ETV Bharat / bharat

ತಿರುಮಲ ರಸ್ತೆಯಲ್ಲಿ ಬಿದ್ದಿದ್ದ ವಧುವಿಗೆ ಸೇರಿದ ಚಿನ್ನಾಭರಣ, ನಗದು ಹಿಂತಿರುಗಿಸಿದ ಅಪರಿಚಿತ!: ಅವುಗಳ ಮೌಲ್ಯ ಎಷ್ಟು ಗೊತ್ತಾ?

ತಿರುಮಲ ದೇವಸ್ಥಾನದ ರಸ್ತೆಯಲ್ಲಿ ಅಚಾನಕ್ಕಾಗಿ ಬಿದ್ದಿದ್ದ ವಧುವಿಗೆ ಸೇರಿದ 61 ಗ್ರಾಂ ಚಿನ್ನ, ₹2 ಲಕ್ಷ ನಗದು, ₹10 ಲಕ್ಷದ ಆಸ್ತಿ ದಾಖಲೆಗಳನ್ನು ಅಪರಿಚಿತ ವ್ಯಕ್ತಿಯೊಬ್ಬರು ಹಿಂತಿರುಗಿಸಿದ ಅಚ್ಚರಿಯ ಘಟನೆ ನಡೆದಿದೆ.

BAG DROPPED ON GHAT ROAD
ಮರಳಿ ಸಿಕ್ಕ ಹಣ, ಚಿನ್ನ, ಆಸ್ತಿ ದಾಖಲೆಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. (ETV Bharat)
author img

By ETV Bharat Karnataka Team

Published : August 29, 2026 at 1:43 PM IST

2 Min Read
Choose ETV Bharat

ತಿರುಮಲ (ಆಂಧ್ರಪ್ರದೇಶ): ವಿಶ್ವಖ್ಯಾತಿಯ ತಿರುಮಲದಲ್ಲಿ ಶುಕ್ರವಾರ ಕುತೂಹಲಕಾರಿ ಘಟನೆಯೊಂದು ನಡೆದಿದೆ. ವಿವಾಹ ನಿಶ್ಚಯವಾಗಿದ್ದ ಕುಟುಂಬವೊಂದು ತಿರುಮಲ ದೇವಸ್ಥಾನಕ್ಕೆ ಹೊರಡುವಾಗ ಘಾಟ್​ನಲ್ಲಿ ವಧುವಿಗೆ ಸೇರಿದ ಚಿನ್ನಾಭರಣ, ನಗದು, ಆಸ್ತಿ ದಾಖಲೆಗಳನ್ನು ಕಳೆದುಕೊಂಡಿತ್ತು. ಇದನ್ನು ವ್ಯಕ್ತಿಯೊಬ್ಬರು ವಾಪಸ್​ ತಂದುಕೊಟ್ಟಿದ್ದಾರೆ. ವಿಶೇಷವೆಂದರೆ, ಅವರು ಯಾವುದೇ ಮಾಹಿತಿಯನ್ನು ನೀಡಿಲ್ಲ.

ಚಿನ್ನಾಭರಣ, ದೊಡ್ಡ ಮೊತ್ತದ ನಗದು, ಆಸ್ತಿ ಪತ್ರ ಸಿಕ್ಕರೂ ಅದರಲ್ಲಿ ಒಂದು ರೂಪಾಯಿಯನ್ನೂ ತೆಗೆದುಕೊಳ್ಳದೇ ನಿಸ್ವಾರ್ಥದಿಂದ ಅದನ್ನು ತಿರುಮಲದ ಕಂಟ್ರೋಲ್​ ರೂಮ್​ಗೆ ತಲುಪಿಸಿ ಔದಾರ್ಯ ಮೆರೆದಿದ್ದಾರೆ. ಇತ್ತ, ಕಳೆದುಕೊಂಡ ಕುಟುಂಬವು ಚಿನ್ನ, ಹಣ ಮರಳಿಸಿದ ವ್ಯಕ್ತಿಗಾಗಿ ಹುಡುಕಾಡಿದರೂ ಸಿಕ್ಕಿಲ್ಲ.

ಘಟನೆಯ ವಿವರ: ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಸತ್ತೇನಪಲ್ಲಿಯ ಲಕ್ಷ್ಮೀ ನಾರಾಯಣ ಮತ್ತು ಶೈಲಜಾ ಎಂಬ ವಧು - ವರರು ಶುಕ್ರವಾರ ಸಂಜೆ ತಿರುಮಲದ ಕಲ್ಯಾಣ ಮಂಟಪದಲ್ಲಿ ವಿವಾಹವಾದರು. ಇದಕ್ಕೂ ಮೊದಲು, ಎರಡೂ ಕುಟುಂಬಗಳ ಸದಸ್ಯರು ಮದುವೆಯಲ್ಲಿ ಭಾಗವಹಿಸಲು ಮುಂಜಾನೆ ಎರಡು ವಾಹನಗಳಲ್ಲಿ ತಿರುಮಲಕ್ಕೆ ಆಗಮಿಸಿದ್ದಾರೆ.

ಅಲಿಪಿರಿ ಚೆಕ್ ಪೋಸ್ಟ್‌ ದಾಟಿ ಬಳಿಕ ವಾಹನದಲ್ಲಿ ಇರಿಸಲಾಗಿದ್ದ ಆಭರಣ, ನಗದು ಮತ್ತು ಆಸ್ತಿ ದಾಖಲೆಗಳುಳ್ಳ ಚೀಲವು ಘಾಟ್ ರಸ್ತೆಯಲ್ಲಿ ಬಿದ್ದಿದೆ. ಇದು ಕುಟುಂಬಸ್ಥರ ಗಮನಕ್ಕೆ ಬಂದಿಲ್ಲ. ತಿರುಮಲ ದೇವಸ್ಥಾನ ತಲುಪಿದ ಬಳಿಕ ಆಭರಣ, ಹಣದ ಚೀಲ ನಾಪತ್ತೆಯಾಗಿದ್ದು ಗೊತ್ತಾಗಿದೆ. ಎಷ್ಟೇ ಹುಡುಕಾಡಿದರೂ ಸಿಗದಿದ್ದಾಗ, ಎರಡೂ ಕುಟುಂಬಗಳ ಸದಸ್ಯರು ತಿರುಮಲದಲ್ಲಿರುವ ಪೊಲೀಸ್ ಕಮಾಂಡ್ ಕಂಟ್ರೋಲ್ ಸೆಂಟರ್‌ಗೆ ದೂರು ನೀಡಿದ್ದಾರೆ.

ಟೋಲ್​ಗೇಟ್ ಸಿಬ್ಬಂದಿಗೆ ಚೀಲ ತಲುಪಿಸಿದ ಅಪರಿಚಿತ: ಇತ್ತ, ಅದೇ ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಬಿದ್ದಿದ್ದ ಬ್ಯಾಗ್ ಅನ್ನು ಗಮನಿಸಿದ್ದಾರೆ. ಅದನ್ನು ತೆಗೆದುಕೊಂಡು ತಿರುಮಲದ ಜಿಎನ್‌ಸಿ ಟೋಲ್ ಗೇಟ್‌ನಲ್ಲಿ ಕರ್ತವ್ಯದಲ್ಲಿದ್ದ ಗೃಹರಕ್ಷಕ ದಳದ ರೆಡ್ಡಪ್ಪ ರಾವ್ ಎಂಬವರಿಗೆ ಹಸ್ತಾಂತರಿಸಿ ತಮ್ಮ ಯಾವುದೇ ಮಾಹಿತಿಯನ್ನು ನೀಡದೇ ಹೊರಟು ಹೋಗಿದ್ದಾರೆ.

ಪೊಲೀಸ್ ಕಮಾಂಡ್ ಕಂಟ್ರೋಲ್ ಸೆಂಟರ್‌ ಸಿಬ್ಬಂದಿ ಎಲ್ಲೆಡೆ ಮಾಹಿತಿ ರವಾನಿಸಿ ಹಣ ಮತ್ತು ಚಿನ್ನ ಇರುವ ಚೀಲದ ಬಗ್ಗೆ ಮಾಹಿತಿ ಕೋರಿದ್ದಾರೆ. ಈ ವೇಳೆ ಟೋಲ್​ ಗೇಟ್​ ಸಿಬ್ಬಂದಿ ತಮಗೆ ಅಂಥದ್ದೊಂದು ಚೀಲವನ್ನು ವ್ಯಕ್ತಿಯೊಬ್ಬರು ತಂದುಕೊಟ್ಟ ಬಗ್ಗೆ ತಿಳಿಸಿದ್ದಾರೆ. ಅಧಿಕಾರಿಗಳು ಬ್ಯಾಗ್‌ನಲ್ಲಿರುವ ವಸ್ತುಗಳ ವಿವರಗಳನ್ನು ಕುಟುಂಬದವರಿಗೆ ತಿಳಿಸಿದ್ದಾರೆ.

ಬ್ಯಾಗ್​​ನಲ್ಲಿರುವ ವಸ್ತುಗಳು ತಮ್ಮದೇ ಎಂದು ಕುಟುಂಬಸ್ಥರು ದೃಢಪಡಿಸಿದ ಬಳಿಕ, ಟಿಟಿಡಿ ಎವಿಎಸ್‌ಒ ಕೃಷ್ಣಯ್ಯ ಅವರ ಸಮ್ಮುಖದಲ್ಲಿ ಅದನ್ನು ವಧುವಿನ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಬ್ಯಾಗ್​​ನಲ್ಲಿ ಏನೇನಿತ್ತು?: ಆ ಬ್ಯಾಗ್‌ನಲ್ಲಿ ವಧುವಿಗೆ ಸೇರಿದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ 61 ಗ್ರಾಂ ಚಿನ್ನಾಭರಣಗಳು, 2,02,840 ರೂಪಾಯಿ ನಗದು ಮತ್ತು 10 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ದಾಖಲೆಗಳು ಇದ್ದವು.

ಟಿಟಿಡಿ ವಿಜಿಲೆನ್ಸ್​ ಇಲಾಖೆ ಮತ್ತು ವಧುವಿನ ಕುಟುಂಬವು ಆ ಅಪರಿಚಿತ ವ್ಯಕ್ತಿಗಾಗಿ ಇಡೀ ದಿನ ಹುಡುಕಾಡಿದರೂ ಪತ್ತೆಯಾಗಿಲ್ಲ. ಇಷ್ಟು ದೊಡ್ಡ ಮೊತ್ತ, ಚಿನ್ನ ಸಿಕ್ಕರೂ ಅದರಲ್ಲಿ ಒಂದು ರೂಪಾಯಿಯನ್ನು ಮುಟ್ಟದೇ ವಾಪಸ್​ ಮರಳಿಸಿದ್ದು ಅಚ್ಚರಿ ಮೂಡಿಸಿದೆ.

ಇವುಗಳನ್ನೂ ಓದಿ: