ETV Bharat / bharat

ಬಿಜಾಪುರದಲ್ಲಿ ಮತ್ತೊಂದು ಎನ್​​​​​ಕೌಂಟರ್​: ಇಲ್ಲಿಯವರೆಗೆ 19 ನಕ್ಸಲರ ಶವಗಳು ಪತ್ತೆ, ಹುತಾತ್ಮ ಸೈನಿಕರಿಗೆ ಅಂತಿಮ ನಮನ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಇಂದು ಮತ್ತೆ ಎನ್‌ಕೌಂಟರ್ ನಡೆದಿದ್ದು, ಇಲ್ಲಿಯವರೆಗೆ 18-19 ನಕ್ಸಲರ ಶವಗಳು ಪತ್ತೆಯಾಗಿವೆ ಎಂದು ಬಸ್ತಾರ್​ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಿ ಮಾಹಿತಿ ನೀಡಿದ್ದಾರೆ.

CHHATTISGARH NAXAL ENCOUNTER
ಎನ್ಕೌಂಟರ್ನಲ್ಲಿ ಹುತಾತ್ಮರಾದ ಸೈನಿಕರಿಗೆ ಅಂತಿಮ ನಮನ (ETV Bharat)
author img

By ETV Bharat Karnataka Team

Published : December 4, 2025 at 4:19 PM IST

3 Min Read
Choose ETV Bharat

ಬಿಜಾಪುರ: ಛತ್ತೀಸ್‌ಗಢದ ನಕ್ಸಲ್ ಪೀಡಿತ ಬಿಜಾಪುರ - ದಂತೇವಾಡ ಜಿಲ್ಲೆಗಳ ಗಡಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇದುವರೆಗೆ 18-19 ನಕ್ಸಲರ ಮೃತದೇಹಗಳು ಪತ್ತೆಯಾಗಿವೆ. ಬುಧವಾರ 12 ನಕ್ಸಲರ ಮೃತದೇಹಗಳು ಪತ್ತೆಯಾಗಿದ್ದು, ಇಂದು ಮತ್ತೆ ಏಳು ಮೃತದೇಹಗಳು ಪತ್ತೆಯಾಗಿವೆ.

ಬುಧವಾರ ಮತ್ತು ಗುರುವಾರ ನಡೆದ ಎನ್‌ಕೌಂಟರ್‌ಗಳಲ್ಲಿ ಒಟ್ಟು 19 ನಕ್ಸಲರು ಮೃತಪಟ್ಟಿದ್ದು, ಅವರ ಮೃತದೇಹಗಳ ಜೊತೆಗೆ, ಭದ್ರತಾ ಪಡೆಗಳು ಘಟನಾ ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಸ್ತಾರ್​ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಿ. ಮಾತನಾಡಿ, ಬಸ್ತಾರ್​ ವಿಭಾಗದಲ್ಲಿ ಭದ್ರತಾ ಪಡೆಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಡಿಸೆಂಬರ್ 3 ರಂದು, ನಕ್ಸಲರು ಇರುವ ಮಾಹಿತಿಯ ಆಧಾರದ ಮೇಲೆ ಡಿಆರ್‌ಜಿ, ವಿಶೇಷ ಕಾರ್ಯಪಡೆ (ಎಸ್‌ಟಿಎಫ್), ಕೋಬ್ರಾ ಮತ್ತು ಸಿಆರ್‌ಪಿಎಫ್‌ನ ಜಂಟಿ ತಂಡವನ್ನು ಬಿಜಾಪುರ - ದಂತೇವಾಡ ಗಡಿಯಲ್ಲಿರುವ ಕೋಟ್ನಾರ್ ಪ್ರದೇಶಕ್ಕೆ ಕಳುಹಿಸಲಾಗಿತ್ತು. ಬುಧವಾರ ಬೆಳಗ್ಗೆ 9 ಗಂಟೆಗೆ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಿರಂತರ ಗುಂಡಿನ ಚಕಮಕಿ ಪ್ರಾರಂಭವಾಯಿತು. ಬುಧವಾರ 12 ನಕ್ಸಲರ ಶವಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇಂದಿನದ್ದು ಸೇರಿ ಒಟ್ಟು 19 ನಕ್ಸಲರ ಮೃತದೇಹಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಮೂವರು ಡಿಆರ್‌ಜಿ (ಜಿಲ್ಲಾ ಮೀಸಲು ಪಡೆ) ಜವಾನರು ಹುತಾತ್ಮರಾಗಿದ್ದು, ಮೂವರು ಸೈನಿಕರಿಗೂ ಅಂತಿಮ ನಮನ ಸಲ್ಲಿಸಲಾಯಿತು. ಸೈನಿಕರ ಪಾರ್ಥಿವ ಶರೀರಗಳನ್ನು ಅವರ ಗ್ರಾಮಗಳಿಗೆ ಕಳುಹಿಸಲಾಗಿದೆ. ಎನ್‌ಕೌಂಟರ್‌ನಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಇಬ್ಬರೂ ಅಪಾಯದಿಂದ ಪಾರಾಗಿದ್ದು, ರಾಯ್‌ಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಪ್ರಕಾರ, ಅವರ ಸ್ಥಿತಿ ಸ್ಥಿರವಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ. - ಸುಂದರರಾಜ್ ಪಿ, ಬಸ್ತಾರ್​ ಇನ್ಸ್‌ಪೆಕ್ಟರ್ ಜನರಲ್

