ETV Bharat / bharat

ಅಹಮದಾಬಾದ್ ವಿಮಾನ ದುರಂತಕ್ಕೆ ಒಂದು ವರ್ಷ: ಉತ್ತರಕ್ಕಾಗಿ ಕಾಯುತ್ತಿರೋ ಸಂತ್ರಸ್ತರ ಕುಟುಂಬಗಳು, ಪೂರ್ಣ ಬ್ಲ್ಯಾಕ್ ಬಾಕ್ಸ್ ವರದಿಗೆ ಆಗ್ರಹ!

ಜೂನ್​ 12, 2025ರಂದು ಲಂಡನ್​ನ ಗ್ಯಾಟ್ವಿಕ್‌ಗೆ ಟೇಕ್ ಆಫ್ ಆದ ಏರ್ ಇಂಡಿಯಾ ವಿಮಾನ AI-171 ಸ್ವಲ್ಪ ಹೊತ್ತಲ್ಲೇ ಅಹಮದಾಬಾದ್‌ನ ಮೇಘನಿನಗರ ಪ್ರದೇಶದಲ್ಲಿರುವ ವೈದ್ಯಕೀಯ ಹಾಸ್ಟೆಲ್ ಸಂಕೀರ್ಣಕ್ಕೆ ಅಪ್ಪಳಿಸಿತ್ತು.

Vikram Patel with parents photo
ಫೋಷಕರ ಫೋಟೋ ಜೊತೆ ವಿಕ್ರಮ್ ಪಟೇಲ್ (ETV Bharat)
author img

By ETV Bharat Karnataka Team

Published : June 11, 2026 at 3:08 PM IST

3 Min Read
Choose ETV Bharat

ಮೆಹ್ಸಾನಾ/ಅಮ್ರೇಲಿ: 260 ಜನರನ್ನು ಬಲಿ ಪಡೆದ ಅಹಮದಾಬಾದ್​ ವಿಮಾನ ದುರಂತಕ್ಕೆ ಒಂದು ವರ್ಷ. ವರ್ಷ ಕಳೆದರೂ, ಆ ಭೀಕರ ದುರಂತದ ಹಿಂದಿನ ಗಾಯಗಳು ಮಾತ್ರ ಇನ್ನೂ ಮಾಸಿಲ್ಲ. ತನ್ನವರನ್ನು ಕಳೆದುಕೊಂಡ ಕುಟುಂಬಗಳು ಘಟನೆಗೆ ಕಾರಣಗಳು, ತಮ್ಮ ಪ್ರಶ್ನೆಗಳಿಗೆ ಉತ್ತರಗಳಿಗಾಗಿ ಎದುರು ನೋಡುತ್ತಿದ್ದಾರೆ.

ಕಳೆದ ವರ್ಷ ಜೂನ್ 12 ರಂದು ಲಂಡನ್​ನ ಗ್ಯಾಟ್ವಿಕ್‌ಗೆ ಟೇಕ್ ಆಫ್ ಆದ ಏರ್ ಇಂಡಿಯಾ ವಿಮಾನ AI-171 ಸ್ವಲ್ಪ ಹೊತ್ತಲ್ಲೇ ಅಹಮದಾಬಾದ್‌ನ ಮೇಘನಿನಗರ ಪ್ರದೇಶದಲ್ಲಿರುವ ವೈದ್ಯಕೀಯ ಹಾಸ್ಟೆಲ್ ಸಂಕೀರ್ಣಕ್ಕೆ ಅಪ್ಪಳಿಸಿತ್ತು.

ದುರಂತದಲ್ಲಿ ತನ್ನ ಹೆತ್ತವರಿಬ್ಬರನ್ನೂ ಕಳೆದುಕೊಂಡ ವಿಕ್ರಮ್ ಪಟೇಲ್ ಅವರ ಕಣ್ಣುಗಳಲ್ಲಿ ಆ ನೋವು ಇನ್ನೂ ಕಾಣುತ್ತಿದೆ. ಅರವತ್ತು ವರ್ಷದ ದಿನೇಶ್‌ಭಾಯ್ ಪಟೇಲ್ ಮತ್ತು ಅವರ ಪತ್ನಿ ಕೃಷ್ಣಬೆನ್ ಪಟೇಲ್ ಮೊದಲ ಬಾರಿಗೆ ಲಂಡನ್‌ನಲ್ಲಿ ತಮ್ಮ ಮಗ ವಿಕ್ರಮ್ ಅವರನ್ನು ಭೇಟಿ ಮಾಡಲು AI-171 ವಿಮಾನ ಏರಿದ್ದರು. ಆದರೆ, ವಿಮಾನ ಟೇಕ್​ ಆಫ್​ ಆದ ಸ್ವಲ್ಪ ಹೊತ್ತಲ್ಲೇ ಅಪಘಾತಕ್ಕೀಡಾಗಿತ್ತು.

