ETV Bharat / bharat

25 ವರ್ಷಗಳ ನಂತರ ಪುಸ್ತಕ ಹಿಡಿದ ಮಹಿಳೆ: 37ನೇ ವಯಸ್ಸಿನಲ್ಲಿ ಮೊದಲ ಪ್ರಯತ್ನದಲ್ಲೇ 10ನೇ ತರಗತಿ ಪಾಸ್: ಸರ್ಕಾರಿ ನೌಕರಿ ಪಡೆಯುವ ಪಣ!

ಮಹಿಳೆಯೊಬ್ಬರು ತಮ್ಮ 37ನೇ ವಯಸ್ಸಿನಲ್ಲಿ 10ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಸರ್ಕಾರಿ ಕೆಲಸ ಪಡೆಯುವ ಪಣ ತೊಟ್ಟಿದ್ದಾರೆ.

COIMBATORE VALLIAMMAL
ವಲ್ಲಿಯಮ್ಮಾಳ್ (ETV Bharat)
author img

By ETV Bharat Karnataka Team

Published : July 3, 2026 at 3:27 PM IST

3 Min Read
Choose ETV Bharat

ಕೊಯಮತ್ತೂರು(ತಮಿಳುನಾಡು): ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬುದು ಮಹಿಳಾ ಸಬಲೀಕರಣದ ಅತ್ಯಂತ ಶ್ರೇಷ್ಠ ನುಡಿ. ಒಬ್ಬ ಹೆಣ್ಣು ಶಿಕ್ಷಣ ಪಡೆದಾಗ ಆಕೆಯ ಇಡೀ ಕುಟುಂಬ ಮಾತ್ರವಲ್ಲದೇ ಇಡೀ ಸಮಾಜ ಜ್ಞಾನದ ಬೆಳಕನ್ನು ಪಡೆಯುತ್ತದೆ. ಕೌಟುಂಬಿಕ ಪರಿಸ್ಥಿತಿ ಮತ್ತು ಬಡತನದಿಂದಾಗಿ 7ನೇ ತರಗತಿಗೆ ಶಾಲೆ ಬಿಟ್ಟ ಬಾಲಕಿಯೊಬ್ಬಳು 25 ವರ್ಷಗಳ ನಂತರ ಶಿಕ್ಷಣದ ಮೇಲಿನ ಪ್ರೀತಿಯಿಂದಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.

ಹೌದು, ಕೊಯಮತ್ತೂರು ಜಿಲ್ಲೆಯ ಸುಲೂರು ಬಳಿಯ ಚಿನ್ನಪುದೂರು ಗ್ರಾಮದ ವಲ್ಲಿಯಮ್ಮಾಳ್​​ ತಮ್ಮ 37ನೇ ವಯಸ್ಸಿನಲ್ಲಿ ಮೊದಲ ಪ್ರಯತ್ನದಲ್ಲೇ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಇಷ್ಟಕ್ಕೆ ಸುಮ್ಮನಾಗದೇ ಸರ್ಕಾರಿ ಹುದ್ದೆ ಪಡೆಯಲು ಪಣ ತೊಟ್ಟಿದ್ದಾರೆ.

Coimbatore Valliammal
ವಲ್ಲಿಯಮ್ಮಾಳ್, ಪುತ್ರಿ ಧನ್ಯಶ್ರೀ (ETV Bharat)

ವಲ್ಲಿಯಮ್ಮಾಳ್ ಶೋಷಿತ ಸಮುದಾಯದ ಬಡ ಕುಟುಂಬದಲ್ಲಿ ಜನಿಸಿದರು. 25 ವರ್ಷಗಳ ಹಿಂದೆ ವಲ್ಲಿಯಮ್ಮಾಳ್ 7ನೇ ತರಗತಿಯಲ್ಲಿದ್ದಾಗ ಅವರ ತಂದೆ ನಿಧನರಾದರು. ಇದರಿಂದ ಕುಟುಂಬದ ಹೊರೆ ಪುಟ್ಟ ಬಾಲಕಿ ವಲ್ಲಿಯಮ್ಮಾಳ ಹೆಗಲ ಮೇಲೆ ಬಿತ್ತು. ಅಲ್ಲಿಗೆ ಶಿಕ್ಷಣವನ್ನು ನಿಲ್ಲಿಸಿ ಕೂಲಿ ಕೆಲಸಕ್ಕೆ ಹೋಗಲು ಶುರು ಮಾಡಿದರು. ಗಾಯದ ಮೇಲೆ ಬರೆ ಎಂಬಂತೆ ಅವರ ವೈವಾಹಿಕ ಜೀವನವೂ ಹಾಳಾಯಿತು. ಪತಿಯಿಂದ ತ್ಯಜಿಸಲ್ಪಟ್ಟ ವಲ್ಲಿಯಮ್ಮಾಳ್ ತನ್ನ ಇಬ್ಬರು ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ವಹಿಸಿಕೊಂಡರು.

