ಅಹಮದಾಬಾದ್ ಸರಣಿ ಸ್ಫೋಟ: 38 ಮಂದಿಗೆ ಗಲ್ಲು, 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್
ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ- 49 ಅಪರಾಧಿಗಳ ಶಿಕ್ಷೆಗೆ ಅಸ್ತು ಎಂದ ಗುಜರಾತ್ ಹೈಕೋರ್ಟ್.

Published : July 7, 2026 at 6:58 PM IST
ಅಹಮದಾಬಾದ್ (ಗುಜರಾತ್): 2008ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ ಇಂದು ಎತ್ತಿಹಿಡಿದಿದೆ.
ಪ್ರಕರಣದಲ್ಲಿ ಅಪರಾಧಿಗಳು ಎಂದು ಘೋಷಿಸಲಾದ 49 ಮಂದಿಯ ಪೈಕಿ 38 ಮಂದಿಗೆ ಮರಣದಂಡನೆ ಮತ್ತು 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಚಾರಣಾಧೀನ ಕೋರ್ಟ್ ಆದೇಶಿಸಿತ್ತು. ಇದು ನ್ಯಾಯಯುತವಾಗಿದೆ ಎಂದು ನ್ಯಾಯಮೂರ್ತಿಗಳಾದ ಎ.ವೈ. ಕೊಗ್ಜೆ ಮತ್ತು ಸಮೀರ್ ಡೇವ್ ಅವರಿದ್ದ ವಿಭಾಗೀಯ ಪೀಠವು ಕೆಳ ನ್ಯಾಯಾಲಯದ ಆದೇಶದ ವಿರುದ್ಧ ಸಲ್ಲಿಸಲಾದ ಎಲ್ಲ ಮೇಲ್ಮನವಿಗಳನ್ನು ವಜಾ ಮಾಡಿತು.
ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಇಂಡಿಯನ್ ಮುಜಾಹಿದ್ದೀನ್ನ ಸದಸ್ಯರಾಗಿರುವ ಅಪರಾಧಿಗಳು, 2022ರ ಫೆಬ್ರವರಿ 18 ರಂದು ವಿಶೇಷ ನ್ಯಾಯಾಲಯ ನೀಡಿದ್ದ ಶಿಕ್ಷೆಯ ಆದೇಶವನ್ನು ಪ್ರಶ್ನಿಸಿ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು. ಅಪರಾಧಿಗಳಲ್ಲಿ ನಿಷೇಧಿತ ಸಂಘಟನೆಯಾದ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ನ ಮಾಜಿ ನಾಯಕ ಸಫ್ದಾರ್ ನಾಗೋರಿ ಮತ್ತು ಅವನ ಸಹಚರರೂ ಇದ್ದಾರೆ.
4 ವರ್ಷಗಳ ಹಿಂದೆ ಶಿಕ್ಷೆ ಪ್ರಕಟ: ಉಗ್ರ ಸಂಘಟನೆಯ ಸದಸ್ಯರಾಗಿದ್ದ 49 ಜನರನ್ನು ಅಪರಾಧಿಗಳು ಎಂದು ಘೋಷಿಸಿದ ವಿಶೇಷ ನ್ಯಾಯಾಲಯ ಅಂದು ಅದರಲ್ಲಿ 38 ಮಂದಿಗೆ ಮರಣದಂಡನೆ, 11 ಅಪರಾಧಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿತ್ತು. 4 ವರ್ಷಗಳ ಹಿಂದಿನ ಈ ಆದೇಶದ ವಿರುದ್ಧ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್ ಶಿಕ್ಷೆ ಜಾರಿ ಮಾಡಲು ಸೂಚಿಸಿತು.
ಜೊತೆಗೆ, ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಮತ್ತು ತೀವ್ರವಾಗಿ ಗಾಯಗೊಂಡವರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಮೂಲಕ 18 ವರ್ಷಗಳ ಹಳೆಯ ಸ್ಫೋಟ ಪ್ರಕರಣವನ್ನು ಇತ್ಯರ್ಥ ಮಾಡಿದೆ.
