ETV Bharat / bharat

ಭಾರತದೊಳಗೆ ಡ್ರೋನ್​ ಮೂಲಕ ಚೀನಾ ನಿರ್ಮಿತ ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡುವ ಪಾಕಿಸ್ತಾನದ ಯತ್ನ ವಿಫಲ

ಭಾರತದೊಳಗೆ ಪಾಕಿಸ್ತಾನವು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾಗ ಭದ್ರತಾ ಪಡೆಗಳು ದಾಳಿ ಮಾಡಿ ವಶಕ್ಕೆ ಪಡೆದಿವೆ.

INTERNATIONAL BORDER
ಪಾಕಿಸ್ತಾನದಿಂದ ಡ್ರೋನ್​ ಮೂಲಕ ಹಾರಿ ಬಂದ ಶಸ್ತ್ರಾಸ್ತ್ರಗಳು (J&K Police)
author img

By ETV Bharat Karnataka Team

Published : January 10, 2026 at 2:11 PM IST

2 Min Read
Choose ETV Bharat

ಜಮ್ಮು: ಭಾರತದಲ್ಲಿ ಉಗ್ರವಾದಕ್ಕೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವ ಅಂಶ ಮತ್ತೆ ಬೆಳಕಿಗೆ ಬಂದಿದೆ. ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಡ್ರೋನ್ ಮೂಲಕ ಭಾರತದೊಳಗೆ ಕಳ್ಳಸಾಗಣೆ ಮಾಡುತ್ತಿದ್ದಾಗ, ಭದ್ರತಾ ಪಡೆಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿವೆ.

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ (IB) ಬಳಿ ಪೊಲೀಸ್ ಮತ್ತು ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಪಾಕಿಸ್ತಾನದಿಂದ ಕಳ್ಳಸಾಗಣೆ ಮಾಡಿದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ಯಾಕೆಟ್‌ನಲ್ಲಿ ಸುತ್ತಿಟ್ಟಿದ್ದ ಶಸ್ತ್ರಾಸ್ತ್ರಗಳನ್ನು ಡ್ರೋನ್​ ಮೂಲಕ ಘಗ್ವಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪಲೂರಾ ಗ್ರಾಮದಲ್ಲಿ ಎಸೆಯಲಾಗಿತ್ತು. ಗಡಿಯಲ್ಲಿ ಇಂತಹ ಚಟುವಟಿಕೆಯ ಬಗ್ಗೆ ಸುಳಿವು ದೊರೆತ ಹಿನ್ನೆಲೆಯಲ್ಲಿ ಬಿಎಸ್​ಎಫ್​ ಮತ್ತು ವಿಶೇಷ ಕಾರ್ಯಾಚರಣೆ ಗುಂಪು (SOG) ಶೋಧ ನಡೆಸಿ, ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಾಗೃತ ಸಿಬ್ಬಂದಿ ರೀಗಲ್ ಬಾರ್ಡರ್ ಔಟ್ ಪೋಸ್ಟ್ (BOP) ಮತ್ತು ಸುತ್ತಮುತ್ತ ಹೊಂಚುದಾಳಿ ನಡೆಸಿ ರಾತ್ರಿಯಿಡೀ ಡ್ರೋನ್ ಚಲನೆಯನ್ನು ಗಮನಿಸಿದರು. ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳಿದ್ದ ಪ್ಯಾಕೆಟ್ ಅನ್ನು ಬೀಳಿಸಿದ ನಂತರ, ಬಿಎಸ್​ಎಫ್​ ಸಿಬ್ಬಂದಿ ತಕ್ಷಣವೇ ಆ ಪ್ರದೇಶವನ್ನು ಸುತ್ತುವರೆದರು. ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಂಗ್ರಹವನ್ನು ಪತ್ತೆ ಮಾಡಿದರು ಎಂದು ಹೇಳಿದ್ದಾರೆ.

ಪ್ಯಾಕೆಟ್​ನಲ್ಲಿ ಏನೇನಿವೆ?: ವಶವಾದ ಶಸ್ತ್ರಾಸ್ತ್ರಗಳಲ್ಲಿ 2 ಮ್ಯಾಗಜೀನ್‌ಗಳು, 9ಎಂಎಂ ಪಿಸ್ತೂಲ್, ಒಂದು ಮ್ಯಾಗಜೀನ್‌ನೊಂದಿಗೆ ಗ್ಲಾಕ್ 9ಎಂಎಂ ಪಿಸ್ತೂಲ್ ಮತ್ತು ಒಂದು ಹ್ಯಾಂಡ್ ಗ್ರೆನೇಡ್ ('SPL HGR 84' ಎಂದು ಗುರುತಿಸಲಾಗಿದೆ) ಸೇರಿವೆ. ಪ್ಯಾಕೆಟ್‌ನಿಂದ ಒಟ್ಟು ಹದಿನಾರು 9ಎಂಎಂ ಜೀವಂತ ಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನದ ಚಕ್ ಭುರಾ ಗ್ರಾಮದಿಂದ ಡ್ರೋನ್ ಹಾರಿ ಬಂದಿದೆ. ಈ ಎಲ್ಲ ಶಸ್ತ್ರಾಸ್ತ್ರಗಳು ಚೀನಾ ನಿರ್ಮಿತ ಎಂದು ಗುರುತಿಸಲಾಗಿದೆ ಎಂದು ವರದಿಯಾಗಿದೆ.

ಭಾರತದಲ್ಲಿ ಅಡಗಿರುವ ಭಯೋತ್ಪಾದಕರು ಮತ್ತು ಭೂಗತ ವಿದ್ರೋಹಿಗಳಿಗೆ ಪಾಕಿಸ್ತಾನ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ರವಾನಿಸುತ್ತಿದೆ. ಗಡಿ ಭದ್ರತಾ ಪಡೆಗಳು ಈ ಯೋಜನೆಯನ್ನು ವಿಫಲಗೊಳಿಸಿದವು. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ವಿಷಯದ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭದ್ರತಾ ಸಭೆಯ ಬೆನ್ನಲ್ಲೇ ಕೃತ್ಯ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭದ್ರತಾ ಪಡೆಗಳೊಂದಿಗೆ ಎರಡು ದಿನಗಳ ಹಿಂದಷ್ಟೇ ಜಮ್ಮು ಮತ್ತು ಕಾಶ್ಮೀರದ ಭದ್ರತೆ ಕುರಿತು ಸಭೆ ನಡೆಸಿದ್ದರು. ಇದರ ಬೆನ್ನಲ್ಲೇ, ಈ ಘಟನೆ ನಡೆದಿದೆ. ಭಯೋತ್ಪಾದಕ ನೆಲೆಗಳು ಮತ್ತು ಭಯೋತ್ಪಾದಕರಿಗೆ ರವಾನೆಯಾಗಿರುವ ಹಣಕಾಸನ್ನು ನಿಗ್ರಹಿಸಲು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ಹುರುಪಿನಿಂದ ಮುಂದುವರಿಸಲು ಕೇಂದ್ರ ಸಚಿವರು ನಿರ್ದೇಶಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳಿಗೆ ಸರ್ವ ರೀತಿಯ ಬೆಂಬಲ ನೀಡಲಾಗುವುದು ಎಂದು ಶಾ ಭರವಸೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಶ್ವತ ಶಾಂತಿ ನೆಲೆಸಲು ಮತ್ತು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವರು ಉಲ್ಲೇಖಿಸಿದ್ದಾರೆ.

ಇವುಗಳನ್ನೂ ಓದಿ: