ದಿನ್ಹಾಟಾದ ಚಿಪ್ಸ್ ಕಾರ್ಖಾನೆಯಲ್ಲಿ ವಿದ್ಯುತ್ ಸ್ಪರ್ಶಿಸಿ 5 ಕಾರ್ಮಿಕರ ಸಾವು
ಪಶ್ಚಿಮ ಬಂಗಾಳದ ದಿನ್ಹಾಟಾ ಪೊಲೀಸ್ ಠಾಣೆ ವ್ಯಾಪ್ತಿಯ ಗಾರ್ಕುರಾದ ಚಿಪ್ಸ್ ಕಾರ್ಖಾನೆಯೊಂದರಲ್ಲಿ ವಿದ್ಯುತ್ ಆಘಾತ ಸಂಭವಿಸಿದೆ.

Published : March 2, 2026 at 3:19 PM IST
ದಿನ್ಹಾಟಾ, ಪಶ್ಚಿಮ ಬಂಗಾಳ : ಇಲ್ಲಿನ ಗಾರ್ಕುರಾದ ಚಿಪ್ಸ್ ಕಾರ್ಖಾನೆಯೊಂದರಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ. ಇದರಿಂದಾಗಿ 5 ಕಾರ್ಮಿಕರು ಮೃತಪಟ್ಟಿದ್ದಾರೆ. ಭಾನುವಾರ ಸಂಜೆ 5:30ರ ಸುಮಾರಿಗೆ ದಿನ್ಹಾಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. ಐದು ಜನರ ಸಾವಿನ ಜೊತೆಗೆ ಇನ್ನೂ ಮೂವರು ಕಾರ್ಮಿಕರನ್ನು ದಿನ್ಹಾಟಾ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಘಟನೆಯ ಕುರಿತು ತಿಳಿಯುತ್ತಿದ್ದಂತೆಯೇ ದಿನ್ಹಾಟಾ ಪೊಲೀಸ್ ಠಾಣೆಯ ಎಸ್‌ಡಿಪಿಒ ಪ್ರಶಾಂತ್ ದೇಬ್‌ನಾಥ್ ಅವರು ಸೇರಿದಂತೆ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಧಾವಿಸಿ ಪರಿಶೀಲಿಸಿದರು. ಈ ಕುರಿತು ಪಶ್ಚಿಮ ಬಂಗಾಳ ರಾಜ್ಯ ವಿದ್ಯುತ್ ವಿತರಣಾ ಕಂಪನಿಯ ಅಧಿಕಾರಿ ಬಿಸ್ವಜಿತ್ ದಾಸ್ ಮಾತನಾಡಿ, 'ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಯಾರ ತಪ್ಪಿದೆ ಎಂಬುದರ ಬಗ್ಗೆಯೂ ನಾವು ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸುದ್ದಿ ತಿಳಿದ ನಂತರ ಉತ್ತರ ಬಂಗಾಳದ ಅಭಿವೃದ್ಧಿ ಸಚಿವ ಉದಯನ್ ಗುಹಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಈ ಬಗ್ಗೆ ಮಾತನಾಡಿದ ಅವರು, 'ಇದೊಂದು ದೊಡ್ಡ ದುರಂತದ ಘಟನೆ, ಗಾಯಾಳುಗಳಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದರು.