ಮೊದಲ ಯತ್ನದಲ್ಲೇ ಯಶಸ್ಸು: ಮಕ್ಕಳು ತನ್ನಂತೆ ಆಗಬಾರದು ಎಂದು ತನ್ನ ಹಿರಿಯ ಮಗಳನ್ನು ಲಾ ಮತ್ತು ತನ್ನ ಕಿರಿಯ ಮಗನನ್ನು ಹತ್ತನೇ ತರಗತಿ ಓದಿಸುತ್ತಿದ್ದಾರೆ. ಮಕ್ಕಳಿಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ವಲ್ಲಿಯಮ್ಮಾಳ್​, ಹಳ್ಳಿಯ ಕೆಲವು ಯುವಕರು ಗ್ರೂಪ್ -4 ಪರೀಕ್ಷೆಗೆ ತಯಾರಿ ನಡೆಸುತ್ತಿರುವುದನ್ನು ನೋಡಿ, ತಾನು ಕೂಡ ಓದಿ ಸರ್ಕಾರಿ ಹುದ್ದೆ ಪಡೆಯಬೇಕೆಂದು ನಿರ್ಧರಿಸಿದರು. ಬಡತನ, ವಯಸ್ಸು ಮತ್ತು ಕುಟುಂಬದ ಹೊರೆಗಳ ನಡುವೆಯೂ ಅವರು 10ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸ್​ ಮಾಡಿದ್ದಾರೆ.

Coimbatore Valliammal
ವಲ್ಲಿಯಮ್ಮಾಳ್ (ETV Bharat)

ಸರ್ಕಾರಿ ಕೆಲಸ ಸಿಗೋವರೆಗೂ ನಿಲ್ಲಲ್ಲ: ಈ ಬಗ್ಗೆ ವಲ್ಲಿಯಮ್ಮಾಳ್ ಮಾತನಾಡಿ, "ನನ್ನ ಶೈಕ್ಷಣಿಕ ಪ್ರಯಾಣ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ನನಗೆ ಸರ್ಕಾರಿ ಕೆಲಸ ಸಿಗುವವರೆಗೂ ನನ್ನ ಕಠಿಣ ಪರಿಶ್ರಮ ಎಂದಿಗೂ ನಿಲ್ಲುವುದಿಲ್ಲ" ಎಂದು ತಿಳಿಸಿದರು.

ವಲ್ಲಿಯಮ್ಮಾಳ್ ಪುತ್ರಿ ಧನ್ಯಶ್ರೀ ಮಾತನಾಡಿ, "ನನ್ನ ತಾಯಿ ಬಾಲ್ಯದಿಂದಲೂ ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ. ಅವರಿಗೆ ಓದಲು ಸಾಧ್ಯವಾಗದಿದ್ದರೂ, ನಮ್ಮನ್ನು ಚೆನ್ನಾಗಿ ಓದಿಸಲು ದೃಢನಿಶ್ಚಯ ಮಾಡಿದ್ದರು. ಅವರು ಕೂಲಿ ಕೆಲಸಕ್ಕೆ ಹೋಗಿ ನಮ್ಮನ್ನು ಓದಿಸುತ್ತಿದ್ದಾರೆ. ನಾನು ಎರಡನೇ ವರ್ಷದಲ್ಲಿ ಲಾ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ತಮ್ಮ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ನೆರೆಹೊರೆಯ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವುದನ್ನು ನೋಡಿ, ನನ್ನ ತಾಯಿ, ನಾನೂ ಓದಬೇಕು ಎಂದು ಹೇಳಿದರು. ಬಳಿಕ ನಾವು ಕೆಲವರ ಸಹಾಯದಿಂದ ನನ್ನ ತಾಯಿ ಶಿಕ್ಷಣ ಕೊಡಿಸಲು ಪ್ರಾರಂಭಿಸಿದೆವು ಎಂದು ಹೇಳಿದರು.