ಮೃತ 19 ನಕ್ಸಲೀಯರ ಪೈಕಿ ಒಬ್ಬನನ್ನು ಮೋಡಿಯಂ ವೆಲ್ಲಾ ಎಂದು ಗುರುತಿಸಲಾಗಿದೆ. ವೆಲ್ಲಾ ಮಾವೋವಾದಿ ಪಿಎಲ್‌ಜಿಎ (ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ)ಯ ಕಮಾಂಡರ್ ಆಗಿದ್ದ. ಭದ್ರತಾ ಪಡೆಗಳ ಮೇಲಿನ ಹಲವು ದಾಳಿಗಳಲ್ಲಿ ಈತ ಭಾಗಿಯಾಗಿದ್ದ. 2020ರಲ್ಲಿ ಸುಕ್ಮಾದ ಮಿನ್ಪಾದಲ್ಲಿ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ. ಇದರಲ್ಲಿ 17 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು. 2021ರಲ್ಲಿ ಟೇಕಲ್ಗುಡೆಮ್‌ನಲ್ಲಿ ನಡೆದ ದಾಳಿಯಲ್ಲಿಯೂ ಈತ ಭಾಗಿಯಾಗಿದ್ದ. ಇದರಲ್ಲಿ 22 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು ಎಂದು ಅವರು ಮಾಹಿತಿ ನೀಡಿದರು.

ಮಾವೋವಾದಿಗಳ ಯುಗದ ಅಂತ್ಯ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶರಣಾಗತಿ ಮತ್ತು ಪುನರ್ವಸತಿ ನೀತಿಗಳಿಂದ ಪ್ರೇರಿತರಾಗಿ ಜಿಲ್ಲೆಯಲ್ಲಿ ಸಾವಿರಾರು ಮಾವೋವಾದಿಗಳು ಹಿಂಸಾಚಾರವನ್ನು ತೊರೆದು ಸಮಾಜದ ಮುಂದೆ ಬಂದಿದ್ದಾರೆ. ಅಲ್ಲದೇ ಮಾವೋವಾದಿ ಪಕ್ಷದ ಸೂಕ್ಷ್ಮ ಕಾರ್ಯಾಚರಣೆಗಳ ಮಾಸ್ಟರ್‌ ಮೈಂಡ್‌ ಛಲಪತಿ, ಬಾಲಕೃಷ್ಣ, ಗಣೇಶ್, ಕಟ್ಟಾ ರಾಮಚಂದ್ರ ರೆಡ್ಡಿ, ಕದರಿ ಸತ್ಯನಾರಾಯಣ ರೆಡ್ಡಿ ಮತ್ತು ಹಿಡ್ಮಾ ಅವರ ಸಾವುಗಳು, ಹಾಗೂ ಆರೋಗ್ಯ ಕಾರಣಗಳಿಂದ ಸಶಸ್ತ್ರ ಮಾರ್ಗವನ್ನು ತೊರೆದು ಮುಖ್ಯವಾಹಿನಿಗೆ ಸೇರಿದ ಮಲ್ಲೊಜುಲ ವೇಣುಗೋಪಾಲ್, ಅಸಣ್ಣ, ಚಂದ್ರಣ್ಣ ಮತ್ತು ಬಂಡಿ ಪ್ರಕಾಶ್ ಅವರ ಶರಣಾಗತಿ ಮಾವೋವಾದಿಗಳ ಯುಗದ ಅಂತ್ಯವನ್ನು ಸೂಚಿಸುತ್ತಿದೆ.

ಜನವರಿ 1 ರಂದು ಒಂದೇ ಬಾರಿಗೆ ಶರಣಾಗುವುದಾಗಿ ಮಾವೋವಾದಿಗಳ ಪತ್ರ: ಕೆಲವು ದಿನಗಳ ಹಿಂದೆ, ಮಾವೋವಾದಿಗಳು ಅನಿರೀಕ್ಷಿತ ಪ್ರಮುಖ ಘೋಷಣೆಯನ್ನು ಮಾಡಿದ್ದು, ಅವರು ಮಹಾರಾಷ್ಟ್ರ-ಮಧ್ಯಪ್ರದೇಶ-ಛತ್ತೀಸ್‌ಗಢ ವಲಯದ ಪ್ರತಿನಿಧಿ ಅನಂತ್ ಹೆಸರಿನಲ್ಲಿ ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ, ಬರುವ ಜನವರಿ 1 ರಂದು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುವುದಾಗಿ ಹೇಳಿದ್ದಾರೆ. ಒಬ್ಬೊಬ್ಬರಾಗಿ ಅಲ್ಲ, ಒಂದೇ ಬಾರಿಗೆ ಶರಣಾಗುವುದಾಗಿ ಅವರು ಹೇಳಿದ್ದಾರೆ. ಮಾವೋವಾದಿ ನಾಯಕರಾದ ಮಲ್ಲೊಜುಲ ವೇಣುಗೋಪಾಲ್, ಅಶಣ್ಣ ಮತ್ತು ಗೆರಿಲ್ಲಾ ತಂತ್ರಜ್ಞ ಹಿಡ್ಮಾ ಅವರ ಎನ್‌ಕೌಂಟರ್‌ ಬಳಿಕ ಮಾವೋವಾದಿ ಪಕ್ಷವು ಇನ್ನಷ್ಟು ದುರ್ಬಲವಾಗಿದೆ. ಕೇಂದ್ರ ಸರ್ಕಾರವು ಇತರರಿಗೂ ಶರಣಾಗುವಂತೆ ಮನವಿ ಮಾಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಂಯಮ ವಹಿಸುವಂತೆ ಮತ್ತು ಭದ್ರತಾ ಪಡೆಗಳ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಮಾವೋವಾದಿಗಳು ಮೂರು ರಾಜ್ಯ ಸರ್ಕಾರಗಳನ್ನು ಕೇಳಿಕೊಂಡಿದ್ದಾರೆ. ಈ ವಲಯದಲ್ಲಿ ಯಾವುದೇ ಬಂಧನಗಳು, ಎನ್‌ಕೌಂಟರ್‌ಗಳು ಅಥವಾ ಅಹಿತಕರ ಘಟನೆಗಳು ನಡೆಯಬಾರದು ಎಂದೂ ಸಹ ಅವರು ತಮ್ಮ ಪತ್ರದಲ್ಲಿ ನಿರ್ದಿಷ್ಟವಾಗಿ ತಿಳಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ 12 ನಕ್ಸಲರು ಹತ: ಮೂವರು ಯೋಧರು ಹುತಾತ್ಮ