ಕಡಿಮೆ ಅಂತರದಲ್ಲಿ ಸೋತ ಬಿಜೆಪಿಯ 12 ಅಭ್ಯರ್ಥಿಗಳು, NDA ಸುನಾಮಿಯಿಂದ ಬಚಾವಾದ 6 ಕಾಂಗ್ರೆಸ್ಸಿಗರು
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ 12 ಅಭ್ಯರ್ಥಿಗಳು ಸೋಲು ಕಂಡರೆ, ಅದರ ಅರ್ಧದಷ್ಟು ಸಂಖ್ಯೆಯಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ.

By PTI
Published : November 15, 2025 at 11:04 AM IST
ಪಾಟ್ನಾ (ಬಿಹಾರ): ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿದ 101 ಅಭ್ಯರ್ಥಿಗಳ ಪೈಕಿ 89 ರಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕೇವಲ 12 ಮಂದಿ ಮಾತ್ರ ಸೋಲು ಅನುಭವಿಸಿದ್ದಾರೆ. ಆದರೆ, ಅವರ ಸೋಲಿನ ಅಂತರ ತೀರಾ ಕಡಿಮೆ ಎಂಬುದು ಗಮನಾರ್ಹ. ಇದರಲ್ಲಿ ಇಬ್ಬರು 30 ಮತ್ತು 178 ಮತಗಳ ಅಂತರದಿಂದ ಗೆಲುವು ತಪ್ಪಿಸಿಕೊಂಡಿದ್ದಾರೆ.
ಶುಕ್ರವಾರ ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಸಾಧನೆ ತೋರಿತು. ಕೊನೆಯ ಹಂತದವರೆಗೂ ತನ್ನೆಲ್ಲಾ ಅಭ್ಯರ್ಥಿಗಳು ಗೆಲ್ಲುವ ಹುಮ್ಮಸ್ಸು ಹೊಂದಿತ್ತು. ಆದರೆ, ಅದೃಷ್ಟ ಬೆಂಬಲಿಸದೆ ಕೆಲವರು ಕೂದಲೆಳೆ ಅಂತರದಲ್ಲಿ ಸೋತು ನಿರಾಸೆ ಅನುಭವಿಸಿದರು.
ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ, ಗೆಲ್ಲಲು ವಿಫಲರಾದ 12 ಬಿಜೆಪಿ ಅಭ್ಯರ್ಥಿಗಳಲ್ಲಿ ಬೈಸಿ ಕ್ಷೇತ್ರದ ವಿನೋದ್ ಕುಮಾರ್ ಅವರು 27,251 ಮತಗಳಿಂದ ಸೋಲುವ ಮೂಲಕ ಅಧಿಕ ಅಂತರದ ಪರಾಜಯ ಕಂಡಿದ್ದಾರೆ. ಅವರು ಎಐಎಂಐಎಂನ ಗುಲಾಮ್ ಸರ್ವರ್ ಎದುರು ಅಪಜಯ ಕಂಡರು.
ಬಿಸ್ಫಿ ಕ್ಷೇತ್ರದಲ್ಲಿ ಆರ್ಜೆಡಿ ಅಭ್ಯರ್ಥಿ ಆಸಿಫ್ ಅಹ್ಮದ್ ಎದುರು ಬಿಜೆಪಿಯ ಹರಿಭೂಷಣ್ ಠಾಕೂರ್ ಅವರು ಕೇವಲ 8,107 ಮತಗಳ ಅಂತರದಿಂದ ಸೋತರು. ಠಾಕೂರ್ ಅವರಿಗೆ ಬಿದ್ದ ಮತ 92,664 ಆಗಿತ್ತು.
