ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಆರೋಪಿ ಬಂಧನಕ್ಕೆ ತೆರಳಿದ್ದ ಬೆಂಗಳೂರಿನ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿ ನಾಲ್ವರು ಸಾವು
ಮಧ್ಯಪ್ರದೇಶದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರಿನ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಅಸುನೀಗಿದ್ದಾರೆ.

Published : August 28, 2026 at 12:42 PM IST
ರಾಜ್‌ಗಢ(ಮಧ್ಯಪ್ರದೇಶ): ಮಧ್ಯಪ್ರದೇಶದ ರಾಜ್‌ಗಢದಲ್ಲಿ ಶುಕ್ರವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿದ್ದು, ಆರೋಪಿಯ ಬಂಧನಕ್ಕೆ ತೆರಳಿದ್ದ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಬೆಂಗಳೂರಿನ ಆಗ್ನೇಯ ಸೈಬರ್ ಕ್ರೈಂ ಠಾಣೆಯ ಇನ್ಸ್‌ಪೆಕ್ಟರ್ ರವಿ ಕೆ.ಬಿ. ಮೃತಪಟ್ಟವರು. ಅಲ್ಲದೇ, ಅವರ ಜೊತೆಗಿದ್ದ ಪೊಲೀಸ್ ಸಿಬ್ಬಂದಿಯಾದ ವಿಶ್ವನಾಥ್ ಮತ್ತು ರಮೇಶ್ ಗಾಯಗೊಂಡಿದ್ದಾರೆ.
ಘಟನೆ: ವೇಗವಾಗಿ ಸಾಗುತ್ತಿದ್ದ ಬಸ್ ನಿಯಂತ್ರಣ ತಪ್ಪಿ ರಾಜ್‌ಗಢದ ಬಿಯೋರಾದ ಭೋಪಾಲ್ ಬೈಪಾಸ್ ಸೇತುವೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮೇಲಿನ ಡೆಕ್ನ ಸೀಟ್ಗಳಲ್ಲಿ ಮಲಗಿದ್ದ ಪ್ರಯಾಣಿಕರು ಕಿಟಕಿಗಳಿಂದ ಹೊರಗೆ ಎಸೆಯಲ್ಪಟ್ಟು ಸೇತುವೆಯಿಂದ ಕೆಳಗೆ ಬಿದ್ದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಅಲ್ಲದೇ, ಘಟನೆಯಲ್ಲಿ 11 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಇಂದೋರ್ ಕಡೆಗೆ ಹೋಗುತ್ತಿದ್ದ ಬಸ್: ಪ್ರಾಥಮಿಕ ಮಾಹಿತಿಯ ಪ್ರಕಾರ, ಬಸ್ ಕಾನ್ಪುರದಿಂದ ಇಂದೋರ್‌ಗೆ ಪ್ರಯಾಣಿಸುತ್ತಿತ್ತು. ಬಿಯೋರಾ ಬಳಿಯ ಸೇತುವೆಯ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಈ ಭೀಕರ ಅಪಘಾತ ಸಂಭವಿಸಿದೆ. ಬಸ್‌ನಿಂದ ಬಿದ್ದ ಹಲವಾರು ಪ್ರಯಾಣಿಕರ ಶವಗಳು ಸೇತುವೆಯ ಕೆಳಗೆ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಗಾಯಗೊಂಡ ನಾಲ್ವರ ಸ್ಥಿತಿ ಗಂಭೀರ: ಗಾಯಗೊಂಡ 11 ಪ್ರಯಾಣಿಕರನ್ನು ಮಧ್ಯಪ್ರದೇಶದ ಬಿಯೋರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಪ್ರಯಾಣಿಕರನ್ನು ಸ್ಥಳೀಯರು ಮತ್ತು ಪೊಲೀಸರ ಸಹಾಯದಿಂದ ರಕ್ಷಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯ ಬಂಧನಕ್ಕೆ ಹೊರಟಿದ್ದ ಇನ್ಸ್‌ಪೆಕ್ಟರ್: ಘಟನೆ ಬಗ್ಗೆ ಮಾಹಿತಿ ನೀಡಿದ ರಾಜ್‌ಗಢ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಟೋಲಾನಿ, "ಪ್ರಾಥಮಿಕ ತನಿಖೆ ಪ್ರಕಾರ ಅತಿವೇಗವೇ ಘಟನೆಗೆ ಕಾರಣ ಎಂದು ತೋರುತ್ತದೆ. ಬಸ್ ಸೇತುವೆಯ ಗೋಡೆಗೆ ಡಿಕ್ಕಿ ಹೊಡೆದ ಸ್ಥಳದಲ್ಲಿ ತಿರುವು ಇದೆ. ಘಟನೆಯಲ್ಲಿ ಬೆಂಗಳೂರು ಸೈಬರ್ ಸೆಲ್‌ನಲ್ಲಿ ಸಬ್ - ಇನ್ಸ್‌ಪೆಕ್ಟರ್ ರವಿ ಕೆ.ಬಿ. ಅವರೂ ಸಹ ಪ್ರಾಣ ಕಳೆದುಕೊಂಡಿದ್ದಾರೆ. ಅವರು ಪ್ರಕರಣವೊಂದರ ಆರೋಪಿಯನ್ನು ಬಂಧಿಸಲು ಇಲ್ಲಿಗೆ ಬಂದಿದ್ದರು. ರವಿ ಅವರ ತಂಡದ ಸಿಬ್ಬಂದಿಯಾದ ವಿಶ್ವನಾಥ್ ಮತ್ತು ರಮೇಶ್ ಎಂಬವರೂ ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ'' ಎಂದು ತಿಳಿಸಿದ್ದಾರೆ.
ಘಟನೆಯ ನಂತರ ಸಚಿವ ನಾರಾಯಣ್ ಸಿಂಗ್ ಪನ್ವಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿದರು. "ಸೇತುವೆಯ ತಿರುವಿಗೆ ಸಂಬಂಧಿಸಿದ ಸಮಸ್ಯೆ ಬಗ್ಗೆ ನಾವು ತನಿಖೆ ಮಾಡುತ್ತೇವೆ. ಸ್ಪೀಡ್ ಬ್ರೇಕರ್‌ಗಳ ಅಳವಡಿಕೆಯ ಬಗ್ಗೆ ಚರ್ಚಿಸುತ್ತೇವೆ. ಈ ಬಗ್ಗೆ ತನಿಖೆ ನಡೆಸಲಾಗುವುದು'' ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ನೇಪಾಳ ಪ್ರವಾಹ: ಪ್ರವಾಸ ಹೋಗಿ ಸಂಪರ್ಕ ಕಳೆದುಕೊಂಡ ಧಾರವಾಡಿಗ, ಆತಂಕದಲ್ಲಿ ಪೋಷಕರು