ಪೊಲೀಸರು ಮತ್ತು ಸ್ಥಳೀಯ ಮೂಲಗಳ ಪ್ರಕಾರ, 'ಗಾರ್ಕುರಾ ಪ್ರದೇಶದಲ್ಲಿರುವ ಚಿಪ್ಸ್ ಕಾರ್ಖಾನೆಯಲ್ಲಿ ಛಾವಣಿಯ ವೆಲ್ಡಿಂಗ್ ಕೆಲಸ ನಡೆಯುತ್ತಿತ್ತು. ಹಲವಾರು ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿದ ನಂತರ, 5 ಜನರು ಛಾವಣಿಯನ್ನು ವೆಲ್ಡಿಂಗ್ ಮಾಡಲು ಬಳಸುವ ಲಿಫ್ಟರ್ ಯಂತ್ರವನ್ನು ತೆಗೆಯುತ್ತಿದ್ದರು. ಆ ವೆಲ್ಡಿಂಗ್ ಯಂತ್ರದ ಮೇಲೆ ಕಬ್ಬಿಣದ ರಾಡ್ ಇತ್ತು. ಯಂತ್ರವನ್ನು ತೆಗೆಯುವಾಗ, ಕಾರ್ಮಿಕರು ಮತ್ತು ಅಲ್ಲಿದ್ದ ಜನರು ಕಬ್ಬಿಣದ ರಾಡ್ ಕೆಳಕ್ಕೆ ಇಳಿಸಲು ಮರೆತಿದ್ದರು. ನಂತರ, ಆ ಕಬ್ಬಿಣದ ರಾಡ್ ಕಾರ್ಖಾನೆಯ ಮೇಲೆ ಹಾದುಹೋಗುತ್ತಿದ್ದ 11,000 - ವೋಲ್ಟ್ ಹೈಟೆನ್ಷನ್ ವಿದ್ಯುತ್ ತಂತಿಯನ್ನು ಸ್ಪರ್ಶಿಸಿತು. ಆ ಸಮಯದಲ್ಲಿ, ಯಂತ್ರವನ್ನು ಹಿಡಿದಿದ್ದ ಕಾರ್ಮಿಕರು ವಿದ್ಯುತ್ ಸ್ಪರ್ಶಿಸಿ ಕೆಳಗೆ ಬಿದ್ದರು. ಘಟನೆ ಎಷ್ಟು ಭಯಾನಕವಾಗಿತ್ತು ಎಂದರೆ, ಈ ಘಟನೆಯ ನಂತರವೂ ಸ್ವಲ್ಪ ಸಮಯದವರೆಗೆ ಮೃತ ಕಾರ್ಮಿಕರ ದೇಹಗಳಿಂದ ಹೊಗೆ ಹೊರಬರುತ್ತಲೇ ಇತ್ತು' ಎಂದಿದ್ದಾರೆ.
5 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರ ಸಹೋದ್ಯೋಗಿಗಳು ಅವರನ್ನು ರಕ್ಷಿಸಲು ಪ್ರಯತ್ನಿಸಿದಾಗ ಇನ್ನೂ 3 ಜನರು ವಿದ್ಯುತ್ ಸ್ಪರ್ಶದಿಂದ ಗಾಯಗೊಂಡರು. ನಂತರ ಸ್ಥಳೀಯರು ಸತ್ತವರನ್ನು ಮತ್ತು ಗಾಯಗೊಂಡವರನ್ನು ರಕ್ಷಿಸಿ, ದಿನ್ಹಾಟಾ ಉಪಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈದ್ಯರು 5 ಕಾರ್ಮಿಕರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಮೃತರನ್ನು ಮುಕುಲ್ ಬರ್ಮನ್, ರಾಜು ಸೇನ್, ಮಿಥುನ್ ಪಾಲ್, ಸುಮನ್ ಬರ್ಮನ್ ಮತ್ತು ಸಂಜಯ್ ಬರ್ಮನ್ ಎಂದು ಗುರುತಿಸಲಾಗಿದೆ. ಮೃತರ ಮನೆಗಳು ದಿನ್ಹಾಟಾದ ವಿವಿಧ ಪ್ರದೇಶಗಳಲ್ಲಿವೆ. ಘಟನಾ ಸ್ಥಳದಲ್ಲಿದ್ದ ಕೆಲಸಗಾರ ಅನಂತ ರಾಯ್ ಅವರು ಮಾತನಾಡಿ, 'ಛಾವಣಿಯ ವೆಲ್ಡಿಂಗ್ ಕೆಲಸವನ್ನು ಮುಗಿಸಿದ ನಂತರ ಅವರು ಲಿಫ್ಟ್ ತೆಗೆದುಹಾಕುತ್ತಿದ್ದರು. ಆ ಸಮಯದಲ್ಲಿ ಕಬ್ಬಿಣದ ರಾಡ್ 11,000 - ವೋಲ್ಟ್ ತಂತಿಗೆ ತಗುಲಿ ಅಪಘಾತ ಸಂಭವಿಸಿದೆ' ಎಂದು ಹೇಳಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಮಿಕರ ಕುಟುಂಬದ ಸದಸ್ಯರು ಆಸ್ಪತ್ರೆಗೆ ತಲುಪಿದರು. ಅಲ್ಲಿ ಮೃತರನ್ನು ಕಂಡು ಕಣ್ಣೀರು ಹಾಕಿದರು. ಇದೀಗ ಈ ಪ್ರದೇಶದಲ್ಲಿ ಶೋಕ ಮಡುಗಟ್ಟಿದೆ. ಇದೀಗ ಪೊಲೀಸರು ಈ ಘಟನೆ ಹೇಗೆ ಸಂಭವಿಸಿತು? ಎಂದು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ : ಹಣ ಕುರಿತ ವಿವಾದ: ಕುಟುಂಬದ ನಾಲ್ವರನ್ನು ಕೊಡಲಿಯಿಂದ ಹಲ್ಲೆ ನಡೆಸಿ ಕೊಂದ ವ್ಯಕ್ತಿ