ದಿನೇಶ್‌ಭಾಯ್ ಅವರು ತಮ್ಮ ಮಗನಿಗೆ ಶಿಕ್ಷಣ ನೀಡಲು ಮತ್ತು ಉತ್ತಮ ಭವಿಷ್ಯ ರೂಪಿಸಲು ವರ್ಷಗಳ ಕಾಲ ಶ್ರಮಿಸಿದ್ದರು. ಎಲ್ಲವೂ ಚೆನ್ನಾಗಿದೆ ಎಂದುಕೊಳ್ಳುತ್ತಿದ್ದಾಗಲೇ, ವಿಮಾನ ದುರಂತ ಕುಟುಂಬವನ್ನೇ ಛಿದ್ರಗೊಳಿಸಿತ್ತು. "ನನ್ನ ತಂದೆ ನನಗೆ ಶಿಕ್ಷಣ ನೀಡಲು ಏಳು ವರ್ಷಗಳ ಕಾಲ ನನ್ನಿಂದ ದೂರವಿದ್ದರು. ಆದರೆ, ನಾನು ಅವರಿಗೆ ಜಗತ್ತನ್ನು ತೋರಿಸಲು ಸಾಧ್ಯವಾಗಲಿಲ್ಲ. ವೀಸಾ ಅನುಮೋದನೆಗಿತ್ತು, ಎಲ್ಲವೂ ಸಿದ್ಧವಾಗಿತ್ತು. ಅವರು ನನ್ನನ್ನು ಭೇಟಿಯಾಗಲು ಮೊದಲ ಬಾರಿಗೆ ವಿಮಾನ ಹತ್ತಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು" ಎಂದು ವಿಕ್ರಮ್ ಬೇಸರ ವ್ಯಕ್ತಪಡಿಸಿದರು.

ಈ ದುರಂತ ಕುಟುಂಬವನ್ನು ಸಂಪೂರ್ಣವಾಗಿ ತಲೆಕೆಳಗಾಗಿ ಮಾಡಿತ್ತು. ವಿಕ್ರಮ್ ಮತ್ತು ಅವರ ಪತ್ನಿ ಲಂಡನ್ ತೊರೆದು ಶಾಶ್ವತವಾಗಿ ಭಾರತಕ್ಕೆ ಮರಳಿದ್ದಾರೆ. ಈ ನಷ್ಟ ಅವರ ನಾಲ್ವರು ಸಹೋದರಿಯರು ಮತ್ತು ಸಹೋದರ ಸೇರಿದಂತೆ ಇಡೀ ಕುಟುಂಬವನ್ನು ತೀವ್ರವಾಗಿ ಬಾಧಿಸಿದೆ. ಜೀವನವೇ ಅಪೂರ್ಣವೆನಿಸುತ್ತದೆ. ಹೆತ್ತವರನ್ನು ಕಳೆದುಕೊಳ್ಳುವುದು ಎಲ್ಲವನ್ನೂ ಕಳೆದುಕೊಂಡಂತೆ ಎಂದು ದುಃಖಿತರಾದರು.

ಅದೇ ಸಮಯದಲ್ಲಿ, ಅಪಘಾತದ ಬಳಿಕ ದಿನೇಶ್‌ಭಾಯ್ ಅವರ ಕುಟುಂಬ ಅಧಿಕಾರಿಗಳಿಂದ ಬೆಂಬಲದ ಕೊರತೆಯ ಬಗ್ಗೆ ಆರೋಪಿಸಿದೆ. ಅವರ ಪ್ರಕಾರ, ದುರಂತದ ನಂತರ ವಿಕ್ರಮ್ ಅವರ ಅಜ್ಜಿ ಅನಾರೋಗ್ಯಕ್ಕೆ ಒಳಗಾದಾಗ ಟಾಟಾ ಮತ್ತು ಏರ್ ಇಂಡಿಯಾದ ಅಧಿಕಾರಿಗಳನ್ನು ಸಂಪರ್ಕಿಸಲು ಪದೇ ಪದೆ ಪ್ರಯತ್ನಿಸಲಾಯಿತು. ಇಮೇಲ್‌ಗಳು, ಸಂದೇಶಗಳು ಮತ್ತು ಫೋನ್ ಕರೆಗಳಿಗೆ ಯಾವುದೇ ಉತ್ತರ ಬರಲಿಲ್ಲ. ಇಂತಹ ಕಷ್ಟದ ಸಮಯಗಳಲ್ಲಿಯೂ ಸಹ, ನಾವು ಸಂಸ್ಥೆಗಳ ಉದಾಸೀನತೆ ಕಂಡಿದ್ದೇವೆ ಎಂದು ವಿಕ್ರಮ್ ಆರೋಪಿಸಿದರು.

ಟಾಟಾ ಟ್ರಸ್ಟ್‌ನಿಂದ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಮತ್ತು ಏರ್ ಇಂಡಿಯಾದಿಂದ 25 ಲಕ್ಷ ರೂಪಾಯಿಗಳ ಆರ್ಥಿಕ ನೆರವು ದೊರೆತಿದ್ದರೂ, ನಮ್ಮ ಬೇಡಿಕೆ ಪರಿಹಾರಕ್ಕಿಂತ ಹೆಚ್ಚಿನದಾಗಿದೆ. ಈ ಹೋರಾಟ ಹಣದ ಬಗ್ಗೆ ಅಲ್ಲ. ಸತ್ಯ, ಹೊಣೆಗಾರಿಕೆ ಮತ್ತು ನ್ಯಾಯದ ಬಗ್ಗೆ ಎಂದು ಅವರು ಹೇಳಿದರು.

ಈ ಮಧ್ಯೆ, ಅಪಘಾತದ ಸ್ಥಳದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ. ಇದಕ್ಕೆ ಹಲವಾರು ಸಂತ್ರಸ್ತ ಕುಟುಂಬಗಳು ಆಕ್ಷೇಪಣೆ ವ್ಯಕ್ತಪಡಿಸಿವೆ. ಸ್ಥಳದಲ್ಲಿ ಯಾವುದೇ ನಿರ್ಮಾಣ ಕಾರ್ಯ ಪ್ರಾರಂಭವಾಗುವ ಮೊದಲು ಸಂಪೂರ್ಣ ಬ್ಲ್ಯಾಕ್ ಬಾಕ್ಸ್ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ವಿಕ್ರಮ್ ಮತ್ತು ಇತರ ಸಂತ್ರಸ್ತ ಕುಟುಂಬಗಳು ಒತ್ತಾಯಿಸಿವೆ.

ಸ್ಥಳ ಬದಲಾವಣೆ ಮಾಡುವ ಮೊದಲು ಅಪಘಾತದ ನಿಜವಾದ ಕಾರಣವನ್ನು ತಿಳಿದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಅಪಘಾತದ ಹಿಂದಿನ ಸತ್ಯವನ್ನು ಬಹಿರಂಗಪಡಿಸಿ, ಹೊಣೆಗಾರರ ​​ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಟುಂಬವು ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದೆ. ಭವಿಷ್ಯದಲ್ಲಿ ಇದೇ ರೀತಿಯ ದುರಂತಗಳು ಸಂಭವಿಸದಂತೆ ಸತ್ಯ ಹೊರಬರಬೇಕು ಎಂದು ವಿಕ್ರಮ್ ಹೇಳಿದ್ದಾರೆ.

ಅಪಘಾತದಲ್ಲಿ ಪ್ರಾಣ ಕಳೆದುಕೊಂಡ 25 ವರ್ಷದ ರಿದ್ಧಿ ಪದಶಾಲಾ ಅವರ ಕುಟುಂಬ ಕೂಡ ಇದೇ ರೀತಿಯ ಬೇಡಿಕೆಗಳನ್ನು ಮುಂದಿಟ್ಟಿದೆ. ಅವರ ತಾಯಿ ಗೀತಾಬೆನ್ ಪದಶಾಲಾ ಅವರು, ವಿಮಾನ ದುರಂತಕ್ಕೆ ನಿಖರವಾದ ಕಾರಣ ತಿಳಿಯಬೇಕು ಎಂದು ಒತ್ತಾಯಿಸಿದ್ದಾರೆ.

ವಿಮಾನ ಹೊರಡುವ ಸ್ವಲ್ಪ ಸಮಯದ ಮೊದಲು ಗೀತಾಬೆನ್ ತಮ್ಮ ಮಗಳನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದನ್ನು ನೆನಪಿಸಿಕೊಂಡು, ನಮಗೆ ಇನ್ನೂ ಮಗಳನ್ನು ಕಳೆದುಕೊಂಡಿದ್ದೇವೆ ಎಂದು ಅನಿಸುತ್ತಿಲ್ಲ. ಇಂದಿಗೂ, ಅಪರಿಚಿತ ಸಂಖ್ಯೆಯಿಂದ ಕರೆ ಬಂದಾಗ, ಮಗಳದ್ದೇ ಆಗಿರಬಹುದು ಎಂದು ಅನಿಸುತ್ತದೆ ಎಂದು ಗೀತಾಬೆನ್ ಕಣ್ಣೀರು ಸುರಿಸಿದರು.

ವಿಮಾನದ ಬ್ಲ್ಯಾಕ್​ ಬಾಕ್ಸ್​ ಡೇಟಾವನ್ನು ಬಹಿರಂಗಪಡಿಸಬೇಕು ಮತ್ತು ಪಾರದರ್ಶಕ ತನಿಖೆ ನಡೆಸಬೇಕೆಂದು ಕುಟುಂಬ ಅಧಿಕಾರಿಗಳನ್ನು ಒತ್ತಾಯಿಸಿದೆ. ನಮಗೆ ಹಣ ಬೇಡ. ಅಪಘಾತ ಯಾಕೆ ಸಂಭವಿಸಿತು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ: ದೆಹಲಿ ಏರ್​​ಪೋರ್ಟ್​ನಲ್ಲಿ ಹಠಾತ್ ಬಿರುಗಾಳಿ ಮಳೆಯಿಂದ ಮೂರು ವಿಮಾನಗಳಿಗೆ ಹಾನಿ: ತನಿಖೆಗೆ ಡಿಜಿಸಿಎ ಆದೇಶ