ಏರ್ ಇಂಡಿಯಾದಿಂದ ಉತ್ತರ ಅಮೆರಿಕ, ಯುರೋಪ್‌ಗೆ ಪರ್ಯಾಯ ಮಾರ್ಗ ಬಳಕೆ: 6 ವಿಮಾನಗಳು ರದ್ದು
ಮಾರ್ಚ್ 2ರಂದು ವಿವಿಧ ಯುರೋಪಿಯನ್ ನಗರಗಳಿಗೆ ನಿಯೋಜನೆಗೊಂಡಿದ್ದ ಆರು ವಿಮಾನಗಳನ್ನು ಏರ್ ಇಂಡಿಯಾ ರದ್ದುಗೊಳಿಸಿದೆ.

Published : March 2, 2026 at 9:52 AM IST
ನವದೆಹಲಿ: ಏರ್ ಇಂಡಿಯಾ ಮಧ್ಯಪ್ರಾಚ್ಯದಲ್ಲಿ ಲಭ್ಯವಿರುವ ವಾಯುಪ್ರದೇಶಗಳ ಮೂಲಕ ಪರ್ಯಾಯ ಮಾರ್ಗಗಳಲ್ಲಿ ಉತ್ತರ ಅಮೆರಿಕ ಮತ್ತು ಯುರೋಪ್‌ಗೆ ತನ್ನ ವಿಮಾನ ಸೇವೆಗಳನ್ನು ನಿರ್ವಹಿಸಲಿದೆ. ಮಾರ್ಚ್ 2ರಂದು ವಿವಿಧ ಯುರೋಪಿಯನ್ ನಗರಗಳಿಗೆ ನಿಯೋಜನೆಗೊಂಡಿದ್ದ ಆರು ವಿಮಾನಗಳನ್ನು ರದ್ದುಗೊಳಿಸಿದೆ.
ಭಾನುವಾರ 50 ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿದ್ದ ಏರ್‌ಲೈನ್ಸ್, ಯುಎಇ, ಸೌದಿ ಅರೇಬಿಯಾ, ಇಸ್ರೇಲ್ ಮತ್ತು ಕತಾರ್‌ಗೆ ಹೋಗುವ ಮತ್ತು ಹೊರಡುವ ಎಲ್ಲಾ ವಿಮಾನಗಳ ಸ್ಥಗಿತವನ್ನು ಮಾರ್ಚ್ 2ರಂದು ರಾತ್ರಿ 11.59 ರವರೆಗೆ (IST) ವಿಸ್ತರಿಸುವುದಾಗಿ ಹೇಳಿದೆ. ಭಾನುವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಂಸ್ಥೆ, ಅಮೃತಸರ-ಬರ್ಮಿಂಗ್ಹ್ಯಾಮ್ (AI117) ಮತ್ತು ಬರ್ಮಿಂಗ್ಹ್ಯಾಮ್-ದೆಹಲಿ (AI114) ಸೇರಿದಂತೆ ಆರು ವಿಮಾನಗಳನ್ನು ಸೋಮವಾರ ರದ್ದುಗೊಳಿಸುವುದಾಗಿ ತಿಳಿಸಿದೆ.
#TravelAdvisory
— Air India (@airindia) March 1, 2026
“In view of the continuing situation in the Middle East, Air India has extended the suspension of all flights to and from the UAE, Saudi Arabia, Israel, and Qatar until 2359 hrs IST on 2 March 2026.
Additionally, select flights to Europe scheduled on 2 March…
ಇದಲ್ಲದೆ, ದೆಹಲಿ ಮತ್ತು ಜ್ಯೂರಿಚ್ ನಡುವಿನ AI151 ಮತ್ತು A152 ವಿಮಾನಗಳು ಹಾಗೂ ದೆಹಲಿ ಮತ್ತು ಕೋಪನ್ ಹೇಗನ್ ನಡುವಿನ AI157 ಮತ್ತು AI158 ವಿಮಾನಗಳು ಸೋಮವಾರ ರದ್ದಾಗಲಿವೆ. ಉತ್ತರ ಅಮೆರಿಕ ಮತ್ತು ಯುರೋಪ್‌ಗೆ ಹೋಗುವ ಎಲ್ಲಾ ಇತರ ವಿಮಾನಗಳು ಮಧ್ಯಪ್ರಾಚ್ಯದಲ್ಲಿ ಲಭ್ಯವಿರುವ ವಾಯುಪ್ರದೇಶಗಳ ಮೂಲಕ ಪರ್ಯಾಯ ಮಾರ್ಗಗಳನ್ನು ಬಳಸಿಕೊಂಡು ವೇಳಾಪಟ್ಟಿಯ ಪ್ರಕಾರ ಕಾರ್ಯನಿರ್ವಹಿಸುತ್ತವೆ. ಈ ವಿಮಾನಗಳ ಹಾರಾಟದ ಸಮಯದಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ.
ಹೆಚ್ಚುವರಿಯಾಗಿ, ನ್ಯೂಯಾರ್ಕ್ (ಜೆಎಫ್‌ಕೆ) ಮತ್ತು ನ್ಯೂಯಾರ್ಕ್ (ಲಿಬರ್ಟಿ ಇಂಟರ್‌ನ್ಯಾಷನಲ್)ಗೆ ವಿಮಾನಗಳು ರೋಮ್‌ನಲ್ಲಿ (ಫಿಯುಮಿಸಿನೊ ವಿಮಾನ ನಿಲ್ದಾಣ) ತಾಂತ್ರಿಕ ನಿಲುಗಡೆ ಜೊತೆಗೆ ಕಾರ್ಯನಿರ್ವಹಿಸಲಿವೆ. ರೋಮ್‌ನಲ್ಲಿ ನಿಲುಗಡೆಯೊಂದಿಗೆ, ಉತ್ತರ ಅಮೆರಿಕಕ್ಕೆ ತೆರಳುವ ಏರ್ ಇಂಡಿಯಾ ವಿಮಾನಗಳ ಹಾರಾಟದ ಸಮಯ ಹೆಚ್ಚಾಗುತ್ತದೆ ಮತ್ತು ನಿರ್ವಹಣಾ ವೆಚ್ಚಗಳು ಕೂಡ ಹೆಚ್ಚಾಗುತ್ತವೆ ಎಂದು ಏರ್ ಇಂಡಿಯಾ ಹೇಳಿದೆ.
ಇರಾನ್ ಮತ್ತು ಇರಾಕ್ ವಾಯುಪ್ರದೇಶಗಳು ಮುಚ್ಚಿರುವುದರಿಂದ, ವಿಮಾನಯಾನ ಸಂಸ್ಥೆಯು ಯುರೋಪ್ ತಲುಪಲು ಈಜಿಪ್ಟ್ ಮಾರ್ಗವನ್ನು ಬಳಸಲಿದೆ. ಅಂದರೆ 30-40 ನಿಮಿಷಗಳ ಹೆಚ್ಚುವರಿ ಹಾರಾಟದ ಸಮಯ ಬೇಕಾಗುತ್ತದೆ. ವಿಮಾನಗಳು ಓಮನ್, ಸೌದಿ ಅರೇಬಿಯಾದ ದಕ್ಷಿಣ ಭಾಗ ಮತ್ತು ಯುರೋಪಿಯನ್ ಮತ್ತು ಉತ್ತರ ಅಮೆರಿಕಾದ ಸ್ಥಳಗಳಿಗೆ ಈಜಿಪ್ಟ್ ಮೂಲಕ ಹೋಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 2ರಂದು ಈ ಕಾರ್ಯಾಚರಣೆಗಳನ್ನು ನಿರ್ಧರಿಸುವ ಮೊದಲು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು ಮತ್ತು ಸುರಕ್ಷತೆ, ಭದ್ರತೆ, ವಾಯುಪ್ರದೇಶದ ಲಭ್ಯತೆ ಮತ್ತು ಕಾರ್ಯಾಚರಣೆಯ ಕಾರ್ಯಸಾಧ್ಯತೆಗಳನ್ನು ಎಚ್ಚರಿಕೆಯಿಂದ ನಿರ್ಣಯಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಹೆಚ್ಚುತ್ತಿರುವ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ವಿಮಾನ ಕಾರ್ಯಾಚರಣೆಗಳು ಗಮನಾರ್ಹವಾಗಿ ಅಸ್ತವ್ಯಸ್ತಗೊಂಡಿವೆ. ನಾಗರಿಕ ವಿಮಾನಯಾನ ಸಚಿವಾಲಯ ಭಾನುವಾರ ಭಾರತೀಯ ವಿಮಾನಯಾನ ಸಂಸ್ಥೆಗಳು 350 ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿವೆ ಎಂದು ಹೇಳಿತ್ತು.
ಇದನ್ನೂ ಓದಿ: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಸ್ತಬ್ಧ

