ಇರಾನ್‌ನಲ್ಲಿ ನಡೆದ ವಾಯುದಾಳಿಗಳು ಮತ್ತು ನಂತರದ ಹಲವಾರು ಗಲ್ಫ್ ದೇಶಗಳಲ್ಲಿನ ದಾಳಿಗಳೂ ಸೇರಿದಂತೆ ಉಲ್ಬಣಗೊಂಡ ಬಗ್ಗೆ ವಿವರಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿರುವ ಭಾರತೀಯ ಸಮುದಾಯದ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಸಿಸಿಎಸ್ನಲ್ಲಿ ಗಂಭೀರ ಕಳವಳ ವ್ಯಕ್ತವಾಗಿದೆ. ಭಾರತೀಯರು ಎದುರಿಸುತ್ತಿರುವ ತೊಂದರೆಗಳು ಹಾಗೂ ಪ್ರಾದೇಶಿಕ ಭದ್ರತೆ ಮತ್ತು ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳ ಮೇಲಿನ ವ್ಯಾಪಕ ಪರಿಣಾಮಗಳ ಪರಿಶೀಲನೆ ನಡೆಸಲಾಗಿದೆ.
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ದಾಳಿ ಮತ್ತು ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ನಂತರ ಉದ್ಭವಿಸಿರುವ ಪರಿಸ್ಥಿತಿಯ ಅವಲೋಕನ, ಇಸ್ರೇಲ್ ಮತ್ತು ಗಲ್ಫ್ ಸುತ್ತಮುತ್ತಲಿನ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಹಾಗೂ ಜಾಗತಿಕ ವ್ಯಾಪಾರ ಕೇಂದ್ರವಾದ ದುಬೈ ಮೇಲೆ ಇರಾನ್ ಡ್ರೋನ್ ಮತ್ತು ಕ್ಷಿಪಣಿಗಳನ್ನು ಹಾರಿಸಿದ್ದು, ಇಲ್ಲಿರುವ ಭಾರತೀಯರು ಸಂಕಷ್ಟಕ್ಕೆ ಸಿಲುಕಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾದ ಪಿ.ಕೆ.ಮಿಶ್ರಾ ಮತ್ತು ಶಕ್ತಿಕಾಂತ ದಾಸ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸಭೆಯಲ್ಲಿ ಭಾಗವಹಿಸಿದ್ದರು.
ಇರಾನ್, ಇಸ್ರೇಲ್ನಲ್ಲಿ ಸಾವಿರಾರು ಭಾರತೀಯರು: ಇರಾನ್‌ನಲ್ಲಿ ಅಧ್ಯಯನ, ಕೆಲಸಕ್ಕೆಂದು ವಲಸೆ ಹೋದ ಸುಮಾರು 10,000 ಭಾರತೀಯರಿದ್ದರೆ, ಇಸ್ರೇಲ್ನಲ್ಲಿ ಸುಮಾರು 40,000 ಭಾರತೀಯರಿದ್ದಾರೆ. ಕೊಲ್ಲಿ ಮತ್ತು ಪಶ್ಚಿಮ ಏಷ್ಯಾದಲ್ಲಿ ವಾಸಿಸುವ ಭಾರತೀಯರ ಸಂಖ್ಯೆ ಸುಮಾರು 9 ಮಿಲಿಯನ್.
ಸದ್ಯ ಎದುರಾಗಿರುವ ಬಿಕ್ಕಟ್ಟಿನಿಂದ ಪಶ್ಚಿಮ ಏಷ್ಯಾದ ವಾಯು ಪ್ರದೇಶವೂ ಬಂದ್ ಆಗಿದ್ದು, ವಿಮಾನ ಸೇವೆಯಲ್ಲಿ ಅಡಚಣೆಯುಂಟಾಗಿದೆ. ಹಲವು ಭಾರತೀಯರು ದುಬೈ, ದೋಹಾ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಭಾರತ ಸರ್ಕಾರದ ಸಹಾಯ ಕೋರಿದ್ದಾರೆ.
ಈ ಪ್ರದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಭಾರತೀಯ ಪ್ರಜೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಸಹಾಯವಾಣಿಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇವುಗಳನ್ನೂ ಓದಿ:

