ETV Bharat / bharat

ಕಲಬೆರಕೆ ಹಾಲಿನಿಂದ 6 ಜನರ ದುರಂತ ಅಂತ್ಯ: ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ 15 ಜನರ ಹೋರಾಟ!

ಕಲಬೆರಕೆ ಹಾಲು ಸೇವೆನೆಯಿಂದ ವೆಂಟಿಲೇಟರ್‌ ಮೇಲೆ ಪ್ರೀತಿ-ಪಾತ್ರರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದರೆ, ಇತ್ತ ಕುಟುಂಬಗಳಿಗೆ ಐಸಿಯುಗಳ ಹೊರಗೆ ಅಸಹಾಯಕರಾಗಿ ದೇವರನ್ನು ಬೇಡುವುದು ಬಿಟ್ಟರೆ ಬೇರೆ ದಾರಿಯಿಲ್ಲದಂತಾಗಿದೆ.

ANDHRA MILK TRAGEDY  ಹಾಲು ದುರಂತ ಆಂಧ್ರ  RAJAMAHENDRAVARAM  ಎಥಿಲೀನ್ ಗ್ಲೈಕಾಲ್ ಅನಿಲ
ಕಲಬೆರಕೆ ಹಾಲು ಸೇವೆನೆಯಿಂದ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ. (ETV Bharat)
author img

By ETV Bharat Karnataka Team

Published : February 26, 2026 at 7:06 PM IST

3 Min Read
Choose ETV Bharat

ರಾಜಮಹೇಂದ್ರವರಂ (ಆಂಧ್ರಪ್ರದೇಶ): ಅನಧಿಕೃತ ಡೈರಿಯಲ್ಲಿ ಅನಿಲ ಸೋರಿಕೆಯಿಂದ ಹಾಲು ಕಲಬೆರಕೆಯಾಗಿ ಹಲವರು ಅನಾರೋಗ್ಯಕ್ಕೆ ತುತ್ತಾದ ಪ್ರಕರಣದಲ್ಲಿ ಇಲ್ಲಿಯವರೆಗೆ ಆರು ಜನರು ಸಾವನ್ನಪ್ಪಿದ್ದಾರೆ. ಇನ್ನು 15 ಮಂದಿ ಐಸಿಯುಗಳಲ್ಲಿ ಜೀವನಕ್ಕಾಗಿ ಹೋರಾಡುತ್ತಿದ್ದಾರೆ. ತಮ್ಮವರಿಗಾಗಿ ಕುಟುಂಬಸ್ಥರ ನಿದ್ರೆಯಿಲ್ಲದ ರಾತ್ರಿ, ಅಂತ್ಯವಿಲ್ಲದ ಕಣ್ಣೀರು, ಕಾಡುವ ಮೌನ ಆಸ್ಪತ್ರೆಯ ಕಾರಿಡಾರ್‌ ತುಂಬಾ ತುಂಬಿದೆ.

ಕೋರುಕೊಂಡ ತಾಲೂಕಿನ ಡೈರಿಯೊಂದರ ಫ್ರಿಡ್ಜ್​ನಲ್ಲಿ ಎಥಿಲೀನ್ ಗ್ಲೈಕಾಲ್ ಸೋರಿಕೆಯಾಗಿ ಅದರಲ್ಲಿ ಹಾಲು ಕಲುಷಿತಗೊಂಡಿತ್ತು. ಈ ಡೈರಿಯ ಮಾಲೀಕರು ಪ್ರತಿದಿನ ಸುಮಾರು 120 ಲೀಟರ್ ಹಾಲನ್ನು ಮೂರು ಕ್ಯಾನ್‌ಗಳಲ್ಲಿ ಸಂಗ್ರಹಿಸಿ ಮರುದಿನ ಮನೆಗಳಿಗೆ ವಿತರಿಸುತ್ತಾರೆ. ಆದರೆ ಫೆ. 15ರಂದು ಫ್ರಿಡ್ಜ್​ನಲ್ಲಿ ಎಥಿಲೀನ್ ಗ್ಲೈಕಾಲ್ ಅನಿಲ ಸೋರಿಕೆಯಾಗಿ ಒಂದು ಕ್ಯಾನ್ ಹಾಲು ಕಲುಷಿತಗೊಂಡಿತ್ತು. ಇದರ ಅರಿವಿಲ್ಲದೆ, ಮಾಲೀಕರು ಆ ಹಾಲನ್ನು ಗ್ರಾಹಕರಿಗೆ ವಿತರಿಸಿದ್ದರು.

ಇದನ್ನು ಸೇವಿಸಿದವರಲ್ಲಿ ಈಗಾಗಲೇ ಅನಾರೋಗ್ಯಕ್ಕೆ ತುತ್ತಾಗಿ 6 ಜನರು ಉಸಿರು ಚೆಲ್ಲಿದ್ದಾರೆ. ಉಳಿದ 15 ಮಂದಿಗೆ ಚಿಕಿತ್ಸೆ ಮುಂದುವರೆದಿದೆ. ಚಿಕಿತ್ಸೆ ಪಡೆಯುತ್ತಿರುವ ರೋಗಿಯೊಬ್ಬರ ಸಂಬಂಧಿ ಕೃಷ್ಣ ರಾವ್ ಎಂಬುವರ ಸಂಬಂಧಿ ಮಾತನಾಡಿ, " ನನ್ನ ಸೋದರ ಮಾವ ಕೃಷ್ಣ ರಾವ್ ತುಂಬಾ ಕ್ರಿಯಾಶೀಲರಾಗಿದ್ದರು. ಫೆಬ್ರವರಿ 15ರ ಸಂಜೆ, ಅವರು ನೆಲ್ಲೂರಿನಿಂದ ಫೋನ್‌ನಲ್ಲಿ ನನ್ನೊಂದಿಗೆ ಮಾತನಾಡಿದ್ದರು. ಮರುದಿನ ಬೆಳಗ್ಗೆ, ಹಾಲು ಕುಡಿದ ಕೇವಲ ಮೂರು ಗಂಟೆಗಳ ನಂತರ, ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು. ಎರಡೂ ಮೂತ್ರಪಿಂಡಗಳು ವಿಫಲವಾಗಿವೆ ಎಂದು ವೈದ್ಯರು ನಮಗೆ ತಿಳಿಸಿದರು. ಅವರು ನಾಲ್ಕು ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದಾರೆ ಮತ್ತು ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ. ಅವರು ಬದುಕುಳಿಯಬೇಕು" ಎಂದು ಭಾವುಕರಾಗಿ ಹೇಳಿದರು.

ಕಲಬೆರಕೆ ಹಾಲು ಸೇವಿಸಿದ ನಂತರ ಮಧು ಎಂಬುವರ ಕುಟುಂಬದ ಮೂವರು ಸದಸ್ಯರ ಮೂತ್ರಪಿಂಡಕ್ಕೆ ಹಾನಿಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. "ತನ್ನ ಪೋಷಕರು ಎಂದಿಗೂ ಎಂದಿಗೂ ಸಲೈನ್ ತೆಗೆದುಕೊಳ್ಳದವರು. ಈಗ ಅವರು ಐಸಿಯುನಲ್ಲಿದ್ದಾರೆ. ನನ್ನ ತಂದೆಯ ಸ್ಥಿತಿ ಸ್ವಲ್ಪ ಉತ್ತಮವಾಗಿದೆ, ಆದರೆ ಇತರ ಕುಟುಂಬ ಸದಸ್ಯರು ಒಂದು ವಾರದಿಂದ ಮೂತ್ರ ವಿಸರ್ಜಿಸಿಲ್ಲ. ಆ ದಿನ, ನನ್ನ ತಾಯಿ ನನಗೆ ಮಜ್ಜಿಗೆ ಕುಡಿಯಲು ಹೇಳಿದ್ದರು. ನಾನು ದಣಿದಿದ್ದೆ, ಇದರ ಬದಲಿಗೆ ಸಬ್ಜಾ ನೀರು ಕುಡಿದಿದ್ದೇನೆ. ಇಲ್ಲದಿದ್ದರೆ, ನನ್ನ ಸ್ಥಿತಿ ಏನಾಗುತ್ತಿತ್ತು?" ಎಂದು ದುರಂತದ ಭೀಕರತೆಯನ್ನು ಬಿಚ್ಚಿಟ್ಟರು.

