ಇಂದೋರ್: ವಿಷ ಆಹಾರ ಸೇವನೆಯಿಂದ 200 ಗಿಳಿಗಳ ಸಾವು
ಆರಂಭದಲ್ಲಿ ಗಿಳಿಗಳ ಸಾವಿಗೆ ಹಕ್ಕಿ ಜ್ವರ ಎಂದು ಶಂಕಿಸಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ವಿಷ ಆಹಾರ ಸೇವನೆ ಎಂಬುದು ಬಯಲಾಗಿದೆ.


Published : January 2, 2026 at 1:51 PM IST
ಖಾರ್ಗೋನ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ನರ್ಮದಾ ನದಿಯ ದಡದಲ್ಲಿ ವಿಷ ಆಹಾರ ಸೇವಿಸಿ ಕನಿಷ್ಠ 200 ಗಿಳಿಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬದ್ವಾ ಪ್ರದೇಶದ ನದಿ ದಂಡೆಯಲ್ಲಿರುವ ಸೇತುವೆಯ ಬಳಿ ಕಳೆದ ನಾಲ್ಕು ದಿನಗಳಲ್ಲಿ ಇಷ್ಟು ಪ್ರಮಾಣದ ಗಿಳಿಗಳು ಸಾವನ್ನಪ್ಪಿದ್ದು, ಹಕ್ಕಿ ಜ್ವರ ಕಾರಣ ಎಂದು ಶಂಕಿಸಲಾಗಿತ್ತು. ಆದರೆ, ಮೃತಗಿಳಿಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದಾಗ ಅವುಗಳ ಸಾವಿಗೆ ವಿಷ ಪ್ರಾಶನ ಕಾರಣವಾಗಿದೆ ಎಂದು ದೃಢಪಟ್ಟಿದೆ.
ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಕೆಲವು ಗಿಳಿಗಳು ಜೀವಂತ ಇದ್ದವು. ಆದರೆ, ಆಹಾರದಲ್ಲಿನ ವಿಷ ಪ್ರಮಾಣ ತೀವ್ರವಾಗಿದ್ದ ಕಾರಣ ಅವು ಬದುಕಲು ಸಾಧ್ಯವಾಗಲಿಲ್ಲ ಎಂದು ಜಿಲ್ಲಾ ವನ್ಯಜೀವಿ ವಾರ್ಡನ್ ಟೋನಿ ಶರ್ಮಾ ತಿಳಿಸಿದ್ದಾರೆ.
ಗಿಳಿಗಳ ಈ ಸಾವು ಈ ಪ್ರದೇಶದಲ್ಲಿ ಹಕ್ಕಿ ಜ್ವರದ ಆತಂಕವನ್ನು ಉಂಟು ಮಾಡಿತು. ಪಶು ವೈದ್ಯರು ಇವುಗಳ ಪರೀಕ್ಷೆ ನಡೆಸಿದಾಗ ಇದರಲ್ಲಿ ಯಾವುದೇ ಜ್ವರದ ಸುಳಿವು ಕಂಡು ಬಂದಿಲ್ಲ. ಈ ಘಟನೆ ಬೆನ್ನಲ್ಲೇ ಇದೀಗ ಈ ಸೇತುವೆ ಸುತ್ತಮುತ್ತ ಪಕ್ಷಿಗಳಿಗೆ ಆಹಾರ ನೀಡುವಿಕೆಗೆ ನಿರ್ಬಂಧ ವಿಧಿಸಲಾಗಿದ್ದು, ಇದರ ಕಟ್ಟುನಿಟ್ಟಿನ ಜಾರಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾವನ್ನಪ್ಪಿದ ಪಕ್ಷಿಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಜಬಲ್ಪುರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಪ್ರಕಾರ, ವಿಷ ಉಣಿಸುವಿಕೆ ಅಥವಾ ಸೂಕ್ತವಲ್ಲದ ಆಹಾರಗಳು ಈ ಸಾವಿಗೆ ಕಾರಣವಾಗಿದೆ. ಪಶು ಪಾಲನ ಮತ್ತು ಅರಣ್ಯ ಇಲಾಖೆ ತಂಡ ಹಾಗೇ ವನ್ಯಜೀವಿ ವಿಭಾಗವೂ ಕಳೆದ ನಾಲ್ಕು ದಿನಗಳಿಂದ ಈ ಪ್ರದೇಶದಲ್ಲಿ ಮೇಲ್ವಿಚಾರಣೆ ನಡೆಸುತ್ತಿದ್ದು, ನಿವಾಸಿಗಳಿಗೂ ಕೂಡ ಎಚ್ಚರಿಕೆ ನೀಡಲಾಗಿದೆ.
ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯೆ ಡಾ. ಮನಿಷಾ ಚೌಹಾಣ್ ಮಾತನಾಡಿ, ಗಿಳಿಗಳಲ್ಲಿ ಆಹಾರ ವಿಷದ ಲಕ್ಷಣಗಳು ಕಂಡುಬಂದಿದ್ದು, ಹಕ್ಕಿ ಜ್ವರದ ಯಾವುದೇ ಲಕ್ಷಣಗಳಿಲ್ಲ. ಜನರು ಸಾಮಾನ್ಯವಾಗಿ ತಿಳಿಯದೆಯೇ ಪಕ್ಷಿಗಳಿಗೆ ಆಹಾರವನ್ನು ನೀಡುತ್ತಾರೆ. ಅದು ಅವುಗಳ ಜೀರ್ಣಾಂಗ ವ್ಯವಸ್ಥೆಗೆ ಮಾರಕ ಆಗುತ್ತದೆ.
ಸತ್ತ ಪಕ್ಷಿಗಳ ಹೊಟ್ಟೆಯಲ್ಲಿ ಅಕ್ಕಿ ಮತ್ತು ಸಣ್ಣ ಉಂಡೆಗಳು ಕಂಡುಬಂದಿವೆ ಎಂದು ಪಶುವೈದ್ಯಕೀಯ ವಿಸ್ತರಣಾ ಅಧಿಕಾರಿ ಡಾ. ಸುರೇಶ್ ಬಾಘೇಲ್ ತಿಳಿಸಿದ್ದಾರೆ.
ಪ್ರಾಥಮಿಕವಾಗಿ ಅವು ಸೂಕ್ತವಲ್ಲದ ಆಹಾರ ಸೇವಿಸಿ ಸಾವನ್ನಪ್ಪಿರುವುದು ಕಂಡಿದ್ದು, ಹೊಲಗಳಲ್ಲಿ ಸಿಂಪಡಿಸಿರುವ ಕೀಟನಾಶಕದ ಆಹಾರ ಸೇವಿಸುವುದರಿಂದ ಇದು ಸಂಭವಿಸಿರುವ ಸಾಧ್ಯತೆ ಇರುತ್ತದೆ. ಸೇತುವೆಗೆ ಭೇಟಿ ನೀಡಿದವರು ಉಳಿದ ಆಹಾರವನ್ನು ಪಕ್ಷಿಗಳಿಗೆ ನೀಡಿರುವುದು ಮಾರಕವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇವುಗಳನ್ನೂ ಓದಿ:
ಇಂದೋರ್ ಕಲುಷಿತ ನೀರು ದುರಂತ: ಸಾವಿನ ಸಂಖ್ಯೆ 8ಕ್ಕೇರಿಕೆ, 26 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ
ಇಂದೋರ್ ದುರಂತಕ್ಕೆ ಕಲುಷಿತ ನೀರೇ ಕಾರಣ: ಪ್ರಯೋಗಾಲಯ ವರದಿಯಲ್ಲಿ ಬಹಿರಂಗ