ಇನ್ನೂ, ಚನ್ಪಾಟಿಯಾ ಕ್ಷೇತ್ರದಲ್ಲಿ ಬಿಜೆಪಿಯ ಉಮಾಕಾಂತ್ ಸಿಂಗ್ (86,936 ಮತ) ಅವರು ಕಾಂಗ್ರೆಸ್‌ನ ಅಭಿಷೇಕ್ ರಂಜನ್ (87,538)ಅವರ ವಿರುದ್ಧ ಕೇವಲ 602 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
ಫೋರ್ಬ್ಸ್‌ಗಂಜ್ ಕ್ಷೇತ್ರದಲ್ಲಿ ಬಿಜೆಪಿಯ ವಿದ್ಯಾ ಸಾಗರ್ ಕೇಶಾರಿ ಅವರು ಕಾಂಗ್ರೆಸ್‌ನ ಮನೋಜ್ ಬಿಶ್ವಾಸ್ (1,20,114) ಅವರ ವಿರುದ್ಧ ಕೇವಲ 221 ಮತಗಳ ಅಲ್ಪ ಅಂತರದಲ್ಲಿ ಜಯ ತಪ್ಪಿದೆ. ಕಿಶನ್‌ಗಂಜ್ ಕ್ಷೇತ್ರದಲ್ಲಿ ಬಿಜೆಪಿಯ ಸ್ವೀಟಿ ಸಿಂಗ್ (76,875) ಕಾಂಗ್ರೆಸ್‌ನ ಮುಹಮ್ಮದ್ ಕಮ್ರುಲ್ ಹೂಡಾ ಅವರ ವಿರುದ್ಧ 12,794 ಮತಗಳಿಂದ ಸೋತರು.
ಒಂದು ಕ್ಷೇತ್ರದಲ್ಲಿ ಮಾತ್ರ ಮೂರನೇ ಸ್ಥಾನ: ಇತರ ಬಿಜೆಪಿ ಅಭ್ಯರ್ಥಿಗಳಿಗೆ ಹೋಲಿಸಿದರೆ, ಬೀನಾ ದೇವಿ ಅವರು ಕೊಚಧಮನ್ ಕ್ಷೇತ್ರದಲ್ಲಿ ಕಳಪೆ ಸಾಧನೆ ಮಾಡಿದ್ದಾರೆ. ಅವರು 44,858 ಮತಗಳನ್ನು ಗಳಿಸುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ. ಇಲ್ಲಿ ಎಐಎಂಐಎಂನ ಎಂಡಿ ಸರ್ವರ್ ಆಲಂ ಅವರು 81,860 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಆರ್‌ಜೆಡಿಯ ಮುಜಾಹಿದ್ ಆಲಂ 58,839 ಮತಗಳಿಂದ ಎರಡನೇ ಸ್ಥಾನಿಯಾದರು.
ಇನ್ನೂ, ಸಹರ್ಸಾದಲ್ಲಿ ಬಿಜೆಪಿ ಅಭ್ಯರ್ಥಿ ಅಲೋಕ್ ರಂಜನ್ ಅವರು ಇಂಡಿಯನ್ ಇನ್ಕ್ಲೂಸಿವ್ ಪಾರ್ಟಿಯ ಇಂದ್ರಜೀತ್ ಪ್ರಸಾದ್ ಗುಪ್ತಾ ಅವರ ವಿರುದ್ಧ 2,038 ಮತಗಳ ಅಂತರದಿಂದ ಸೋತರು. ವಾರಿಸಲಿಗಂಜ್‌ನಲ್ಲಿ ಬಿಜೆಪಿಯ ಅರುಣಾ ದೇವಿ ಅವರು ಆರ್‌ಜೆಡಿಯ ಅನಿತಾ ಅವರ ವಿರುದ್ಧ 7,543 ಮತಗಳ ಅಂತರದಿಂದ ಸೋಲನುಭವಿಸಿದರು.
ಆರ್‌ಜೆಡಿಯ ಭದ್ರಕೋಟೆಯಾಗಿರುವ ಮತ್ತು ಇಂಡಿಯಾ ಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ವಿರುದ್ಧ ಬಿಜೆಪಿಯ ಸತೀಶ್ ಕುಮಾರ್ ಅವರು ಅದ್ಭುತ ಸಾಧನೆ ಮಾಡಿದ್ದಾರೆ. ಕೊನೆಯವರೆಗೂ ತೇಜಸ್ವಿಯನ್ನು ಕಾಡಿದ ಸತೀಶ್ 14,532 ಮತಗಳ ಅಂತರದಿಂದ ಸೋತರು. ಆದಾಗ್ಯೂ ಅವರು 1,04,065 ಮತಗಳನ್ನು ಗಳಿಸಿದರು.
