ಅಸ್ಸಾಂ: ಪತ್ನಿ, ಮೂವರು ಮಕ್ಕಳನ್ನು ಕೊಚ್ಚಿ ಕೊಲೆ ಮಾಡಿದ ಶಿಕ್ಷಕ!
ಅಸ್ಸಾಂನಲ್ಲಿ ಶಾಲಾ ಶಿಕ್ಷಕನೊಬ್ಬ ಪತ್ನಿ ಮತ್ತು ಮೂವರು ಮಕ್ಕಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

Published : September 2, 2026 at 3:02 PM IST
ಜೋನೈ (ಅಸ್ಸಾಂ): ಶಿಕ್ಷಕನೊಬ್ಬ ತನ್ನ ಪತ್ನಿ ಹಾಗೂ ಮೂವರು ಮುದ್ದಾದ ಮಕ್ಕಳನ್ನು ಮಚ್ಚಿನಿಂದ ಕಡಿದು ಕೊಂದು ಹಾಕಿದ್ದಾನೆ. ಅಸ್ಸಾಂನ ಧೇಮಾಜಿ ಜಿಲ್ಲೆಯ ಜೋನೈ ಪೊಲೀಸ್ ಠಾಣೆ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಈ ಭೀಕರ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿನುವಾರಾ ಬೇಗಂ (33), ನೈನಾ ಅಖ್ತರ್ (13), ಸಖಿಲ್ ಅಲಿ (8) ಮತ್ತು ರಿಜಿಕಾ ಬೇಗಂ (5) ಕೊಲೆಗೀಡಾದವರು.
ಫಿರೋಜ್ ಅಲಿ ಎಂಬಾತನೇ ಪತ್ನಿ ಹಾಗೂ ಮಕ್ಕಳನ್ನು ಕೊಚ್ಚಿ ಕೊಲೆ ಮಾಡಿದ ವ್ಯಕ್ತಿ. ಆರೋಪಿಯು ಇಲ್ಲಿನ ಗುಮ್ಚುಕ್ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಕೊಲೆ ಆರೋಪ ಪ್ರಕರಣದ ಹಿನ್ನೆಲೆ ಅಲಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸದ್ಯಕ್ಕೆ ಕೊಲೆಗೆ ನಿಖರ ಕಾರಣ ಈವರೆಗೂ ತಿಳಿದು ಬಂದಿಲ್ಲ. ಆದರೆ, ಮಾಸಿಕ 10,000 ರೂ. ಸಂಬಳದಲ್ಲಿ ಕುಟುಂಬದ ಜೀವನ ನಡೆಯುತ್ತಿತ್ತು. ಆರ್ಥಿಕ ಸಂಕಷ್ಟವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ವಿಧಿವಿಜ್ಞಾನ ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ಅವರೊಂದಿಗೆ ಸ್ಥಳೀಯ ಪೊಲೀಸರು ಕೂಡ ಸಹಾಯ ಮಾಡುತ್ತಿದ್ದಾರೆ. ತನಿಖೆಯ ಬಳಿಕವೇ ಕೊಲೆಗೆ ನಿಖರ ತಿಳಿದು ಬರಲಿದೆ ಎಂದು ಜೋನೈ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪತ್ನಿ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟರೆ, ನೀನಾ ಅಖ್ತರ್ ಎಂಬ ಪುತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಮಾಹಿತಿ ಇದೆ. ರಾತ್ರಿ ಎಲ್ಲರೂ ಮಲಗಿದ್ದಾಗ ಈ ಕೊಲೆ ಮಾಡಿರಬಹುದೆಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದ ಆರೋಪಿ ಫಿರೋಜ್ ಅಲಿ ಎರಡನೇ ಮದುವೆಯಾಗಿದ್ದ. ಇವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದು, ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು ಎಂಬ ಮಾಹಿತಿ ಕೂಡ ಲಭ್ಯವಾಗಿದೆ ಎಂದು ಜೋನೈ ಪೊಲೀಸರು ಮಾಹಿತಿ ನೀಡಿದ್ದಾರೆ.
ನಾನು ಅವರಿಗೆ ಸರಿಯಾಗಿ ಊಟ ಕೊಡಲು ಕೂಡ ಸಾಧ್ಯವಾಗುತ್ತಿರಲಿಲ್ಲ, ಆರ್ಥಿಕವಾಗಿ ವಂಚಿತನಾಗಿದ್ದೆ. ತಿಂಗಳಿಗೆ ಬರುವ 10,000 ರೂ.ಗಳಲ್ಲಿ ಕುಟುಂಬ ನಿರ್ವಹಣೆ ಮಾಡಲಾಗುತ್ತಿತ್ತು. ಅವರ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ" ಎಂದು ಫಿರೋಜ್ ಅಲಿ ಹೇಳಿಕೊಂಡಿದ್ದಾನೆ. ಕುಟುಂಬವನ್ನು ಕೊಂದ ನಂತರ ನೀವು ಹೇಗೆ ಒಂಟಿಯಾಗಿ ಬದುಕಲು ಸಾಧ್ಯ ಎಂದು ಕೇಳಿದಾಗ "ನಾನು ಗಲ್ಲಿಗೇರಲು ಬಯಸುತ್ತೇನೆ" ಎಂದಿದ್ದಾನೆ.
ಇದನ್ನೂ ಓದಿ: ನಾಲ್ಕು ತಿಂಗಳ ಅವಳಿ ಮಕ್ಕಳ ಕೊಂದ ಬಳಿಕ ತಾಯಿ ಸಾವಿಗೆ ಯತ್ನ: ಪತ್ನಿ ವಿರುದ್ಧ ಪತಿ ದೂರು

