ಶ್ರೀರಾಮ ಮಂದಿರ ಟ್ರಸ್ಟ್ ರಚಿಸಿದ್ದು ಪ್ರಧಾನಿ ಮೋದಿ, ಅವರ ಆಪ್ತರೇ ಟ್ರಸ್ಟ್ ಕಾರ್ಯದರ್ಶಿ: ಅರವಿಂದ್ ಕೇಜ್ರಿವಾಲ್ ಆರೋಪ
ರಾಮ ಮಂದಿರ ಕಾಣಿಕೆ ಕಳ್ಳತನ ಸೂಕ್ತ ತನಿಖೆಗೆ ಆಪ್ ಮುಖ್ಯಸ್ಥ ಆಗ್ರಹ. ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ಟೀಕೆ. ಎಸ್‌ಐಟಿ ತನಿಖೆ ಬಗ್ಗೆ ಶಂಕೆ ವ್ಯಕ್ತಪಡಿಸಿದ ಮಾಜಿ ಸಿಎಂ.

Published : July 2, 2026 at 7:56 PM IST
ನವದೆಹಲಿ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ನಡೆದ ಕಾಣಿಕೆ ಹಣ ಕಳ್ಳತನ ಮತ್ತು ಅಕ್ರಮಗಳ ಕುರಿತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿದ ಅವರು, "ಕೆಳ ಹಂತದ ನೌಕರರನ್ನು ಮಾತ್ರ ಬಂಧಿಸುವ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸಲಾಗುತ್ತಿದೆ. ಆದರೆ, ಇದರಲ್ಲಿ ಭಾಗಿಯಾಗಿರುವ ನಿಜವಾದ ಮತ್ತು ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ ಅವರು, ಕೋಟ್ಯಂತರ ರಾಮ ಭಕ್ತರ ನಂಬಿಕೆಗೆ ಧಕ್ಕೆಯಾದ ಪ್ರಕರಣವನ್ನು ನ್ಯಾಯಯುತ ಮತ್ತು ಸಮಗ್ರ ತನಿಖೆ ನಡೆಸಬೇಕು" ಎಂದು ಅವರು ಒತ್ತಾಯಿಸಿದ್ದಾರೆ.
क्या मोदी जी प्रभु श्री राम के गुनहगारों को बचा रहे हैं? | AAP National Convenor @ArvindKejriwal जी की महत्वपूर्ण प्रेस वार्ता | LIVE https://t.co/JbxbQnzagR
— AAP (@AamAadmiParty) July 2, 2026
ಶ್ರೀರಾಮ ಮಂದಿರ ಟ್ರಸ್ಟ್ ಅನ್ನು ಪ್ರಧಾನಿಯೇ ರಚಿಸಿದ್ದಾರೆ. ಪ್ರಮುಖ ಸದಸ್ಯರನ್ನು ಅವರ ಮೇಲ್ವಿಚಾರಣೆಯಲ್ಲಿ ಆಯ್ಕೆ ಮಾಡಲಾಗಿದೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರನ್ನು ಪ್ರಧಾನಿಯವರ ಆಪ್ತ ಸಹಚರ ಎಂದು ಪರಿಗಣಿಸಲಾಗಿದೆ. ಇದನ್ನು ಗಮನಿಸಿದರೆ, ದೇವಾಲಯಕ್ಕೆ ಸಂಬಂಧಿಸಿದ ಅಕ್ರಮಗಳು ಮತ್ತು ಕಳ್ಳತನದ ಜವಾಬ್ದಾರಿಯಿಂದ ಸರ್ಕಾರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಷ್ಟು ದೊಡ್ಡ ಪ್ರಮಾಣದ ಅಕ್ರಮಗಳು ನಡೆದರೂ, ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳಿಗೆ ತಿಳಿದಿರಲಿಲ್ಲವೇ? ಅವರಿಗೆ ತಿಳಿದಿದ್ದರೆ, ಏಕೆ ಕ್ರಮ ಕೈಗೊಳ್ಳಲಿಲ್ಲ? ಇದು ಆಡಳಿತಾತ್ಮಕ ವೈಫಲ್ಯ ಎಂದು ಆರೋಪಿಸಿದ್ದಾರೆ.
ನ್ಯಾಯಯುತ ತನಿಖೆ ಅಗತ್ಯ: 2021 ರಲ್ಲಿ ಬೆಳಕಿಗೆ ಬಂದ ದೇವಾಲಯದ ಟ್ರಸ್ಟ್‌ಗೆ ಸಂಬಂಧಿಸಿದ ಭೂ ಅವ್ಯವಹಾರಗಳನ್ನು ಅರವಿಂದ್ ಕೇಜ್ರಿವಾಲ್ ಉಲ್ಲೇಖಿಸಿ, ಕೆಲವೇ ನಿಮಿಷಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಟ್ರಸ್ಟ್‌ಗೆ ಹಲವು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿದೆ. ಈ ವಿಷಯದಲ್ಲೂ ನ್ಯಾಯಯುತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ದೇವಾಲಯದ ನಿರ್ಮಾಣದ ಸಮಯದಲ್ಲಿ, ಗುತ್ತಿಗೆದಾರರಿಂದ ಕಮಿಷನ್‌ಗಳನ್ನು ಪಡೆಯಲಾಗಿದೆ. ದೇವಾಲಯದ ಹುಂಡಿ ಕಳ್ಳತನದ ಘಟನೆಗಳು ದೀರ್ಘಕಾಲದಿಂದ ನಡೆದಿವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಿಹಾಕಿದ ಬಗ್ಗೆ ವರದಿಗಳಿವೆ. ಆದರೆ ಯಾವುದೇ ಹಿರಿಯ ಅಧಿಕಾರಿ ಅಥವಾ ಉಸ್ತುವಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ. ಈ ಆರೋಪಗಳು ನಿಜವಾಗಿದ್ದರೆ, ಇದು ಕೇವಲ ಕಳ್ಳತನದ ಪ್ರಕರಣವಲ್ಲ, ಕೋಟ್ಯಂತರ ಭಕ್ತರ ನಂಬಿಕೆಗೆ ಆದ ಧಕ್ಕೆ ಎಂದು ಹೇಳಿದ್ದಾರೆ.
ಕೇಸ್ ಮುಚ್ಚಿಹಾಕಲು ರಚಿಸಲಾದ ಎಸ್‌ಐಟಿ: ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಮೇಲೆ ಆಪ್ ಮುಖ್ಯಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. "ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಮಾತ್ರ ಎಸ್‌ಐಟಿ ರಚಿಸಲಾಗಿದೆ. ತನಿಖೆಯು ಕೇವಲ ಕಾಣಿಕೆಗಳ ವಿಷಯಕ್ಕೆ ಸೀಮಿತವಾಗಿದೆ. ಆದರೆ ಆಪಾದಿತ ಭೂಮಿ ಮತ್ತು ನಿರ್ಮಾಣ ಅಂಶಗಳ ಬಗ್ಗೆ ತನಿಖೆ ನಡೆಸುತ್ತಿಲ್ಲ. ಭೂ ವ್ಯವಹಾರಗಳ ತನಿಖೆಗಾಗಿ 2021 ರಲ್ಲಿ ಎಸ್‌ಐಟಿ ರಚಿಸಲಾಗಿತ್ತು. ಅದರ ವರದಿ ಅಥವಾ ನಂತರದ ಯಾವುದೇ ಕ್ರಮವು ಸ್ಪಷ್ಟ ಫಲಿತಾಂಶ ನೀಡಿಲ್ಲ. ಪ್ರಸ್ತುತ ತನಿ ನಡೆಸುತ್ತಿರುವ ಎಸ್ಐಟಿಯೂ ಇದೇ ಹಾದಿ ಹಿಡಿಯಲಿದೆ ಎಂದು ಆರೋಪಿಸಿದರು.
"ಸರ್ಕಾರವೇ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ವಿಫಲವಾದಾಗ, ಕೇಂದ್ರ ಸಂಸ್ಥೆಗಳಿಂದ ನ್ಯಾಯಯುತ ತನಿಖೆಯನ್ನು ನಿರೀಕ್ಷಿಸುವುದು ಕಷ್ಟ. ಯಾರನ್ನು ಮತ್ತು ಏಕೆ ರಕ್ಷಿಸಲಾಗುತ್ತಿದೆ ಎಂಬುದು ದೇಶದ ಜನರು ಗೊತ್ತಾಗಬೇಕು. ಶ್ರೀರಾಮ ಮಂದಿರವು ಕೋಟ್ಯಂತರ ಜನರ ನಂಬಿಕೆಯ ಕೇಂದ್ರ. ಈ ವಿಷಯದ ತನಿಖೆಯು ಪಾರದರ್ಶಕ, ನಿಷ್ಪಕ್ಷಪಾತ ತನಿಖೆಯಾಗಬೇಕು" ಎಂದು ಪುನಃ ಆಗ್ರಹಿಸಿದ್ದಾರೆ.
ಇವುಗಳನ್ನೂ ಓದಿ:

