ವಯಸ್ಸು ಜಸ್ಟ್ 75, ಪಡೆದಿದ್ದು PhD ಯೊಂದಿಗೆ 32 ಡಿಗ್ರಿ.. ಇಷ್ಟಿದ್ದರೂ ನಿಲ್ಲದ ಓದಿನ ಓಟ: ಇಗ್ನೋ 'ಆಚಾರ್ಯ' ಪರೀಕ್ಷೆ ಬರೆದು ಹುಮ್ಮಸ್ಸು!
ಇಗ್ನೋದ ಹಮೀರ್‌ಪುರ ಅಧ್ಯಯನ ಕೇಂದ್ರಕ್ಕೆ ಅತ್ಯಂತ ಹಿರಿಯ ಪರೀಕ್ಷಾರ್ಥಿ ಮಿಲ್ಖಿ ರಾಮ್ ಆಗಮಿಸಿದರು. ಈ ವೇಳೆ ಅವರಿಗೆ ಹೂವುಗಳನ್ನು ನೀಡಿ ಭರ್ಜರಿ ಸ್ವಾಗತಕೋರಲಾಯಿತು. ಬನ್ನಿ ಇವರ ನಿಲ್ಲದ ಓದಿನ ಹವ್ಯಾಸದ ಬಗ್ಗೆ ತಿಳಿಯೋಣ

Published : July 3, 2026 at 7:34 PM IST
ಹಮೀರ್‌ಪುರ: ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ 75 ವರ್ಷದ ವ್ಯಕ್ತಿಯೊಬ್ಬರಿದ್ದಾರೆ. ಇವರಿಗೆ ಓದುವುದೆಂದರೆ ಅದೇನೋ ಹುಮ್ಮಸ್ಸು. ಹಮೀರ್‌ಪುರದಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ -ಇಗ್ನೋ ಪರೀಕ್ಷೆಗೆ ಹಾಜರಾಗಿ ದೇಶಾದ್ಯಂತ ಗಮನ ಸೆಳೆಯುತ್ತಿದ್ದಾರೆ.
ಈ ವಯಸ್ಸಲ್ಲಿ ಆರಾಮಾಗಿ ಇರಬೇಕು ಎಂದು ಬಯಸುವ ಎಷ್ಟೋ ಹಿರಿಯ ಜೀವಗಳ ನಡುವೆ ಇವರು ವಿಭಿನ್ನವಾಗಿ ನಿಲ್ಲುತ್ತಾರೆ. ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವ ಮತ್ತು ಪ್ರೇರೇಪಿಸುವ ಇವರು, ಪರೀಕ್ಷಾ ಹಾಲ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ.
ಅಂದ ಹಾಗೆ ಇವರು ಕಾಂಗ್ರಾದ ಗಂದರ್ ಗ್ರಾಮದ ನಿವಾಸಿ ಮಿಲ್ಖಿ ರಾಮ್. ವಯಸ್ಸು ಕೇವಲ75. ಪಿಎಚ್‌ಡಿ ಸೇರಿದಂತೆ 32 ಶೈಕ್ಷಣಿಕ ಪದವಿಗಳನ್ನು ಪಡೆದುಕೊಂಡಿದ್ದಾರೆ. ಇದೇ ಮಂಗಳವಾರ ಅವರು ಇಗ್ನೋದ ಹಮೀರ್‌ಪುರ ಅಧ್ಯಯನ ಕೇಂದ್ರದಲ್ಲಿ ಸಂಸ್ಕೃತ ಪರೀಕ್ಷೆಗೆ ಹಾಜರಾಗಿ ಎಲ್ಲರನ್ನು ನಿಬ್ಬೆರಗುಗೊಳಿಸಿದ್ದಾರೆ. ಇಗ್ನೋದಲ್ಲಿ ಸಂಸ್ಕೃತ ಎಂಎ ಮಾಡುತ್ತಿದ್ದಾರೆ. ಇಲ್ಲಿ ಮಾಡುವ ಸಂಸ್ಕೃತ ಸ್ನಾತಕೋತ್ತರ ಅಧ್ಯಯನವನ್ನು 'ಆಚಾರ್ಯ' ಪದವಿಗೆ ಸಮಾನವೆಂದು ಗುರುತಿಸಲಾಗಿದೆ. ಈ ಪರೀಕ್ಷಾ ಕೇಂದ್ರದಲ್ಲಿ ಇವರು ಅತ್ಯಂತ ಹಿರಿಯ ಪರೀಕ್ಷಾರ್ಥಿ ಎಂಬುದು ಮತ್ತೊಂದು ವಿಶೇಷ.

ಹೀಗಿದೆ ಮಿಲ್ಖಿ ರಾಮ್ ಅವರ ಇತಿಹಾಸ: ಫೆಬ್ರವರಿ 10, 1952 ರಂದು ಜನಿಸಿದ ರಾಮ್, 1972 ರಲ್ಲಿ ಅರಣ್ಯ ಇಲಾಖೆಗೆ ಸೇರಿದ ನಂತರ 1976 ರಲ್ಲಿ ಧರ್ಮಶಾಲಾದ ಖಾಸಗಿ ಕಾಲೇಜಿನಿಂದ ಪದವಿ ಪಡೆದರು. ಹೆಚ್ಚುತ್ತಿರುವ ಉದ್ಯೋಗ ಒತ್ತಡ ಮತ್ತು ಕುಟುಂಬದ ಜವಾಬ್ದಾರಿಗಳ ಹೊರತಾಗಿಯೂ ಅವರು ಎಂದಿಗೂ ತಮ್ಮ ಅಧ್ಯಯನವನ್ನು ತ್ಯಜಿಸಲಿಲ್ಲ. 2010 ರಲ್ಲಿ ಗ್ರೇಡ್-1 ಹುದ್ದೆಯಿಂದ ನಿವೃತ್ತರಾಗುವ ಹೊತ್ತಿಗೆ ರಾಮ್ 26 ಪದವಿಗಳನ್ನು ಪಡೆದುಕೊಂಡಿದ್ದರು. ಮುಂದೆ ಆ ಸಂಖ್ಯೆಗಳನ್ನು ಅವರು 32ಕ್ಕೆ ಏರಿಸಿಕೊಂಡಿದ್ದಾರೆ.
ಅವರ ಶೈಕ್ಷಣಿಕ ಸಾಧನೆಗಳ ಪಟ್ಟಿಯಲ್ಲಿ ಬಿಇಡಿ, ಎಲ್‌ಎಲ್‌ಬಿ, ಪತ್ರಿಕೋದ್ಯಮ (ಜೆಎಂಸಿ), ಬಿಎ (ಸಂಸ್ಕೃತ), ಎಂಎ (ಹಿಂದಿ, ರಾಜಕೀಯ ವಿಜ್ಞಾನ, ಸಮಾಜಶಾಸ್ತ್ರ, ಇತಿಹಾಸ, ಇಂಗ್ಲಿಷ್, ಅರ್ಥಶಾಸ್ತ್ರ), ಎಂಬಿಎ, ಎಂಫಿಲ್ ಮತ್ತು ಹಿಂದಿಯಲ್ಲಿ ಪಿಎಚ್‌ಡಿ ಕೂಡಾ ಸೇರಿದೆ.
ಶಿಕ್ಷಣವು ಸಮಾಜ ಮತ್ತು ವ್ಯಕ್ತಿಯ ಅಭಿವೃದ್ಧಿಗೆ ಅತ್ಯಂತ ಶಕ್ತಿಶಾಲಿ ಮಾಧ್ಯಮ ಎಂದು ರಾಮ್ ನಂಬುತ್ತಾರೆ. ಮತ್ತೊಂದೆಡೆ ಅವರ ಪತ್ನಿ ವಿದ್ಯಾ ದೇವಿ ರಾಮ್ ಅವರಿಗೆ ಬೆಂಗಾವಲಾಗಿ ನಿಂತಿದ್ದಾರೆ. ತನ್ನ ದೀರ್ಘ ಶೈಕ್ಷಣಿಕ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಮಿಲ್ಖಿ ರಾಮ್ ಸಂತಸ ವ್ಯಕ್ತಪಡಿಸಿದ್ದಾರೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ತನ್ನ ಅತ್ಯಂತ ದೊಡ್ಡ ಸ್ಫೂರ್ತಿ ಎಂದು ಪರಿಗಣಿಸಿದ್ದಾರೆ.

