ETV Bharat / bharat

ಅಸ್ಸಾಂನಲ್ಲಿ ಬೆಳ್ಳಂಬೆಳಗ್ಗೆ 5.1 ತೀವ್ರತೆಯ ಭೂಕಂಪನ; ಚೀನಾ, ಭೂತಾನ್, ಬಾಂಗ್ಲಾದಲ್ಲೂ ಕಂಪಿಸಿದ ಭೂಮಿ

ಭಾರತದ ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಇಂದು ಬೆಳಗ್ಗೆ ಭೂಕಂಪನ ಸಂಭವಿಸಿದೆ. ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : January 5, 2026 at 7:05 AM IST

2 Min Read
Choose ETV Bharat

ಗುವಾಹಟಿ(ಅಸ್ಸಾಂ): ಅಸ್ಸಾಂನ ಮಧ್ಯ ಭಾಗದ ಪ್ರದೇಶಗಳಲ್ಲಿ ಇಂದು (ಸೋಮವಾರ) ಬೆಳಗ್ಗೆ ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದೆ. ಯಾರಿಗೂ ಯಾವುದೇ ಗಾಯ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ.

ಬ್ರಹ್ಮಪುತ್ರ ನದಿಯ ದಕ್ಷಿಣ ದಂಡೆಯಲ್ಲಿರುವ ಮೋರಿಗಾಂವ್ ಜಿಲ್ಲೆಯಲ್ಲಿ ಬೆಳಿಗ್ಗೆ 4.17ಕ್ಕೆ 50 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿತು ಎಂದು

ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ. ಭೂಕಂಪದ ಕೇಂದ್ರಬಿಂದು ಮಧ್ಯ ಅಸ್ಸಾಂನಲ್ಲಿ 26.37 ಉತ್ತರ ಅಕ್ಷಾಂಶ ಮತ್ತು 92.29 ಪೂರ್ವ ರೇಖಾಂಶದಲ್ಲಿದೆ ಎಂದು ಕೇಂದ್ರ ತಿಳಿಸಿದೆ.

ಮೋರಿಗಾಂವ್ ಜಿಲ್ಲೆಯ ನೆರೆಯ ಕಾಮ್ರೂಪ್ ಮೆಟ್ರೋಪಾಲಿಟನ್, ನಾಗಾಂವ್, ಪೂರ್ವ ಕರ್ಬಿ ಆಂಗ್ಲಾಂಗ್, ಪಶ್ಚಿಮ ಕರ್ಬಿ ಆಂಗ್ಲಾಂಗ್, ಹೊಜೈ, ದಿಮಾ ಹಸಾವೊ, ಗೋಲಾಘಾಟ್, ಜೋರ್ಹತ್, ಶಿವಸಾಗರ್, ಚರೈಡಿಯೊ, ಕ್ಯಾಚಾರ್, ಕರೀಮ್‌ಗಂಜ್, ಹೈಲಕಂಡಿ, ಧುಬ್ರಿ, ದಕ್ಷಿಣ ಸಲ್ಮಾರಾ-ಮಂಕಚಾರ್ ಮತ್ತು ಗೋಲ್‌ಪಾರಾ ಜಿಲ್ಲೆಗಳಲ್ಲಿ ಜನರಿಗೆ ಭೂ ಕಂಪಿಸಿದ ಅನುಭವವಾಗಿದೆ.

ದರ್ರಾಂಗ್, ತಮುಲ್‌ಪುರ್, ಸೋನಿತ್‌ಪುರ್, ಕಮ್ರೂಪ್, ಬಿಸ್ವನಾಥ್, ಉದಲ್‌ಗುರಿ, ನಲ್ಬರಿ, ಬಜಾಲಿ, ಬರ್ಪೇಟಾ, ಬಕ್ಸಾ, ಚಿರಾಂಗ್, ಕೊಕ್ರಜಾರ್, ಬೊಂಗೈಗಾಂವ್ ಮತ್ತು ಬ್ರಹ್ಮಪುತ್ರದ ಉತ್ತರ ದಂಡೆಯಲ್ಲಿರುವ ಲಖಿಂಪುರದಲ್ಲೂ ಭೂಮಿ ಕಂಪಿಸಿದೆ.

ಅರುಣಾಚಲ ಪ್ರದೇಶದ ಕೆಲವು ಪ್ರದೇಶಗಳು, ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದ ಹಲವಾರು ಕಡೆಗಳಲ್ಲೂ ಭೂಕಂಪಿಸಿರುವ ಸಾಧ್ಯತೆಗಳಿದ್ದು, ಸದ್ಯಕ್ಕೆ ಅಲ್ಲಿಂದ ವರದಿಯಾಗಿಲ್ಲ.

ನೆರೆ ದೇಶಗಳಾದ ಭೂತಾನ್, ಚೀನಾ ಮತ್ತು ಬಾಂಗ್ಲಾದೇಶದ ಕೆಲವು ಭಾಗಗಳೂ ಸಹ ನಡುಗಿವೆ ಎಂದು ವರದಿಯಾಗಿದೆ.

ಭೂಮಿ ನಡುಗಿದ್ದರಿಂದ ಭಯಗೊಂಡ ಜನರು ಮುಂಜಾನೆಯ ಸಿಹಿ ನಿದ್ರೆಯಿಂದ ಎದ್ದು ತಮ್ಮ ಮನೆಗಳಿಂದ ಸುರಕ್ಷಿತ ಪ್ರದೇಶಗಳತ್ತ ಓಡಿ ಹೋದರು ಎಂದು ವರದಿಯಾಗಿದೆ.

ಭಾರತದ ಈಶಾನ್ಯ ಪ್ರದೇಶಗಳು ಹೆಚ್ಚು ಭೂಕಂಪನ ಸಂಭವಿಸುವ ವಲಯದಲ್ಲಿವೆ.

ಮೆಕ್ಸಿಕೋದಲ್ಲಿ ಭೂಕಂಪನ: ಕೇಂದ್ರ ಮತ್ತು ದಕ್ಷಿಣ ಮೆಕ್ಸಿಕೋದಲ್ಲಿ ಶುಕ್ರವಾರ ಪ್ರಬಲವಾದ ಭೂಕಂಪನ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯೊಂದು ಹಾನಿಗೀಡಾಗಿದ್ದು, ರೋಗಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಮೆಕ್ಸಿಕೋದ ರಾಷ್ಟ್ರೀಯ ಭೂಕಂಪಶಾಸ್ತ್ರ ಸಂಸ್ಥೆಯ ಪ್ರಕಾರ, ರಿಕ್ಟರ್​ ಮಾಪಕದಲ್ಲಿ 6.5ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಅದರ ಕೇಂದ್ರಬಿಂದು ದಕ್ಷಿಣ ರಾಜ್ಯ ಗೆರೆರೊದ ಸ್ಯಾನ್ ಮಾರ್ಕೋಸ್ ಪಟ್ಟಣದ ಬಳಿ ಪೆಸಿಫಿಕ್ ಕರಾವಳಿ ರೆಸಾರ್ಟ್ ಅಕಾಪುಲ್ಕೊ ಬಳಿ ಕಂಡು ಬಂದಿದೆ. ಇದಾದ ಬಳಿಕ 500ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದೆ. ರಾಜ್ಯದ ನಾಗರಿಕ ರಕ್ಷಣಾ ಸಂಸ್ಥೆಯು ಅಕಾಪುಲ್ಕೊ ಸುತ್ತಮುತ್ತ ಮತ್ತು ರಾಜ್ಯದ ಇತರ ಹೆದ್ದಾರಿಗಳಲ್ಲಿ ಹಲವಾರು ಭೂಕುಸಿತ ಸಂಭವಿಸಿದೆ ಎಂದು ವರದಿ ಮಾಡಿದೆ.

ಇದನ್ನೂ ಓದಿ: ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪ: ರಿಕ್ಟರ್​ ಮಾಪಕದಲ್ಲಿ 6.5 ತೀವ್ರತೆ ದಾಖಲು