ಬೆಳಗ್ಗೆ ಕೂಲಿ ಕೆಲಸ ರಾತ್ರಿ ಓದು: ನನ್ನ ತಾಯಿ 10ನೇ ತರಗತಿ ಪಾಸಾಗಿದ್ದು ನನಗೆ ತುಂಬಾ ಸಂತೋಷವಾಗಿದೆ. ಅವರು 12ನೇ ತರಗತಿ, ನಂತರ ಪದವಿ ಪಡೆಯಲು ಬಯಸಿದ್ದಾರೆ. ಆ ಬಳಿಕ ಸರ್ಕಾರಿ ಉದ್ಯೋಗವನ್ನು ಪಡೆಯಲು ಪಣ ತೊಟ್ಟಿದ್ದಾರೆ. ಸಾಮಾನ್ಯವಾಗಿ, ಮಕ್ಕಳನ್ನು ಓದಿಸುವುದು ಪೋಷಕರು. ಆದರೆ, ನಮ್ಮ ಮನೆಯಲ್ಲಿ ಸ್ವಲ್ಪ ಭಿನ್ನವಾಗಿ, ನಮ್ಮ ತಾಯಿಗೆ ಓದಲು ಕಲಿಸಲು ನಾವು ಹೆಮ್ಮೆಪಡುತ್ತೇವೆ. ಇದಲ್ಲದೆ, ನನ್ನ ತಾಯಿ ಕೂಲಿ ಕೆಲಸಕ್ಕೆ ಹೋಗಿ ಸಂಜೆ ಓದುತ್ತಾರೆ" ಎಂದರು.

Coimbatore Valliammal
ವಲ್ಲಿಯಮ್ಮಾಳ್​ಗೆ ಇಂಗ್ಲಿಷ್​ ಕಲಿಸುತ್ತಿರುವ ವಿಜಯ್ ಭೂಪತಿ (ETV Bharat)

ಇಂಗ್ಲಿಷ್​ ಕಲಿಸುತ್ತಿರುವ ಶಿಕ್ಷಕರು ಹೇಳುವುದೇನು?: ವಲ್ಲಿಯಮ್ಮಳ್‌ಗೆ ಇಂಗ್ಲಿಷ್ ಕಲಿಸುತ್ತಿರುವ ವಿಜಯ್ ಭೂಪತಿ ಮಾತನಾಡಿ, "ನಾವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವುದನ್ನು ನೋಡಿದಾಗ, ವಲ್ಲಿಯಮ್ಮಳ್‌ ಅವರು ಕೂಡ ಅಧ್ಯಯನ ಮಾಡಲು ಬಯಸಿದರು. ಓದಲು ಸಹಾಯ ಮಾಡುವಂತೆ ನಮ್ಮ ಬಳಿ ಕೇಳಿದರು. ಈಗ ಅವರು ಮೊದಲ ಪ್ರಯತ್ನದಲ್ಲಿ 10ನೇ ತರಗತಿಯಲ್ಲಿ ಉತ್ತೀರ್ಣನಾಗಿದ್ದಾರೆ. ಇದರಲ್ಲಿ ಹೆಮ್ಮೆ ಏನು ಎಂದು ಕೇಳಬಹುದು?. ಶಿಕ್ಷಣದಲ್ಲಿ ಒಂದು ವರ್ಷ ವಿಳಂಬವಾದರೆ ಚೇತರಿಸಿಕೊಳ್ಳುವುದು ಕಷ್ಟ. ಆದರೆ, 25 ವರ್ಷಗಳ ನಂತರ, ಅವರು ದಿನಗೂಲಿ ಕೆಲಸಕ್ಕೆ ಹೋಗಿ ರಾತ್ರಿ ಕೇವಲ 2 ಗಂಟೆಗಳ ಕಾಲ ಅಧ್ಯಯನ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ 8 ಮತ್ತು 10ನೇ ತರಗತಿಯ ಪಬ್ಲಿಕ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಹೇಳಿದರು.

ಇವುಗಳನ್ನೂ ಓದಿ: