ETV Bharat / bharat

ಬಾಣಂತಿಯ ಮೆದುಳು ನಿಷ್ಕ್ರಿಯ: ಇಬ್ಬರು ಮಕ್ಕಳನ್ನಗಲಿ ನಾಲ್ವರಿಗೆ ಮರುಜೀವ ನೀಡಿದ ಮಹಾತಾಯಿ

ಅಂಗಾಂಗ ದಾನದ ಮೂಲಕ ಎರಡು ಮಕ್ಕಳ ತಾಯಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

BRAIN DEAD  ಬಾಣಂತಿ ಮಹಿಳೆ ಅಂಗಾಂಗ ದಾನ  ಮೆದುಳು ನಿಷ್ಕ್ರಿಯ  ORGAN DONATION
ಈಸ್ತಾ ಸೃಜನಾ (34) ಅಂಗಾಂಗ ದಾನಿ ಬಾಣಂತಿ (Eenadu)
author img

By ETV Bharat Karnataka Team

Published : February 27, 2026 at 3:32 PM IST

1 Min Read
Choose ETV Bharat

ಆಸಿಫಾಬಾದ್(ತೆಲಂಗಾಣ)​: ಹಠಾತ್ ಆರೋಗ್ಯ ಸಮಸ್ಯೆಯಿಂದ ಬಾಣಂತಿಯೋರ್ವರ ಮೆದುಳು ನಿಷ್ಕ್ರಿಯಗೊಂಡಿದ್ದು, ಅವರ ಪತಿ ಸಾವಿನ ನೋವಿನಲ್ಲೂ ಪತ್ನಿಯ ಅಂಗಾಂಗಗಳನ್ನು ದಾನ ಮಾಡಿ ನಾಲ್ವರಿಗೆ ಹೊಸ ಜೀವ, ನೀಡಿದ್ದಾರೆ. ಈಸ್ತಾ ಸೃಜನಾ (34) ಅಂಗಾಂಗ ದಾನ ಮಾಡಿರುವ ಬಾಣಂತಿ.

ತೆಲಂಗಾಣದ ಜಂಕಾಪುರದ ಗುಂಡು ನಾಗರಾಜು ಅವರು 2018ರಲ್ಲಿ ಮಂದಮರ್ರಿಯ ಮೂಲದ ಸೃಜನಾ ಅವರನ್ನು ವಿವಾಹವಾಗಿದ್ದರು. ಇವರಿಗೆ ಐದು ವರ್ಷದ ಮಗ ಅದ್ವಿಕ್ ಇದ್ದಾನೆ. ಕೆಲಸದ ಹಿನ್ನೆಲೆಯಲ್ಲಿ ದಂಪತಿ ಕಳೆದ ಮೂರು ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದರು. ಗರ್ಭಿಣಿಯಾಗಿದ್ದ ಸೃಜನಾ ಹೆರಿಗೆಗಾಗಿ ಮಂದಮರ್ರಿಯ ತನ್ನ ತಾಯಿ ಮನೆಗೆ ಮರಳಿದ್ದರು. 23 ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಕ್ಷಣ ಪತಿ ದುಬೈನಿಂದ ಊರಿಗೆ ಬಂದು ಕುಟುಂಬದೊಂದಿಗೆ 11 ದಿನ ಕಳೆದಿದ್ದರು. ಇಲ್ಲಿವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಹಠಾತ್ ಆರೋಗ್ಯ ಬಿಕ್ಕಟ್ಟು ಕುಟುಂಬವನ್ನೇ ಆಘಾತಕ್ಕೆ ದೂಡಿದೆ.

ಹೆರಿಗೆಯ ನಂತರ ಸುಮಾರು ಮೂರು ವಾರಗಳ ಕಾಲ ತನ್ನ ತಾಯಿಯ ಮನೆಯಲ್ಲಿದ್ದ ಸೃಜನಾ ತೀವ್ರ ತಲೆನೋವಿನಿಂದ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಅವರನ್ನು ಮಂಚೇರಿಯಲ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರಿಸ್ಥಿತಿ ಹದಗೆಟ್ಟಾಗ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಐದು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದರೂ, ವೈದ್ಯರು ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ದೃಢಪಡಿಸಿದರು.

ವೈದ್ಯರು ಮತ್ತು ಜೀವನಧನ್ ಕಾರ್ಯಕ್ರಮದ ಪ್ರತಿನಿಧಿಗಳು ದುಃಖಿತ ಕುಟುಂಬಕ್ಕೆ ಅಂಗಾಂಗ ದಾನದ ಮಹತ್ವದ ಬಗ್ಗೆ ಸಲಹೆ ನೀಡಿದರು. ನಾಗರಾಜು ತಕ್ಷಣ ದುಬೈನಿಂದ ಹಿಂದಿರುಗಿದರು ಮತ್ತು ದಿಟ್ಟ ನಿರ್ಧಾರ ತೆಗೆದುಕೊಂಡು ಪತ್ನಿ ಯ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಕೊಂಡರು. ಅವರ ಎರಡು ಮೂತ್ರಪಿಂಡಗಳು, ಯಕೃತ್ತು ಮತ್ತು ಶ್ವಾಸಕೋಶಗಳನ್ನು ಹೊರತೆಗೆದು ಕಸಿ ಮಾಡಲಾಯಿತು. ಇದು ನಾಲ್ಕು ಗಂಭೀರ ಅನಾರೋಗ್ಯಪೀಡಿತ ರೋಗಿಗಳಿಗೆ ಹೊಸ ಜೀವ ನೀಡಿತು.

ಸೃಜನಾ ಅವರ ಮೃತದೇಹವನ್ನು ಗುರುವಾರ (ನಿನ್ನೆ) ಜಂಕಾಪುರದಲ್ಲಿರುವ ಅವರ ಅತ್ತೆಯ ಮನೆಗೆ ತರಲಾಯಿತು. 26 ದಿನಗಳ ಶಿಶು ಮತ್ತು ಐದು ವರ್ಷದ ಮಗುವಿನ ತಾಯಿ ಇಲ್ಲದ ಒಂಟಿತನ ಗ್ರಾಮಸ್ಥರು, ಸಂಬಂಧಿಕರಲ್ಲಿ ಕಣ್ಣೀರು ಸುರಿಸಿತು. ದುಃಖಿತ ಕುಟುಂಬದ ಮಾನವೀಯ ನಿರ್ಧಾರವನ್ನು ಗ್ರಾಮಸ್ಥರು ಶ್ಲಾಘಿಸಿದರು.

ಇದನ್ನೂ ಓದಿ: ಮಗುವಿನ ಚಿಕಿತ್ಸೆಗೆ 16 ಕೋಟಿ ಸಂಗ್ರಹ! ನೆರವಾಯ್ತು ಕ್ರೌಡ್‌ಫಂಡಿಂಗ್; ಸಚಿವ ನಾರಾ ಲೋಕೇಶ್​ಗೂ ಪೋಷಕರ ಧನ್ಯವಾದ!