ವಿದ್ಯಾ ದೇವಿ ಅರಣ್ಯ ಇಲಾಖೆಯ ನಿವೃತ್ತ ಗ್ರೇಡ್-1 ಅಧಿಕಾರಿಯಾಗಿದ್ದು, ಅವರ ಮಗ ರಾಕೇಶ್ ಕುಮಾರ್ ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ಐಆರ್‌ಟಿಎಸ್ ಅಧಿಕಾರಿಯಾಗಿದ್ದಾರೆ. ನನ್ನ ಕುಟುಂಬದ ಬೆಂಬಲ, ವಿಶೇಷವಾಗಿ ನನ್ನ ಹೆಂಡತಿ, ಮಗ ಮತ್ತು ಸೊಸೆ ನಿರಂತರವಾಗಿ ನನಗೆ ಮುಂದುವರಿಯಲು ಸ್ಫೂರ್ತಿ ನೀಡಿದ್ದಾರೆ ಅಂತಾ ರಾಮ್.
ಆಸಕ್ತಿ ಇದ್ದರೆ ವಯಸ್ಸು ಎಂದಿಗೂ ಅಡ್ಡಿಬರಲ್ಲ: ಕಲಿಯುವ ಬಯಕೆ ಜೀವಂತವಾಗಿದ್ದರೆ, ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ. ಜ್ಞಾನವು ಎಂದಿಗೂ ಕಸಿದುಕೊಳ್ಳಲಾಗದ ಆಸ್ತಿಯಾಗಿರುವುದರಿಂದ ಯುವಕರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ರಾಮ್ ಸಲಹೆ ನೀಡಿದ್ಧಾರೆ.
ಇಗ್ನೋದ ಹಮೀರ್‌ಪುರ ಅಧ್ಯಯನ ಕೇಂದ್ರದ ಉಸ್ತುವಾರಿ ಪ್ರೊ. ಸಂಜಯ್ ಕುಮಾರ್ ಮಾತನಾಡಿ, ಮಿಲ್ಖಿ ರಾಮ್ ಮಂಗಳವಾರ ಆಚಾರ್ಯ ಪರೀಕ್ಷೆಯನ್ನು ತೆಗೆದುಕೊಳ್ಳಲು ನಮ್ಮ ಕೇಂದ್ರಕ್ಕೆ ಆಗಮಿಸಿದ್ದರು ಎಂದು ನೆನಪಿಸಿಕೊಂಡರು.
75 ವರ್ಷ ವಯಸ್ಸಿನ ಅವರು ಕೇಂದ್ರದಲ್ಲಿ ಅತ್ಯಂತ ಹಿರಿಯ ಪರೀಕ್ಷಾರ್ಥಿ. ಅವರ ಉತ್ಸಾಹ ಮತ್ತು ಸಮರ್ಪಣೆಯನ್ನು ಗುರುತಿಸಿ, ಅವರಿಗೆ ಹೂ ಗುಚ್ಛ ನೀಡಿ ಸ್ವಾಗತಿಸಲಾಯಿತು. ರಾಮ್ ಅವರ ಯಶಸ್ಸನ್ನು ವಯಸ್ಸಿನಿಂದ ನಿರ್ಧರಿಸುವುದಿಲ್ಲ, ಕಲಿಕೆಯ ಮೇಲಿನ ಉತ್ಸಾಹ, ಶಿಸ್ತು ಮತ್ತು ದೃಢಸಂಕಲ್ಪದಿಂದ ನಿರ್ಧರಿಸಲಾಗುತ್ತದೆ ಎಂದು ಸಂಜಯ್ ಕುಮಾರ್ ಹೇಳಿದರು.
ಅನೇಕ ಯುವಕರು ಸಣ್ಣಪುಟ್ಟ ಸವಾಲುಗಳಿಂದಾಗಿ ತಮ್ಮ ಅಧ್ಯಯನ ಅರ್ಧಕ್ಕೆ ನಿಲ್ಲಿಸಿ ಬಿಡುತ್ತಾರೆ. ಇಂತಹ ಸನ್ನಿವೇಶ ಇರುವಲ್ಲಿ ರಾಮ್ ಸಮಾಜಕ್ಕೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರೊ ಸಂಜಯ್ ಕುಮಾರ್ ಹೇಳಿದರು.
ಇದನ್ನು ಓದಿ:
ರಾಮ ಮಂದಿರ ದೇಣಿಗೆ ಕಳ್ಳತನದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು: RSS ಪ್ರಧಾನ ಕಾರ್ಯದರ್ಶಿ ಹೊಸಬಾಳೆ ಆಗ್ರಹ
ಕರೂರ್ ಕಾಲ್ತುಳಿತ ಪ್ರಕರಣ: ತಮಿಳುನಾಡು ಸಿಎಂ ಮತ್ತು ಇತರರ ಹೇಳಿಕೆಗಳ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋದ ಡಿಎಂಕೆ

