ಕಲ್ಲಿದ್ದಲು ಹಗರಣ ಆರೋಪ: ಮಮತಾ ಬ್ಯಾನರ್ಜಿಗೆ ನೋಟಿಸ್ ಕಳುಹಿಸಿದ ಸುವೇಂದು ಅಧಿಕಾರಿ
ಅಮಿತ್ ಶಾ ಮತ್ತು ಸುವೇಂದು ಅಧಿಕಾರಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಮಮತಾ ಬ್ಯಾನರ್ಜಿ ಅವರಿಗೆ ನೋಟಿಸ್ ಕಳುಹಿಸಲಾಗಿದೆ.


Published : January 10, 2026 at 12:33 PM IST
ಕೋಲ್ಕತ್ತಾ (ಪಶ್ಚಿಮ ಬಂಗಾಳ): ಐ ಪ್ಯಾಕ್ ಕಚೇರಿ ಮೇಲೆ ಇಡಿ ದಾಳಿಯ ಬೆನ್ನಲ್ಲೇ ಇದೀಗ ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಸುವೇಂದು ಅಧಿಕಾರಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾಡಿರುವ ಆರೋಪಗಳಿಗೆ 72 ಗಂಟೆಗಳಲ್ಲಿ ಪುರಾವೆಗಳನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.
ಅಮಿತ್ ಶಾ ಮತ್ತು ಸುವೇಂದು ಅಧಿಕಾರಿ ಪ್ರಕರಣದಲ್ಲಿ ಭಾಗಿಯಾಗಿದ್ದು, ಹಗರಣದ ಹಣವನ್ನು ಅಧಿಕಾರಿ ಮೂಲಕ ಶಾಗೆ ವರ್ಗಾಯಿಸಲಾಗಿದೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ. ಐ-ಪ್ಯಾಕ್ ಕೋಲ್ಕತ್ತಾ ಕಚೇರಿಯಲ್ಲಿ ಜಾರಿ ನಿರ್ದೇಶನಾಲಯದ ದಾಳಿಯ ವಿರುದ್ಧ ನಡೆದ ಪ್ರತಿಭಟನೆಗಳ ನಡುವೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿರುವ ಸುವೇಂದು ಅಧಿಕಾರಿ, ಇಡಿ ಗಮನವನ್ನು ಬೇರೆಡೆಗೆ ಸೆಳೆಯುವ ಹತಾಶ ಪ್ರಯತ್ನದಲ್ಲಿ ಸಿಎಂ ಈ ರೀತಿ ಆರೋಪ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಇಂದು ನಡೆಯುತ್ತಿರುವ ಇಡಿ ತನಿಖೆಯಿಂದ ಗಮನವನ್ನು ಬೇರೆಡೆ ಸೆಳೆಯುವ ಹತಾಶ ಪ್ರಯತ್ನದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರು ನನ್ನ ವಿರುದ್ಧ ಸಂಪೂರ್ಣವಾಗಿ ಆಧಾರರಹಿತ ಮಾನನಷ್ಟ ಆರೋಪಗಳನ್ನು ಮಾಡಿದ್ದಾರೆ. ಗೌರವಾನ್ವಿತ ಕೇಂದ್ರ ಗೃಹ ಸಚಿವರೊಂದಿಗೆ ಈ ಆರೋಪಿತ ಹಗರಣಕ್ಕೆ ನನ್ನನ್ನು ಜೋಡಿಸಿದ್ದಾರೆ. ವೈಯಕ್ತಿಕ ಅವಮಾನಗಳಿಂದ ಕೂಡಿದ ಈ ಅಜಾಗರೂಕ ಹೇಳಿಕೆಗಳನ್ನು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಸಾರ್ವಜನಿಕವಾಗಿ ಮಾಡಲಾಗಿದೆ. ಅಂತಹ ಆಧಾರರಹಿತ ಹೇಳಿಕೆಗಳು ನನ್ನ ಖ್ಯಾತಿಯನ್ನು ಹಾಳು ಮಾಡುವುದಲ್ಲದೆ, ಘನತೆಯನ್ನು ಹಾಳು ಮಾಡಿವೆ. ಇಂದು, ನನ್ನ ವಕೀಲರ ಮೂಲಕ 72 ಗಂಟೆಗಳ ಒಳಗೆ ಆರೋಪ ಸಂಬಂಧ ಪುರಾವೆಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ನಾನು ಕಾನೂನು ನೋಟಿಸ್ ನೀಡಿದ್ದೇನೆ. ದಾಖಲೆ ನೀಡಲು ವಿಫಲವಾದರೆ, ಮಾನನಷ್ಟಕ್ಕೆ ಸೂಕ್ತವಾದ ಸಿವಿಲ್ ಮತ್ತು ಕ್ರಿಮಿನಲ್ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿಯವರ ಹೇಳಿಕೆಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ. ಯಾವುದೇ ಪುರಾವೆಗಳನ್ನು ನೀಡದೆ ಅವರು ಮಾನನಷ್ಟ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
ಇಡಿ ದಾಳಿ ವಿರುದ್ಧ ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ ಅವರು, ಚುನಾವಣಾ ಆಯೋಗದಲ್ಲಿ ಯಾರು ಕುಳಿತಿದ್ದಾರೆಂದು ನಿಮಗೆ ತಿಳಿದಿದೆ. ಅವರು ಅಮಿತ್ ಶಾ ಅವರ ಸಹಕಾರ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ನನಗೆ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಜ್ಞಾನೇಶ್ ಕುಮಾರ್ ಅವರು ಮತಗಳನ್ನು ಕಣ್ಮರೆ ಮಾಡುತ್ತಿದ್ದರೆ ನಾನು ಏಕೆ ಸುಮ್ಮನಿರುತ್ತೇನೆ? ಮತದಾರರ ಹಕ್ಕುಗಳನ್ನು ಕಸಿದುಕೊಂಡರೆ, ನಾನು ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತೇನೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಟಿಎಂಸಿ ಸಂಸದರನ್ನು ನಿರ್ದಯವಾಗಿ ಎಳೆದೊಯ್ದಿದ್ದಾರೆ. ಎಲ್ಲಾ ಏಜೆನ್ಸಿಗಳನ್ನು ಕಸಿದುಕೊಳ್ಳಲಾಗಿದೆ. ಕಲ್ಲಿದ್ದಲು ಹಗರಣದ ಹಣ ಯಾರಿಗೆ ಸಿಗುತ್ತದೆ? ಅಮಿತ್ ಶಾಗೆ ಸಿಗುತ್ತದೆ. ಆ ಹಣವು ಸುವೇಂದು ಅಧಿಕಾರಿ ಮೂಲಕ ಹೋಗುತ್ತದೆ ಎಂದು ಆರೋಪಿಸಿದ್ದರು.
ಇವುಗಳನ್ನೂ ಓದಿ:
ಐ ಪ್ಯಾಕ್ ಮೇಲೆ ಇಡಿ ದಾಳಿ; ದಾಖಲೆಗಳ ದುರ್ಬಳಕೆಗೆ ನಿರ್ಬಂಧ ಹೇರುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಟಿಎಂಸಿ

