ಶಾಲೆಯಲ್ಲಿ ಆಟವಾಡುತ್ತಿರುವಾಗಲೇ ಕುಸಿದು ಬಿದ್ದು 9 ವರ್ಷದ ಬಾಲಕಿ ಸಾವು
ಶಾಲಾ ಆವರಣದಲ್ಲಿ ಆಟವಾಡುತ್ತಿರುವಾಗಲೇ ವಿದ್ಯಾರ್ಥಿನಿಯೋರ್ವಳು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Published : February 26, 2026 at 6:08 PM IST
ನಾಗೌರ್ (ರಾಜಸ್ಥಾನ): ಶಾಲಾ ಆವರಣದಲ್ಲಿ ಹಠಾತ್ ಕುಸಿದು ಬಿದ್ದು ಒಂಬತ್ತು ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ನಾಗೌರ್ ಜಿಲ್ಲೆಯ ಗೋಟನ್ ಪಟ್ಟಣದ ಗೋಟನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಫೆಬ್ರವರಿ 23ರ ಬೆಳಗ್ಗೆ 7.48ರ ಸುಮಾರಿಗೆ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆಘಾತಗೊಂಡಿದ್ದಾರೆ.
ರಾಜೇಂದ್ರ ಬಪೇಡಿಯಾ ಎಂಬುವರ ಪುತ್ರಿ ದಿವ್ಯಾ ಗೋಟನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದಳು. ಬಾಲಕಿ ಎಂದಿನಂತೆ ಬೆಳಗ್ಗೆ 7 ಗಂಟೆ ಸುಮಾರಿಗೆ ಶಾಲೆಗೆ ಬಂದಿದ್ದಳು. ಶಾಲಾ ಅಧಿಕಾರಿಗಳ ಪ್ರಕಾರ, ಬೆಳಗಿನ ಪ್ರಾರ್ಥನೆಗೂ ಮುನ್ನ ಆಟವಾಡುತ್ತಿದ್ದಾಗ ಅವಳು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಳು. ತಕ್ಷಣ ಸಹಾಯಕ್ಕೆ ಧಾವಿಸಿದ ಶಿಕ್ಷಕರು, ವಿದ್ಯಾರ್ಥಿನಿಯನ್ನು ಗೋಟನ್‌ನಲ್ಲಿರುವ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ ಅಷ್ಟರಲ್ಲಾಗಲೇ ಬಾಲಕಿ ಕೊನೆಯುಸಿರೆಳೆದಿದ್ದಳು.
ಹೃದಯಸ್ತಂಭನದಿಂದ ಸಾವು ಶಂಕೆ: ಬಾಲಕಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ತರಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪುವಾಗಲೇ ಮೃತಪಟ್ಟಿದ್ದಾಳೆಂದು ಘೋಷಿಸಲಾಯಿತು ಎಂದು ಗೋಟನ್ ಸಿಎಸ್‌ಸಿ ಉಸ್ತುವಾರಿ ಡಾ.ಸುಖರಾಮ್ ಬೆರ್ವಾಲ್ ಹೇಳಿದರು. ಪ್ರಾಥಮಿಕ ತಪಾಸಣೆ ಪ್ರಕಾರ, ಸಾವಿಗೆ ಹೃದಯಸ್ತಂಭನವೇ ಕಾರಣ ಎಂದು ತಿಳಿದುಬಂದಿದೆ. ಬಾಲಕಿಗೆ ಆರೋಗ್ಯ ಸಮಸ್ಯೆಯ ಕುರಿತಾದ ವೈದ್ಯಕೀಯ ಹಿಸ್ಟರಿ ಇರಲಿಲ್ಲ. ಆಕೆಯ ಕುಟುಂಬವು ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳಿರಲಿಲ್ಲ ಎಂದು ದೃಢಪಡಿಸಿದೆ ಎಂದು ಸುಖರಾಮ್ ತಿಳಿಸಿದರು.
ಘಟನೆ ನಡೆದ ತಕ್ಷಣವೇ ಕುಟುಂಬಕ್ಕೆ ಮಾಹಿತಿ ನೀಡಲಾಯಿತು. ಬಾಲಕಿಯ ಜೀವ ಉಳಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕುಟುಂಬವು ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಲು ನಿರಾಕರಿಸಿದೆ. ಇದರಿಂದಾಗಿ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಅಗತ್ಯ ವಿಧಿ-ವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು ಎಂದು ಶಾಲಾ ನಿರ್ದೇಶಕ ರಾಮ್ ಕುನ್ವರ್ ಓಲಾ ಹೇಳಿದರು.
ನಾಲ್ಕು ತಿಂಗಳ ಹಿಂದಷ್ಟೇ ದಿವ್ಯಾಳ 16 ವರ್ಷದ ಸಹೋದರ ಅಭಿಷೇಕ್ ಕೂಡ ಹಠಾತ್ ಸಾವನ್ನಪ್ಪಿದ್ದ. ಇದೀಗ, ಕುಟುಂಬವು ಮಗಳನ್ನೂ ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿದೆ. ಇಬ್ಬರು ಚಿಕ್ಕಮಕ್ಕಳ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ಪ್ರತ್ಯೇಕ ಘಟನೆ: ನಿಫಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದ ನರ್ಸ್ ಒಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಹೃದಯಸ್ತಂಭನದಿಂದ ಮೃತಪಟ್ಟ ಘಟನೆ ಇತ್ತೀಚೆಗೆ ಪಶ್ಚಿಮ ಬಂಗಾಳದ ಬರಾಸತ್‌ನಲ್ಲಿ ನಡೆದಿತ್ತು. ದೀರ್ಘಕಾಲದಿಂದ ಕೋಮಾದಲ್ಲಿದ್ದ ಮಹಿಳೆಯು ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಂಡಿದ್ದರು. ಅಲ್ಲದೆ, ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತ್ತು. ಆದರೆ ಜನವರಿ ಅಂತ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ, ಅವರಿಗೆ ವೆಂಟಿಲೇಟರ್ ಬೆಂಬಲವಿಲ್ಲದೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಬಳಿಕ ಅವರು ದಿಢೀರ್ ಹೃದಯಸ್ತಂಭನದಿಂದ ಮೃತಪಟ್ಟರು. ನಿಫಾ ಸೋಂಕಿನಿಂದ ಚೇತರಿಸಿಕೊಂಡಿದ್ದರೂ, ಬಹು ತೊಂದರೆಗಳಿಂದ ಬಳಲುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.
ಇದನ್ನು ಓದಿ: ಆನ್ಲೈನ್ ಆಟದ ಗೀಳು, ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣಾದ ಕುಟುಂಬ: ತಂದೆ - ಮಗಳು ಸಾವು, ತಾಯಿ ಸ್ಥಿತಿ ಗಂಭೀರ