ಕನಿಷ್ಠ ಮತಗಳ ಸೋಲು: ರಾಮ್‌ಗಢ ಕ್ಷೇತ್ರದಲ್ಲಿ ಬಿಜೆಪಿಯ ಅಶೋಕ್ ಕುಮಾರ್ ಸಿಂಗ್ ಅವರು ಅತಿ ಕನಿಷ್ಠ 30 ಮತಗಳ ಅಂತರದಿಂದ ಬಹುಜನ ಸಮಾಜ ಪಕ್ಷದ ಸತೀಶ್ ಕುಮಾರ್ ಸಿಂಗ್ ಯಾದವ್ ಅವರ ಎದುರು ಪರಾಜಯ ಕಂಡಿದ್ದಾರೆ. ಇಬ್ಬರ ನಡುವೆಯೂ ಕೊನೆಯ ಹಂತದವರೆಗೂ ಜಿದ್ದಾಜಿದ್ದಿನ ಪೈಪೋಟಿ ನಡೆದಿತ್ತು.
ಢಾಕಾ ಕ್ಷೇತ್ರದಲ್ಲಿ ಬಿಜೆಪಿಯ ಪವನ್ ಕುಮಾರ್ ಜೈಸ್ವಾಲ್ ಅವರು ಆರ್‌ಜೆಡಿಯ ಫೈಸಲ್ ರೆಹಮಾನ್ ಅವರ ಎದುರು ಕೇವಲ 178 ಸ್ಥಾನಗಳ ಅಂತರದಿಂದ ಸೋತರು. ಜೈಸ್ವಾಲ್ ಅವರಿಗೆ 1,12,549 ಮತಗಳು ಬಂದಿವೆ. ಇತ್ತ, ಗೋಹ್ ಕ್ಷೇತ್ರದಲ್ಲಿ ಬಿಜೆಪಿಯ ಡಾ. ರವಿರಂಜನ್ ಕುಮಾರ್ ಆರ್‌ಜೆಡಿಯ ಅಮರೇಂದ್ರ ಕುಮಾರ್ ವಿರುದ್ಧ 4,041 ಮತಗಳಿಂದ ಸೋತರು.
61 ರಲ್ಲಿ 6 ಕ್ಷೇತ್ರ ಮಾತ್ರ ಗೆದ್ದ ಕಾಂಗ್ರೆಸ್: ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಪಕ್ಷಗಳ ಪೈಕಿ ಅತಿ ಕನಿಷ್ಠ ಸಾಧನೆ ಮಾಡಿದ್ದು ಕಾಂಗ್ರೆಸ್. ಮಹಾಘಟಬಂಧನದ ಪ್ರಮುಖ ಪಕ್ಷವಾಗಿ 61 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು. ಇನ್ನು ಕೆಲ ಸೀಟುಗಳಿಗಾಗಿ ಚೌಕಾಸಿ ನಡೆಸಿದ್ದಲ್ಲದೇ, ಮಿತ್ರಕೂಟದ ಪಕ್ಷಗಳ ವಿರುದ್ಧವೇ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇದು ಮಹಾಮೈತ್ರಿಗೇ ನಷ್ಟವುಂಟು ಮಾಡಿದೆ.
ಕಾಂಗ್ರೆಸ್‌ನ 61 ಸ್ಪರ್ಧಿಗಳಲ್ಲಿ ಸುರೇಂದ್ರ ಪ್ರಸಾದ್, ಅಭಿಷೇಖ್ ರಂಜನ್, ಮನೋಜ್ ಬಿಶ್ವಾಸ್, ಅಬಿದುರ್ ರೆಹಮಾನ್, ಎಂಡಿ ಕಮರುಲ್ ಹೋಡಾ ಮತ್ತು ಮನೋಹರ್ ಪ್ರಸಾದ್ ಸಿಂಗ್ ಗೆದ್ದ ಆರು ಕಾಂಗ್ರೆಸ್ ಅಭ್ಯರ್ಥಿಗಳು.
ಇದನ್ನೂ ಓದಿ; ಮೊದಲ ಹೆಜ್ಜೆಯೇ ಗೆಲುವಿನ ಹೆಜ್ಜೆ: ತಂದೆ ಆಸೆ ಈಡೇರಿಸಲು ರಾಜಕೀಯಕ್ಕೆ ಕಾಲಿಟ್ಟ ದೇವಯಾನಿ ಸಿಂಗ್ ರಾಣಾ
Result Analysis: NDA ಗೆಲುವಿನ ಹಿಂದಿನ ಕಾರಣಗಳೇನು?: ವಿಜಯದ ಹಿಂದಿನ ಪ್ರಮುಖ ಅಂಶಗಳಿವು!

