'10 ದಿನಗಳಲ್ಲಿ 22 ಸಾವು': ಚೈಬಾಸಾವನ್ನು ಸಾವಿನ ವಲಯವನ್ನಾಗಿ ಮಾಡಿದ ಆನೆ
ಜಾರ್ಖಂಡ್‌ನ ಚೈಬಾಸಾದಲ್ಲಿ ಆಕ್ರಮಣಕಾರಿ ಒಂಟಿ ಆನೆಯನ್ನು ಸೆರೆಹಿಡಿಯಲು ಅರಣ್ಯ ಸಿಬ್ಬಂದಿ ಹೆಣಗಾಡುತ್ತಿದ್ದಾರೆ. ಈ ಆನೆಯಿಂದಾಗಿ ಕಳೆದ 10 ದಿನಗಳಲ್ಲಿ ಇಲ್ಲಿ ಕನಿಷ್ಠ 22 ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ.

Published : January 11, 2026 at 7:26 PM IST
ಚೈಬಾಸಾ (ಜಾರ್ಖಂಡ್) : 'ಆನೆಗಳಿಂದ ದೂರವಿರಿ; ರಾತ್ರಿ ವೇಳೆ ಹೊರಗೆ ಹೋಗಬೇಡಿ' ಎಂದು ಜಾರ್ಖಂಡ್ ಅರಣ್ಯ ಇಲಾಖೆಯು ಚೈಬಾಸಾ ಜಿಲ್ಲೆಯ ನಿವಾಸಿಗಳಿಗೆ ಪದೆ ಪದೇ ಮನವಿ ಮಾಡ್ತಿದೆ. ಏಕೆಂದರೆ, ಇಲ್ಲೊಂದು ಮದವೇರಿದ ಆನೆ ಸರಣಿ ಮಾರಕ ದಾಳಿ ನಡೆಸಿದೆ.
ಜನವರಿ 1 ರಿಂದ ಹಿಂಸಾತ್ಮಕವಾಗಿ ದಾಳಿ ನಡೆಸುತ್ತಿರುವ ಆನೆ ಕಳೆದ 10 ದಿನಗಳಲ್ಲಿ ಕನಿಷ್ಠ 22 ಜನರನ್ನು ಕೊಂದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
'ಜಿಲ್ಲಾಡಳಿತದ ಬೆಂಬಲದೊಂದಿಗೆ ಅನೇಕ ಪ್ರಯತ್ನಗಳ ಹೊರತಾಗಿಯೂ, ಆನೆ ಸೆರೆಯಿಂದ ತಪ್ಪಿಸಿಕೊಳ್ಳುತ್ತಲೇ ಇದೆ. ಈ ಪ್ರದೇಶದಲ್ಲಿ ಮಾನವ-ವನ್ಯಜೀವಿ ಸಂಘರ್ಷವನ್ನು ನಿರ್ವಹಿಸುವುದು ಗಂಭೀರ ಸವಾಲಾಗಿ ಪರಿಣಮಿಸುತ್ತಿದೆ' ಎಂದು ಅವರು ಹೇಳಿದರು.
ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ಶಾಂತಗೊಳಿಸಲು ಮೂರು ಬಾರಿ ಪ್ರಯತ್ನಿಸಿದ್ದರು. ಆದರೆ, ವಿಫಲರಾದರು. ಶುಕ್ರವಾರ ಸಂಜೆ, ಅನೇಕ ತಂಡಗಳು ಆನೆಯನ್ನು ನೆರೆಯ ಒಡಿಶಾದ ಅರಣ್ಯ ಪ್ರದೇಶಗಳ ಕಡೆಗೆ ಓಡಿಸುವಲ್ಲಿ ಯಶಸ್ವಿಯಾದವು. ಅದಾಗ್ಯೂ, ಅಲ್ಲಿಯ ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ವಾಪಸ್ ಚೈಬಾಸಾ ಪ್ರದೇಶಕ್ಕೆ ಓಡಿಸಿದ್ದಾರೆ ಎಂದು ತಿಳಿಸಿದರು.
'ಆನೆ ಚೈಬಾಸಾ ಪ್ರದೇಶಕ್ಕೆ ಮತ್ತೆ ಪ್ರವೇಶಿಸಿದೆ. ಇದರಿಂದಾಗಿ ನಾವು ಹೊಸದಾಗಿ ಹುಡುಕಾಟ ಆರಂಭಿಸಿದ್ದೇವೆ. ನಿವಾಸಿಗಳನ್ನು ಮನೆಯೊಳಗೆ ಇರುವಂತೆ ಮನವಿ ಮಾಡಿದ್ದೇವೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಅರಣ್ಯ ಇಲಾಖೆಯು ಪಶ್ಚಿಮ ಬಂಗಾಳ, ಒಡಿಶಾ ಮತ್ತು ಗುಜರಾತ್‌ನಲ್ಲಿರುವ 'ತಾರಾ ರಕ್ಷಣಾ ತಂಡ'ದ ತಜ್ಞ ತಂಡಗಳನ್ನು ಆಧುನಿಕ ಉಪಕರಣಗಳನ್ನು ಬಳಸಿಕೊಂಡು ಆನೆಯನ್ನು ನಿಯಂತ್ರಿಸಲು ಸೇವೆಗಳನ್ನು ಒದಗಿಸುವಂತೆ ಒತ್ತಾಯಿಸಿದೆ.
'ತಂಡದ ತಜ್ಞರಲ್ಲಿ ಒಬ್ಬರ ಮೇಲೆ ಆನೆ ಮಾರಕವಾಗಿ ದಾಳಿ ಮಾಡಿದ್ದರಿಂದ, ತಾರಾದ ತಜ್ಞರು ಸಹ ಪ್ರಾಣಿಗಳ ಆಕ್ರಮಣವನ್ನು ನಿರ್ವಹಿಸಲು ಹೆಣಗಾಡಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ನಂತರ ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದರು' ಎಂದು ಅಧಿಕಾರಿ ಹೇಳಿದರು.
ಆನೆಯು ತನ್ನ ಗುಂಪಿನಿಂದ ಬೇರ್ಪಟ್ಟು ವೇಗವಾಗಿ ಚಲಿಸುತ್ತಿದ್ದರಿಂದ ಅದು "ಅತ್ಯಂತ ಹಿಂಸಾತ್ಮಕ"ವಾಗಿ ಮಾರ್ಪಟ್ಟಿದೆ ಎಂದು ಚೈಬಾಸಾದ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಆದಿತ್ಯ ನಾರಾಯಣ್ ತಿಳಿಸಿದರು.
'ಆನೆ ಪ್ರತಿದಿನ ಸುಮಾರು 30 ಕಿಲೋಮೀಟರ್ ಕ್ರಮಿಸುತ್ತಿದೆ. ಅದು ಜಾರ್ಖಂಡ್‌ಗೆ ಮತ್ತೆ ಪ್ರವೇಶಿಸುತ್ತಿರುವುದು ದೃಢಪಟ್ಟಿದೆ. ನಮ್ಮ ತಂಡವು ಕಟ್ಟೆಚ್ಚರದಲ್ಲಿದೆ. ಅಲ್ಲದೇ, ಅದನ್ನು ಶಾಂತಗೊಳಿಸುವ ಪ್ರಯತ್ನಗಳನ್ನು ಪುನರಾರಂಭಿಸಲಾಗುವುದು. ಗ್ರಾಮಸ್ಥರಿಗೆ ಕಾಡಿಗೆ ಹೋಗದಂತೆ ಮತ್ತು ಜಾಗರೂಕರಾಗಿರಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ' ಎಂದು ನಾರಾಯಣ್ ಹೇಳಿದರು.
ಸಾವುಗಳು ಮತ್ತು ರಕ್ಷಣಾ ಪ್ರಯತ್ನಗಳ ಬಗ್ಗೆ: ಜನವರಿ 1 ರಂದು ಟೊಂಟೊ ಬ್ಲಾಕ್‌ನ ಬಂಡಿಜ್ಹರಿ ಗ್ರಾಮದ ಮಂಗಲ್ ಸಿಂಗ್ ಹೆಂಬ್ರಾಮ್ (35) ಈ ಆನೆ ದಾಳಿಯಿಂದ ಸಾವನ್ನಪ್ಪಿದ ಮೊದಲ ವ್ಯಕ್ತಿ. ನಂತರ ಅದು ಬಿರ್ಸಿಂಗ್‌ಘಾಟು ಗ್ರಾಮದ ಕುಚು ಬಾಸಾ ಟೋಲಿಯ ಉರ್ದು ಬಹಾಂಡ (55) ಎಂಬುವರ ಮೇಲೆ ದಾಳಿ ಮಾಡಿತು. ನಂತರ ಸದರ್ ಬ್ಲಾಕ್‌ನ ರೋರೊ ಗ್ರಾಮದ ವಿಷ್ಣು ಸುಂಡಿ (57) ಎಂಬುವರ ಮೇಲೆ ಎರಗಿತು. ಅದೇ ದಿನ ಮಣಿ ಕುಂಟಿಯಾ ಮತ್ತು ಸುಖಮತಿ ಬಹಾಂಡ ಕೂಡ ಗಂಭೀರವಾಗಿ ಗಾಯಗೊಂಡರು.
ಜನವರಿ 6 ರ ರಾತ್ರಿ ನೊಮುಂಡಿಯ ಬಾಬಾರಿಯಾ ಗ್ರಾಮದಲ್ಲಿ ಮತ್ತೊಂದು ಮಾರಕ ಘಟನೆ ನಡೆದಿದ್ದು, ಆನೆಯೊಂದು ವಿವಾಹಿತ ದಂಪತಿ, ಅವರ ಇಬ್ಬರು ಚಿಕ್ಕ ಮಕ್ಕಳು ಮತ್ತು ಇನ್ನೊಂದು ಕುಟುಂಬದ ಸದಸ್ಯ ಸೇರಿದಂತೆ ಐದು ಜನರನ್ನು ಕೊಂದಿದೆ. ರಾತ್ರಿ 10 ಗಂಟೆ ಸುಮಾರಿಗೆ ಅವರೆಲ್ಲರೂ ಮನೆಯಲ್ಲಿ ಮಲಗಿದ್ದಾಗ ದಾಳಿ ನಡೆದಿದೆ. ಒಂದು ಮಗು ತಪ್ಪಿಸಿಕೊಂಡು ಬದುಕುಳಿಯುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿ ಘಟನೆ ಕುರಿತು ವಿವರಿಸಿದರು.
ಇದನ್ನೂ ಓದಿ : ಚಾರ್ಮಾಡಿ ಘಾಟ್ನ ರಸ್ತೆ ಮಧ್ಯೆ ಬಂದು ನಿಂತ ಆನೆ : ಟ್ರಾಫಿಕ್ ಜಾಮ್