ಇನ್ನು ಇಲ್ಲಿನ ಚೌಡೇಶ್ವರಿನಗರ ನಿವಾಸಿ ಸತ್ಯನಾರಾಯಣ ಫೆಬ್ರವರಿ 16ರಂದು ಅಸ್ವಸ್ಥರಾಗಿದ್ದರು. ಆದರೆ ಫೆ. 18ರಂದು ಅವರನ್ನು ದಾಖಲಿಸಲಾಗಿತ್ತು. ಅವರಿಗೆ ಈಗಾಗಲೇ ಮೂರು ಬಾರಿ ಡಯಾಲಿಸಿಸ್‌ ಮಾಡಲಾಗಿದೆ. ಘಟನೆಗೆ ಸರ್ಕಾರದ ಸ್ಪಂದನೆ ಉತ್ತಮವಾಗಿದೆ. ಆದರೆ ತಮ್ಮವರ ನಿಧಾನಗತಿಯ ಚೇತರಿಕೆ ಗಂಭೀರವಾಗಿದೆ. ಚೇತರಿಕೆಗೆ ಸಮಯ ತೆಗೆದುಕೊಳ್ಳುತ್ತದೆ ಎಂದು ವೈದ್ಯರು ಹೇಳಿದ್ದಾರೆ ಸತ್ಯನಾರಾಯಣ ಅವರ ಮಗ ತಿಳಿಸಿದರು.

ಘಟನೆಯ ಬಾಧಿತ ಐದು ತಿಂಗಳ ಮಗು ರುಹಾನ್ಯಾ ಫೆಬ್ರವರಿ 21ರಿಂದ ವೆಂಟಿಲೇಟರ್‌ನಲ್ಲಿದ್ದು ಪ್ರತಿದಿನ ಡಯಾಲಿಸಿಸ್​ಗೆ ಒಳಗಾಗುತ್ತಿದೆ. ವೈದ್ಯರು ಮಗುವಿನ ಸ್ಥಿತಿ ಸ್ಥಿರವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಇಷ್ಟು ಸಣ್ಣ ಮಗು ಬಳಲುತ್ತಿರುವುದನ್ನು ನಾವು ಹೇಗೆ ಸಹಿಸಿಕೊಳ್ಳುವುದು ಎಂದು ಆಕೆಯ ಚಿಕ್ಕಪ್ಪ ಓಂಕಾರ್​ ಸಾಯಿ ನೋವಿನ ಅಸಹಾಯಕತೆಯನ್ನು ಹೊರಹಾಕಿದರು.

ಇನ್ನೋರ್ವ ಬಾಲಕ ಜೈಕೃತರಾಜ್ (2 ವರ್ಷ 9 ತಿಂಗಳು) ಆತನ ಸ್ಥಿತಿ ಇನ್ನೂ ಸುಧಾರಿಸುತ್ತಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಫೆಬ್ರವರಿ 19 ರಂದು ರಾಜಮಂಡ್ರಿ ಸರ್ಕಾರಿ ಜನರಲ್ ಆಸ್ಪತ್ರೆಯಿಂದ ಕಾಕಿನಾಡ ಸರ್ಕಾರಿ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಯಾವುದೇ ಚಿಕಿತ್ಸೆ ಲಭ್ಯವಿರಲಿಲ್ಲ. ನಾವು ಅಮೂಲ್ಯ ಸಮಯವನ್ನು ಕಳೆದುಕೊಂಡೆವು ಎಂದು ಅವರ ಅಜ್ಜ ಪ್ರಕಾಶ್ ರಾವ್ ಬೇಸರ ವ್ಯಕ್ತಪಡಿಸಿದರು.

ಇನ್ನು ರಾಜಮಹೇಂದ್ರವರಂನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಂಟು ರೋಗಿಗಳ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿದೆ ಮತ್ತು ಡಯಾಲಿಸಿಸ್ ಮಾಡಲಾಗುತ್ತಿದೆ. ಆರು ರೋಗಿಗಳು ಆಸ್ಪತ್ರೆ ವಾರ್ಡ್‌ಗಳಲ್ಲಿ ಡಯಾಲಿಸಿಸ್​ ಪಡೆಯುತ್ತಿದ್ದಾರೆ. ಒಂದು ವಾರಕ್ಕೂ ಹೆಚ್ಚು ಕಾಲ ಆಸ್ಪತ್ರೆಗೆ ದಾಖಲಾಗಿದ್ದರೂ, ಅನೇಕ ರೋಗಿಗಳು ಸರಿಯಾಗಿ ಮೂತ್ರ ವಿಸರ್ಜಿಸುತ್ತಿಲ್ಲ ಎಂದು ಕುಟುಂಬ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ತಮ್ಮ ಮೂತ್ರದಲ್ಲಿ ರಕ್ತವನ್ನು ವಿಸರ್ಜಿಸುತ್ತಿದ್ದು, ಇದು ತೀವ್ರ ಮೂತ್ರಪಿಂಡದ ಹಾನಿಯನ್ನು ಸೂಚಿಸುತ್ತದೆ ಎಂದು ವರದಿಯಾಗಿದೆ.

ಮುಂಬೈನಿಂದ ವಿಶೇಷ ಚುಚ್ಚುಮದ್ದು ತರಿಸಿಕೊಂಡ ವೈದ್ಯರ ತಂಡ: ಖ್ಯಾತ ಮೂತ್ರಪಿಂಡಶಾಸ್ತ್ರಜ್ಞ ಡಾ. ರವಿರಾಜ್ ಅವರ ಸಲಹೆಯನ್ನು ಅನುಸರಿಸಿ, ಮುಂಬೈನಿಂದ 50 ವಿಶೇಷ ಇಂಜೆಕ್ಷನ್‌ಗಳನ್ನು ಖರೀದಿಸಲಾಯಿತು. ಪ್ರತಿಯೊಬ್ಬ ರೋಗಿಯ ವೈಯಕ್ತಿಕ ಆರೋಗ್ಯ ಸ್ಥಿತಿಯನ್ನು ಆಧರಿಸಿ ಇಂಜೆಕ್ಷನ್‌ಗಳನ್ನು ನೀಡಲಾಗುವುದು ಮತ್ತು ಗಂಭೀರ ಪ್ರಕರಣಗಳನ್ನು ಸ್ಥಿರಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಡೈರಿಯ ಫ್ರಿಡ್ಜ್​​ನಲ್ಲಿ ಅನಿಲ ಸೋರಿಕೆಯಾಗಿ ಹಾಲು ಕಲುಷಿತ: ಇದನ್ನು ಬಳಸಿದವರಲ್ಲಿ ಮೂತ್ರಪಿಂಡ ವೈಫಲ್ಯ?

ಇದನ್ನೂ ಓದಿ: ಮೂತ್ರಪಿಂಡದ ಕಾಯಿಲೆಯಿಂದ ಐದು ಮಂದಿ ಸಾವು: ನಾಲ್ವರ ಸ್ಥಿತಿ ಗಂಭೀರ, ಕಲಬೆರಕೆ ಹಾಲು ಸೇವನೆ ಶಂಕೆ