ಅಕ್ರಮ ಹಣ ವರ್ಗಾವಣೆ ಪ್ರಕರಣ: ED ಮುಂದೆ ಅನಿಲ್ ಅಂಬಾನಿ ಹಾಜರು
ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಸಿಒಎಂ) ಕಂಪನಿ ಮೇಲಿನ ಸಾವಿರಾರು ಕೋಟಿ ರೂ. ಬ್ಯಾಂಕ್ ವಂಚನೆ ಆರೋಪ ಸಂಬಂಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

Published : February 26, 2026 at 2:09 PM IST
ನವದೆಹಲಿ: ಬ್ಯಾಂಕ್ ವಂಚನೆಗೆ ಸಂಬಂಧಿಸಿದ ಹಣ ವರ್ಗಾವಣೆ ಆರೋಪ ಪ್ರಕರಣ ಸಂಬಂಧ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಗುರುವಾರ ಎರಡನೇ ಸುತ್ತಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ಹಾಜರಾದರು.
ಉದ್ಯಮಿ ಅನಿಲ್ ಅಂಬಾನಿ ಬೆಳಗ್ಗೆ 10.30ರ ಸುಮಾರಿಗೆ ಕೇಂದ್ರ ದೆಹಲಿಯಲ್ಲಿರುವ ಉನ್ನತ ತನಿಖಾ ಸಂಸ್ಥೆಯ ಕಚೇರಿಗೆ ಆಗಮಿಸಿದರು. ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನಿಬಂಧನೆಗಳ ಅಡಿ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಅವರು ಮುನ್ನ 2025ರ ಆಗಸ್ಟ್ನಲ್ಲಿ ಇ.ಡಿ ವಿಚಾರಣೆ ಎದುರಿಸಿದ್ದರು.
ಅನಿಲ್ ಅಂಬಾನಿ ಅವರ ಗ್ರೂಪ್ ಕಂಪನಿಯಾದ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಸಿಒಎಂ) ನಿಂದ 40,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಬ್ಯಾಂಕ್ ವಂಚನೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ತನಿಖೆಯ ಭಾಗವಾಗಿ ಜನವರಿಯಲ್ಲಿ ಇ.ಡಿ ಅಧಿಕಾರಿಗಳು ಮಾಜಿ ಆರ್‌ಸಿಒಎಂ ಅಧ್ಯಕ್ಷ ಪುನೀತ್ ಗರ್ಗ್ ಅವರನ್ನು ಬಂಧಿಸಿತ್ತು. ಅಕ್ರಮವಾಗಿ ವರ್ಗಾಯಿಸಲಾದ ಹಣವನ್ನು ಆರ್‌ಸಿಒಎಂನ ಬಹು ವಿದೇಶಿ ಅಂಗಸಂಸ್ಥೆಗಳು ಮತ್ತು ಆಫ್‌ಶೋರ್ ಘಟಕಗಳ ಮೂಲಕ ಡೈವರ್ಟ್ ಮಾಡಲಾಗಿದೆ ಎಂದು ಇ.ಡಿ ಈ ಹಿಂದೆ ಹೇಳಿತ್ತು.
ಮುಂಬೈ ನಿವಾಸ 'ಅಬೋಡ್' ಮುಟ್ಟುಗೋಲು: ಅನಿಲ್ ಅಂಬಾನಿ ಮತ್ತು ಅವರ ವಿವಿಧ ಗ್ರೂಪ್ ಕಂಪನಿಗಳು ಸಾಲ ವಂಚನೆಯ ಆರೋಪಗಳನ್ನು ಎದುರಿಸುತ್ತಿವೆ. ಸುಪ್ರೀಂಕೋರ್ಟ್‌ನ ನಿರ್ದೇಶನದ ಮೇರೆಗೆ ಈ ಎಲ್ಲ ಪ್ರಕರಣಗಳ ತನಿಖೆಗಾಗಿ ಇ.ಡಿ ಇತ್ತೀಚೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಜಾರಿ ನಿರ್ದೇಶನಾಲಯ ಬುಧವಾರ ಅನಿಲ್ ಅಂಬಾನಿಯವರ ಮುಂಬೈನಲ್ಲಿನ 3,716 ಕೋಟಿ ರೂ. ಮೌಲ್ಯದ ಮನೆ 'ಅಬೋಡ್' ಅನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನಡಿ ಮುಟ್ಟುಗೋಲು ಹಾಕಿಕೊಂಡಿದೆ.
17 ಮಹಡಿಗಳನ್ನು ಹೊಂದಿರುವ 66 ಮೀಟರ್ ಎತ್ತರ ಇರುವ ಈ ಐಷಾರಾಮಿ ಮನೆ ಮುಂಬೈನ ಪಾಲಿ ಹಿಲ್ ಪ್ರದೇಶದಲ್ಲಿದೆ. ಅಂಬಾನಿ ಸಮೂಹ ಕಂಪನಿ ಆರ್‌ಸಿಒಎಂ ನಡೆಸಿದ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಈ ಬಹುಮಹಡಿ ಮನೆ ವಶಪಡಿಸಿಕೊಳ್ಳಲು ತಾತ್ಕಾಲಿಕ ಆದೇಶ ಹೊರಡಿಸಲಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿತ್ತು.
ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್‌ಗೆ ಒದಗಿಸಿದ ಮಾಹಿತಿಯ ಪ್ರಕಾರ, ಬ್ಯಾಂಕ್ ಸಾಲ ವಂಚನೆ ಮತ್ತು ಇತರ ಹಣಕಾಸು ಅಕ್ರಮಗಳ ಆರೋಪಗಳನ್ನು ತನಿಖೆ ಸಂಬಂಧ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ (ADAG) ವಿರುದ್ಧ ಮೂರು ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ದಾಖಲಾಗಿವೆ.

