ETV Bharat / bharat

ಸಂಜೆ 7 ಗಂಟೆಯಾದರೆ ಮೊಳಗುವ ಸೈರನ್​: ಮೊಬೈಲ್​, ಟೀವಿ ಬಿಟ್ಟು ಓದುವ ಮಕ್ಕಳು - ಇದು ಡಿಜಿಟಲ್ ಡಿಟಾಕ್ಸ್​ ಎಫೆಕ್ಟ್​​

ಡಿಜಿಟಲ್​ ಸಾಮಗ್ರಿಗಳನ್ನು ಬಿಟ್ಟು ಇತರ ಚಟುವಟಿಕೆಗಳಲ್ಲಿ ತೊಡಗುವ 'ಡಿಜಿಟಲ್​ ಡಿಟಾಕ್ಸ್​' ಪ್ರಯೋಗವನ್ನು ಮಹಾರಾಷ್ಟ್ರದ ಬೀಡ್​ ಜಿಲ್ಲೆಯ ಗ್ರಾಮವೊಂದು ಆರಂಭಿಸಿದೆ.

DIGITAL DETOX
ಬೀಡ್​ ಜಿಲ್ಲೆಯ ನಾಗಾಪುರ ಗ್ರಾಮ (ETV Bharat)
author img

By ETV Bharat Karnataka Team

Published : January 6, 2026 at 8:24 PM IST

2 Min Read
Choose ETV Bharat

ಬೀಡ್ (ಮಹಾರಾಷ್ಟ್ರ): ಸಂಜೆ 7 ಗಂಟೆ ಬಡಿದರೆ ಸಾಕು, ಇಲ್ಲಿ ಸೈರನ್ ಮೊಳಗುತ್ತದೆ. ಎಲ್ಲರ ಮನೆಯ ಗೋಡೆಗೆ ನೇತಾಕಿದ ಟೀವಿ, ಕೈಯಲ್ಲಿರುವ ಮೊಬೈಲ್​, ಲ್ಯಾಪ್​ ಟಾಪ್​ ಸೇರಿದಂತೆ ಎಲ್ಲ ಗ್ಯಾಡ್ಜೆಟ್​ಗಳು ರಾತ್ರಿ 9 ರವರೆಗೆ ಬಂದ್​ ಆಗುತ್ತವೆ. ಮಕ್ಕಳು ಓದಲು ಆರಂಭಿಸಿದರೆ, ಪೋಷಕರು ಅವರಿಗೆ ನೆರವಾಗುತ್ತಾರೆ. ಇನ್ನು ಕೆಲವರು ಪರಸ್ಪರ ಸಂವಾದದಲ್ಲಿ ತೊಡಗುತ್ತಾರೆ.

ಮಹಾರಾಷ್ಟ್ರ ಬೀಡ್​​ ಜಿಲ್ಲೆಯ ಪರಾಲಿ ತಾಲೂಕಿನ ನಾಗಾಪುರ ಗ್ರಾಮವು 'ಡಿಜಿಟಲ್​ ಡಿಟಾಕ್ಸ್​' ಅನ್ನು ಪ್ರಾರಂಭಿಸಿದೆ. ಅಂದರೆ ಡಿಜಿಟಲ್​ ಸಾಮಗ್ರಿಗಳನ್ನು ಬಿಟ್ಟು ಅಧ್ಯಯನದಲ್ಲಿ ತೊಡಗಿಸಿಕೊಳ್ಳುವುದು. ಈ ಮೂಲಕ ಸ್ಕ್ರೀನ್​ ಟೈಮ್​ ಕಡಿಮೆ ಮಾಡಿ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು.

ಸಾಂಗ್ಲಿ ಬೆಳಗಾವಿಯಲ್ಲಿ ಪ್ರಯೋಗ: ಈ ಪ್ರಯೋಗವನ್ನು ಮೊದಲು ಸಾಂಗ್ಲಿ ಜಿಲ್ಲೆಯ ವಡ್ಗಾಂವ್‌ ನಿವಾಸಿಗಳು ಮೂರು ವರ್ಷಗಳ ಹಿಂದೆಯೇ ಡಿಜಿಟಲ್ ಡಿಟಾಕ್ಸ್ ಅನ್ನು ಪ್ರಾರಂಭಿಸಿದ್ದರು. ಬಳಿಕ ಕರ್ನಾಟಕದ ಬೆಳಗಾವಿ ಜಿಲ್ಲೆಯ ಹಳಗಾ ಗ್ರಾಮವೂ ಇಂಥದ್ದೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದ ಪ್ರೇರೇಪಿತವಾದ ಇಲ್ಲಿನ ಗ್ರಾಮ ಪಂಚಾಯಿತಿ, ಮಕ್ಕಳ ಓದು ಮತ್ತು ಹವ್ಯಾಸವನ್ನು ಬದಲಿಸಲು ಡಿಜಿಟಲ್​ ಡಿಟಾಕ್ಸ್​ ನಿಯಮ ಜಾರಿ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಗ್ರಾಮ ಪಂಚಾಯತಿಯ ಸರಪಂಚ್​ ಸಂತೋಷ್​ ಸೋಲಂಕಿ ಅವರು, "ಇದು ಸಾಮಾಜಿಕ ಮಾಧ್ಯಮದ ಯುಗ. ಫೋನ್ ಮತ್ತು ಟಿವಿಯಿಂದ ದೂರವುಳಿಯುವುದು ಕಷ್ಟಕರ. ಸಾಂಗ್ಲಿ ಜಿಲ್ಲೆಯ ಗ್ರಾಮದಲ್ಲಿ ಮಾಡಲಾದ ಪ್ರಯೋಗವನ್ನು ನಮ್ಮ ಊರಲ್ಲಿ ಕಾರ್ಯಗತಗೊಳಿಸಲು ಯೋಜಿಸಿದೆವು. ಗ್ರಾಮಸ್ಥರೊಂದಿಗೆ ಈ ಬಗ್ಗೆ ಚರ್ಚಿಸಿ, ಒಪ್ಪಿಗೆ ಪಡೆದುಕೊಂಡು ಇದನ್ನು ಜಾರಿಗೆ ತಂದೆವು" ಎಂದು ತಿಳಿಸಿದರು.

ನಿಗಾ ಇಡಲು ಗಸ್ತು ತಂಡ: "ಗ್ರಾಮದ ಮುಖ್ಯಸ್ಥರ ನೇತೃತ್ವದಲ್ಲಿ ಗಸ್ತು ತಂಡವನ್ನು ರಚಿಸಲಾಗಿದೆ. ಊರಿನ ವಿದ್ಯಾವಂತ ಯುವಕರು ಮತ್ತು ಶಿಕ್ಷಕರು ಇದರಲ್ಲಿದ್ದಾರೆ. ಈ ತಂಡವು ಸಂಜೆ7 ರಿಂದ 9 ನಡುವೆ ಮನೆ ಮನೆಗೆ ತೆರಳಿ ವಿದ್ಯಾರ್ಥಿಗಳ ಅಭ್ಯಾಸದ ಮೇಲೆ ನಿಗಾ ಇಡುತ್ತದೆ. ಮಕ್ಕಳು ಓದಿನಲ್ಲಿ ತೊಡಗಿದ್ದಾರೆಯೇ ಎಂಬುದನ್ನು ದೃಢೀಕರಿಸಲು ಪ್ರಶ್ನೆಗಳನ್ನು ಕೇಳುವ ಮೂಲಕ ಪರಿಶೀಲನೆ ನಡೆಸುತ್ತಾರೆ" ಎಂದು ವಿವರಿಸಿದರು.

"ಮಕ್ಕಳು ಮನೆಗೆಲಸ ಮುಗಿಸಿದ್ದಾರೆಯೇ ಇಲ್ಲವೇ ಎಂಬುದನ್ನು ಪದೇ ಪದೆ ಪರಿಶೀಲಿಸುವ ತಾಪತ್ರಯವೂ ಇದರಿಂದ ತಪ್ಪುತ್ತದೆ. ಮಕ್ಕಳು ತಾವಾಗಿಯೇ ಈ ಅವಧಿಯಲ್ಲಿ ಓದಿನಲ್ಲಿ ತೊಡಗುವುದರಿಂದ ಅವರಲ್ಲಿ ಶಿಸ್ತು ಮೂಡುತ್ತಿದೆ" ಎಂದು ಅವರು ಹೇಳಿದರು.

'ಸಮಯ ವ್ಯರ್ಥ ಕಡಿತ': ಗ್ರಾಮದ ನಿವಾಸಿ ಮೋರ್ ಮಾತನಾಡಿ, "ನನ್ನ ಮಗ ಪ್ರತಿದಿನ ಸೈರನ್ ಮೊಳಗುವ ಮೊದಲೇ ಓದಲು ಆರಂಭಿಸಿದ್ದನ್ನು ನಾನು ನೋಡುತ್ತಿದ್ದೇನೆ. ವಿದ್ಯುತ್ ಕಡಿತಗೊಂಡರೂ ಟಾರ್ಚ್​ ಅಥವಾ ಮೇಣದ ಬತ್ತಿಯ ಬೆಳಕಿನಲ್ಲಿ ತಮ್ಮ ಮನೆಗೆಲಸವನ್ನು ಶ್ರದ್ಧೆಯಿಂದ ಮಾಡುತ್ತಾರೆ. ಮೊದಲು ಮೊಬೈಲ್​ ಹಿಡಿದು ವೃಥಾ ಸಮಯ ವ್ಯರ್ಥ ಮಾಡುತ್ತಿದ್ದರು. ಈಗ ಅದು ಬದಲಾಗಿದೆ" ಎಂದು ಸಂತೋಷ ವ್ಯಕ್ತಪಡಿಸಿದರು.

ಮತ್ತೊಬ್ಬ ನಿವಾಸಿ ಮನೀಶ್ ಸೌಂದಡೆ ಹೇಳುವಂತೆ, "ನಮ್ಮ ಮಕ್ಕಳು ಈಗ ಓದಿನಲ್ಲಿ ಹೆಚ್ಚು ಗಮನಹರಿಸುತ್ತಿದ್ದಾರೆ. ಶಿಕ್ಷಕರು ನೀಡಿದ ಮನೆಕೆಲಸವನ್ನು ಮುಗಿಸಿದ ಬಳಿಕ ಮೊಬೈಲ್ ನೋಡುವ ಬದಲು ಏನನ್ನಾದರೂ ಚಿತ್ರಿಸುತ್ತಾರೆ. ಇತರ ಪುಸ್ತಕಗಳನ್ನು ಓದುತ್ತಾರೆ. ಅವರೊಂದಿಗೆ ನಾವೂ ಕುಳಿತು ಓದಿನಲ್ಲಿ ಸಹಾಯ ಮಾಡುತ್ತೇವೆ" ಎಂದರು.

ಇವುಗಳನ್ನೂ ಓದಿ: