ETV Bharat / bharat

ಸಿಖ್​ ಹತ್ಯಾಕಾಂಡದ ದೋಷಿ ಸಜ್ಜನ್​ಕುಮಾರ್​ ನಿವಾಸಕ್ಕೆ ತೆರಳಿ ಸಂತಾಪ: ಮೂವರು ಬಿಜೆಪಿ ಸಂಸದರಿಗೆ ಸಮನ್ಸ್​ ಜಾರಿ

ಇತ್ತೀಚೆಗೆ ನಿಧನರಾದ ಸಿಖ್​ ಹತ್ಯಾಕಾಂಡದ ದೋಷಿ ಸಜ್ಜನ್​ಕುಮಾರ್​ ನಿವಾಸಕ್ಕೆ ತೆರಳಿ ಸಂತಾಪ ಸೂಚಿಸಿದ ಮೂವರು ಬಿಜೆಪಿ ಸಂಸದರಿಗೆ ಪಕ್ಷ ಸಮನ್ಸ್​ ಜಾರಿ ಮಾಡಿದೆ.

BJP CHIEF NITIN NABIN
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್​ ನಬಿನ್ (IANS)
author img

By ETV Bharat Karnataka Team

Published : August 29, 2026 at 8:28 PM IST

2 Min Read
Choose ETV Bharat

ನವದೆಹಲಿ: ಕಾಂಗ್ರೆಸ್​​ನ ಮಾಜಿ ಸಂಸದ ಸಜ್ಜನ್​ಕುಮಾರ್​ ನಿಧನಕ್ಕೆ ಸಂತಾಪ ಸೂಚಿಸಲು ಅವರ ನಿವಾಸಕ್ಕೆ ತೆರಳಿದ್ದ ದೆಹಲಿಯ ಮೂವರು ಬಿಜೆಪಿ ಸಂಸದರಿಗೆ ಪಕ್ಷ ಸಮನ್ಸ್​ ಜಾರಿ ಮಾಡಿ, ಕ್ರಮದ ಎಚ್ಚರಿಕೆ ನೀಡಿದೆ.

1984 ರಲ್ಲಿ ಸಿಖ್ಖರ ಹತ್ಯಾಕಾಂಡ ಪ್ರಕರಣದ ದೋಷಿಯಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಕಾಂಗ್ರೆಸ್​​ ಮುಖಂಡ ಸಜ್ಜನ್ ಕುಮಾರ್ ಆಗಸ್ಟ್ 20 ರಂದು ಇಲ್ಲಿನ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ನಿಧನರಾದರು.

ಈ ಹಿನ್ನೆಲೆಯಲ್ಲಿ ಸಜ್ಜನ್​​ ಕುಮಾರ್​ ಅವರ ನಿವಾಸಕ್ಕೆ ದೆಹಲಿಯ ಸಂಸದರಾದ ಕಮಲ್‌ಜೀತ್ ಸೆಹ್ರಾವತ್, ರಾಮ್‌ವೀರ್ ಸಿಂಗ್ ಬಿಧುರಿ ಮತ್ತು ಯೋಗೇಂದರ್ ಚಂದೋಲಿಯಾ ಅವರು ಇತ್ತೀಚೆಗೆ ತೆರಳಿ ಕುಟುಂಬಸ್ಥರ ಜೊತೆ ಮಾತನಾಡಿ ಸಂತಾಪ ಸೂಚಿಸಿದ್ದರು.

ಸಂಸದರ ಈ ನಡೆಯು ಪಕ್ಷದಲ್ಲಿ ಟೀಕೆಗೆ ಗುರಿಯಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್​ ನಬಿನ್​ ಅವರು ಮೂವರು ಸಂಸದರನ್ನು ಪಕ್ಷದ ಕಚೇರಿಗೆ ಕರೆಸಿಕೊಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ಇದು ವೈಯಕ್ತಿಕ ಭೇಟಿ, ಪಕ್ಷ ಪ್ರತಿನಿಧಿಸಲ್ಲ': ಮೂವರು ಸಂಸದರ ನಡೆಗೆ ಸ್ಪಷ್ಟನೆ ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್‌.ಪಿ. ಸಿಂಗ್ ಅವರು, "ಪಕ್ಷದ ಸಂಸದರು ಸಜ್ಜನ್​ ಕುಮಾರ್​ ಅವರ ನಿವಾಸಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದ್ದು ವೈಯಕ್ತಿಕ ನಿರ್ಧಾರ. ಅವರು ಪಕ್ಷದ ಪ್ರತಿನಿಧಿಗಳಾಗಿ ಅಲ್ಲಿಗೆ ಹೋಗಿರಲಿಲ್ಲ" ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ, ದೆಹಲಿಯ ಮಾಜಿ ಶಾಸಕ ಎಚ್.ಎಸ್. ಫೂಲ್ಕಾ ಅವರು ಸಂಸದರ ಈ ನಡೆಯನ್ನು ಖಂಡಿಸಿದ್ದಾರೆ. "ದಿವಂಗತ ಸಜ್ಜನ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು ಸರಿಯಲ್ಲ. ನಮ್ಮ ಸಹಾನುಭೂತಿ ಏನಿದ್ದರೂ, 1984 ರ ಸಿಖ್ ವಿರೋಧಿ ದಂಗೆಯ ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಇರಬೇಕು" ಎಂದಿದ್ದಾರೆ.

"ಸಾಮೂಹಿಕ ಹತ್ಯಾಕಾಂಡಕ್ಕೆ ಕಾರಣರಾದ ಸಜ್ಜನ್ ಕುಮಾರ್ ಅವರ ನಿವಾಸಕ್ಕೆ ತೆರಳಿ ಸಂತಾಪ ಸೂಚಿಸಿರುವ ಸಂಸದರಾದ ಕಮಲ್‌ಜೀತ್ ಸೆಹ್ರಾವತ್, ರಾಮ್‌ವೀರ್ ಸಿಂಗ್ ಬಿಧುರಿ ಮತ್ತು ಯೋಗೇಂದರ್ ಚಂದೋಲಿಯಾ ಅವರ ನಡೆಯನ್ನು ನಾನು ಬಲವಾಗಿ ಖಂಡಿಸುತ್ತೇವೆ. ಹತ್ಯಾಕಾಂಡದ ಅಪರಾಧಿಗಳ ವಿರುದ್ಧ ಮತ್ತು ಸಂತ್ರಸ್ತರ ಪರ ಬಿಜೆಪಿ ಎಂದಿಗೂ ಹೋರಾಡುತ್ತದೆ. ಅಪರಾಧಿಗಳು ಜೈಲಿನಲ್ಲಿ ಶಿಕ್ಷೆ ಅನುಭವಿಸುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ" ಎಂದು ಹೇಳಿದ್ದಾರೆ.

ಪಕ್ಷದಿಂದ ಬಹಿಷ್ಕರಿಸಲು ಆಗ್ರಹ: ದಂಗೆಯ ಸಂತ್ರಸ್ತರು ಮತ್ತು ಅವರ ಕುಟುಂಬಗಳು ಇನ್ನೂ ಆ ಹಿಂಸಾಚಾರದ ಕಹಿ ನೆನಪುಗಳು ಮತ್ತು ಆಘಾತದೊಂದಿಗೆ ಬದುಕುತ್ತಿವೆ. ಆ ಕುಟುಂಬಗಳ ಪರವಾಗಿ ನಮ್ಮ ಸಹಾನುಭೂತಿ ಇರಬೇಕು. ಅನೇಕರು ಇಂದಿಗೂ ಆ ದಿನಗಳ ಭಯಾನಕ ಕರಿನೆರಳಿನಲ್ಲಿ ಬದುಕುತ್ತಿದ್ದಾರೆ" ಎಂದಿದ್ದಾರೆ.

ಅಂತಹ ಘೋರ ಹತ್ಯಾಕಾಂಡದ ಹಿಂದಿನ ರೂವಾರಿ ಸಜ್ಜನ್​ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಕ್ಕಾಗಿ ಪಕ್ಷದ ಮೂವರು ಸಂಸದರನ್ನು ಬಹಿಷ್ಕರಿಸುವಂತೆಯೂ ಅವರು ಇದೇ ವೇಳೆ ಆಗ್ರಹಿಸಿದ್ದಾರೆ.

ಇವುಗಳನ್ನೂ ಓದಿ: