ETV Bharat / bharat

ಭಾಷೆಯನ್ನು ಹೇರುವುದಿಲ್ಲ, ಭಾಷಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ರಕ್ಷಿಸಲು ನಮ್ಮ ಸರ್ಕಾರ ಬದ್ಧ: ಕೇರಳ ಸಿಎಂ

ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯ ಮೇಲಿನ ಆತಂಕದಲ್ಲಿ ಹುರುಳಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಎಕ್ಸ್ ಪೋಸ್ಟ್‌ ಮೂಲಕ ತಿಳಿಸಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (ETV Bharat)
author img

By ETV Bharat Karnataka Team

Published : January 11, 2026 at 9:11 AM IST

2 Min Read
Choose ETV Bharat

ತಿರುವನಂತಪುರಂ(ಕೇರಳ): ಮಲಯಾಳಂ ಭಾಷಾ ಮಸೂದೆ-2025ರ ಬಗೆಗಿನ ಆತಂಕಗಳಲ್ಲಿ ಸತ್ಯಾಂಶವಿಲ್ಲ. ನಾವು ಯಾವುದೇ ಭಾಷೆಯನ್ನು ಹೇರುವುದಿಲ್ಲ ಮತ್ತು ಭಾಷಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ರಕ್ಷಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮಸೂದೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ಒಂದು ದಿನದ ನಂತರ, ಶನಿವಾರ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಮೇಲಿನಂತೆ ಅವರು ಪ್ರತಿಕ್ರಿಯಿಸಿದ್ದಾರೆ.

ಈ ಮಸೂದೆ ಅಂಗೀಕಾರವಾದರೆ ಭಾಷಾ ಅಲ್ಪಸಂಖ್ಯಾತರು ಮತ್ತು ದೇಶದ ಬಹುತ್ವದ ಚೈತನ್ಯವನ್ನು ರಕ್ಷಿಸುವ ಸಲುವಾಗಿ ಇರುವ ಸಾಂವಿಧಾನಿಕ ಹಕ್ಕನ್ನು ಚಲಾಯಿಸಿ ನಾವು ವಿರೋಧಿಸುತ್ತೇವೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದರು.

ಇದಕ್ಕೆ ಒಂದು ದಿನ ಮೊದಲು, ಗಡಿಭಾಗದ ಕನ್ನಡ ಮಾಧ್ಯಮ ಶಾಲೆಗಳಲ್ಲೂ ಸಹ ಮಲಯಾಳಂ ಅನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುವ ಮೂಲಕ ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು ಭಾಷಾ ಸ್ವಾತಂತ್ರ್ಯದ ಹೃದಯಭಾಗಕ್ಕೇ ಘಾಸಿ ಮಾಡಿದಂತೆ ಮತ್ತು ಕೇರಳದ ಗಡಿ ಜಿಲ್ಲೆಗಳು ಅದರಲ್ಲೂ ವಿಶೇಷವಾಗಿ ಕಾಸರಗೋಡಿನ ಮೇಲೆ ದಾಳಿ ಮಾಡುತ್ತದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಹೇಳಿಕೆಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಪಿಣರಾಯಿ, ಕೇರಳ ಸರ್ಕಾರ ಜಾತ್ಯತೀತತೆ ಮತ್ತು ಬಹುತ್ವದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ನಿಶ್ಚಲವಾಗಿದೆ. ಭಾಷಾ ಅಲ್ಪಸಂಖ್ಯಾತರು, ವಿಶೇಷವಾಗಿ ಕನ್ನಡ ಮತ್ತು ತಮಿಳು ಮಾತನಾಡುವ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವ ಕುರಿತು ನಮ್ಮ ಮಸೂದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದಿದ್ದು, ಈ ಬಗ್ಗೆ ಮಸೂದೆಯಲ್ಲಿರುವ ಅಂಶಗಳ ಫೋಟೋವನ್ನು ಲಗತ್ತಿಸಿದ್ದಾರೆ.

ಈ ನಿಬಂಧನೆಗಳಲ್ಲಿ ಯಾವುದೇ ಭಾಷೆಯನ್ನು ಹೇರುವುದಿಲ್ಲ ಮತ್ತು ಭಾಷಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಎಂದು ತಿಳಿಸಲಾಗಿದೆ. ಅಧಿಸೂಚಿತ ಪ್ರದೇಶಗಳಲ್ಲಿ ತಮಿಳು ಮತ್ತು ಕನ್ನಡ ಭಾಷಿಕರು, ಸರ್ಕಾರದ ವಿವಿಧ ಸಚಿವಾಲಯಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು ಮತ್ತು ಸ್ಥಳೀಯ ಕಚೇರಿಗಳೊಂದಿಗೆ ಅಧಿಕೃತ ಪತ್ರ ವ್ಯವಹಾರ ಮಾಡಲು ತಮ್ಮ ಮಾತೃಭಾಷೆ ಬಳಸುವುದನ್ನು ಮುಂದುವರಿಸಬಹುದು. ಅದೇ ಭಾಷೆಗಳಲ್ಲಿ ಉತ್ತರಗಳನ್ನು ನೀಡಬಹುದು. ಮಲಯಾಳಂ ಮಾತೃಭಾಷೆಯಲ್ಲದ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮಕ್ಕೆ ಅನುಗುಣವಾಗಿ ಶಾಲೆಗಳಲ್ಲಿ ಲಭ್ಯವಿರುವ ಭಾಷೆಗಳನ್ನು ಆಯ್ಕೆ ಮಾಡಲು ಸ್ವತಂತ್ರರು. ಇತರ ರಾಜ್ಯಗಳು ಅಥವಾ ವಿದೇಶಗಳ ವಿದ್ಯಾರ್ಥಿಗಳು IX, X ಅಥವಾ ಹೈಯರ್ ಸೆಕೆಂಡರಿ ಹಂತಗಳಲ್ಲಿ ಮಲಯಾಳಂ ಪರೀಕ್ಷೆಗಳಿಗೆ ಹಾಜರಾಗುವಂತೆ ಒತ್ತಾಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಕೇರಳದ ಭಾಷಾ ನೀತಿಯು ಅಧಿಕೃತ ಭಾಷಾ ಕಾಯ್ದೆ-1963 ಮತ್ತು ದೇಶದ ಸಂವಿಧಾನದ 346 ಮತ್ತು 347ನೇ ವಿಧಿಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ ಎಂದು ವಿಜಯನ್ ಬರೆದಿದ್ದಾರೆ.

ಇದೇ ವೇಳೆ, ಭಾರತದ ವೈವಿಧ್ಯತೆಯನ್ನು ಆಚರಿಸಬೇಕು, ಒಂದೇ ರೀತಿಯಲ್ಲಿರುವಂತೆ ಬಲವಂತಪಡಿಸುವಂತಿಲ್ಲ. ಪ್ರತಿಯೊಬ್ಬ ನಾಗರಿಕನ ಭಾಷಾ ಗುರುತನ್ನು ರಕ್ಷಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಭಾಷಾ ಮಸೂದೆ ಮರುಪರಿಶೀಲಿಸಿ: ಕೇರಳ ಸಿಎಂಗೆ ಸಿಎಂ ಸಿದ್ದರಾಮಯ್ಯ ಪತ್ರ