70 ನಿಮಿಷಗಳಲ್ಲಿ 21 ಸ್ಫೋಟ: 2008ರ ಜುಲೈ 26 ರಂದು ಗುಜರಾತ್ನ ಅತಿದೊಡ್ಡ ನಗರವಾದ ಅಹಮದಾಬಾದ್‌ನ ವಿವಿಧ ಪ್ರದೇಶಗಳಲ್ಲಿ 70 ನಿಮಿಷಗಳ ಅಂತರದಲ್ಲಿ 21 ಕಡೆ ಬಾಂಬ್ ಸ್ಫೋಟಿಸಲಾಗಿತ್ತು. ಸರ್ಕಾರಿ ಆಸ್ಪತ್ರೆಗಳು, ನಿಲ್ಲಿಸಿದ್ದ ಬೈಕ್ಗಳು, ಕಾರುಗಳು ಮತ್ತು ವಿವಿಧ ಸ್ಥಳಗಳಲ್ಲಿ ಬಾಂಬ್ಗಳು ಸಿಡಿದು 56 ಮಂದಿಯನ್ನು ಬಲಿ ಪಡೆದು, 200 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದವು.
ರಕ್ತಪಿಪಾಸುಗಳ ಭೀಕರತೆ ಎಷ್ಟಿತ್ತೆಂದರೆ, ಇತರ ಸ್ಥಳಗಳಲ್ಲಿ ಬಾಂಬ್ ಸ್ಫೋಟದಿಂದ ಗಾಯಗೊಂಡವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದ್ದ ನಗರದ ಆಸ್ಪತ್ರೆಗಳ ಮೇಲೂ ಬಾಂಬ್ ಸ್ಫೋಟಿಸಲಾಗಿತ್ತು. ಆಸ್ಪತ್ರೆಗಳನ್ನೂ ಗುರಿಯಾಗಿಸಿಕೊಂಡು ನಡೆಸಿದ ಮೊದಲ ಭೀಕರ ಹತ್ಯಾಕಾಂಡ ಇದಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದ ಮುಂದೆ 78 ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಯಿತು. ಈ ಪೈಕಿ 49 ಮಂದಿ ಅಪರಾಧಿಗಳು ಎಂದು ಘೋಷಿಸಲಾಗಿದೆ. ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ 35 ಪ್ರಕರಣಗಳು ದಾಖಲಾಗಿದ್ದವು. ಅಹಮದಾಬಾದ್‌ನಲ್ಲಿ ಸರಣಿ ಸ್ಫೋಟಗಳಿಗೆ 20 ಎಫ್‌ಐಆರ್‌ಗಳು ಮತ್ತು ಸೂರತ್ ನಗರದಲ್ಲಿ ಬಾಂಬ್‌ಗಳನ್ನು ಇರಿಸಿದ್ದಕ್ಕೆ 15 ಕೇಸ್ ದಾಖಲಾಗಿದ್ದವು. ಇವುಗಳನ್ನು ವಿಲೀನಗೊಳಿಸಿ ವಿಚಾರಣೆ ನಡೆಸಲಾಗಿತ್ತು.
ಅತಿ ಹೆಚ್ಚು ಜನರಿಗೆ ಗಲ್ಲು ವಿಧಿಸಿದ ಮೊದಲ ಕೇಸ್: ಭಾರತದ ನ್ಯಾಯಾಂಗ ಇತಿಹಾಸದಲ್ಲಿಯೇ ಒಂದೇ ಬಾರಿಗೆ ಇಷ್ಟು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಮೊದಲ ಕೇಸ್ ಇದಾಗಿದೆ. 1991 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ 1998 ರಲ್ಲಿ ತಮಿಳುನಾಡಿನ ಟಾಡಾ ನ್ಯಾಯಾಲಯವು 26 ಅಪರಾಧಿಗಳಿಗೆ ಮರಣದಂಡನೆ ವಿಧಿಸಿತ್ತು. ಇದೇ ಈವರೆಗಿನ ಅತ್ಯಧಿಕವಾಗಿದೆ.
ಇವುಗಳನ್ನೂ ಓದಿ:

