ETV Bharat / bharat

ನೇಪಾಳ ಪ್ರವಾಹ: 21 ಯಾತ್ರಿಕರು ಸುರಕ್ಷಿತವಾಗಿ ತಮಿಳುನಾಡಿಗೆ ವಾಪಸ್ಸು; ಮುಂದುವರೆದ ರಕ್ಷಣಾ ಕಾರ್ಯ

ತಮಿಳುನಾಡಿನ 21 ನಾಗರಿಕರು ಹಾಗೂ ತ್ರಿಶೂಲಿ 1 ಜಲವಿದ್ಯುತ್ ಯೋಜನೆಯಲ್ಲಿ ನಿಯೋಜಿತರಾಗಿದ್ದ 63 ಕಾರ್ಮಿಕರು ಶುಕ್ರವಾರ ಸುರಕ್ಷಿತವಾಗಿ ಮರಳಿದ್ದಾರೆ.

21 Tamil Nadu pilgrims rescued from Nepal floods arrive in Chennai
ನೇಪಾಳದಿಂದ ಸುರಕ್ಷಿತವಾಗಿ ಮರಳಿದವರನ್ನು ತಮಿಳುನಾಡು ರಾಜ್ಯ ಸಚಿವರು ಬರಮಾಡಿಕೊಂಡರು. (ANI)
author img

By ANI

Published : August 29, 2026 at 10:30 AM IST

2 Min Read
Choose ETV Bharat

ಚೆನ್ನೈ (ತಮಿಳುನಾಡು): ನೇಪಾಳದ ಪ್ರಕೃತಿ ವಿಕೋಪದ ಪ್ರವಾಹಕ್ಕೆ ಸಿಲುಕಿದ ತಮಿಳುನಾಡಿನ 21 ಯಾತ್ರಾರ್ಥಿಗಳ ತಂಡವು ಸುರಕ್ಷಿತವಾಗಿ ಚೆನ್ನೈಗೆ ಆಗಮಿಸಿದೆ. ಸುರಕ್ಷಿತವಾಗಿ ಬಂದಿಳಿದ ಅವರಿಗೆ ರಾಜ್ಯ ಸಚಿವರಾದ ನಾರಾಯಣಸ್ವಾಮಿ ಆನಂದ್ ಮತ್ತು ಡಿ. ಶರತ್‌ಕುಮಾರ್ ಖುದ್ದು ಸ್ವಾಗತ ನೀಡಿದರು.

ನೇಪಾಳ ಪ್ರವಾಹದಲ್ಲಿ ಕಾಣೆಯಾದ ಯಾತ್ರಾರ್ಥಿಗಳನ್ನು ರಕ್ಷಿಸಲು ರಾಜ್ಯ ಸರ್ಕಾರವು ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದೆ. ನಮ್ಮ ನಾಲ್ವರು ಸಚಿವರು ದೆಹಲಿಯಲ್ಲಿದ್ದು, ಸಮನ್ವಯ ಸಾಧಿಸುತ್ತಿದ್ದಾರೆ ಎಂದು ಸಚಿವ ಆನಂದ್ ತಿಳಿಸಿದ್ದಾರೆ.

ಪ್ರವಾಹ ಘಟನೆಯಲ್ಲಿ ಸಿಲುಕಿ ಸುರಕ್ಷಿತವಾಗಿ ಬಂದ ಸಂತ್ರಸ್ತರೊಬ್ಬರು, ಪ್ರವಾಹದಲ್ಲಿ ಸಿಲುಕಿದವನ್ನು ರಕ್ಷಿಸಲು ನೇಪಾಳ ಪೊಲೀಸ್​ ಮತ್ತು ಸೇನೆ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.

ಹಠಾತ್ತನೆ ಪ್ರವಾಹದ ರಭಸದಿಂದ ಮಣ್ಣು ಮಿಶ್ರಿತ ನೀರು ನುಗ್ಗಿಬರುವುದನ್ನು ನಾವು ಕಂಡೆವು. ಇಷ್ಟು ಪ್ರಮಾಣದ ನೀರು ನೋಡಿ ಅಣೆಕಟ್ಟಿನ ಬಾಗಿಲು ತೆರೆದಿದ್ದಾರೆಂದು ನಾವು ಭಾವಿಸಿದೆವು. ನೀರಿನ ರಭಸಕ್ಕೆ ಲಾರಿ ಮತ್ತು ಬಸ್ಸು ಕೊಚ್ಚಿಹೋಗುತ್ತಿದ್ದವು. ನಾವೂ ಕೂಡ ಅದರ ಪಾಲಾಗಬಹುದು ಎಂದು ಭಾವಿಸಿದೆವು. ಬಸ್ಸಿನಲ್ಲಿದ್ದ ನಾವು ಚಾಲಕನ ಸೀಟಿನ ಮೂಲಕ ಹೊರಬಂದೆವು. ನಂತರ ಸ್ಥಳೀಯ ಪೊಲೀಸರು ನಮ್ಮನ್ನು ಒಂದು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು, ಅಲ್ಲಿಂದ ನೇಪಾಳ ಸೇನೆಯ ಹೆಲಿಕಾಪ್ಟರ್ ನಮ್ಮನ್ನು ಸಮೀಪದ ಕಠ್ಮಂಡುವಿಗೆ ಕರೆದೊಯ್ದಿತು ಎಂದು ಹೇಳಿದರು.

ನೇಪಾಳದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ನಾಗರಿಕರ ಸುರಕ್ಷತೆಯ ಕುರಿತು ಆಡಳಿತವು ನಿರಂತರ ನಿಗಾ ಮತ್ತು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿರುವುದಾಗಿ ತಮಿಳುನಾಡು ಸಚಿವ ಕೆ.ಎ. ಸೆಂಗೊಟ್ಟೈಯನ್​ ತಿಳಿಸಿದರು.

ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದಾಗಿ ಅಲ್ಲಿ ಸಿಲುಕಿಕೊಂಡಿರುವ ರಾಜ್ಯದ ಯಾತ್ರಾರ್ಥಿಗಳ ರಕ್ಷಣಾ ಕಾರ್ಯವನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಚೆನ್ನೈನಿಂದ ಆ ಹಿಮಾಲಯದ ದೇಶಕ್ಕೆ ತೆರಳಿದ್ದ 49 ಜನರ ಗುಂಪಿನ ಕುರಿತಾದ ಮಾಹಿತಿಯನ್ನು ಕಲೆಹಾಕುತ್ತಿರುವುದಾಗಿ ತಮಿಳುನಾಡು ಸರ್ಕಾರ ತಿಳಿಸಿದೆ.

ತಮಿಳುನಾಡಿನ ಒಟ್ಟು 103 ಮಂದಿ ನೇಪಾಳ ಪ್ರವಾಸಕ್ಕೆ ತೆರಳಿದ್ದಾಗ, ಅಲ್ಲಿನ ರಸುವಾ ಜಿಲ್ಲೆಯಲ್ಲಿ ಭೋಟೆ ಕೋಶಿ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹದಿಂದಾಗಿ ಅಲ್ಲಿಯೇ ಸಿಲುಕಿಕೊಂಡರು. ಅಧಿಕೃತ ಮಾಹಿತಿಯ ಪ್ರಕಾರ, ಆಗಸ್ಟ್ 26ರ ಸಂಜೆ ವೇಳೆಗೆ ನೇಪಾಳದಲ್ಲಿ ಸಂಭವಿಸಿದ ಪ್ರವಾಹದಿಂದ ಬಾಧಿತರಾದ ಒಟ್ಟು 300 ಭಾರತೀಯ ಪ್ರಜೆಗಳನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ.

ನೇಪಾಳದ ಭೋಟೆ ಕೋಶಿ ಮತ್ತು ತ್ರಿಶೂಲಿ ನದಿ ಕಣಿವೆ ಪ್ರದೇಶಗಳಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ನಂತರ ಜಂಟಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ತೀವ್ರಗೊಂಡಿರುವಂತೆಯೇ, ಪ್ರವಾಹ ಪೀಡಿತ ಪ್ರದೇಶಗಳಿಂದ 84 ಭಾರತೀಯರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಚಿತಪಡಿಸಿದೆ.

ರಕ್ಷಿಸಲ್ಪಟ್ಟವರಲ್ಲಿ ಶುಕ್ರವಾರ ಭಾರತಕ್ಕೆ ಮರಳಿದ ತಮಿಳುನಾಡಿನ 21 ನಾಗರಿಕರು ಹಾಗೂ ತ್ರಿಶೂಲಿ 1 ಜಲವಿದ್ಯುತ್ ಯೋಜನೆಯಲ್ಲಿ ನಿಯೋಜಿತರಾಗಿದ್ದ 63 ಕಾರ್ಮಿಕರು ಸೇರಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಸುಮಾರು 400 ಮಂದಿ ಚೀನಾದ ಭಾಗದಲ್ಲಿ ಸುರಕ್ಷಿತವಾಗಿದ್ದಾರೆ. ವ್ಯಾಪಕ ದೂರಸಂಪರ್ಕ ಸೇವೆಗಳ ವ್ಯತ್ಯಯದಿಂದಾಗಿ ಸುಮಾರು 320 ಭಾರತೀಯರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ನೇಪಾಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿದ್ದು, ವಿಪತ್ತಿಗೆ ಬೆಂಬಲ ನೀಡುವ ಉದ್ದೇಶದಿಂದ, ಭಾರತವು ತುರ್ತು ಅಗತ್ಯದ ಸಾಮಗ್ರಿಗಳೊಂದಿಗೆ ವಿಶೇಷ ವೈದ್ಯಕೀಯ ಹಾಗೂ ರಕ್ಷಣಾ ಸಾಮರ್ಥ್ಯಗಳ ನೆರವನ್ನು ಒದಗಿಸಿದೆ.

ಇವುಗಳನ್ನೂ ಓದಿ: ನೇಪಾಳ ಪ್ರವಾಹದಿಂದಾಗಿರುವ ಹಾನಿ ಅಂದಾಜಿಗಿಂತ ಅಧಿಕ ಎಂದ ನೇಪಾಳ ವಿಪತ್ತು ಕೇಂದ್ರದ ಅಧಿಕಾರಿ!

ನೇಪಾಳ ಭೀಕರ ಪ್ರವಾಹ: ಬಿಹಾರದ ಗುಜರಿ ವ್ಯಾಪಾರಿ ಕುಟುಂಬದ ಐವರು ನಾಪತ್ತೆ